Advertisement

ರಮೇಶ ಜಾರಕಿಹೊಳಿ ಬಿಜೆಪಿ ಸೇರ್ಪಡೆ ಸನ್ನಿಹಿತ?

06:00 AM Nov 19, 2018 | |

ಬೆಳಗಾವಿ: ಪೌರಾಡಳಿತ ಸಚಿವ ಹಾಗೂ ಬೆಳಗಾವಿ ಜಿಲ್ಲೆಯ ಪ್ರಮುಖ ರಾಜಕಾರಣಿ ರಮೇಶ ಜಾರಕಿಹೊಳಿ ಬಿಜೆಪಿ ಸೇರ್ಪಡೆಯಾಗುವುದು ಸನ್ನಿಹಿತವಾಗಿದೆಯೇ?

Advertisement

ಇಂತಹ  ಗಂಭೀರವಾದ ರಾಜಕೀಯ ಚರ್ಚೆ ಈಗ ಮತ್ತೆ ಆರಂಭವಾಗಿದೆ. ಸಚಿವ ರಮೇಶ ಜಾರಕಿಹೊಳಿ ಆಗಾಗ ಈ ಮಾತನ್ನು ನಿರಾಕರಿಸುತ್ತ ಬಂದಿರುವುದಾದರೂ ಬಿಜೆಪಿ ಮುಖಂಡರ ಜತೆ ಅದರಲ್ಲೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ಜತೆಗಿನ ಭೇಟಿ ಈ ರೀತಿಯ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಬೆಂಗಳೂರಿನಲ್ಲಿ ಶನಿವಾರ ನಡೆದ ಮಾಜಿ ಸಿಎಂ ಯಡಿಯೂರಪ್ಪ ಅವರ ಸಂಬಂಧಿ(ಆಪ್ತ ಸಹಾಯಕ) ಸಂತೋಷ್‌ ಅವರ ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದ ಸಚಿವ ರಮೇಶ ಜಾರಕಿಹೊಳಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಇದು ಹೊಸ ರಾಜಕೀಯ ಚರ್ಚೆಗೆ ಎಡೆಮಾಡಿಕೊಟ್ಟಿದೆ.

ಬಲ್ಲ ಮೂಲಗಳ ಪ್ರಕಾರ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದ ರಮೇಶ ಜಾರಕಿಹೊಳಿ, ಸುಮಾರು ಅರ್ಧ ಗಂಟೆಗಳ ಕಾಲ ಯಡಿಯೂರಪ್ಪ ಅವರೊಂದಿಗೆ ರಹಸ್ಯ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದ್ದು, ಈ ಚರ್ಚೆ ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಮೂಡಿಸಿದೆ.

ನ.20ರ ನಂತರ ಮತ್ತೆ ರಮೇಶ ಜಾರಕಿಹೊಳಿ ಅವರ ರಾಜಕೀಯದ ಆಟ ಆರಂಭವಾಗಲಿದೆ. ಈ ಬಾರಿ ಅವರ ಬಿಜೆಪಿ ಸೇರ್ಪಡೆ ನಿಶ್ಚಿತ ಎಂಬ ಮಾತುಗಳು ಅವರ ಆಪ್ತ ವಲಯದಲ್ಲಿ ಕೇಳಿ ಬರುತ್ತಿವೆ. ಗಡಿ ಭಾಗದಲ್ಲಿ ಕಬ್ಬು ಬೆಳೆಗಾರರ ದರ ನಿಗದಿ ಸಂಘರ್ಷ ತೀವ್ರವಾಗಿದ್ದರೂ ಇದುವರೆಗೆ ಅದರ ಬಗ್ಗೆ ಯಾವುದೇ ಹೇಳಿಕೆ ನೀಡದೆ ಮೌನವಾಗಿರುವುದು ಅನುಮಾನ ಬರುವಂತೆ ಮಾಡಿದೆ. ಸರಕಾರದ ಇಮೇಜ್‌ಗೆ ಧಕ್ಕೆ ತರಲೆಂದೇ ಸಚಿವರು ಯಾವುದರ ಬಗ್ಗೆಯೂ ಚಿಂತೆ ಮಾಡುತ್ತಿಲ್ಲವೆಂಬ ಆರೋಪ ಕೇಳಿಬಂದಿದೆ.

Advertisement

ಸಮಸ್ಯೆ ಚಿಂತೆ ಇಲ್ಲ: ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕಳೆದ ಹಲವಾರು ದಿನಗಳಿಂದ ಕಬ್ಬಿನ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ಕಬ್ಬು ಬೆಳೆಗಾರರು ಸಚಿವ ರಮೇಶ ಜಾರಕಿಹೊಳಿ ಅವರ ಒಡೆತನದ ಸೌಭಾಗ್ಯಲಕ್ಷ್ಮೀ ಸಕ್ಕರೆ ಕಾರ್ಖಾನೆಯಿಂದ ಕೋಟಿಗಟ್ಟಲೇ ಬಾಕಿ ಬರ ಬೇಕಿದೆ ಎಂದು ನಿರಂತರ ಚಳವಳಿ ನಡೆಸಿದ್ದಾರೆ. ಆದರೆ ಕಬ್ಬು ಬೆಳೆಗಾರರ ಸಮಸ್ಯೆಗೆ ಸ್ಪಂದಿಸಬೇಕಾದ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಇದುವರೆಗೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದಿರುವುದು ಹಾಗೂ ಈ ಸಂಬಂಧ ಜಿಲ್ಲಾಮಟ್ಟದ ಅಧಿಕಾರಿಗಳ ಹಾಗೂ ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿಗಳ ಸಭೆ ನಡೆಸದಿರುವುದು ಕಬ್ಬು ಬೆಳೆಗಾರರ ಆಕ್ರೋಶಕ್ಕೆ ಕಾರಣವಾಗಿದೆ.

ಕಳೆದ ಸುಮಾರು ದಿನಗಳಿಂದ ಜಿಲ್ಲಾಮಟ್ಟದ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸದ  ರಮೇಶ ಜಾರಕಿಹೊಳಿ ಸರಕಾರದ ಭಾಗವಾಗಿದ್ದರೂ ಜಿಲ್ಲೆಯ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ರೈತರು ಭೀಕರ ಬರದಿಂದ ತತ್ತರಿಸಿದ್ದರೂ ಇದುವರೆಗೆ ಅದಕ್ಕೆ ಪರಿಹಾರ ಸೂಚಿಸುವ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳ ಸಭೆ ಮಾಡಿಲ್ಲ. ಸಕ್ಕರೆ ಕಾರ್ಖಾನೆಗಳು ದರ ನಿಗದಿ ಮಾಡದೇ ಕಬ್ಬು ನುರಿಸುವ ಕಾರ್ಯ ಆರಂಭ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ರೈತರ ಆರೋಪ.

– ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next