ಬೆಂಗಳೂರು: ಮತದಾನ ಮುಗಿದ ತಕ್ಷಣ ಆಪ್ತ ಶಾಸಕರೊಂದಿಗೆ ಸೇರಿ ಸಾಮೂಹಿಕ ರಾಜೀನಾಮೆ ಇಂಗಿತ ವ್ಯಕ್ತಪಡಿಸಿದ್ದ ರಮೇಶ್ ಜಾರಕಿ ಹೊಳಿ ಗುರುವಾರ ಏಕಾಂಗಿಯಾಗಿ ಕಾಣಿಸಿದರು. ಬುಧವಾರ ತಮ್ಮ ಆಪ್ತರೊಂದಿಗೆ ಸಾಮೂಹಿಕ ರಾಜೀನಾಮೆ ನೀಡುವುದಾಗಿ ಹೇಳಿ, ಗುರುವಾರ ಆಪ್ತರ ಜೊತೆ ಸಭೆ ನಡೆಸುವ ಪ್ರಯತ್ನ ವಿಫಲವಾಯಿತು.
ರಮೇಶ್ ಜಾರಕಿಹೊಳಿ ಜತೆ ಗುರುತಿಸಿಕೊಂಡಿದ್ದ ಶಾಸಕರಾದ ಮಹೇಶ್ ಕುಮಠಳ್ಳಿ, ನಾಗೇಂದ್ರ, ಪ್ರತಾಪ್‌ಗೌಡ ಪಾಟೀಲ್ ಸೇರಿದಂತೆ ಎಲ್ಲರೂ ಸದ್ಯ ಅವರಿಂದ ಅಂತರ ಕಾಯ್ದುಕೊಂಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಪಕ್ಷದ ನಾಯಕರ ಜೊತೆ ಬಂಡಾಯ ಸಾರಿ ತಮ್ಮೊಂದಿಗೆ ಇಪ್ಪತ್ತು ಜನ ಶಾಸಕರಿದ್ದಾರೆ ಎಂದು ಮುಂಬೈನಲ್ಲಿ ಕುಳಿತು ಕಾಂಗ್ರೆಸ್ ನಾಯಕರಿಗೆ ನಡುಕ ಹುಟ್ಟಿಸಿದ್ದ ರಮೇಶ್ ಜಾರಕಿಹೊಳಿ, ಲೋಕಸಭೆ ಚುನಾವಣೆ ಮುಗಿದ ತಕ್ಷಣ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿಕೆ ನೀಡಿ, ಮತ್ತೂಂದು ಸುತ್ತಿನ ಆಪರೇಷನ್ ಕಮಲದ ಮುನ್ಸೂಚನೆ ನೀಡಿದ್ದರು.
ಅವರೊಂದಿಗೆ ಗುರುತಿಸಿಕೊಂಡಿದ್ದ ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಬೆಂಗಳೂರಿಗೆ ಆಗಮಿಸಿದ್ದರೂ, ರಮೇಶ್ ಜೊತೆ ಹೋಗಲಿಲ್ಲ. ಜತೆಗೆ ರಮೇಶ್ ಜಾರಕಿಹೊಳಿ ರಾಜೀನಾಮೆಗೂ ನನಗೂ ಸಂಬಂಧವಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ನಾನು ಯಾವುದೇ ಕಾರಣಕ್ಕೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ. ಕಾಂಗ್ರೆಸ್ ಬಿಡುವ ಯೋಚನೆಯೂ ಇಲ್ಲ. ರಮೇಶ್ ಜಾರಕಿಹೊಳಿ ರಾಜೀನಾಮೆಗೂ ನನಗೂ ಯಾವುದೇ ಸಂಬಂಧವಿಲ್ಲ. ನಮ್ಮ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಇದೆ. ಈ ಬಗ್ಗೆ ಚರ್ಚಿಸಲು ಸಚಿವರನ್ನು ಭೇಟಿ ಮಾಡಿದ್ದೇನೆ.
-ಶ್ರೀಮಂತ ಪಾಟೀಲ್, ಕಾಗವಾಡ ಶಾಸಕ