Advertisement
ಹಿಂದೆ ಇದ್ದ ಕನಕಪುರ ಲೋಕಸಭಾ ಕ್ಷೇತ್ರ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವಾಗಿ ಪರಿವರ್ತನೆ ಗೊಂಡ ಬಳಿಕ 2009 ರಲ್ಲಿ ಮೊದಲ ಬಾರಿಗೆ ಸಾರ್ವತ್ರಿಕ ಚುನಾವಣೆ ಎದುರಿಸಿತ್ತು. ಮೊದಲ ಚುನಾವಣೆಯಲ್ಲಿ ಜೆಡಿಎಸ್ ನಿಂದ ಎಚ್.ಡಿ.ಕುಮಾರಸ್ವಾಮಿ ಗೆಲುವು ಸಾಧಿಸಿದ್ದನ್ನು ಹೊರತು ಪಡಿಸಿದರೆ ನಂತರ ನಡೆದ ಒಂದು ಉಪಚುನಾವಣೆ, ಎರಡು ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ. ಇದೀಗ ಬಿಜೆಪಿ-ಜೆಡಿಎಸ್ ಮೈತ್ರಿ ಕೂಟ ಡಿಕೆಎಸ್ ಸಹೋದರರ ಭದ್ರಕೋಟೆಯನ್ನು ಭೇದಿಸುವುದೇ ಎಂಬ ಕುತೂಹಲ ರಾಜಕೀಯ ಪಾಳಯದಲ್ಲಿ ಗರಿಗೆದರಿದೆ.
Related Articles
Advertisement
ಹಿಂದಿನ ಕನಕಪುರ, ಕ್ಷೇತ್ರ ಮರುವಿಂಗಡಣೆಯಾದ ಬಳಿಕ ಸ್ಥಾಪಿತವಾದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಭದ್ರಕೋಟೆ ಎನಿಸಿದ್ದು, ಕನಕಪುರ ಲೋಕಸಭಾ ಕ್ಷೇತ್ರದಲ್ಲಿ 12 ಚುನಾವಣೆಗಳ ಪೈಕಿ 9 ಬಾರಿ ಕಾಂಗ್ರೆಸ್ ಗೆಲುವು ಸಾಧಿಸಿದ್ದರೆ, ಒಂದು ಬಾರಿ ಬಿಜೆಪಿ, ಎರಡು ಬಾರಿ ಜೆಡಿಎಸ್ ಗೆಲುವು ಸಾಧಿಸಿದೆ. ಇನ್ನು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವಾದ ಬಳಿಕ ನಡೆದಿರುವ 3 ಸಾರ್ವತ್ರಿಕ ಒಂದು ಉಪಚುನಾವಣೆಯಲ್ಲಿ ಮೂರು ಬಾರಿ ಕಾಂಗ್ರೆಸ್ ಒಂದು ಬಾರಿ ಜೆಡಿಎಸ್ ಗೆಲುವು ಸಾಧಿಸಿದೆ.
2023ರ ಮತಗಳಿಕೆಯಲ್ಲಿ ಕಾಂಗ್ರೆಸ್ ನಂ.1, ಬಿಜೆಪಿ ನಂ.2:
ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜೆಡಿಎಸ್- ಬಿಜೆಪಿ ಮೈತ್ರಿ ಫಲಪ್ರದವಾದೀತೆ ಎಂಬ ಚರ್ಚೆ ಕ್ಷೇತ್ರವ್ಯಾಪ್ತಿಯಲ್ಲಿ ನಡೆಯುತ್ತಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಒಟ್ಟಾರೆ 8,12,917 ಮತಗಳನ್ನು ಪಡೆದಿದ್ದಾರೆ. ಜೆಡಿಎಸ್ ಅಭ್ಯರ್ಥಿಗಳು 3,62,805, ಬಿಜೆಪಿ ಅಭ್ಯರ್ಥಿಗಳು 6,09,382 ಮತಗಳನ್ನು ಪಡೆದಿದ್ದಾರೆ. ಈ ಎರಡೂ ಪಕ್ಷಗಳು ಗಳಿಸಿರುವ ಮತದ ಪ್ರಮಾಣವನ್ನು ಗಣನೆ ಮಾಡಿದರೆ, ಮೈತ್ರಿ ಉಭಯ ಪಕ್ಷಗಳಿಗೆ ಲಾಭದಾಯವೆನಿಸಲಿದೆ. ಆದರೆ, 2013ರ ಲೋಕಸಭಾ ಉಪಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಯಾಗಿತ್ತಾದರೂ, ಡಿ.ಕೆ.ಸುರೇಶ್ 2 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
ಸಂಸದ ಡಿ.ಕೆ.ಸುರೇಶ್ ಬಿರುಸಿನ ಸಂಚಾರ:
ಒಂದೆಡೆ ನಾನು ಚುನಾವಣೆಗೆ ಸ್ಪರ್ಧೆಮಾಡುವುದೇ ಇಲ್ಲ ಎಂದು ರಾಜಕೀಯ ವೈರಾಗ್ಯದ ಮಾತುಗಳನ್ನಾಡುತ್ತಿದ್ದ ಸಂಸದ ಡಿ.ಕೆ.ಸುರೇಶ್, ಮೈತ್ರಿ ಸುದ್ದಿ ಬೆನ್ನಲ್ಲೇ ಕ್ಷೇತ್ರ ವ್ಯಾಪ್ತಿಯಲ್ಲಿ ಬಿರುಸಿನ ಸಂಚಾರ ಆರಂಭಿಸಿದ್ದಾರೆ. ಕಾಂಗ್ರೆಸ್ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಠೇವಣಿ ಕಳೆದುಕೊಂಡಿರುವ ಚನ್ನಪಟ್ಟಣ ಕ್ಷೇತ್ರದಲ್ಲೇ ತಮ್ಮ ಸಂಘಟನಾ ಕಾರ್ಯವನ್ನು ಆರಂಭಿಸಿದ್ದು, ವಾರದಿಂದ ಚನ್ನಪಟ್ಟಣ ಕ್ಷೇತ್ರದಲ್ಲಿ ಗ್ರಾಪಂ ವಾರು ಸಭೆ ನಡೆಸಿ ಜನಮನ ಗೆಲ್ಲಲು ಪ್ರಯತ್ನಿಸುತ್ತಿದ್ದಾರೆ. ಒಟ್ಟಾರೆ ಮೈತ್ರಿ ಸುದ್ದಿ ಗ್ರಾಮಾಂತರ ಕ್ಷೇತ್ರದಲ್ಲಿ ಸಾಕಷ್ಟು ಸದ್ದುಮಾಡಿದ್ದು, ಹ್ಯಾಟ್ರಿಕ್ ವೀರ ಎನಿಸಿಕೊಂಡಿರುವ ಡಿ.ಕೆ.ಸುರೇಶ್ ಕಟ್ಟಿಹಾಕಲು ಈ ಮೈತ್ರಿ ಸಹಕಾರಿಯಾದೀತೆ ಎಂಬುದು ಸದ್ಯಕ್ಕೆ ಎಲ್ಲರಲ್ಲಿ ಕಾಡುತ್ತಿರುವ ಕುತೂಹಲವಾಗಿದೆ.
ಕ್ಷೇತ್ರದಲ್ಲಿ ಕೆಲಸ ಮಾಡಿ ದರೆ ಜನತೆ ಕೈ ಬಿಡುವುದಿಲ್ಲ. ನಾವು ಕೆಲಸ ಮಾಡಿದ್ದೇವೆ. ನಮ್ಮ ಕೆಲಸ ನೋಡಿ ಜನತೆ ಮತ ನೀಡುತ್ತಾರೆ. ಮೈತ್ರಿಯಿಂದ ಕಾಂಗ್ರೆಸ್‌ಗೆ ಯಾವುದೇ ತೊಂದರೆ ಇಲ್ಲ.-ಡಿ.ಕೆ.ಸುರೇಶ್, ಸಂಸದ
- ಸು.ನಾ.ನಂದಕುಮಾರ್