Advertisement

ಬೇಡಿಕೆ ಈಡೇರಿಕೆಗೆ ಲೆಕ್ಕಾಧಿಕಾರಿಗಳ ಮುಷ್ಕರ

03:35 PM Jul 18, 2019 | Naveen |

ರಾಮನಗರ: ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಹಲವು ಬಾರಿ ಮನವಿ ಮಾಡಲಾಗಿದೆ. ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಸೇರಿದಂತೆ ಹಿರಿಯ ಅಧಿಕಾರಿಗಳ ಬಳಿ ತಮ್ಮ ರಾಜ್ಯ ಸಂಘದ ಪದಾಧಿಕಾರಿಗಳು ಹಲವಾರು ಸಭೆಗಳನ್ನು ನಡೆಸಿದ್ದರೂ ಬೇಡಿಕೆಗಳು ಈಡೇರಲಿಲ್ಲ ಎಂದು ಆರೋಪಿಸಿ ಕರ್ನಾಟಕ ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಜಿಲ್ಲಾ ಘಟಕದ ಆಶ್ರಯದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು ನಗರದಲ್ಲಿ ಸಾಂಕೇತಿಕವಾಗಿ ಮುಷ್ಕರ ನಡೆಸಿದರು.

Advertisement

ನಗರದ ಜಿಲ್ಲಾ ಕಚೇರಿಗಳ ಸಂಕಿರ್ಣದ ಮುಂಭಾಗ ಜಮಾಯಿಸಿದ ಗ್ರಾಮ ಲೆಕ್ಕಾಧಿಕಾರಿಗಳು, ತಮಗೆ ಮುಂಬಡ್ತಿಯಲ್ಲಿ ಆಗುತ್ತಿರುವ ಅನ್ಯಾಯ ಸರಿಪಡಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

ರಜಾ ದಿನದಲ್ಲೂ ಒತ್ತಡ: ರಜಾ ದಿನಗಳಲ್ಲಿ ಕೆಲಸದ ಒತ್ತಡ ಹೇರಬಾರದು ಎಂದು ಸರ್ಕಾರ ಸ್ಪಷ್ಟ ಆದೇಶ ಕೊಟ್ಟಿದೆ. ಆದರೂ ಹಲವು ಜಿಲ್ಲೆಗಳಲ್ಲಿ ಸಾರ್ವತ್ರಿಕ ದಿನಗಳಲ್ಲಿ ಕೆಲಸ ಮಾಡುವಂತೆ ಒತ್ತಡ ಹೇರಲಾಗುತ್ತಿದೆ. ಹೀಗಾಗಿ ತಮ್ಮ ಕುಟುಂಬದ ಸದಸ್ಯರ ಜೊತೆ ಕಾಲ ಕಳೆಯಲು ಸಹ ಆಗುತ್ತಿಲ್ಲ. ಇದು ಪರೋಕ್ಷವಾಗಿ ಕೌಟಂಬಿಕ ಕಲಹಗಳಿಗೂ ಕಾರಣವಾಗುತ್ತಿದೆ, ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ಕಂದಾಯ ನೌಕರರ ಮಾನಸಿಕ ಹತಾಶೆಗಳಿಗೆ ಇದು ಕಾರಣವಾಗುತ್ತಿದೆ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು.

ಹೀಗಾಗಿ ರಜಾ ದಿನಗಳಲ್ಲಿಯಾದರೂ ತಮಗೆ ಒತ್ತಡ ಇಲ್ಲದಂತೆ ಮಾಡಿ ಎಂದು ವಿನಂತಿಸಿಕೊಂಡರು. ಅನ್ಯ ಇಲಾಖೆಯ ಕೆಲಸಗಳನ್ನು ಕಂದಾಯ ಇಲಾಖೆಯ ನೌಕರರ ಮೇಲೆ ಹೇರಲಾಗುತ್ತಿದೆ ಎಂದು ಆರೋಪಿಸಿದರು.

ಲೆಕ್ಕಾಧಿಕಾರಿಗಳ ಮುಂಬಡ್ತಿಯಲ್ಲಿ ಅನ್ಯಾಯ: ಗ್ರಾಮ ಲೆಕ್ಕಾಧಿಕಾರಿಗಳ ಮುಂಬಡ್ತಿಯಲ್ಲಿ ಉಂಟಾಗುತ್ತಿರುವ ನಿರಂತರ ಅನ್ಯಾಯವನ್ನು ಸರಿಪಡಿಸಿ, ಇಲಾಖೆಯ ದ್ವಿತೀಯ ದರ್ಜೆ ಸಹಾಯಕ ಮತ್ತು ಗ್ರಾಮ ಲೆಕ್ಕಿಗರ ಜೇಷ್ಠತೆಯನ್ನು ಒಟ್ಟುಗೂಡಿಸಿ ಪದವೀಕರಿಸುವುದು. ಗ್ರಾಮ ಲೆಕ್ಕಾಧಿಕಾರಿಗಳ ಪ್ರಯಾಣ ಭತ್ಯೆ ದರವನ್ನು 1 ಸಾವಿರ ರೂ.ಗೆ ಹೆಚ್ಚಿಸಲು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ತೀರ್ಮಾನಿಸಿದ್ದರು. ರಾಜ್ಯ ಸಂಘವು 1000 ರೂ.ಗೆ ಹೆಚ್ಚಿಸಲು 6ನೇ ವೇತನ ಆಯೋಗಕ್ಕೂ ಮನವಿ ಸಲ್ಲಿಸಿತ್ತು. ಆದರೆ, ಸರ್ಕಾರ ಕೇವಲ 300 ರೂ.ನಿಂದ 500 ರೂ. ಗಳಿಗೆ ಮಾತ್ರ ಹೆಚ್ಚಿಸಿದೆ. ಸರ್ಕಾರ ತನ್ನ ಈ ಆದೇಶವನ್ನು ಪುನರ್‌ ಪರಿಶೀಲಿಸಿ, 1000 ರೂ.ಗಳಿಗೆ ಹೆಚ್ಚಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Advertisement

ಪರಿಷ್ಕೃತ ಜಾಬ್‌ ಚಾರ್ಟ್‌ ನೀಡಿಲ್ಲ: ಗ್ರಾಮ ಲೆಕ್ಕಾಧಿಕಾರಿಗಳಿಗೆ ಜಾಬ್‌ ಚಾರ್ಟ್‌ ನೀಡುವ ಬಗ್ಗೆ ತೀರ್ಮಾನಿಸಿದ್ದರೂ ಸಹ ಇದುವರೆಗೂ ಪರಿಷ್ಕೃತ ಜಾಬ್‌ ಚಾರ್ಟ್‌ ನೀಡಿಲ್ಲ. ಮರಳು ದಂಧೆ ಕೋರರಿಂದ ಲಾರಿ ಹರಿದು ಮೃತರಾದ ಸಾಹೇಬ ಪಾಟೀಲ್ ಕುಟುಂಬಕ್ಕೆ ವಿಶೇಷ ಪರಿಹಾರ 20 ಲಕ್ಷ ರೂ.ಪಾಯಿ ಬಿಡುಗಡೆ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯ ಮಾಡಿದರು.

ಪ್ರತಿಭಟನೆಯಲ್ಲಿ ಸಂಘದ ಪಧಾದಿಕಾರಿಗಳಾದ ಎಂ.ಹರ್ಷ, ನಾಗರಾಜು, ಜಗದೀಶ್‌, ಎಂ.ಸಿ.ರಾಜಶೇಖರ್‌, ನಾರಾಯಣ, ಎಂ.ಬಿ ಯೋಗೇಶ್‌, ತಾಲೂಕು ಅಧ್ಯಕ್ಷ ತಂಗರಾಜು, ವೆಂಕಟೇಶ್‌, ಮೋಹನ, ಚಂದ್ರು ಮುಂತಾದವರು ಹಾಜರಿದ್ದರು. ಪ್ರತಿಭಟನಾಕಾರರು ಕಂದಾಯ ಸಚಿವರು ಹಾಗೂ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಮಾಡಿಕೊಂಡಿದ್ದ ಮನವಿಯನ್ನು ಅಪರ ಜಿಲ್ಲಾಧಿಕಾರಿ ಬಿ.ಪಿ.ವಿಜಯ್‌ ಸ್ವೀಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next