Advertisement

ಬಳ್ಳಾರಿ “ಕೈ’ಅಭ್ಯರ್ಥಿ ಉಗ್ರಪ್ಪ ವಿರುದ್ಧ ರಮೇಶ್‌ ಅಸಮಾಧಾನ

06:00 AM Oct 17, 2018 | Team Udayavani |

ಬೆಂಗಳೂರು: ಬಳ್ಳಾರಿ ಲೋಕಸಭೆ ಚುನಾವಣೆಯಲ್ಲಿ ತಾವು ಹೇಳಿರುವ ಅಭ್ಯರ್ಥಿಗೆ ಟಿಕೆಟ್‌ ನೀಡದಿರುವ ಬಗ್ಗೆ ಪೌರಾಡಳಿತ ಸಚಿವ ರಮೇಶ್‌ ಜಾರಕಿಹೊಳಿ ಪಕ್ಷದ ನಾಯಕರ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿದ್ದಾರೆ. ಬಳ್ಳಾರಿ ಲೋಕಸಭಾ ಅಭ್ಯರ್ಥಿ ವಿ.ಎಸ್‌. ಉಗ್ರಪ್ಪ ಅವರ ನಾಮಪತ್ರ ಸಲ್ಲಿಕೆಗೆ ಆಹ್ವಾನ ನೀಡಿದ್ದರೂ, ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಿಂದ ದೂರ ಉಳಿದಿದ್ದಾರೆ. ಅಲ್ಲದೇ ನಾಮಪತ್ರ ವಾಪಸ್‌ ತೆಗೆಯುವವರೆಗೂ ಬಳ್ಳಾರಿಗೆ ತೆರಳದಿರಲು ನಿರ್ಧರಿಸಿದ್ದಾರೆ. ಈ ಬೆಳವಣಿಗೆಗಳ ಕುರಿತು
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಳ್ಳಾರಿಯಲ್ಲಿ ಡಿ.ಕೆ. ಶಿವಕುಮಾರ್‌ ಉಸ್ತುವಾರಿ ಸಚಿವರಾಗಿರುವುದರಿಂದ ಪಕ್ಷ ಅವರಿಗೆ ಜವಾಬ್ದಾರಿ ನೀಡಿದೆ. ಅವರು ಅಲ್ಲಿನ ಸ್ಥಳೀಯ ನಾಯಕರ ವಿಶ್ವಾಸ ಗಳಿಸಿಕೊಂಡು ಗೆಲ್ಲಿಸಿಕೊಂಡು ಬರುತ್ತಾರೆ. 
ಬೆಳಗಾವಿಯಲ್ಲಿ ಉಪ ಚುನಾವಣೆ ನಡೆದಿದ್ದರೆ ನಾನೇ ಉಸ್ತುವಾರಿ ಇರುತ್ತಿದ್ದೆ ಎಂದು ಹೇಳಿದರು.

Advertisement

ಎದೆ ಉಬ್ಬಿಸಿಕೊಂಡು ತಿರುಗಾಡಿದರೆ ಯಾರೂ ನಾಯಕರಾಗಲೂ ಸಾಧ್ಯವಿಲ್ಲ. ಸಾಮಾನ್ಯ ಕಾರ್ಯಕರ್ತರು ನಮ್ಮ ಜೊತೆಗಿರಬೇಕು. ಆಗ ನಾಯಕರಾಗಲು ಸಾಧ್ಯ ಎಂದು ಪರೋಕ್ಷವಾಗಿ ಸಚಿವ. ಡಿ.ಕೆ. ಶಿವಕುಮಾರ್‌ಗೆ ಟಾಂಗ್‌ ನೀಡಿದರು. ಬಳ್ಳಾರಿಯಲ್ಲಿ ಡಿ.ಕೆ. ಶಿವಕುಮಾರ್‌ ಅವರ ಜೊತೆಗೆ ಚುನಾವಣೆ ಪ್ರಚಾರದಲ್ಲಿ ಪಾಲ್ಗೊಳ್ಳುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬಳ್ಳಾರಿಯಲ್ಲಿ ನನಗೆ ಪಕ್ಷ ಹಾಗೂ ಹೈಕಮಾಂಡ್‌ ವಹಿಸಿರುವ ಕೆಲಸ ಮಾಡುತ್ತೇನೆ. ವೈಯಕ್ತಿಕವಾಗಿ ಡಿ.ಕೆ. ಶಿವಕುಮಾರ್‌ ನನ್ನ ಸ್ನೇಹಿತ,
ಅದಕ್ಕೂ ರಾಜಕೀಯಕ್ಕೂ ಸಂಬಂಧವಿಲ್ಲ. ಬಳ್ಳಾರಿಯಲ್ಲಿ ಮೈತ್ರಿ ಪಕ್ಷಗಳ ಅಭ್ಯರ್ಥಿಯಾಗಿ ವಿ.ಎಸ್‌.ಉಗ್ರಪ ಅವರನ್ನು ಕಣಕ್ಕಿಳಿಸಲಾಗಿದೆ. ಅವರನ್ನು ಗೆಲ್ಲಿಸಿಕೊಂಡು ಬರಬೇಕು. ಗೆಲ್ಲುವ ವಿಶ್ವಾಸ ಇದೆ. ಚುನಾವಣೆಯಲ್ಲಿ ಹೊರಗಿನವರು ಒಳಗಿನವರು ಎನ್ನುವುದಕ್ಕೆ ಅರ್ಥವಿಲ್ಲ. ಈ ಚುನಾವಣೆಯ ಫ‌ಲಿತಾಂಶ ಏನೇ ಆದರೂ ಮೈತ್ರಿ ಸರ್ಕಾರಕ್ಕೆ ಯಾವುದೇ ಧಕ್ಕೆ ಆಗುವುದಿಲ್ಲ ಎಂದು
ಹೇಳಿದರು.

ಈ ಚುನಾವಣೆ ಪಕ್ಷಗಳು, ಮತ್ತದರ ಸಿದ್ದಾಂತಗಳ ನಡುವಿನ ಹೋರಾಟ. ಒಂದು ಕಡೆ ಜಾತ್ಯತೀತ ಶಕ್ತಿಯಾದ ಕಾಂಗ್ರೆಸ್‌,
ಜನತಾದಳ. ಮತ್ತೂಂದೆಡೆ ಮತೀಯ ಶಕ್ತಿಯಾದ ಬಿಜೆಪಿ. ಒಂದೆಡೆ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿ, ಮತ್ತೂಂದೆಡೆ ಬಿಜೆಪಿ ಮತೀಯ ಶಕ್ತಿಯ ಪ್ರತೀಕರಾದ ಪ್ರಧಾನಿ ನರೇಂದ್ರ ಮೋದಿಯವರ ನಡುವಿನ ಸಂಘರ್ಷವಾಗಿದೆ. ಇದರ ನಡುವೆ ಜಿಲ್ಲೆಯ ಜನರು ನನ್ನನ್ನು ಬೆಂಬಲಿಸಲಿದ್ದಾರೆ ಎಂಬ ವಿಶ್ವಾಸವಿದೆ.

● ವಿ.ಎಸ್‌. ಉಗ್ರಪ್ಪ ಬಳ್ಳಾರಿ ಕಾಂಗ್ರೆಸ್‌ ಅಭ್ಯರ್ಥಿ

ಅಮಿತ್‌ ಶಾ, ನರೇಂದ್ರ ಮೋದಿ, ಯಡಿಯೂರಪ್ಪ, ಶ್ರೀರಾಮುಲು ನೇತೃತ್ವದಲ್ಲಿ ಉಪಚುನಾವಣೆಗೆ ನಾಮಪತ್ರ ಸಲ್ಲಿಸಿದ್ದೇನೆ. ಬಳ್ಳಾರಿ ಜಿಲ್ಲೆಗೆ ಹೆಚ್ಚಿನ ಅನುದಾನ ತಂದ ಘನತೆ ಶ್ರೀರಾಮುಲು ಅವರಿಗಿದೆ. ಜಿಲ್ಲೆಯ ಜನತೆಯ ಮನೆ ಮಗಳನ್ನಾಗಿ ನನಗೆ 
ಅರಿಶಿಣ, ಕುಂಕುಮ ನೀಡಿ ಮತದಾನ ಮಾಡುವ ಮೂಲಕ ಆಶೀರ್ವಾದ ಮಾಡಲಿದ್ದಾರೆ.

● ಜಿ. ಶಾಂತಾ, ಬಳ್ಳಾರಿ ಬಿಜೆಪಿ ಅಭ್ಯರ್ಥಿ

Advertisement

Udayavani is now on Telegram. Click here to join our channel and stay updated with the latest news.

Next