ಬೀದರ್ : ನನ್ನ ಮಗ ಯಾವುದೇ ತಪ್ಪು ಮಾಡಿಲ್ಲ, ಆತ ನಿರಪರಾಧಿ ನಿಮ್ಮ ಅಕ್ಕ-ತಂಗಿಯಂತ ನನ್ನನ್ನು ತಿಳಿದು ಅಧಿಕಾರಿಗಳು ನನ್ನ ಮಗನನ್ನು ನನ್ನ ಉಡಿಗೆ ಹಾಕಲಿ ಎಂದು ರಮೇಶ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಎಸ್ ಐ ಟಿ ವಶದಲ್ಲಿರುವ ಭಾಲ್ಕಿಯ ಯುವಕನ ತಾಯಿ ಗೋಗರೆದಿದ್ದಾರೆ.
ಮಾಧ್ಯಮಗಳ ಜತೆ ಮಾತನಾಡಿರುವ ಮಹಿಳೆ, ನನಗೆ ನ್ಯಾಯ ಸಿಗದಿದ್ದರೆ ಪೊಲೀಸರ ಮೊರೆ ಹೋಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಗಂಡನನ್ನು ಕಳೆದುಕೊಂಡಿರುವ ನಾನು ಮಗನ ಮುಖ ನೋಡಿ ಬದುಕುತ್ತಿದ್ದೇನೆ. ಬಟ್ಟೆ ಹೊಲಿದು ಮಕ್ಕಳಿಬ್ಬರನ್ನು ಸಾಕುತ್ತಿದ್ದೇನೆ. ಬೆಂಗಳೂರಿನಲ್ಲಿ ಹೊಸ ಕೆಲಸಕ್ಕೆ ಸೇರಿ ಎರಡು ತಿಂಗಳು ಆಗಿದ್ದು, ಮೂರ್ನಾಲ್ಕು ದಿನಗಳ ಹಿಂದೆಯಷ್ಟೇ ಭಾಲ್ಕಿಗೆ ಬಂದಿದ್ದ.
ಶಿವರಾತ್ರಿ ದಿನ ನಾನು ಮಠಕ್ಕೆ ಹೋದಾಗ ಕೆಲವರು ಬಂದು ಉಟ್ಟ ಬಟ್ಟೆಯಲ್ಲೇ ಮಗನನ್ನು ಕರೆದುಕೊಂಡು ಹೋಗಿದ್ದಾರೆ. ಈ ವಿಷಯ ಮರು ದಿನ ನನಗೆ ಗೊತ್ತಾಗಿದೆ ಎಂದು ಕಣ್ಣೀರು ಹಾಕಿದ್ದಾರೆ.
ಸಿಡಿ ಪ್ರಕರಣದಲ್ಲಿ ಕಾಣಿಸಿಕೊಂಡಿರುವ ಯುವತಿ ಜತೆಗೆ ನನ್ನ ಮಗನ ಪರಿಚಯ ಇರುವುದು ಸತ್ಯ. ಆಕೆಯ ಜತೆಗೆ ಫೋನ್ ನಲ್ಲಿ ಮಾತು ಸಹ ಆಡಿದ್ದೇನೆ. ದಯಾನಂದ ಸಾಗರದಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪೂರ್ಣಗೊಳಿಸಿದ್ದ ಮಗನಿಗೆ ಚಿತ್ರ ರಂಗದಲ್ಲಿ ಕೆಲಸ ಮಾಡಬೇಕೆಂಬ ಆಸೆ ಇತ್ತು. ಒಂದು ಜಾಹೀರಾತೂ ಸಹ ಮಾಡಿದ್ದ. ಆದರೆ, ಲಾಕ್‌ಡೌನ್ ಬಳಿಕ ಯಾವುದೇ ಉದ್ಯೋಗ ಇರಲಿಲ್ಲ. ಹಾಗಾಗಿ ಆ ಯುವತಿ ಮಾಹಿತಿ ಮೇರೆಗೆ ನನ್ನ ಮಗ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದ ಅಷ್ಟೇ.
ಆಕೆ ಮತ್ತು ಪುತ್ರನ ಜತೆಗೆ ಸಂಬಂಧ ಇದೆ ಎಂಬುದು ಸುಳ್ಳು. ನನ್ನ ಮಗನಿಂದ ಯಾವುದೇ ತಪ್ಪು ಆಗಿಲ್ಲ. ಅವನೊಂದಿಗೆ ಮೊಬೈಲ್ ಮೂಲಕ ಮಾತನಾಡಿದ್ದೇನೆ. ಲಾಡ್ಜ್ ವೊಂದರಲ್ಲಿ ಯುವತಿಯ ಸಿಡಿ ಕುರಿತಂತೆ ವಿಚಾರಣೆ ಮಾಡುತ್ತಿದ್ದಾರೆ, ಇದರಲ್ಲಿ ನನ್ನದೇನು ಪಾತ್ರವಿಲ್ಲ ಎಂದು ಹೇಳಿದ್ದೇನೆ. ಸಮಯಕ್ಕೆ ಊಟ ಕೊಡುತ್ತಿದ್ದಾರೆ. ನನಗೆ ಯಾರು ತೊಂದರೆ ಕೊಟ್ಟಿಲ್ಲ, ಗಾಬರಿಯಾಗಬೇಡಿ ಎಂದಿದ್ದಾನೆ ಎಂದು ತಿಳಿಸಿದ ತಾಯಿ, ಏನು ತಪ್ಪು ಮಾಡದ ನನ್ನ ಮಗನಿಗೆ ಕರೆದೊಯ್ದು ನನಗೆ ಅನ್ಯಾಯ ಮಾಡಿದ್ದಾರೆ. ಕೂಡಲೇ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.