Advertisement

ರಾಮನಗರ: ಬೇಸಿಗೆಗೆ ಮುನ್ನವೇ ಜಿಲ್ಲೆಯಲ್ಲಿ ನೀರಿನ ಬವಣೆ

05:01 PM Feb 22, 2024 | Team Udayavani |

ಉದಯವಾಣಿ ಸಮಾಚಾರ
ರಾಮನಗರ: ಜಿಲ್ಲೆಯಲ್ಲಿ ಬೇಸಿಗೆಗೆ ಮುನ್ನಾ ಜಲಕ್ಷಾಮ ಎದುರಾಗಿದೆ. ಗ್ರಾಮಾಂತರ ಪ್ರದೇಶಕ್ಕಿಂತ ಹೆಚ್ಚಾಗಿ ನಗರ ಪ್ರದೇಶವನ್ನು ಕುಡಿಯುವ ನೀರಿನ ಬವಣೆ ಕಾಡುತ್ತಿದ್ದು, ಜಿಲ್ಲೆಯ 6 ನಗರಾಡಳಿತ ಕೇಂದ್ರಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಜನವರಿ ಅಂತ್ಯದ ವೇಳೆಗೆ ಉಲ್ಬಣಿಸಿದೆ. ಕೊಳವೆ ಬಾವಿಯನ್ನು ಆಶ್ರಯಿಸಿರುವ ಗ್ರಾಮೀಣ ಪ್ರದೇಶದ ಕುಡಿಯುವ ನೀರಿನ ವ್ಯವಸ್ಥೆ, ಸದ್ಯಕ್ಕೆ ಸಮಾಧಾನಕರವಾಗಿದ್ದು, ಮಾರ್ಚ್‌ ತಿಂಗಳಲ್ಲಿ ಕೆಲ ಗ್ರಾಮಗಳಲ್ಲಿ ಸಹ ಕುಡಿಯುವ ನೀರಿನ ಬವಣೆ ಎದುರಾಗಲಿದೆ ಎಂದು ಜಿಪಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

ಜಿಲ್ಲಾ ಕೇಂದ್ರಕ್ಕೆ ನೀರಿಲ್ಲ: ಜಿಲ್ಲಾ ಕೇಂದ್ರ ರಾಮನಗರ ಪಟ್ಟಣದಲ್ಲಿ ಕುಡಿಯುವ ನೀರಿನ ಬವಣೆ ತೀವ್ರಗೊಂಡಿದೆ. ನಗರದ
ಜನವಸತಿ ಪ್ರದೇಶ ಗಳಿಗೆ 15 ರಿಂದ 18 ದಿನಗಳಿಗೆ ಒಮ್ಮೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ.ರಾಮನಗರ ಪಟ್ಟಣ ಪ್ರದೇಶದಲ್ಲಿ 1.30 ಲಕ್ಷ ಮಂದಿ ಜನಸಂಖ್ಯೆ ಇದ್ದು, ಪ್ರತಿದಿನ 17.55 ಎಂಎಲ್‌ಡಿ(ಮಿಲಿಯನ್‌ ಲೀಟರ್‌ ಫರ್‌ ಡೇ) ನೀರಿನ ಅಗತ್ಯತೆ ಇದೆ ಎಂದು ಜಲಮಂಡಳಿಅಧಿಕಾರಿಗಳು ಅಂದಾಜಿಸಿದ್ದಾರೆ. ಆದರೆ ಪ್ರಸ್ತುತ ಪೂರೈಕೆಯಾಗುತ್ತಿರುವುದು ಎಂಎಲ್‌ಡಿ ಮಾತ್ರ. 7.55 ಎಂಎಲ್‌ಡಿ ಯಷ್ಟು ನೀರಿ ಕೊರತೆ ಎದುರಾಗಿದೆ.

ಚನ್ನಪಟ್ಟದಲ್ಲೂ ಬವಣೆ: ಚನ್ನಪಟ್ಟಣ ನಗರ ಪ್ರದೇಶಕ್ಕೆ ಪ್ರತಿದಿನ 12 ಎಂಎಲ್‌ಡಿಯಷ್ಟು ನೀರು ಬೇಕಿದ್ದು ಇದೀಗ ಪೂರೈಕೆಯಾಗುತ್ತಿರುವುದು 6 ಎಂಎಲ್‌ ಡಿಯಷ್ಟು ಮಾತ್ರ. ಇನ್ನು ಕೊಳವೆ ಬಾವಿಗಳಿಂದ 2 ಎಂಎಲ್‌ಡಿಯಷ್ಟು ನೀರು ಪೂರೈಕೆಯಾಗುತ್ತಿದೆ. ಇದರಿಂದಾಗಿ 5 ದಿನಗಳಿಗೆ ಒಂದು ಬಾರಿ 1 ತಾಸುಗಳ ಕಾಲ ನೀರು ಪೂರೈಕೆ ಮಾಡಲಾಗುತ್ತಿದೆ. ಪರಿಸ್ಥಿತಿ ಇದೇ ರೀತಿ ಮುಂದುವರೆದಿದ್ದೇ ಆದಲ್ಲಿ ವಾರಕ್ಕೊಮ್ಮೆ ಬಿಡುವ ಪರಿಸ್ಥಿತಿ ಎದುರಾಗಲಿದೆ.

ಮಾಗಡಿ, ಕನಕಪುರದಲ್ಲಿ ಎರಡು ದಿನಕೊಮ್ಮೆ ನೀರು: ಜಿಲ್ಲೆಯ ಮತ್ತೆರಡು ಪ್ರಮುಖ ಪಟ್ಟಣಗಳಾಗಿರುವ ಕನಕಪುರ ಮತ್ತು ಮಾಗಡಿಯಲ್ಲಿ ನೀರಿನ ಬವಣೆ ತುಸು ಕಡಿಮೆ ಇದೆ. ಮಾಗಡಿ ಪಟ್ಟಣಕ್ಕೆ 2.80 ಎಂಎಲ್‌ಡಿಯಷ್ಟು ನೀರು ಬೇಕಿದ್ದು, ಎರಡು ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ.

ಆದರೆ ಮಂಚನಬೆಲೆ ಜಲಾಶಯದಿಂದ ಶುದ್ಧೀಕರಿಸದೆ ನೀರು ಪೂರೈಕೆ ಮಾಡುತ್ತಿದ್ದಾರೆ ಎಂಬ ದೂರು ಸಾರ್ವಜನಿಕರದ್ದಾಗಿದೆ. ಇನ್ನು ಕನಕಪುರಕ್ಕೆ ಪ್ರತಿದಿನ 8.75 ಎಂಎಲ್‌ಡಿ ನೀರು ಬೇಕಿದ್ದು 5.50 ಎಂಎಲ್‌ಡಿಯಷ್ಟು ನೀರನ್ನು ಪೂರೈಕೆ ಮಾಡಲಾಗುತ್ತಿದೆ. ಪ್ರತಿ ಎರಡು ದಿನಗಳಿಗೆ ಒಂದು ತಾಸು ಕನಕಪುರಕ್ಕೆ ನೀರು ಸರಬರಾಜಾಗುತ್ತಿದೆ.

Advertisement

ಎರಡೂ ನದಿ ಬರಿದು: ರಾಮನಗರ ಮತ್ತು ಚನ್ನಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆ ಮಾಡಲು ಶಿಂಷಾ ಮತ್ತು ಅರ್ಕಾವತಿ ನದಿ ನೀರನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಶಿಂಷಾನದಿಯ ನೀರನ್ನು ತೊರೆಕಾಡನಹಳ್ಳಿ ಬಳಿಯ ಪಂಪ್‌ಹೌಸ್‌ನಿಂದ ರಾಮ
ನಗರ-ಚನ್ನಪಟ್ಟಣ ನಗರಕ್ಕೆ, ಅರ್ಕಾವತಿ ನದಿ ನೀರನ್ನು ನೇರವಾಗಿ ರಾಮನಗರಕ್ಕೆ ಪಂಪ್‌ ಮಾಡಲಾಗುತ್ತಿದೆ. ಜನವರಿ ಅಂತ್ಯಕ್ಕೆ ಎರಡು ನದಿಗಳು ಬತ್ತಿ ಹೋಗಿರುವ ಕಾರಣ ನೀರಿನ ಬವಣೆ ಉಲ್ಬಣಗೊಂಡಿದೆ.

ಬಿಡಬ್ಲ್ಯುಎಸ್‌ಎಸ್‌ಬಿ ಬ್ಯಾಕ್‌ವಾಶ್‌ ನೀರೇಗಟ್ಟಿ: 
ಚನ್ನಪಟ್ಟಣ ಮತ್ತು ರಾಮನಗರ ಪಟ್ಟಣಗಳ ಕುಡಿಯುವ ನೀರಿಗೆ ತೊರೆಕಾಡನಹಳ್ಳಿ ಯಿಂದ ಬೆಂಗಳೂರಿಗೆ ಸರಬರಾಜಾಗುವ ಕಾವೇರಿ ನೀರಿನ ಬ್ಯಾಕ್‌ವಾಶ್‌ ನೀರಷ್ಟೇ ಆಸರೆಯಾಗಿದೆ. ಬೆಂಗಳೂರಿಗೆ ಕಾವೇರಿ ಕುಡಿಯುವ ನೀರು ಸರಬರಾಜು ಮಾಡುವ ಬೆಂಗಳೂರು ಜಲಮಂಡಳಿ, ನೀರಿನ ಕೊಳವೆಗಳನ್ನು ಶುದ್ಧೀಕರಿಸುವ ಉದ್ದೇಶದಿಂದ ಮತ್ತೆ ಕೊಳವೆಯನ್ನು ಹಿಂದಕ್ಕೆ ನೀರು ಬಿಡುತ್ತದೆ. ಹೀಗೆ ಹಿಂದಕ್ಕೆ ಬಿಡುವ ಬ್ಯಾಕ್‌ವಾಶ್‌ ನೀರು 15 ಎಂಎಲ್‌ಡಿಯಷ್ಟು ಸಿಗುತ್ತಿದ್ದು, ಇದರಲ್ಲಿ 6 ಎಂಎಲ್‌ಡಿ ಚನ್ನಪಟ್ಟಣಕ್ಕೆ, 6 ಎಂಎಲ್‌ಡಿ ರಾಮನಗರಕ್ಕೆ ಮತ್ತು ಉಳಿದ 3 ಎಂಎಲ್‌ಡಿ ಮಾರ್ಗಮಧ್ಯೆ ಇರುವ ಗ್ರಾಮಗಳಿಗೆ
ಪೂರೈಕೆ ಮಾಡಲಾಗುತ್ತಿದೆ.

ಗ್ರಾಮೀಣ ಭಾಗದಲ್ಲಿ ಸಮಾಧಾನ: ಜಿಲ್ಲೆಯ ನಗರ ಪ್ರದೇಶಗಳಿಗೆ ಹೋಲಿಕೆ ಮಾಡಿದರೆ ಗ್ರಾಮೀಣ ಭಾಗದಲ್ಲಿ ನೀರಿನ ಬವಣೆ ಅಷ್ಟಿಲ್ಲ. ಸದ್ಯಕ್ಕೆ ಜಿಲ್ಲೆಯ 3 ಗ್ರಾಮಗಳಲ್ಲಿ ಮಾತ್ರ ತೀವ್ರ ಕುಡಿಯುವ ನೀರಿನ ಭವಣೆ ಇದ್ದು, ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಉಳಿದಂತೆ ಕೊಳವೆಬಾವಿಗಳ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಕೆಲ ಕೊಳವೆ ಬಾವಿಗಳಲ್ಲಿ ಬರದಿಂದಾಗಿ ನೀರಿನ ಮಟ್ಟ ಕಡಿಮೆಯಾಗುತ್ತಿದ್ದು ಕೊಳವೆಬಾವಿಗಳು ಬತ್ತಿಹೋದಲ್ಲಿ ಗ್ರಾಮೀಣ ಭಾಗದಲ್ಲೂ ಕುಡಿಯುವ ನೀರಿನ ಬವಣೆ ಉಲ್ಬಣಿಸಲಿದೆ.

*ಸು.ನಾ.ನಂದಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next