Advertisement
ಜ್ಞಾನಭಾರತಿ ಆವರಣದಲ್ಲಿ ಪತ್ತೆಯಾದ ರಮೇಶ್ ಕಾರಿನಲ್ಲಿ ಸಿಕ್ಕಿರುವ ಡೆತ್‌ನೋಟ್‌ನಲ್ಲಿ, “ಮೊನ್ನೆ ನನ್ನ ಮನೆಯಲ್ಲಿ ನಡೆದ ಐಟಿ ದಾಳಿಯಿಂದ ನಾನು ದಿಗ್ಬ್ರಾಂತನಾಗಿದ್ದೇನೆ. ಮರ್ಯಾದೆಗೆ ಅಂಜಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಬಡವರು ಬಡವರಾಗಿಯೇ ಉಳಿಯಬೇಕೆಂಬ ಸಂಸ್ಕೃತಿಯಿಂದ ತುಂಬಾ ಬೇಜಾರಾಗಿದ್ದೇನೆ. ಐಟಿ ಅಧಿಕಾರಿಗಳೇ ನನ್ನ ಹೆಂಡತಿ, ಮಕ್ಕಳಿಗೆ ತೊಂದರೆ ಕೊಡಬೇಡಿ’ ಎಂದು ಮನವಿ ಮಾಡಿದ್ದಾರೆ.
Related Articles
Advertisement
ಗಣ್ಯರ ಭೇಟಿ: ವಿಷಯ ತಿಳಿದು ಸ್ಥಳಕ್ಕೆ ಮಾಜಿ ಸಚಿವ ಎಚ್.ಕೆ.ಪಾಟೀಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಮಾಜಿ ಸಚಿವೆ ಉಮಾಶ್ರೀ, ಮಾಜಿ ಸಂಸದ ಉಗ್ರಪ್ಪ ಭೇಟಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಇದೇ ವೇಳೆ ರಮೇಶ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಸೂಕ್ತ ತನಿಖೆಯಾಗಬೇಕು ಎಂದು ನಾಯಕರಿಗೆ ಮೃತನ ಕುಟುಂಬಸ್ಥರು ಒತ್ತಾಯಿಸಿದರು.
ಪರಮೇಶ್ವರ್ ಎದುರು ಅಳಲು: ಘಟನಾ ಸ್ಥಳಕ್ಕೆ ಆಗಮಿಸಿದ ಮಾಜಿ ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ರಮೇಶ್ ಕುಟುಂಬ ಸದಸ್ಯರಿಗೆ ಸಾಂತ್ವಾನ ಹೇಳಿದರು. ಈ ವೇಳೆ ಪತ್ನಿ ಸೌಮ್ಯ, ಪತಿ ರಮೇಶ್ ಪ್ರಾಮಾಣಿಕ ವ್ಯಕ್ತಿಯಾಗಿದ್ದರು. ಐಟಿ ಅಧಿಕಾರಿಗಳು ಯಾಕೆ ನಮಗೆ ಈ ರೀತಿ ತೊಂದರೆ ಕೊಟ್ಟರು. ನಮ್ಮ ಕುಟುಂಬ ನೋಡಿಕೊಳ್ಳುವವರು ಯಾರು? ಎಂದು ಪ್ರಶ್ನಿಸಿದರು.
ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಪರಮೇಶ್ವರ್, ರಮೇಶ್‌ಗೆ ಧೈರ್ಯ ಹೇಳಿ ಸಮಾಧಾನ ಮಾಡಿ ಕಳುಹಿಸಿದ್ದೆ. ಆತ ಹೀಗೆ ಯಾಕೆ ಮಾಡಿಕೊಂಡನೋ ಗೊತ್ತಿಲ್ಲ. ನಮ್ಮ ಮನೆಯಲ್ಲೇ ಐಟಿ ಅಧಿಕಾರಿಗಳು ರಮೇಶ್‌ರನ್ನು ವಿಚಾರಣೆ ನಡೆಸಿದರರು. ಆತನಿಗೆ ಏನು ಪ್ರಶ್ನೆ ಕೇಳಿದರು ಎಂದು ಗೊತ್ತಿಲ್ಲ. ಆತ ಈ ರೀತಿ ಮಾಡಿಕೊಂಡಿರುವುದು ಬೇಸರ ತಂದಿದೆ ಎಂದು ಹೇಳಿದರು.
ಕುಟುಂಬಸ್ಥರ ಆಕ್ರಂದನ: ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ರಮೇಶ್ ಕಟುಂಬ ಸದಸ್ಯರು, ಸಂಬಂಧಿಕರು, ಸ್ನೇಹಿತರ ಆಕ್ರಂದನ ಮುಗಿಲು ಮುಟ್ಟುವಂತಿತ್ತು. ಬಳಿಕ ಕಾಂಗ್ರೆಸ್ ನಾಯಕರು ಆಗಮಿಸಿ ಸಮಾಧಾನ ಪಡಿಸಲು ಯತ್ನಿಸಿದರು.
ಬೆಳಗ್ಗೆ 9 ಗಂಟೆ ಸುಮಾರಿಗೆ ಸ್ನೇಹಿತರ ಜತೆ ಮಾತನಾಡುವಾಗ ಆತ್ಮಹತ್ಯೆ ಬಗ್ಗೆ ರಮೇಶ್ ಹೇಳಿಕೊಂಡಿದ್ದಾರೆ. ಕೂಡಲೇ ನಮಗೆ ಮಾಹಿತಿ ಬಂದಿತ್ತು. ಮೊಬೈಲ್ ಲೋಕೇಶನ್ ಆಧರಿಸಿ ಜ್ಞಾನಭಾರತಿ ಆವರಣದಲ್ಲಿ ಹುಡುಕಾಟ ನಡೆಸಿದಾಗ ಅರಣ್ಯ ಪ್ರದೇಶದಲ್ಲಿ ರಮೇಶ್ ಮೃತ ದೇಹ ಪತ್ತೆಯಾಗಿದೆ. ಬಳಿಕ ಕುಟುಂಬ ಸದಸ್ಯರನ್ನು ಕರೆಸಿ ಗುರುತು ಪತ್ತೆ ಮಾಡಲಾಯಿತು. ಈ ಸಂಬಂಧ ಕುಟುಂಬ ಸದಸ್ಯರು ದೂರು ನೀಡಿದ್ದು, ತನಿಖೆ ನಡೆಯುತ್ತಿದೆ.-ಬಿ.ರಮೇಶ್, ಡಿಸಿಪಿ ಪೂರ್ವ ವಿಭಾಗ