ಕನ್ನಡ ಚಿತ್ರರಂಗದ ನಟ ಕಂ ನಿರ್ದೇಶಕ ರಮೇಶ್ ಅರವಿಂದ್ ಜನ್ಮದಿನದ ಪ್ರಯುಕ್ತ, ಅವರು ಅಭಿನಯಿಸಿರುವ “ಶಿವಾಜಿ ಸುರತ್ಕಲ್-2′ ಸಿನಿಮಾದ ಟೀಸರ್ ಅನ್ನು ಚಿತ್ರತಂಡ ಇತ್ತೀಚೆಗೆ ಬಿಡುಗಡೆ ಮಾಡಿದೆ. ಬೆಂಗಳೂರಿನ ನಾಗಸಂದ್ರದ ಬಳಿಯಿರುವ “ಐಕಿಯಾ’ ಫರ್ನಿಶಿಂಗ್ ಸೆಂಟರ್‌ನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ, ಅಭಿಮಾನಿಗಳ ಸಮ್ಮುಖದಲ್ಲಿ “ಶಿವಾಜಿ ಸುರತ್ಕಲ್-2′ ಟೀಸರ್ ಬಿಡುಗಡೆಯಾಯಿತು.
ಇದೇ ವೇಳೆ ಮಾತನಾಡಿದ ನಿರ್ದೇಶಕ ಆಕಾಶ್ ಶ್ರೀವತ್ಸ, “ಎರಡು ವರ್ಷಗಳ ಹಿಂದೆ ಬಿಡುಗಡೆಯಾದ “ಶಿವಾಜಿ ಸುರತ್ಕಲ್’ ಸಿನಿಮಾಕ್ಕೆ ಸಿಕ್ಕ ರೆಸ್ಪಾನ್ಸ್ ಭಾಗ-2 ಮಾಡಲು ಸ್ಫೂರ್ತಿಯಾಯಿತು. ಥಿಯೇಟರ್‌ನಲ್ಲಿ ಸಿನಿಮಾ ಚೆನ್ನಾಗಿ ಓಡುತ್ತಿರುವಾಗಲೇ ಕೋವಿಡ್ ಲಾಕ್ ಡೌನ್ ಅನೌನ್ಸ್ ಆಯ್ತು. ಅದಾದ ನಂತರ ಲಾಕ್ ಡೌನ್ ಸಮಯದಲ್ಲಿ ರಮೇಶ್ ಅರವಿಂದ್ ಜೊತೆಗೆ ಸಾಕಷ್ಟು ಚರ್ಚೆ ನಡೆಸಿ “ಶಿವಾಜಿ ಸುರತ್ಕಲ್-2′ ಸಿನಿಮಾ ಶುರು ಮಾಡಿದೆವು’ ಎಂದರು.
ಚಿತ್ರದ ಬಗ್ಗೆ ಮಾತನಾಡಿದ ನಟ ರಮೇಶ್ ಅರವಿಂದ್, “ಕಳೆದ ಮೂರು ದಶಕಗಳಲ್ಲಿ ಸಾಕಷ್ಟು ಪಾತ್ರಗಳನ್ನು ಮಾಡಿದ್ದೇನೆ. ಆದರೆ, ಇದೇ ಮೊದಲ ಬಾರಿಗೆ “ಶಿವಾಜಿ ಸುರತ್ಕಲ್ 2′ ಸಿನಿಮಾದಲ್ಲಿ ಒಂದೇ ಪಾತ್ರವನ್ನು ಎರಡನೇ ಬಾರಿ ಮಾಡಿದ್ದೇನೆ. ನಿರ್ದೇಶಕ ಆಕಾಶ್ ಶ್ರೀವತ್ಸ ಅದ್ಭುತ ನಿರ್ದೇಶಕ. ಸಿನಿಮಾ ಕೂಡ ಅಷ್ಟೇ ಅದ್ಭುತವಾಗಿ ಮೂಡಿಬಂದಿದೆ. ಇಡೀ ಸಿನಿಮಾಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ’ ಎಂದರು.
ಇದನ್ನೂ ಓದಿ:ವಿದ್ಯಾರ್ಥಿಗಳನ್ನು ಅಟ್ಟಿಸಿಕೊಂಡು ಬಂದ ಬೀದಿ ನಾಯಿಗಳು: ವಿಡಿಯೋ ನೋಡಿ
“ಬಹುತೇಕ ಹೊಸಬರೇ ಸೇರಿಕೊಂಡು ಮಾಡಿದ “ಶಿವಾಜಿ ಸುರತ್ಕಲ್’ ಸಿನಿಮಾಕ್ಕೆ ನಿರೀಕ್ಷೆಗೂ ಮೀರಿದ ಗೆಲುವು ಸಿಕ್ಕಿತು. ಆ ಗೆಲುವಿನಿಂದ ಭಾಗ 2 ಮಾಡಲು ಮುಂದಾದೆವು. ಅದರಲ್ಲೂ ಕೋವಿಡ್ ಸಂದರ್ಭದಲ್ಲಿ ಇಂಥದ್ದೊಂದು ಸಿನಿಮಾ ಮಮಾಡೋದಕ್ಕೆ ಎಲ್ಲ ಕಲಾವಿದರು, ತಂತ್ರಜ್ಞರು ಸಹಕಾರ ನೀಡಿದರು. ಈಗಾಗಲೇ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಮುಂದಿನ ವರ್ಷದ ಆರಂಭದಲ್ಲಿ ಸಿನಿಮಾ ತೆರೆಗೆ ಬರಲಿದೆ’ ಎಂದರು ನಿರ್ಮಾಪಕ ಅನೂಪ್ ಗೌಡ.
ನಟಿಯರಾದ ರಾಧಿಕಾ ನಾರಾಯಣ್, ಮೇಫನಾ ಗಾಂವ್ಕರ್ “ಶಿವಾಜಿ ಸುರತ್ಕಲ್-2′ ಸಿನಿಮಾದ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. “ಅಂಜನಾದ್ರಿ ಸಿನಿ ಕ್ರಿಯೇಷನ್ಸ್’ ಬ್ಯಾನರ್‌ನಲ್ಲಿ ರೇಖಾ ಕೆ. ಎನ್ ಹಾಗೂ ಅನೂಪ್ ಗೌಡ ನಿರ್ಮಿಸಿರುವ “ಶಿವಾಜಿ ಸುರತ್ಕಲ್-2′ ಸಿನಿಮಾಕ್ಕೆ ಜ್ಯೂಡಾ ಸ್ಯಾಂಡಿ ಸಂಗೀತ ಸಂಯೋಜಿಸಿದ್ದಾರೆ.
ಚಿತ್ರಕ್ಕೆ ದರ್ಶನ್, ಗುರು ಪ್ರಸಾದ್ ಛಾಯಾಗ್ರಹಣ, ಆಕಾಶ್ ಶ್ರೀವತ್ಸ ಸಂಕಲನವಿದೆ. ಚಿತ್ರದಲ್ಲಿ ರಮೇಶ್ ಅರವಿಂದ್, ರಾಧಿಕಾ ನಾರಾಯಣ್, ಮೇಘನಾ ಗಾಂವ್ಕರ್, ನಾಜರ್, ಆರಾಧ್ಯ, ರಮೇಶ್ ಭಟ್, ಶ್ರೀನಿವಾಸ್ ಪ್ರಭು, ಶೋಭರಾಜ್, ವಿದ್ಯಾಮೂರ್ತಿ, ವೀಣಾ ಸುಂದರ್, ರಘು ರಮಣಕೊಪ್ಪ, ಮಧುರ ಗೌಡ ಮುಂತಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.