ಬೆಂಗಳೂರು: ಮಾಜಿ ಉಪಮುಖ್ಯಮಂತ್ರಿ ಡಾ ಜಿ.ಪರಮೇಶ್ವರ್ ಅವರ ಆಪ್ತ ಸಹಾಯಕ ರಮೇಶ್ ಆತ್ಮಹತ್ಯೆ ಪ್ರಕರಣದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಬುಧವಾರ ಜ್ಞಾನಭಾರತಿ ಠಾಣೆ ಪೊಲೀಸರು ಎರಡನೇ ಬಾರಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಪ್ರಕರಣ ಸಂಬಂಧ ಈಗಾಗಲೇ ಪರಮೇಶ್ವರ್ ಆಪ್ತ ಸಹಾಯಕ ರಮೇಶ್ ಮನೆ ಮೇಲೆ ದಾಳಿ ನಡೆಸಿದ ಐಟಿ ಅಧಿಕಾರಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿತ್ತು. ಆದರೆ, ವಿಚಾರ ಣೆಗೂ ಹಾಜರಾಗದೆ, ಅದಕ್ಕೆ ಉತ್ತರವೂ ನೀಡದೆ ಅಸಹಕಾರ ತೋರುತ್ತಿದ್ದಾರೆ.
ಮತ್ತೂಂದೆಡೆ, ನೇರವಾಗಿ ಸಂಪರ್ಕ ಮಾಡಿದರೂ ವಿಚಾರಣೆಗೆ ಹಾಜರಾಗಲು ಹಿರಿಯ ಅಧಿಕಾರಿಗಳ ಒಪ್ಪಿಗೆ ಸಿಕ್ಕಿಲ್ಲ ಎಂಬ ಸಬೂಬು ಹೇಳುತ್ತಿದ್ದಾರೆ. ಹೀಗಾಗಿ, ಬುಧವಾರ ಮತ್ತೂಂದು ನೋಟಿಸ್ ಜಾರಿ ಮಾಡಿದ್ದು, ಒಂದು ವೇಳೆ ವಿಚಾರಣೆಗೆ ಹಾಜರಾಗದೆ ನಿರ್ಲಕ್ಷ್ಯ ತೋರಿದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ ಎಂದು ಪಶ್ಚಿಮ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿ ಹೇಳಿದರು.
ವೈದ್ಯಕೀಯ ಸೀಟು ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದಡಿ ಅ.10ರಂದು ಡಾ ಜಿ.ಪರಮೇಶ್ವರ್ ಹಾಗೂ ಜಾಲಪ್ಪ ಮನೆ ಮತ್ತು ಶಿಕ್ಷಣ ಸಮೂಹ ಸಂಸ್ಥೆಗಳ ಮೇಲೆ ಐಟಿ ದಾಳಿ ನಡೆಸಿತ್ತು. ಈ ಸಂಬಂಧ ಪರಮೇಶ್ವರ್ ಹಾಗೂ ಅವರ ಆಪ್ತ ಸಹಾಯಕ ರಮೇಶ್ ಅವರನ್ನು ತಡರಾತ್ರಿವರೆಗೂ ವಿಚಾರಣೆಗೊಳಪಡಿಸಿದ್ದ ಐಟಿ ಅಧಿಕಾರಿಗಳು, ರಮೇಶ್ ಮನೆಯಲ್ಲೂ ತಪಾಸಣೆ ನಡೆಸಿದ್ದರು.
ಅದರಿಂದ ವಿಚಲಿತಗೊಂಡ ರಮೇಶ್, ಅ.12ರಂದು ಜ್ಞಾನಭಾರತಿ ಆವರಣದ ಅರಣ್ಯ ಪ್ರದೇಶದಲ್ಲಿ ಐಟಿ ಅಧಿಕಾರಿಗಳ ವಿರುದ್ಧ ಕಿರುಕುಳ ಆರೋಪ ಮಾಡಿ, ಕಾರಿನಲ್ಲೇ ಡೆತ್‌ನೋಟ್ ಬರೆದಿಟ್ಟು, ನೇಣು ಬಿಗಿದುಕೊಂಡು, ಆತ್ಮಹತ್ಯೆ ಮಾಡಿಕೊಂಡಿದ್ದರು. ಆರಂಭದಲ್ಲಿ ಐಟಿ ಅಧಿಕಾರಿಗಳು ತಾವು ದಾಳಿ ನಡೆಸಿಲ್ಲ ಎಂದು ಪತ್ರಿಕಾ ಹೇಳಿಕೆ ನೀಡಿದರೂ,
ರಮೇಶ್ ಮನೆ ಮೇಲೆ ದಾಳಿ ನಡೆಸಲು ಕಾರಿನಲ್ಲಿ ಆಗಮಿಸಿದ ಸಿಸಿಟಿವಿ ಕ್ಯಾಮರಾ ದೃಶ್ಯಗಳು ಬಹಿರಂಗಗೊಂಡ ಬಳಿಕ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಈ ದೃಶ್ಯಗಳನ್ನು ಆಧರಿಸಿ ಐಟಿ ಅಧಿಕಾರಿಗಳಿಗೆ ಹಿಂದೆಯೇ ನೋಟಿಸ್ ನೀಡಲಾಗಿತ್ತು. ವಿಚಾರಣೆಗೆ ಗೈರಾಗಿದ್ದರಿಂದ ಇದೀಗ ಮತ್ತೂಮ್ಮೆ ನೋಟಿಸ್ ನೀಡಲಾಗಿದೆ ಎಂದು ಅಧಿಕಾರಿ ವಿವರಿಸಿದರು.