ರಾಮನಗರ: ದಶಪಥ ಎಕ್ಸ್ಪ್ರೆಸ್ ವೇ ಶೇಷಗಿರಿಹಳ್ಳಿ ಟೋಲ್ ಸಿಬ್ಬಂದಿ ಕೊಲೆ ಪ್ರಕರಣದ ಆರೋಪಿಗಳನ್ನು ಬಿಡದಿ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಸುಂಕದಕಟ್ಟೆಯ ಅಭಿಷೇಕ್ (29) ಮತ್ತು ಸಂತೋಷ್ (23) ಬಂಧಿತ ಆರೋಪಿಗಳು.
ಘಟನೆ ಹಿನ್ನೆಲೆ: ನಗರದ ದಶಪಥ ಎಕ್ಸ್ಪ್ರೆಸ್ ವೇ ಶೇಷಗಿರಿಹಳ್ಳಿಯ ಟೋಲ್ ನಲ್ಲಿ ಕೆಲಸ ಮಾಡುತ್ತಿದ್ದ ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆಯ ಸಿಕ್ಕೆಪಾಳ್ಯ ನಿವಾಸಿ ಪವನ್ (30) ಹೆಜ್ಜಾಲ ಸಮೀಪ ಮಾರಣಾಂತಿಕ ಹಲ್ಲೆ ಮಾಡಿ ಕೊಲೆ ಮಾಡಲಾಗಿತ್ತು.
ಆರೋಪಿಗಳು ಜೂ. 5 ರಂದು ಸ್ನೇಹಿತರೊಂದಿಗೆ ಕಾರಿನಲ್ಲಿ ರಾತ್ರಿ ಮೈಸೂರು ಕಡೆಗೆ ತೆರಳುತ್ತಿದ್ದ ವೇಳೆ ಶೇಷಗಿರಿಹಳ್ಳಿ ಟೋಲ್ ನಲ್ಲಿ ಪವನ್ ಜೊತೆ ಗಲಾಟೆ ಮಾಡಿಕೊಂಡಿದ್ದರು. ಆ ಬಳಿಕ ಪವನ್ ಮನೆಗೆ ಹೋಗುವಾಗ ಬೈಕ್ ನಲ್ಲಿ ಬಂದು ಆರೋಪಿಗಳು ಮತ್ತೆ ಗಲಾಟೆ ಮಾಡಿದ್ದಾರೆ. ಗಲಾಟೆ ವಿಕೋಪಕ್ಕೆ ತಿರುಗಿದ ಪರಿಣಾಮ ಆರೋಪಿಗಳು ಪವನ್ ಮೇಲೆ ಹಲ್ಲೆ ನಡೆಸಿ, ಹತ್ಯೆಗೈದಿದ್ದರು.
ಈ ಸಂಬಂಧ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ಇದೀಗ ಬಿಡದಿ ಪೊಲೀಸರು ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಆಹಾರ ಪೂರೈಕೆ ಮಾಡುವ ಕಂಪನಿಯಲ್ಲಿ ಆರೋಪಿಗಳು ಡೆಲಿವರ್ ಬಾಯ್ ಆಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.