Advertisement
ಆದರೆ ಹದಿನಾಲ್ಕು ವರ್ಷಾನಂತರ ಇದಿರುಗೊಳ್ಳಲಿರುವ ಮನದಿನಿಯನನ್ನು ಕಾಣುವ ಕಾತರ ನನ್ನಲ್ಲಿಲ್ಲ. ಲಕ್ಷ್ಮಣನ ಅನುರಾಗಪೂರಿತ ನೋಟವನ್ನು ನೆನೆದು ಲಜ್ಜೆಯಿಂದ ನನ್ನಧರಗಳು ಕಂಪಿಸುತ್ತಿಲ್ಲ, ವಿರಹತಾಪದಿಂದ ಬಳಲಿ ಮುದುಡಿದ್ದ ಮನಸ್ಸು ಪತಿಯ ಸಾನಿಧ್ಯವನ್ನು ಕಲ್ಪಿಸಿಕೊಂಡು ಹೂವಾಗಿ ಅರಳುತ್ತಿಲ್ಲ.
Related Articles
Advertisement
ಪರಸ್ಪರರನ್ನಗಲಿ ಜೀವಿಸದಾಗಿದ್ದ ನಮ್ಮಿಬ್ಬರ ಬಾಂಧವ್ಯವನ್ನು ಕಂಡು ವಿಧಿಗೂ ಕನಿಕರ ಉಂಟಾಗಿದ್ದೀತು. ಶ್ರೀರಾಮರ ಸಹೋದರ ಲಕ್ಷ್ಮಣನನ್ನು ನಾನು ವರಿಸಿ, ಒಂದೇ ಮನೆತನದ ಸೊಸೆಯರು ನಾವಾದಾಗ ಮನ ಸಂತಸದ ಕಡಲಾಯಿತು. ನಮ್ಮ ಚಿಕ್ಕಪ್ಪನ ಮಕ್ಕಳಾದ ಮಾಂಡವಿ, ಶ್ರುತಕೀರ್ತಿಯರೂ ಭರತ-ಶತ್ರುಘ್ನರನ್ನು ವರಿಸಿದರು. ಮಿಥಿಲೆಯಿಂದ ಅಯೋಧ್ಯೆಗೆ ಬಂದ ನಾವೆಲ್ಲರೂ ಪತಿಗೃಹದ ಆಚಾರ-ವಿಚಾರಗಳಿಗೆ ಹೊಂದಿಕೊಳ್ಳತೊಡಗಿದ್ದೆವು.
ಅನುರಾಗದ ಹೊಳೆಯನ್ನೇ ಹರಿಸಿದ ಲಕ್ಷ್ಮಣನನ್ನು ಅರೆಘಳಿಗೆಯೂ ನಾನು ಅಗಲಿ ಇರದಾದೆ. ಪ್ರೇಮ ಪರವಶತೆಯ ಉತ್ಕಟತೆಯಲ್ಲಿ ತಂಬಿರುಳಿನಲ್ಲರಳುವ ನೈದಿಲೆ ನಾನಾದೆ. ಅವನೊಲುಮೆಯ ಲೋಕದಲ್ಲಿ ವಿಹರಿಸುತ್ತಿರುವಾಗಲೇ ಅನಾಹುತ ಆಗಿಹೋಯಿತು.
ಚಿಕ್ಕತ್ತೆ ಕೈಕೆಯಿಗೆ ಮಾವ ದಶರಥ ಮಹಾರಾಜರು ಕೊಟ್ಟ ಮಾತಿನಂತೆ ಶ್ರೀರಾಮ ವನವಾಸಿಯಾಗಬೇಕೆಂಬ ವಾರ್ತೆಯು ಬರಸಿಡಿಲಿನಂತೆ ಬಡಿಯಿತು!
ಪಿತೃವಾಕ್ಯ ಪರಿಪಾಲಕರಾದ ಶ್ರೀರಾಮರು ತಡಮಾಡದೇ ರಾಜೋಚಿತ ಉಡುಗೆಗಳನ್ನು ತೆಗೆದಿರಿಸಿ, ನಾರು ಮಡಿಯನ್ನುಟ್ಟು ಹಿರಿಯರ ಆಶೀರ್ವಾದಗಳನ್ನು ಪಡೆದು ಕಾಡಿಗೆ ಹೊರಟುನಿಂತಿದ್ದರು. ಅಯೋಧ್ಯೆಯು ಸ್ಮಶಾನಸದೃಶವಾಗಿ ಎಲ್ಲರೂ ಗೋಳಿಡತೊಡಗಿದ್ದರು. ಪತಿಯನ್ನು ಅನುಸರಿಸಿ ಸೀತಾದೇವಿ ಮತ್ತು ಅವರಿಬ್ಬರ ಬೆಂಗಾವಲಿಗೆ ಲಕ್ಷ್ಮಣನೂ ವನವಾಸಕ್ಕೆ ಹೊರಟೇಬಿಟ್ಟಾಗ ….ಅಕ್ಷರಶಃ ನಾನು ಕುಸಿದು ಹೋಗಿದ್ದೆ.
ನಾನೂ ಜೊತೆಗೆ ಬರುವೆನೆಂದು ದುಂಬಾಲು ಬಿದ್ದೆ. ಪತಿಯೇ ಜೊತೆಗಿರದ ಮೇಲೆ ಅರಮನೆಯ ವೈಭವ ನನಗೇಕೆ? ಪತಿಯನ್ನು ಅನುಸರಿಸುವುದು ಸತಿಯಾದವಳ ಧರ್ಮವೆಂದು ವಾದಿಸಿದೆ. ನಿಮ್ಮಿಂದ ದೂರವಾಗಿ ನಾನಿರಲಾರೆನೆಂದು ಆಣೆಯಿಟ್ಟೆ. ಆದರೆ…ಲಕ್ಷ್ಮಣನ ಮನಸ್ಸು ಕರಗಲಿಲ್ಲ. ಹದಿನಾಲ್ಕು ವರ್ಷಗಳ ಕಾಲದ ದೀರ್ಘ ವಿರಹದ ದಳ್ಳುರಿಯಲ್ಲಿ ನನ್ನ ಪತ್ನಿ ದಹಿಸಿಹೋಗಲಿದ್ದಾಳೆಂದು ಅವರ ಹೃದಯ ದ್ರವಿಸಲಿಲ್ಲ. ಜೀವನದ ಪ್ರತಿ ಹೆಜ್ಜೆಯಲ್ಲೂ ಜೊತೆಯಾಗಿರುವೆನೆಂದು ಸಪ್ತಪದಿಯನ್ನು ತುಳಿದು ಶಪಥಗೈದ ಪತಿಗೆ ಆಗ ಅದಾವುದೂ ನೆನಪಾಗಿರಲಿಲ್ಲ.
ನಾನವರ ಚರಣಗಳನ್ನು ಹಿಡಿದು ಬೇಡಿಕೊಳ್ಳುತ್ತಲೇ ಇದ್ದೆ. “ನೀನೂ ನಮ್ಮ ಜೊತೆಯಲ್ಲಿ ಬಂದರೆ… ಇಲ್ಲಿ ನಮ್ಮ ತಂದೆ ತಾಯಂದಿರನ್ನು ನೋಡಿಕೊಳ್ಳುವರಾರು?’ ಎಂದು ನನ್ನ ಕರ್ತವ್ಯವನ್ನು ನೆನಪಿಸಿ ಬಾಯಿ ಮುಚ್ಚಿಸಿದ್ದರು. ನಂತರ, ನನ್ನತ್ತ ತಿರುಗಿಯೂ ನೋಡದೇ ಅವರ ಚರಣಗಳನ್ನು ಹಿಡಿದು ಕೆಳಗೆ ಬಿದ್ದು ಹೊರಳಾಡುತ್ತಿದ್ದ ನನ್ನನ್ನು ಕಡೆಗಣಿಸಿ ಹೊರಟೇ ಬಿಟ್ಟಿದ್ದರು! ಒಮ್ಮೆಯಾದರೂ ತಿರುಗಿ ನೋಡಿಯಾರೆಂಬ ನನ್ನ ನಿರೀಕ್ಷೆ ಸುಳ್ಳಾಯಿತು.
“ಅರೆಘಳಿಗೆಯೂ ನಿಮ್ಮನ್ನು ತೊರೆದಿರದವಳಿಗೆ ದೀರ್ಘ ನಿದಿರೆಯ ವರವನ್ನು ಕರುಣಿಸಿ ಅಣ್ಣನ ನೆರಳಾಗಿ ಹೊರಟೇ ಬಿಟ್ಟಿರಾ? ಪತಿಯ ಸಾನಿಧ್ಯವೇ ನನಗೆ ಸಗ್ಗವೆಂದು ನಿಮಗರಿಯದೇ ಹೋಯಿತೇ? ಹೆಣ್ಣಾದವಳಿಗೆ ಕರ್ತವ್ಯಗಳಾಚೆಯೂ ತನ್ನದೇ ಆದ ಜಗತ್ತು ಅವಳಿಗಿರುವುದಿಲ್ಲವೇ? ಬಂಗಾರದ ಪಂಜರದಲ್ಲಿ ನನ್ನನ್ನು ಬಂಧಿಯಾಗಿಸಿದ್ದು ಯಾವ ನ್ಯಾಯ?”- ಹೀಗೆಲ್ಲ ಕೇಳಿದೆ ನಾನು. ನನ್ನ ಯಾವ ಪ್ರಶ್ನೆಗೂ ಉತ್ತರವೀಯದೇ ಹೊರಟೇಬಿಟ್ಟರು.
ನಂತರದ ಕೆಲವೇ ದಿನಗಳಲ್ಲಿ ಮಾವನವರು ಪುತ್ರನ ಅಗಲಿಕೆಯನ್ನು ಸಹಿಸಲಾರದೇ ಮೃತ್ಯುವಶರಾದರು. ವಿಧವೆಯರಾದ ಮೂವರು ಅತ್ತೆಯರು, ಶ್ರೀ ರಾಮನ ಪಾದುಕೆಗಳನ್ನು ಸಿಂಹಾಸನದಲ್ಲಿರಿಸಿ ರಾಜ್ಯಭಾರ ನಡೆಸುವ ವಿರಕ್ತರಾಗಿದ್ದ ಭರತ, ಶತ್ರುಘ್ನ, ನನ್ನಿಬ್ಬರು ತಂಗಿಯರು- ಅಷ್ಟೇಕೆ? ಪೂರ್ತಿ ಅಯೋಧ್ಯೆ ನಗುವುದನ್ನೇ ಮರೆಯಿತು.
ನನ್ನಲ್ಲಿದ್ದ ಮೃದು ಮಧುರ ಭಾವನೆಗಳೆಲ್ಲವೂ ಅಂದೇ ಸುಟ್ಟು ಕರಕಲಾಗಿವೆ. ಪತಿಯಿದ್ದೂ ವಿಧವೆಯಂತೆ ಬಾಳಿದ ನನ್ನದೂ ಒಂದು ಬಾಳೇ? ಕಮರಿದ ಕನಸು ಮತ್ತೀಗ ಚಿಗುರುವುದೇ? ಈಗಷ್ಟೇ ಎಚ್ಚರಗೊಂಡು ಲಕ್ಷ್ಮಣನನ್ನು ಎದಿರುಗೊಳ್ಳಲಿರುವುದು…. ಭಾವನೆಗಳು ಬತ್ತಿಹೋದ, ಕಾಷ್ಠದಂತೆ ನಿರ್ಭಾವುಕಳಾಗಿ ಜೀವಂತ ಶವವಾಗಿರುವ ಊರ್ಮಿಳೆಯ ಈ ಶರೀರ ಮಾತ್ರ.
-ಶೋಭಾ ಮೂರ್ತಿ