Advertisement

ಕೀಟಬಾಧೆ: ರೇಷ್ಮೆ ಇಳುವರಿ ಕುಸಿತದ ಆತಂಕ

04:08 PM Aug 01, 2019 | Naveen |

ರಾಮನಗರ: ರೇಷ್ಮೆ ಗೂಡಿನ ಧಾರಣೆ ಇಲ್ಲದೇ ಕಂಗಾಲಾಗಿರುವ ರಾಮನಗರ ಜಿಲ್ಲೆಯ ರೇಷ್ಮೆ ಕೃಷಿಕರು, ಹಿಪ್ಪು ನೇರಳೆ ಕೀಟ ಬಾಧೆಯಿಂದಾಗಿ ರೋಸಿ ಹೋಗಿದ್ದಾರೆ. ಇನ್ನೊಂದೆಡೆ ರೇಷ್ಮೆ ಇಲಾಖೆಯ ಅಧಿಕಾರಿಗಳು ಕೀಟ ವಿಜ್ಞಾನಿಗಳ ಮೊರೆ ಹೋಗಿದ್ದಾರೆ.

Advertisement

ಕೀಟ ಬಾಧೆಯಿಂದ ಶೇ.40ರಷ್ಟು ರೇಷ್ಮೆ ಗೂಡಿನ ಉತ್ಪಾದನೆ ಕುಸಿಯುತ್ತದೆ ಎಂದು ರೇಷ್ಮೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಫೈಟೋಟಾರ್ಸ ನೋಮಸ್‌ ಲಾಟಸ್‌ ಎಂಬ ಕೀಟ ಹಿಪ್ಪು ನೇರಳೆ ಗಿಡದ ಎಲೆಗಳನ್ನು ನಾಶ ಮಾಡುತ್ತಿವೆ. ಈಗಾಗಲೇ ಈ ಕೀಟ ಜಿಲ್ಲಾದ್ಯಂತ ಹರಡಿದೆ. ಈ ಕೀಟ ಬಾಧೆಯ ನಿವಾರಣೆಗೆ ಔಷಧಗಳು ಇವೆಯಾದರು, ಅದನ್ನು ಬಳಸಿದರೆ ಹತ್ತಿರದಲ್ಲಿರುವ ಆರೋಗ್ಯವಂತೆ ರೇಷ್ಮೆ ಹುಳುವಿನ ನಾಶಕ್ಕೂ ಕಾರಣವಾಗಲಿದೆ. ಈ ಸಂದಿಗ್ದ ಪರಿಸ್ಥಿತಿಯಲ್ಲಿ ರೇಷ್ಮೆ ಇಲಾಖೆಯ ಅಧಿಕಾರಿಗಳು ವಿಜ್ಞಾನಿಗಳ ಮೊರೆ ಹೋಗಿದ್ದಾರೆ.

ಕೀಟ ಬಾಧಿಸುವುದು ಹೇಗೆ?: ಹಿಪ್ಪು ನೇರಳೆ ತೋಟ ಅನೇಕ ಕೀಟಗಳ ಬಾಧೆಗೆ ತುತ್ತಾಗುತ್ತದೆ. ಸಾಮಾನ್ಯವಾಗಿ ಜೇಡ ಗುಂಪಿಗೆ ಸೇರಿದ ಫೈಟೊ ಟಾರ್ಸನೋಮಸ್‌ ಲಾಟಸ್‌ ಕೀಟ ಪ್ರಸಕ್ತ ವರ್ಷದಲ್ಲಿ ಹೆಚ್ಚು ಭಾದಿಸುತ್ತಿದೆ. ರೇಷ್ಮೆ ಬೆಳೆಗಾರರಿಗೆ ನಷ್ಟವನ್ನು ಉಂಟು ಮಾಡುತ್ತಿದೆ. ಈ ಕೀಟಗಳು ಹಿಪ್ಪು ನೇರಳೆಯ ಎಲೆಗಳ ರಸ ಹೀರಿಕೊಳ್ಳುವುದರಿಂದ ಅದರ ಬೆಳವಣಿಗೆಯ ಮೇಲೆ ಪರಿಣಾಮ ಬೀರಿ ಗುಣಮಟ್ಟ ಕುಂಠಿತಗೊಳ್ಳುತ್ತವೆ. ಭೂಮಿಯಲ್ಲಿ ತೇವಾಂಶದ ಕೊರತೆ ಉಂಟಾದರೆ, ಈ ಕೀಟ ತನ್ನ ಪ್ರಭಾವ ಬೀರುವುದು ಹೆಚ್ಚು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಹಾವಳಿಯ ಲಕ್ಷಣಗಳೇನು?: ಕೀಟ ಬಾಧೆಗೆ ತುತ್ತಾಗಿರುವ ತೋಟಗಳ ಎಲೆಗಳ ಮೇಲೆ ಮತ್ತು ಕೆಳ ಭಾಗಗಳಲ್ಲಿ ಅಧಿಕವಾಗಿರುತ್ತದೆ. ಕೀಟಗಳು ಸೊಪ್ಪಿನ ರಸ ಹೀರಿ ಕೆಳಭಾಗದ ಎಲೆಯ ಸಿರೆಗಳ ಮೇಲೆ ನುಸಿಯು ಹೊರಚೆಲ್ಲಿದ ಮೇಣವು ಒಂದು ರೀತಿಯಲ್ಲಿ ಚಾಪೆಯಂತಿರುತ್ತವೆ. ಎಲೆಗಳ ಮೇಲೆ ಹಳದಿ ಬಣ್ಣದ ಚುಕ್ಕೆಗಳು ಕಾಣಿಸಿಕೊಂಡು ಎಲೆಗಳು ಚಿಕ್ಕದಾಗಿ ಮೇಲ್ಮುಖವಾಗಿ ಮುದುಡಿ ದೋಣಿಯ ಆಕಾರವಾಗಿ ಬೆಳವಣಿಗೆಯು ಕುಂಠಿತಗೊಂಡು ಕ್ರಮೇನ ಎಲೆ ಪೂರ್ತಿ ಕಂದು ಬಣ್ಣಕ್ಕೆ ತಿರುಗಿ ಎಲೆಯು ಒಣಗಿ ಉದುರಿ ಹೋಗುತ್ತದೆ.

ಕೀಟ ನಾಶಕ ಬಳಸಲು ಹಿಂಜರಿಕೆ: ಹಿಪ್ಪು ನೇರಳೆ ತೋಟದಲ್ಲಿ ಕೀಟ ಬಾಧೆಗೆ ಮ್ಯಾಜಿಸ್ಟರ್‌ ಅಥವಾ ಉಮೈಟ್ ಎಂಬ ಕೀಟ ನಾಶಕವನ್ನು ಶೇ.02 ಪ್ರಮಾಣದಲ್ಲಿ (ಅಂದರೆ 2 ಮಿಲೀ ಉಮೈಟ್ ಅಥವಾ ಮ್ಯಾಜಿಸ್ಟರ್‌ ಪ್ರತಿ ಲೀಟರ್‌ ನೀರಿಗೆ ಬೆರಸುವುದು) ದ್ರಾವಣವನ್ನು ಸಿದ್ಧಪಡಿಸಿಕೊಂಡು ಎಲೆಗಳ ಮೇಲ್ಬಾಗ ಮತ್ತು ಕೆಳಭಾಗವು ಸಂಪೂರ್ಣವಾಗಿ ನೆನೆಯುವಂತೆ ಸಿಂಪಡಿಸಬೇಕಾಗಿದೆ. ಆದರೆ, ಈ ದ್ರಾವಣ ಬಳಸಿದ ತೋಟಗಳ ಅಕ್ಕಪಕ್ಕದಲ್ಲಿ ರೇಷ್ಮೆ ಹುಳು ಇದ್ದರೆ ಅದರ ಮೇಲೆ ಪರಿಣಾಮ ಬೀರಿ ಹುಳು ನಾಶವಾಗುವ ಆತಂಕವಿದೆ.

Advertisement

ಹೀಗಾಗಿ ಭಾದಿತ ಹಿಪ್ಪು ನೇರಳೆ ತೋಟ ಸ್ವತಂತ್ರ ವಾಗಿದ್ದರೆ ಮಾತ್ರ ಈ ದ್ರಾವಣವನ್ನು ಬಳಸಬಹುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ಜಿಲ್ಲೆಯಲ್ಲಿ ಹಿಪ್ಪು ನೇರಳೆ ಬೆಳೆ ವಿಸ್ತೀರ್ಣ: ರಾಮನಗರ ಜಿಲ್ಲೆಯಲ್ಲಿ ಒಟ್ಟು 18274 ಹೆಕ್ಟೇರ್‌ ಪ್ರದೇಶದಲ್ಲಿ ಹಿಪ್ಪುನೇರಳೆ ಬೆಳೆ ಬೆಳೆಯಲಾಗುತ್ತಿದೆ.

ರಾಮನಗರ ತಾಲೂಕಿನಲ್ಲಿ 3252 ಹೆಕ್ಟೇರ್‌, ಚನ್ನಪಟ್ಟಣದಲ್ಲಿ 4181 ಹೆಕ್ಟೇರ್‌, ಕನಕಪುರದಲ್ಲಿ 10841 ಹೆಕ್ಟೇರ್‌ ಪ್ರದೇಶದಲ್ಲಿ ಹಿಪ್ಪು ನೇರಳೆ ಬೆಳೆಯಾಗುತ್ತದೆ. ಜಿಲ್ಲೆಯಲ್ಲಿ ಒಟ್ಟು 2157 ಬೆಳೆಗಾರರು ರೇಷ್ಮೆ ಬೆಳೆಗಾರರಿದ್ದಾರೆ. ಈ ಪೈಕಿ ರಾಮನಗರ ತಾಲೂಕಿನಲ್ಲಿ 4334 ಬೆಳೆಗಾರರು, ಚನ್ನಪಟ್ಟಣದಲ್ಲಿ 5979 ಬೆಳೆಗಾರರು ಮತ್ತು ಕನಕಪುರ ತಾಲೂಕಿನಲ್ಲಿ 15829 ಬೆಳೆಗಾರರು ರೇಷ್ಮೆ ಕೃಷಿಯನ್ನು ಅವಲಂಭಿಸಿದ್ದಾರೆ.

ಮಳೆ ಬಂದರೆ ನಿಯಂತ್ರಣ: ಮುಂಗಾರು ಮಳೆ ವಾಡಿಕೆಯಂತೆ ಸುರಿಯದಿರುವುದರಿಂದ ತಾಪಮಾನ ವೈಪರಿತ್ಯವಾಗುತ್ತಿದೆ. ಸದ್ಯ ತಾಲೂಕಿನಲ್ಲಿ ಕೆಲವಡೆ ತುಂತುರು ಮಳೆಯಾಗುತ್ತಿದೆ. ಜೋರು ಮಳೆ ಬಂದರೆ ಈ ಕೀಟಗಳು ಸಹ ನೀರಿನಲ್ಲಿ ಕೊಚ್ಚಿ ಹೋಗುತ್ತದೆ. ಅಲ್ಲದೆ, ಭೂಮಿಯಲ್ಲಿ ತೇವಾಂಶ ಹೆಚ್ಚಿ ಕೀಟ ಬಾಧೆ ನಿಯಂತ್ರಣಕ್ಕೆ ಬರುತ್ತದೆ ಎಂದು ರೇಷ್ಮೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಸದರಿ ಕೀಟ ಬಾಧೆಯನ್ನು ತಪ್ಪಿಸಲು ಬೆಳೆಗಾರರು ಶೇ.03 ಗಂಧಕ (ಸಲ್ಪರ್‌-3 ಗ್ರಾಂ ಪ್ರತಿ ಲೀಟರ್‌ ನೀರಿಗೆ ಬೆರಸಬೇಕು) ದ್ರಾವಣವನ್ನು ತೋಟದಲ್ಲಿ ಸಿಂಪಡಿಸುವುದರ ಮೂಲಕ ನುಸಿ ಪೀಡೆಗೆ ತೋಟ ತುತ್ತಾಗುವುದನ್ನು ತಪ್ಪಿಸಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next