Advertisement

ರಾಮನಗರ: ನಗರಸಭೆ ಪಟ್ಟ ‘ಕೈ’ ವಶ

04:59 PM Nov 10, 2021 | Team Udayavani |

ರಾಮನಗರ: ಬಹುಮತವಿದ್ದರೂ ನಗರಸಭೆಯಲ್ಲಿ ಅಧಿಕಾರ ಹಿಡಿಯುವ ಕಸರತ್ತು ನಡೆಸಿದ ಕಾಂಗ್ರೆಸ್‌ ಕೊನೆಗೂ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಮಂಗಳವಾರ ರಾಮನಗರ ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಯಿತು. 30ನೇ ವಾರ್ಡಿನ ಪ್ರತಿನಿಧಿ ಬಿ.ಸಿ.ಪಾರ್ವತಮ್ಮ ಅಧ್ಯಕ್ಷರಾಗಿ, 1ನೇ ವಾರ್ಡಿನ ಪ್ರತಿನಿಧಿ ಟಿ.ಜಯಲಕ್ಷ್ಮಮ್ಮ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

Advertisement

ಕಾಂಗ್ರೆಸ್‌ ಪಕ್ಷದಲ್ಲಿ ಬಣ ರಾಜಕೀಯದಿಂದಾಗಿ ಅಧ್ಯಕ್ಷ , ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆ ನಾಗರಿಕ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿತ್ತು. ಕಾಂಗ್ರೆಸ್‌ಗೆ 21 ಮತ, ಜೆಡಿಎಸ್‌ಗೆ 12 ಮತ: ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಬಯಸಿ ಕಾಂಗ್ರೆಸ್‌ನಿಂದ 30ನೇ ವಾರ್ಡಿನ ಬಿ.ಸಿ.ಪಾರ್ವತಮ್ಮ, 31ನೇ ವಾರ್ಡಿನ ವಿಜಯಕುಮಾರಿ ಮತ್ತು ಜೆಡಿಎಸ್‌ ಪಕ್ಷದಿಂದ 8ನೇ ವಾರ್ಡಿನ ಮಂಜುಳಾ ವೆಂಕಟೇಶ್‌ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಿಂದ 1ನೇ ವಾರ್ಡಿನ ಟಿ.ಜಯಲಕ್ಷ್ಮಮ್ಮ , ಜೆಡಿಎಸ್‌ನಿಂದ 21ನೇ ವಾರ್ಡಿನ ಕೆ.ರಮೇಶ್‌ ಉಮೇ ದುವಾರಿಕೆ ಸಲ್ಲಿಸಿದ್ದರು.

ನಾಮಪತ್ರಗಳ ಪರಿಶೀಲನೆ ನಂತರ ಉಮೇದುವಾರಿಕೆ ಹಿಂಪಡೆಯಲು ಅವಕಾಶ ನೀಡಲಾಯಿತು. ಆದರೆ, ಯಾರೊಬ್ಬರು ನಾಮಪತ್ರ ಹಿಂಪಡೆಯದ ಕಾರಣ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಉಪವಿಭಾಗಾಧಿಕಾರಿಗಳು ಚುನಾವಣಾ ಪ್ರಕ್ರಿಯೆ ಆರಂಭಿಸಿದರು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿ.ಸಿ.ಪಾರ್ವತಮ್ಮ ಪರಸಂಸದ ಡಿ.ಕೆ.ಸುರೇಶ್‌ ಮತ್ತು ಪಕ್ಷೇತರ ಸದಸ್ಯ ಸೇರಿ 21 ಮತಗಳು ಚಲಾವಣೆಯಾಯಿತು.

ಇದನ್ನೂ ಓದಿ;- ಮುಜರಾಯಿ ದೇವಸ್ಥಾನಗಳಲ್ಲಿ ಗೋ ಪೂಜೆ

ಪ್ರತಿಸ್ಪರ್ಧಿ ಮಂಜುಳಾ ಪರವಾಗಿ ಶಾಸಕಿ ಅನಿತಾ ಸೇರಿ 12 ಮತಗಳು ಲಭಿಸಿ ದವು. 9 ಮತಗಳ ಅಂತರದಿಂದ ಪಾರ್ವತಮ್ಮ ಅಧ್ಯಕ್ಷಗಾಧಿ ಪ್ರಾಪ್ತವಾಯಿತು. ಕಾಂಗ್ರೆಸ್‌ನಿಂದ ನಾಮಪತ್ರ ಸಲ್ಲಿಸಿದ್ದ ಮತ್ತೂಬ್ಬ ಸದಸ್ಯೆ ವಿಜಯಕುಮಾರಿಯವರಿಗೆ ಶೂನ್ಯ ಮತ ಲಭ್ಯವಾಯಿತು. ತಮ್ಮ ಮತವನ್ನು ತಮಗೇ ಹಾಕಿಕೊಂಡಿರಲಿಲ್ಲ. ಉಪಾಧ್ಯಕ್ಷ ಸ್ಥಾನದಲ್ಲಿ ಕಾಂಗ್ರೆಸ್‌ನ ಟಿ.ಜಯಲಕ್ಷ್ಮಮ್ಮ 21 ಮತಗಳನ್ನು ಪಡೆದು ಜೆಡಿಎಸ್‌ನ ಕೆ.ರಮೇಶ್‌ (ಪಡೆದ ಮತ 11) ಅವರನ್ನು 9 ಮತಗಳಿಂದ ಪರಾಭವಗೊಳಿಸಿದರು.

Advertisement

ಬಣರಾಜಕೀಯದ ನಡುವೆ ವಿಜಯದ ನಗೆ!: ನಗರವ್ಯಾಪ್ತಿಯ ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ ಆರಂಭವಾಗಿದೆ. ನಿಚ್ಚಳ ಬಹುಮತವಿದ್ದರು ಅಧಿಕಾರ ಹಿಡಿಯುವ ಸೌಭಾಗ್ಯ ತಪ್ಪಿಹೋಗುವ ಆತಂಕವಿತ್ತು. ಸೋಮವಾರ ಸಂಜೆ ಸಂಸದ ಡಿ.ಕೆ.ಸುರೇಶ್‌ ಎರಡೂ ಬಣಗಳ ಜೊತೆ ಮಾತಕತೆ ನಡೆಸಿದ್ದರು. ಅಲ್ಲದೆ ತಾವೇ ಸ್ವತಃ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾಗಿ, ಕಾಂಗ್ರೆಸ್‌ ಪಕ್ಷಕ್ಕೆ ಮುಜುಗರವಾಗದಂತೆ ಎಚ್ಚರವಹಿಸಿದ್ದರು.

ಚುನಾವಣಾ ಪ್ರಕ್ರಿಯೆಗೆ ಎಲ್ಲ 19 ಕಾಂಗ್ರೆಸ್‌ ಸದಸ್ಯರು ಆಗಮಿಸಿದಾಗ ಅವರಲ್ಲಿ ಸಮನ್ವಯದ ಕೊರತೆ ಇದ್ದದ್ದು ಗೋಚರಿಸಿತು. ಇನ್ನೊಂದೆಡೆ 11 ಮಂದಿ ಜೆಡಿಎಸ್‌ ಸದಸ್ಯರು ಮಂದಹಾಸದೊಂದಿಗೆ ಪ್ರಕ್ರಿಯೆಗೆ ಬಂದರು. ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಸಹ ಆಗಮಿಸಿದ್ದು, ಜೆಡಿಎಸ್‌ ಪಾಳಯದಲ್ಲಿ ಸಂತಸ ಮನೆ ಮಾಡಿತ್ತು. ಕಾಂಗ್ರೆಸ್‌ನ ಬಣ ರಾಜಕೀಯದ ಲಾಭ ತಮ್ಮ ಪಕ್ಷಕ್ಕೆ ಆಗಬಹುದು ಎಂಬ ನಿರೀಕ್ಷೆ ಜೆಡಿಎಸ್‌ ಕಾರ್ಯಕರ್ತರಲ್ಲಿ ವ್ಯಕ್ತವಾಗಿತ್ತು. ಆದರೆ ಅಂತಹ ಯಾವ ರಾಜಕೀಯ ಬೆಳವಣಿಗೆಗಳು ಆಗದೆ, ಚುನಾವಣೆ ಶಾಂತವಾಗಿ ನಡೆಯಿತು.

30 ತಿಂಗಳ ಅಧಿಕಾರವಧಿ ಹಂಚಿಕೆ?: ನಗರಸಭೆಯ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಕಾಂಗ್ರೆಸ್‌ನಿಂದ 8 ಮಹಿಳೆಯರು ಆಯ್ಕೆಯಾಗಿದ್ದು, ಪೈಪೋಟಿ ಹೆಚ್ಚಾಗಿದೆ. ಹೀಗಾಗಿ ಕನಿಷ್ಠ ನಾಲ್ವರು ಸದಸ್ಯರಿಗೆ ಅಧಿಕಾರ ಹಂಚಿಕೆಯಾಗುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ. ಹೀಗಾಗಿ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸುವವರಿಗೆ ತಲಾ 7 ತಿಂಗಳ ಅಧಿಕಾರವಧಿ ದೊರೆಯಲಿದೆ. ಬಿ.ಸಿ.ಪಾರ್ವತಮ್ಮ ಅವರ ಅಧಿ ಕಾರದ ಅವಧಿ ಪೂರೈಸಿದ ನಂತರ ಜಿಪಂ ಮಾಜಿ ಅಧ್ಯಕ್ಷ ಇಕ್ಬಾಲ್‌ ಬಣದಲ್ಲಿ ಗುರುತಿಸಿಕೊಂಡಿರುವ ವಿಜಯ ಕುಮಾರಿ ಎರಡನೇ ಅವಧಿಗೆ ಗದ್ದುಗೆ ಅಲಂಕರಿಸುವರು ಎಂದು ಹೇಳಲಾಗಿದೆ.

ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿದೆ. ಕಾಂಗ್ರೆಸ್‌ನಿಂದ ಇಬ್ಬರು ಪರಿಶಿಷ್ಟ ಜಾತಿ ಸದಸ್ಯರು ಆಯ್ಕೆ ಯಾಗಿದ್ದಾರೆ. 30 ತಿಂಗಳ ಅಧಿಕಾರವಧಿಯನ್ನು 14 ಮತ್ತು 16 ತಿಂಗಳಂತೆ ಇಬ್ಬರಿಗೆ ಹಂಚಿಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಇಕ್ಬಾಲ್‌ ಬಣದಲ್ಲಿ ಗುರುತಿಸಿಕೊಂಡಿರುವ ಜಯಲಕ್ಷ್ಮಮ್ಮ 14 ತಿಂಗಳು ಹಾಗೂ ಹಿರಿಯ ನಾಯಕರ ಬಣದ ಸೋಮಶೇಖರ್‌ (ಮಣಿ) ಉಳಿದ 16 ತಿಂಗಳ ಅವಧಿಗೆ ಅವಕಾಶ ನೀಡುವ ನಿರ್ಧಾರವನ್ನು ಕಾಂಗ್ರೆಸ್‌ ವರಿಷ್ಠರು ಕೈಗೊಂಡಿದ್ದಾರೆ ಎಂದು ಗೊತ್ತಾಗಿದೆ.

ನೂತನ ಅಧ್ಯಕ್ಷೆ, ಉಪಾಧ್ಯಕ್ಷರನ್ನು ಸಂಸದ ಡಿ.ಕೆ.ಸುರೇಶ್‌,ಎಂಎಲ್‌ಸಿ ಸಿ.ಎಂ.ಲಿಂಗಪ್ಪ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸೈಯದ್‌ ಜಿಯಾವುಲ್ಲಾ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಗಂಗಾಧರ್‌, ಉಪಾಧ್ಯಕ್ಷೆ ದೀಪಾ, ನಗರಸಭಾ ಸದಸ್ಯ ಕೆ.ಶೇಷಾದ್ರಿ (ಶಶಿ) ಅಭಿನಂದಿಸಿದರು.

ಕುಡಿಯುವ ನೀರಿಗೆ ಆದ್ಯತೆ: ಅಧ್ಯಕ್ಷೆ ಪಾರ್ವತಮ್ಮ

ರಾಮನಗರ: ಇನ್ನೊಂದು ಒಂದೂವರೆ ವರ್ಷದೊಳಗೆ ವಾರದ ಎಲ್ಲ ದಿನವೂ ಕುಡಿಯುವ ನೀರು ಸರಬರಾಜು ಯೋಜನೆ ಜಾರಿಗೆ ಬರಲಿದೆ ಎಂದು ನಗರಸಭೆ ನೂತನ ಅಧ್ಯಕ್ಷೆ ಬಿ.ಸಿ.ಪಾರ್ವತಮ್ಮ ಹೇಳಿದರು. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ನಗರ ಬೆಳೆಯುತ್ತಿರುವ ಹಿನ್ನೆಲೆ ಸಮಸ್ಯೆಗಳು ಇರುತ್ತವೆ. ನಗರ ವ್ಯಾಪ್ತಿಯಲ್ಲಿ ಸ್ವತ್ಛತೆ, ಕುಡಿಯುವ ನೀರು ಮತ್ತು ಮೂಲ ಸೌಕರ್ಯಗಳಿಗೆ ತಮ್ಮ ಪ್ರಥಮ ಆದ್ಯತೆ ಎಂದರು. ತಮ್ಮ ಅಧ್ಯಕ್ಷಾವಧಿಯಲ್ಲಿ ಎಲ್ಲ ಸದಸ್ಯರನ್ನು ಮತ್ತು ಅಧಿಕಾರಿ ವರ್ಗವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಉತ್ತಮ ಆಡಳಿತ ನೀಡುವುದಾಗಿ ತಿಳಿಸಿದರು.

ಶಾಸಕರ ಸಹಕಾರದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಗರದ ಸಮಸ್ಯೆಗಳ ಪರಿಹಾರಕ್ಕೆ ಶಾಸಕರಾದ ಅನಿತಾ ಕುಮಾರಸ್ವಾಮಿಯವರು ಸ್ಪಂದಿಸುವ ವಿಶ್ವಾಸವಿದೆ. ಇನ್ನೊಂದೆಡೆ ಸರ್ಕಾರದಿಂದ ಸವಲತ್ತುಗಳಿಗಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮತ್ತು ಸಂಸದ ಡಿ.ಕೆ.ಸುರೇಶ್‌ ಅವರ ಮಾರ್ಗದರ್ಶನವನ್ನು ಸಹ ಪಡೆಯುವುದಾಗಿ ತಿಳಿಸಿದರು. ತಾವು ನಗರಸಭೆಗೆ 3ನೇ ಬಾರಿಗೆ ಆಯ್ಕೆಯಾಗುತ್ತಿರುವುದಾಗಿ. 1995ರಲ್ಲಿ ಪುರಸಭೆಗೆ ಆಯ್ಕೆಯಾಗಿದ್ದ ವೇಳೆ ಆರೋಗ್ಯ ಸಮಿತಿಯ ಅಧ್ಯಕ್ಷರಾಗಿ 5 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ ಅನುಭವವಿದೆ ಎಂದರು.

ಬಣರಾಜಕೀಯಕೆ ಬ್ರೇಕ್‌ ಹಾಕಿದ ಸುರೇಶ್‌

ರಾಮನಗರ: ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯನ್ನು ಪ್ರತಿಷ್ಠೆಯಾಗಿ ಕಾಂಗ್ರೆಸ್‌ ಪಕ್ಷದಲ್ಲಿರುವ ಎರಡೂ ಬಣಗಳು ತೆಗೆದುಕೊಂಡಿದ್ದವು. ಮೈಲುಗೈ ಸಾಧಿಸುವ ಭರಾಟೆಯಲ್ಲಿ 9 ಮಂದಿಯ ಕಾಂಗ್ರೆಸ್‌ ಗುಂಪು, ಜೆಡಿಎಸ್‌ ಅಭ್ಯರ್ಥಿ ಮಂಜುಳಾ ಪರ ಮತ ಚಲಾಯಿಸುವ ಅನುಮಾನವೂ ಸೃಷ್ಠಿಯಗಿತ್ತು. ಶಾಸಕರಾದ ಅನಿತಾ ಕುಮಾರಸ್ವಾಮಿಯವರ ಆಗಮನ ಈ ಎಲ್ಲ ಅನುಮಾನಗಳಿಗೆ ಪುಷ್ಠಿ ನೀಡಿತ್ತು.

ನಗರಸಭೆಯ ಅಧಿಕಾರ ಜೆಡಿಎಸ್‌ಗೆ ಒಲಿಯಲಿದೆ ಎಂಬ ಗಾಳಿ ಸುದ್ದಿಯೂ ಹರಡಿತು. ಆದರೆ, ಚುನಾವಣಾ ಪ್ರಕ್ರಿಯೆ ವೇಳೆ ಹಾಜರಿದ್ದ ಸಂಸದ ಡಿ.ಕೆ.ಸುರೇಶ್‌ ಕಾಂಗ್ರೆಸ್‌ ಸದಸ್ಯರ ಒಗ್ಗಟ್ಟು ಮುಂದುವರೆಯುವಂತೆ ಎಚ್ಚರವಹಿಸಿದರು.

ಚುನಾವಣೆ ಮುಗಿದ ನಂತರ ಸಂಸದ ಡಿ.ಕೆ. ಸುರೇಶ್‌ ನಗರಸಭೆಯಿಂದ ಹೊರ ಬಂದಾಗ ವಿಧಾನ ಪರಿಷತ್‌ ಸದಸ್ಯ ಸಿ.ಎಂ.ಲಿಂಗಪ್ಪ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಿಯಾವುಲ್ಲಾ ಅವರನ್ನು ಭೇಟಿ ಮಾಡಲಿಲ್ಲ. ಜಿಪಂ ಮಾಜಿ ಅಧ್ಯಕ್ಷ ಇಕ್ಬಾಲ್‌ ಹುಸೇನ್‌ ನೂತನ ಅಧ್ಯಕ್ಷ, ಉಪಾಧ್ಯರನ್ನು ಅಭಿನಂದಿಸದೆ, ಸಂಸ ದರೊಂದಿಗೆ ತೆರಲಿಳಿದರು.

 ಚಿಗುರಿದ ಕನಸು ನುಚ್ಚು ನೂರು!

ರಾಮನಗರ: 11 ಮಂದಿ ಸದಸ್ಯ ಬಲವಿರುವ ಜೆಡಿಎಸ್‌ ಪಾಳಯಕ್ಕೆ ನಗರಸಭೆಯಲ್ಲಿ ಅಧಿಕಾರಿ ಹಿಡಿಯುವ ಕನಸು ಇರಲಿಲ್ಲ. ಆದರೆ ಕಾಂಗ್ರೆಸ್‌ ಪಕ್ಷದಲ್ಲಿನ ಬಣ ರಾಜಕೀಯದ ಲಾಭ ತನಗೆ ಆಗಲಿದೆ ಎಂಬ ಕನಸು ಚುನಾವಣೆ ಕೆಲ ಹೊತ್ತಿನ ಮೊದಲು ಚಿಗುರಿತ್ತು. ಆದರೆ ಪ್ರಕ್ರಿಯೆ ಪ್ರಗತಿ ಹೊಂದಿದಂತೆಲ್ಲ ಅಧಿಕಾರಕ್ಕೆರುವ ಕನಸು ಬತ್ತಿ ಹೋಯಿತು.

ಅಧ್ಯಕ್ಷ ಸ್ಥಾನದ ಅಭ್ಯರ್ಥಿಗೆ ಮತ ಹಾಕಿದ ಶಾಸಕಿ ಅನಿತಾ ಕುಮಾರಸ್ವಾಮಿ, ಉಪಾಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆಗೆ ಕಾಯದೆ ನಿರ್ಗಮಿಸಿದರು. ಜೆಡಿಎಸ್‌ ಊಹಿಸಿದಂತೆ ಚುನಾವಣೆಯ ವೇಳೆ ರಾಜಕೀಯ ಮೇಲಾಟಗಳು ನಡೆಯಲಿಲ್ಲ.

“ರಾಮನಗರ ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್‌ ಪಕ್ಷದ ಸದಸ್ಯರಿಗೆ ಲಭ್ಯವಾಗಿದೆ. ನಗರದ ಒಟ್ಟಾರೆ ಅಭಿವೃದ್ಧಿಗೆ ಬದ್ಧರಾಗಿ ಎಲ್ಲರು ಒಗ್ಗಟ್ಟಾಗಿ ಕೆಲಸ ಮಾಡಲು ಸೂಚಿಸಲಾಗಿದೆ. ಅಧಿಕಾರ ಹಿಡಿಯುವ ಆಸೆ ಎಲ್ಲರಿಗೂ ಇದ್ದೇ ಇರುತ್ತದೆ. ತಮ್ಮ ಪಕ್ಷದ ಇಬ್ಬರು ಅಭ್ಯರ್ಥಿಗಳು ಸಹ ಇದೇ ಕಾರಣಕ್ಕೆ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಆದರೆ, ಪಕ್ಷದ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿ, ಬಿ.ಸಿ.ಪಾರ್ವತಮ್ಮ ಅವರನ್ನು ಅಧ್ಯಕ್ಷರನ್ನಾಗಿ, ಉಪಾಧ್ಯಕ್ಷರನ್ನಾಗಿ ಟಿ.ಜಯಲಕ್ಷಮ್ಮ ಅವರನ್ನು ಆಯ್ಕೆ ಮಾಡಿದ್ದಾರೆ.” – ಡಿ.ಕೆ.ಸುರೇಶ್‌, ಸಂಸದರು

Advertisement

Udayavani is now on Telegram. Click here to join our channel and stay updated with the latest news.

Next