Advertisement

ರಮೇಶ್‌ ಜಾರಕಿಹೊಳಿ ಕಾಂಗ್ರೆಸ್‌ ಬಿಡಲ್ಲ

06:00 AM Sep 12, 2018 | |

ಕಲಬುರಗಿ: ಸಚಿವ ರಮೇಶ ಜಾರಕಿಹೊಳಿ ಸ್ವಾಭಿಮಾನಿ. ಅವರ ಸ್ವಾಭಿಮಾನಕ್ಕೆ ಧಕ್ಕೆಯಾಗಿ ಅವರಿಗೆ ನೋವಾಗಿದ್ದರೆ ಮಾತನಾಡಿ ಸರಿಪಡಿಸಲಾಗುವುದು. ಆದರೆ, ಯಾವುದೇ ಕಾರಣಕ್ಕೂ ಅವರು ಪಕ್ಷ ಬಿಡುವುದಿಲ್ಲ ಎಂದು ಕಾಂಗ್ರೆಸ್‌ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ ಜಾರಕಿಹೊಳಿ ಕಾಂಗ್ರೆಸ್‌ ಪಕ್ಷ ಕಟ್ಟಿ ಬೆಳೆಸಿದ್ದಾರೆ. ಪಕ್ಷವೂ ಅವರಿಗೆ ಎಲ್ಲ ರೀತಿಯ ಸಹಾಯ, ಸಹಕಾರ ನೀಡುತ್ತ ಬಂದಿದೆ. ಹೀಗಾಗಿ ಅವರು ಪಕ್ಷಕ್ಕೆ ಹಾನಿಯಾಗುವ ಯಾವುದೇ ಕೆಲಸ ಮಾಡಲ್ಲ ಎಂಬ ವಿಶ್ವಾಸವಿದೆ. ಇಬ್ಬರು
ಸಹೋದರರೊಂದಿಗೆ ತಾನು ಮಾತಾಡುತ್ತೇನೆ. ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ. ಬಿಜೆಪಿಯವರು ಅಧಿಕಾರಕ್ಕೆ ಬರುವ ಹಗಲುಗನಸು ಕಾಣುತ್ತಿದ್ದಾರೆ. ಬಿಜೆಪಿ ಅಧ್ಯಕ್ಷ ಅಮಿತ್‌ ಶಾ, ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್‌ ಅಲ್ಲದೇ ಯಾರೇ ಬಂದರೂ ಕರ್ನಾಟಕ, ಕನ್ನಡಿಗರನ್ನು
ಅಲ್ಲಾಡಿಸಲು ಸಾಧ್ಯವಿಲ್ಲ. ಇದಕ್ಕೆ ಕನ್ನಡಿಗರು ಆಸ್ಪದ ಕೊಡುವುದಿಲ್ಲ ಎಂದರು.

Advertisement

ಬಿಜೆಪಿಯ 5 ಶಾಸಕರಿಂದ ರಾಜೀನಾಮೆ ಕೊಡಿಸುತ್ತೇವೆ  
ಮಂಡ್ಯ: ನಮಗೂ ಯೂ-ಟರ್ನ್ ಹೊಡೆಯುವುದು ಗೊತ್ತು. ನಮ್ಮ ಸರ್ಕಾರವನ್ನು ಉಳಿಸಿಕೊಳ್ಳುವುದಕ್ಕೆ ಬಿಜೆಪಿಯ ಐವರು ಶಾಸಕರಿಂದ ರಾಜೀನಾಮೆ ಕೊಡಿಸಿದರೆ ಪರಿಸ್ಥಿತಿ ಏನಾಗಬಹುದೆಂಬ ಬಗ್ಗೆ ಅವರೂ ಲೆಕ್ಕಾಚಾರ ಹಾಕಲಿ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮಂಗಳವಾರ ಹೊಸ ಬಾಂಬ್‌ ಸಿಡಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಬಿಜೆಪಿಯವರು ನಮ್ಮ ಮಿತ್ರ ಪಕ್ಷದ ಶಾಸಕರಿಂದ ರಾಜೀನಾಮೆ ಕೊಡಿಸಿ ಸರ್ಕಾರ ಉರುಳಿಸಲು ಯತ್ನಿಸಿದರೆ, ನಾವೂ ಬೇರೆ ರೀತಿ ಯೂ-ಟರ್ನ್  ಗೆದುಕೊಳ್ಳಬೇಕಾಗುತ್ತದೆ. 
ಅಂದರೆ, ಬಿಜೆಪಿಯ ಐವರು ಶಾಸಕರಿಂದ ನಾವು ರಾಜೀನಾಮೆ ಕೊಡಿಸಬಹುದಲ್ಲವೇ ಎಂದು ಪರೋಕ್ಷವಾಗಿ ತಿರುಗೇಟು ನೀಡಿದರು. ರಾಜೀನಾಮೆ ನೀಡುವ ಶಾಸಕರು ಯಾರು? ಯಾವಾಗ ಕೊಡಿಸುತ್ತಾರೆ? ಎಂಬ ಬಗ್ಗೆ ವಿವರಗಳನ್ನು ಹಂಚಿಕೊಳ್ಳಲು ಅವರು ನಿರಾಕರಿಸಿದರು.

ನಮ್ಮ ಜತೆಗೂ 10 ಬಿಜೆಪಿ ಶಾಸಕರಿದ್ದಾರೆ
ಕಲಬುರಗಿ: ಬಿಜೆಪಿ ಆಪರೇಶನ್‌ ಕಮಲಕ್ಕೆ ಮುಂದಾದರೆ ನಮ್ಮ ಸಂಪರ್ಕದಲ್ಲೂ 10ಕ್ಕೂ ಹೆಚ್ಚು ಬಿಜೆಪಿ ಶಾಸಕರು ಇದ್ದಾರೆ. ನಾವೂ ಕಾರ್ಯ ಪ್ರವೃತ್ತರಾಗಬೇಕಾಗುತ್ತದೆ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್‌ ಖರ್ಗೆ ಎಚ್ಚರಿಕೆ ನೀಡಿದರು.  ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾರಕಿಹೊಳಿ ಸಹೋದರರ ವಿವಾದ ಹಾಗೂ ಕಾಂಗ್ರೆಸ್‌ ಶಾಸಕರು ಬಿಜೆಪಿಗೆ ಸೇರ್ಪಡೆಗೊಳ್ಳುತ್ತಾರೆ ಎಂಬುದು ವದಂತಿಯಷ್ಟೆ. ಬಿಜೆಪಿ ಯವರು ಹಿಂಬಾಗಿಲಿನಿಂದ ಅಧಿಕಾರಕ್ಕೆ ಬರಲು ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ. ನಾವೆಲ್ಲರೂ ಒಟ್ಟಾಗಿದ್ದೇವೆ. ಸಚಿವ ರಮೇಶ ಜಾರಕಿಹೊಳಿ ಸ್ವಾಭಿಮಾನಿ. ಅವರ ಜತೆ ಮಾತನಾಡಿ ಎಲ್ಲವನ್ನೂ ಸರಿಪಡಿಸಲಾಗುತ್ತದೆ. ರಾಜ್ಯದಲ್ಲಿ ರಾಜಕೀಯ ಗೊಂದಲ ಸೃಷ್ಟಿಸಲು ಮಹಾರಾಷ್ಟ್ರ ಸಿಎಂ ಫಡ್ನವೀಸ್‌, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ರಾಜ್ಯಕ್ಕೆ ಬರುತ್ತಾರೆ ಎಂದರೆ ರಾಜ್ಯ ಬಿಜೆಪಿ ನಾಯಕರು ಅಸಮರ್ಥರು ಎಂಬುದು ಸಾಬೀತಾಗಿದೆ ಎಂದರು.

ಯಾರೂ ಕಾಂಗ್ರೆಸ್‌ ತೊರೆಯಲ್ಲ
ಚಿತ್ರದುರ್ಗ: ಕಾಂಗ್ರೆಸ್‌, ಜೆಡಿಎಸ್‌ ಶಾಸಕರು ಬಿಜೆಪಿ ಸೇರುತ್ತಾರೆ ಎಂಬುದೆಲ್ಲ ಊಹಾಪೋಹ. ಕಾಂಗ್ರೆಸ್‌ ಬಿಟ್ಟು ಯಾರೂ ಎಲ್ಲೂ ಹೋಗುವುದಿಲ್ಲ. ಸದ್ಯದ ರಾಜಕೀಯ ಗೊಂದಲ ಮಾಧ್ಯಮಗಳ ಸೃಷ್ಟಿ ಎಂದು ಕಾರ್ಮಿಕ ಸಚಿವ ವೆಂಕಟರಮಣಪ್ಪ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸತೀಶ್‌ ಜಾರಕಿಹೊಳಿ ತಮ್ಮ ಮನೆಗೆ ಬಂದು ಬಹಳ ಹೊತ್ತು ಮಾತನಾಡಿದ್ದಾರೆ. ಆದರೆ ಬಿಜೆಪಿಗೆ ಹೋಗುತ್ತೇವೆಂದು ಎಲ್ಲಿಯೂ ಹೇಳಿಲ್ಲ
ಎಂದರು. ಶ್ರೀರಾಮುಲು, ಸತೀಶ್‌ ಜಾರಕಿಹೊಳಿ ಒಂದೇ ಸಮುದಾಯದವರಾಗಿದ್ದಾರೆ, ಹಾಗಾಗಿ ಜಾರಕಿಹೊಳಿ ಬಿಜೆಪಿಗೆ ಹೋಗುತ್ತಾರೆ ಎಂಬ ವದಂತಿ ಇದೆಯಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ತಾನು ಮತ್ತು ಹೊಳಲ್ಕೆರೆ ಕ್ಷೇತ್ರದ ಬಿಜೆಪಿ ಶಾಸಕ ಎಂ. ಚಂದ್ರಪ್ಪ ಒಂದೇ ಜಾತಿಯವರು. ಹಾಗಂತ ಚಂದ್ರಪ್ಪ ತಮ್ಮ ಜೊತೆ ಬಂದು ಬಿಡುತ್ತಾರಾ, ಒಂದೇ ಜಾತಿ ಇದ್ದ ಕಾರಣಕ್ಕೆ ಕಾಂಗ್ರೆಸ್‌ ಸೇರೋಕಾಗುತ್ತಾ ಎಂದು ಮರು ಪ್ರಶ್ನೆ ಹಾಕಿದರು. ನಾನು, ಶಾಸಕರಾದ ಗೂಳಿಹಟ್ಟಿ ಶೇಖರ್‌, ಚಂದ್ರಪ್ಪ, ತಿಪ್ಪಾರೆಡ್ಡಿ ಎಲ್ಲರೂ ಮಂಗಳವಾರ ಬೆಳಗ್ಗೆಯಿಂದ ಜತೆಗೇ ಇದ್ದೇವೆ. ಹಾಗಂತ ಅವರು ಕಾಂಗ್ರೆಸ್‌ ಸೇರುತ್ತಾರೆ ಅಥವಾ ನಾನು ಬಿಜೆಪಿ ಸೇರುತ್ತೇನೆ ಎಂದು ಅರ್ಥೈಸಿಕೊಳ್ಳಲಾಗುತ್ತದೆಯೇ ಎಂದು ಸಿಡಿಮಿಡಿಗೊಂಡರು.

ಬಿಜೆಪಿ ಶಾಸಕರ ಜತೆ ಯಡಿಯೂರಪ್ಪ ಚರ್ಚೆ 
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಹಲವು ವಿದ್ಯಮಾನಗಳು ನಡೆಯುತ್ತಿರುವ ಬೆನ್ನಲ್ಲೇ ಪ್ರತಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ ಬಿಜೆಪಿ ಶಾಸಕರ ಜತೆ ಮಹತ್ವದ ಸಮಾಲೋಚನೆ ನಡೆಸಿದರು. ಡಾಲರ್ ಕಾಲೋನಿ ನಿವಾಸಕ್ಕೆ ಜಗದೀಶ್‌ ಶೆಟ್ಟರ್‌, ಉಮೇಶ್‌ಕತ್ತಿ, ಗೋವಿಂದ ಕಾರಜೋಳ, ಪಿ.ರಾಜೀವ್‌, ಅರವಿಂದ ಬೆಲ್ಲದ್‌, ಮಹಾದೇವ ಯಾದವಾಡ್‌ ಜತೆ ಚರ್ಚಿಸಿದರು. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಏನೋ ನಡೆಯುತ್ತಿದೆ. ನಾವು ಯಾವುದಕ್ಕೂ ಸಿದಟಛಿ ಇರೋಣ. ಅವಕಾಶ ಸಿಕ್ಕರೆ ಎಲ್ಲವೂ ಅಂದುಕೊಂಡಂತೆ ಆದರೆ ಸರ್ಕಾರ ರಚಿಸುತ್ತೇವೆ. ಆದರೆ,
ನಾವೆಲ್ಲ ಒಗ್ಗಟ್ಟಾಗಿರಬೇಕು ಎಂದು ಶಾಸಕರಿಗೆ ಹೇಳಿದರು ಎಂದು ಹೇಳಲಾಗಿದೆ.

Advertisement

ಸಭೆಗೂ ಮುನ್ನ ಕೆಲಕಾಲ ಹೊರಗೆ ಹೋಗಿದ್ದ ಯಡಿಯೂರಪ್ಪ ನಂತರ ಮನೆಗೆ ಆಗಮಿಸಿದರು. ಯಡಿಯೂರಪ್ಪ ಎಲ್ಲಿಗೆ ಹೊಗಿದ್ದರು ಎಂಬುದರ ಬಗ್ಗೆ ಯಾರಿಗೂ ಮಾಹಿತಿ ಇರಲಿಲ್ಲ. ಯಡಿಯೂರಪ್ಪ ನಿವಾಸಕ್ಕೆ ಮೊದಲಿಗೆ ಬಂದ ಉಮೇಶ್‌  ಕತ್ತಿ, ಯಡಿಯೂರಪ್ಪ ಪುತ್ರ ವಿಜಯೇಂದ್ರ ಜತೆ ಮಾತನಾಡಿದರು. ಅಷ್ಟರಲ್ಲಿ ಬಿಎ ಸ್‌ವೈ ಮನೆಗೆ ವಾಪಸ್ಸಾದರು. ಶಾಸಕರಾದ ಗೋವಿಂದ ಕಾರಜೋಳ, ಪಿ.ರಾಜೀವ್‌, ಅರವಿಂದ ಬೆಲ್ಲದ್‌, ಸಿದ್ದು ಸವದಿ ಆಗಮಿಸಿದರು.

ಜಗದೀಶ್‌ ಶೆಟ್ಟರ್‌ ಅವರಿಗೆ ಖುದ್ದು ಯಡಿಯೂರಪ್ಪ ದೂರವಾಣಿ ಮೂಲಕ ಕರೆ ಮಾಡಿ ಮನೆಗೆ ಕರೆಸಿಕೊಂಡರು. ಶಾಸಕರ ಜತೆಗಿನ ಸಭೆಯ ನಂತರ ಅಲ್ಲಿಂದಲೇ ಕೇಂದ್ರ ಸಚಿವರಾದ ಅನಂತಕುಮಾರ್‌, ಸದಾನಂದಗೌಡ, ಮಾಜಿ ಡಿಸಿಎಂಗಳಾದ ಆರ್‌.ಅಶೋಕ್‌, ಈಶ್ವರಪ್ಪ ಅವರ ಜತೆ
ದೂರವಾಣಿ ಮೂಲಕ ಮಾತನಾಡಿದರು ಎನ್ನಲಾಗಿದೆ. 

ರಮೇಶ್‌ ಜಾರಕಿಹೊಳಿ ಜತೆ ಮಹಾರಾಷ್ಟ್ರ ಸಿಎಂ ಮಾತುಕತೆ ವಿಚಾರ ನನಗೆ ಗೊತ್ತಿಲ್ಲ. ನಾನೇನು ಹೇಳಲಿ, ರಮೇಶ್‌ ನಿವಾಸ ಎಲ್ಲಿದೆ ಎಂಬುದು ನಿಮಗೆ (ಮಾಧ್ಯಮದವರಿಗೆ) ಗೊತ್ತಿದೆ. ಹೋಗಿ ಅವರನ್ನೇ ಕೇಳಿ. 
● ಯಡಿಯೂರಪ್ಪ ವಿಧಾನ ಸಭೆ ವಿ.ಪಕ್ಷದ ನಾಯಕ

ಬೆಳಗಾವಿ ಕಚ್ಚಾಟ ಇನ್ನೂ ತಣ್ಣಗಾಗಿಲ್ಲ. ವಿರೋಧ ಪಕ್ಷಗಳನ್ನು ದುರ್ಬಲಗೊಳಿಸಲು ಕುಮಾರಸ್ವಾಮಿ ಪ್ರಯತ್ನಿಸುತ್ತಿದ್ದಾರೆ.
● ಜಗದೀಶ ಶೆಟ್ಟರ್‌ ಮಾಜಿ ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next