ಹೊಸದಿಲ್ಲಿ: ಯೋಗ ಗುರು ರಾಮ್‌ದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರು ಪತಂಜಲಿಯ ಔಷಧೀಯ ಉತ್ಪನ್ನಗಳ ತಪ್ಪುದಾರಿಗೆಳೆಯುವ ಜಾಹೀರಾತುಗಳಿಗಾಗಿ ಪ್ರಮುಖ ಪತ್ರಿಕೆಗಳಲ್ಲಿ ಬುಧವಾರ ಕ್ಷಮೆಯಾಚಿಸಿದ್ದಾರೆ.
ಪತ್ರಿಕಾ ಜಾಹೀರಾತಿನಲ್ಲಿ, ರಾಮ್‌ದೇವ್ ಮತ್ತು ಬಾಲಕೃಷ್ಣ ಅವರು ತಮ್ಮ ವೈಯಕ್ತಿಕ ನೆಲೆಯಲ್ಲಿ ಮತ್ತು ಪತಂಜಲಿ ಆಯುರ್ವೇದ ಸಂಸ್ಥೆ ಪರವಾಗಿ “ಭಾರತದ ಸುಪ್ರೀಂ ಕೋರ್ಟ್‌ನ ನಿರ್ದೇಶನಗಳು/ಆದೇಶಗಳ ಅನುಸರಣೆ ಅಥವಾ ಅವಿಧೇಯತೆಗಾಗಿ” ಬೇಷರತ್ತಾಗಿ ಕ್ಷಮೆಯಾಚಿಸುವುದಾಗಿ ಹೇಳಿದ್ದಾರೆ.
ಅಲೋಪಥಿ ಔಷಧಗಳ ಕುರಿತಾಗಿ ನೀವು ಪ್ರಕಟಿಸಿದ್ದ ಜಾಹೀರಾತಿನ ಗಾತ್ರದಲ್ಲೇ ಕ್ಷಮಾಪಣೆ ಯನ್ನು ಸಹ ಪ್ರಕಟಿಸಿ ಎಂದು ಸುಪ್ರೀಂ ಕೋರ್ಟ್ ಪತಂಜಲಿ ಸಂಸ್ಥೆಗೆ ಮಂಗಳವಾರ ಸೂಚಿಸಿತ್ತು.
ಪತಂಜಲಿ ಜಾಹೀರಾತಿನ ವಿರುದ್ಧ ಭಾರತೀಯ ವೈದ್ಯಕೀಯ ಸಂಸ್ಥೆಯು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ ಈ ಸೂಚನೆ ನೀಡಿತ್ತು. ಎ.16ರಂದು ಈ ಮೊದಲು ಅರ್ಜಿಯ ವಿಚಾರಣೆ ನಡೆಸಿದ್ದ ಪೀಠ ಅಲೋಪಥಿ ಚಿಕಿತ್ಸಾ ಪದ್ಧತಿಯನ್ನು ಅವಹೇಳನ ಮಾಡಿದ್ದಕ್ಕೆ ಕ್ಷಮೆ ಕೋರಿ 1 ವಾರದೊಳಗೆ ಕೋರ್ಟ್‌ಗೆ ತಿಳಿಸಬೇಕು ಎಂದು ಖಡಕ್ ಆಗಿ ಸೂಚಿಸಿತ್ತು.