ರಾಮನಗರ: ಒಕ್ಕಲಿಗರ ಕೋಟೆಯಲ್ಲಿ ತನ್ನ ವೇಗಕ್ಕೆ ಅಡ್ಡಗಾಲಾಗಿರುವ ಕಾಂಗ್ರೆಸ್‌ನ ಒಕ್ಕಲಿಗ ಮುಖಂಡರನ್ನು ಹಣಿಯಲು ಅವರ ಹೇಳಿಕೆಗಳನ್ನೇ ದಾಳವಾಗಿ ಬಳಸುತ್ತಿದ್ದಾರಾ ದಳಪತಿ?.. ಕೆಲದಿನಗಳಿಂದ ರಾಮನಗರ ಮತ್ತು ಮಂಡ್ಯ ಜಿಲ್ಲೆಯ ರಾಜಕಾರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ನಡೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಇಂತಹುದೊಂದು ಪ್ರಶ್ನೆ ಮೂಡುವಂತಾಗಿದೆ.
ಒಕ್ಕಲಿಗರ ಶಕ್ತಿಕೇಂದ್ರ, ಜೆಡಿಎಸ್ ಭದ್ರಕೋಟೆ ಎನಿಸಿರುವ ರಾಮನಗರ ಮತ್ತು ಮಂಡ್ಯ ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಡ್ಯಾಮೇಜ್ ಆಗಲು ಅಂದಿನ ಆಪ್ತಮಿತ್ರರು, ಇಂದಿನ ಬದ್ಧ ದ್ವೇಷಿಗಳು ಆಗಿರುವ ಚಲುವರಾಯಸ್ವಾಮಿ, ಎಚ್.ಸಿ.ಬಾಲಕೃಷ್ಣ ಮತ್ತು ಸಂಸದ ಡಿ.ಕೆ.ಸುರೇಶ್ ಕಾರಣ ಎಂಬುದು ಗುಟ್ಟಾಗಿ ಉಳಿದಿರುವ ಸಂಗತಿಯೇನಲ್ಲ. ಇದೀಗ ಈ ಮೂರು ಮಂದಿಯನ್ನು ಒಮ್ಮೆಲೆ ಹಣಿಯಲು ಎಚ್‌ಡಿಕೆ ಮುಂದಾಗಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಒಂದೆಡೆ ಸಂಸದ ಡಿ.ಕೆ.ಸುರೇಶ್, ಮತ್ತೂಂದೆಡೆ ಚಲುವರಾಯಸ್ವಾಮಿ ಹಾಗೂ ಎಚ್.ಸಿ.ಬಾಲಕೃಷ್ಣ ವಿರುದ್ಧ ಮುಗಿ ಬಿದಿದ್ದು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಈ ಮೂರು ನಾಯಕರ ವಿರುದ್ಧ ಸೇಡು ತೀರಿಸಿಕೊಳ್ಳಲು ಕುಮಾರಸ್ವಾಮಿ ತಂತ್ರ ಹಣೆದಿದ್ದು, ಅದರ ಮೊದಲ ಹಂತವೇ ಈ ಪ್ರಯತ್ನಗಳು ಎಂದು ಹೇಳಲಾಗುತ್ತಿದೆ.
ದಳಪತಿಗೆ ಅಸ್ತ್ರವಾದ ಹೇಳಿಕೆ: ಒಕ್ಕಲಿಗರ ಭದ್ರಕೋಟೆಯಲ್ಲಿ ತನಗೆ ಅಡ್ಡಗಾಲಿರುವ ಈ ಮೂರು ಮುಖಂಡರನ್ನು ಮಣಿಸಲು ಕಾಯ್ದು ಕುಳಿತಿದ್ದ ಕುಮಾರಸ್ವಾಮಿಗೆ ಇದೀಗ ಮೂರು ಮಂದಿಯ ವರ್ತನೆಯೇ ಅಸ್ತ್ರ ನೀಡಿದೆ. ಅದನ್ನೇ ಲಾಭವಾಗಿಸಿಕೊಂಡು ಅವರ ಮಾತನ್ನು ಅವರಿಗೆ ತಿರುಗು ಬಾಣವಾಗಿಸಿ ಪೇಚಿಗೆ ಸಿಲುಕುವಂತೆ ಮಾಡುವ ತಂತ್ರವನ್ನು ಕುಮಾರಸ್ವಾಮಿ ಹಣೆದಿದ್ದು, ಈ ತಂತ್ರವನ್ನು ವ್ಯವಸ್ಥಿತವಾಗಿ ಜಾರಿಗೆ ತರಲಾರಂಭಿಸಿದ್ದಾರೆ. ಡಿ.ಕೆ.ಸುರೇಶ್ ಪ್ರತ್ಯೇಕ ದೇಶದ ಕೂಗು ಎಬ್ಬಿಸಿರುವುದನ್ನು ದೊಡ್ಡದು ಮಾಡಿ ಒಂದೆಡೆ ತನ್ನ ಎದುರಾಳಿಯಾಗಿರುವ ಡಿಕೆಎಸ್ ಸಹೋದರರಿಗೆ ಪಟ್ಟು ಹಾಕುವ ಜೊತೆಗೆ ಬಿಜೆಪಿ ದೆಹಲಿ ನಾಯಕರ ಮೆಚ್ಚುಗೆಯನ್ನು ಪಡೆದುಕೊಳ್ಳುವ ಮೂಲಕ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ತಂತ್ರ ಎಚ್ ಡಿಕೆಯದ್ದು, ಮತ್ತೂಂದೆಡೆ ತನ್ನ ವಿರುದ್ಧ ಪದೇ ಪದೆ ವಾಗ್ಧಾಳಿ ಮಾಡುತ್ತಲೇ ಇರುವ ಮಾಗಡಿ ಶಾಸಕ ಬಾಲಕೃಷ್ಣ ವಿರುದ್ಧ ಸಹ ಅವರ ಹೇಳಿಕೆಯನ್ನು ಅಸ್ತ್ರವಾಗಿಸಿಕೊಂಡು ಪೇಚಿಗೆ ಸಿಲುಕಿಸಿ ಎದುರಾಳಿಗೆ ಪಾಠ ಕಲಿಸುವುದು.
ಒಕ್ಕಲಿಗರ ಕೋಟೆಯಲ್ಲಿ ಪಾರಮಾಧಿಪತ್ಯ: ಇನ್ನು ಕೆರಗೋಡು ಪ್ರಕರಣವನ್ನು ದಾಳವಾಗಿಸಿಕೊಂಡು ಮಂಡ್ಯದಲ್ಲಿ ಸಚಿವ ಚಲುವರಾಯಸ್ವಾಮಿ ಪ್ರಭಾವ ಕುಗ್ಗಿಸಿ ಮೂರು ಮಂದಿಗೆ ಟಾಂಗ್ ನೀಡಿ ಒಕ್ಕಲಿಗರ ಕೋಟೆಯಲ್ಲಿ ತನ್ನ ಪಾರಮಾಧಿಪತ್ಯವನ್ನು ಮುಂದುವರಿಸಲು ದಳಪತಿ ಮುಂದಾಗಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಈ ಎರಡೂ ಜಿಲ್ಲೆಗಳಲ್ಲಿ ತನಗಾಗಿದ್ದ ಗಾಯವನ್ನು ಆರಿಸಿಕೊಳ್ಳುತ್ತಿದ್ದ ದಳಪತಿಗೆ ಈ ಮೂರು ಮಂದಿಯ ಹೇಳಿಕೆ ಅಸ್ತ್ರವಾಗಿ ಸಿಕ್ಕಿದ್ದು, ಇದನ್ನು ಚೆನ್ನಾಗಿ ಬಳಸಿಕೊಂಡು ಮತ್ತೆ ಒಕ್ಕಲಿಗರ ಕೋಟೆಯನ್ನು ಭದ್ರಗೊಳಿಸಲು ಕುಮಾರಸ್ವಾಮಿ ಮುಂದಾಗಿದ್ದು, ಈ ಬೆಳವಣಿಗೆ ಎಲ್ಲಿಗೆ ಹೋಗಿ ನಿಲ್ಲುತ್ತದೆ ಎಂದು ಕಾಯ್ದು ನೋಡಬೇಕಿದೆ.
ಮಗನ ಸೋಲಿನ ಸೇಡು ತೀರಿಸಲು ಎಚ್‌ಡಿಕೆ ಪಣ: ರಾಮನಗರ ವಿಧಾನಸಭಾ ಚುನಾವಣೆಯಲ್ಲಿ ನಿಖೀಲ್ ಕುಮಾರಸ್ವಾಮಿ ಸೋಲಿನ ಹಿಂದೆ ಸಂಸದ ಡಿ.ಕೆ.ಸುರೇಶ್ ಪಾತ್ರವನ್ನು ಅಲ್ಲಗಳೆಯುವಂತಿಲ್ಲ. ನಿಖೀಲ್ ವಿರುದ್ಧ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಜೊತೆಗೆ ಮುಸ್ಲಿಂ ಮತಗಳು ಕ್ರೋಢೀಕರಣವಾಗುವಂತೆ ನೋಡಿಕೊಂಡಿದ್ದು, ಮತದಾನದ ದಿನದಂದು ಮತದಾರನ್ನು ಸೆಳೆಯಲು ಸಂಸದ ಡಿ.ಕೆ.ಸುರೇಶ್ ಸ್ಮಾರ್ಟ್‌ಕಾರ್ಡ್ ಹಂಚಿಕೆ ಮಾಡುವ ಮೂಲಕ ಕೊನೆ ಕ್ಷಣದಲ್ಲಿ ಮತದಾರರ ಮನೆ ಗೆಲ್ಲುವಲ್ಲಿ ಸಫಲಗೊಂಡರು. ರಾಮನಗರದಲ್ಲಿ ಮಾಗಡಿ ಶಾಸಕ ಬಾಲಕೃಷ್ಣ ಕೈವಾಡವನ್ನು ಅಲ್ಲಗಳೆಯು ವಂತಿರಲಿಲ್ಲ. ರಾಮನಗರದಲ್ಲಿ ನಿಖೀಲ್ ಕುಮಾರ ಸ್ವಾಮಿ ಸೋಲಿನ ಹಿಂದೆ ಡಿ.ಕೆ.ಸುರೇಶ್ ಪಾತ್ರ ಸಾಕಷ್ಟಿತ್ತು. ಇದು ದಳಪತಿ ಕಣ್ಣು ಕೆಂಪಗಾಗಿಸಿದೆ. ಈ ಹಿಂದೆ ಮಂಡ್ಯದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ನಿಖೀಲ್ ಸೋಲಿನಲ್ಲಿ ಚಲುವರಾಯಸ್ವಾಮಿ ಹಸ್ತಕ್ಷೇಪ ಇತ್ತು ಎಂಬುದು ಕುಮಾರಸ್ವಾಮಿಗೆ ಮನದಟ್ಟಾಗಿದ್ದು ತನ್ನ ಮಗ ಎರಡು ಬಾರಿ ಸೋಲಲು ಕಾರಣವಾಗಿರುವ ಮುಖಂಡರ ವಿರುದ್ಧ ಈಬಾರಿ ಸೇಡು ತೀರಿಸಿಕೊಳ್ಳುವ ಹವಣಿಗೆ ದಳಪತಿಯದ್ದಾಗಿದೆ.
–ಸು.ನಾ. ನಂದಕುಮಾರ್