Advertisement

ಮಂಚನಬೆಲೆ ಜಲಾಶಯದಿಂದ ನೀರು: ಚಿಂತನೆ

04:10 PM Aug 29, 2019 | Team Udayavani |

ರಾಮನಗರ: ಮಂಚನಬೆಲೆ ಜಲಾಶಯದಿಂದ ತಾಲೂಕಿನ ಬಿಡದಿ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಯೋಜನೆಯ ವಿಚಾರದಲ್ಲಿ ಬಿಡದಿ ಪುರಸಭೆಯ ಸಭಾಂಗಣದಲ್ಲಿ ಮಾಗಡಿ ಶಾಸಕ ಎ.ಮಂಜುನಾಥ್‌ ಅವರ ಅಧ್ಯಕ್ಷತೆಯಲ್ಲಿ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳ ಸಭೆ ನಡೆಯಿತು.

Advertisement

ಮಂಚನಬೆಲೆ ಜಲಾಶಯದಿಂದ ಸುಮಾರು 12 ಕಿಮೀ ಉದ್ದದ ಪೈಪ್‌ಲೈನ್‌ ಮೂಲಕ ನೀರು ಹರಿಸುವ ಯೋಜನೆ ಇದಾಗಿದೆ. ಕಾಮಗಾರಿ ಮೇಲೆ ತಲೆದೂರಬಹುದಾದ ಸಮಸ್ಯೆಗಳ ಬಗ್ಗೆ ಚರ್ಚೆಗಳು ನಡೆದವು. ಸದರಿ ಯೋಜನೆಗೆ ಸರ್ಕಾರ 74 ಕೋಟಿ ರೂ. ಮಂಜೂರು ಮಾಡಿದ್ದು, ಟೆಂಡರ್‌ ಹಂತದಲ್ಲಿದೆ ಎಂದು ಶಾಸಕರು ಸಭೆಗೆ ಮಾಹಿತಿ ನೀಡಿದರು.

9 ಗ್ರಾಮಗಳಿಗೆ ನೀರು ಪೂರೈಕೆ: 12 ಕಿಮೀ ಉದ್ದದ ಪೈಪ್‌ಲೈನ್‌ ಅಳವಡಿಸಬೇಕಾಗಿದೆ. ಮಾರ್ಗ ಮಧ್ಯೆ 9 ಗ್ರಾಮಗಳಿಗೆ ನೀರು ಪೂರೈಸಬೇಕಾಗಿದೆ. ಎಲ್ಲೆಲ್ಲಿ ಓವರ್‌ ಹೆಡ್‌ ಟ್ಯಾಂಕುಗಳು ನಿರ್ಮಿಸಬೇಕಾಗಿದ್ದು, ಉದ್ಬವಿಸಬಹುದಾದ ಸ್ಥಳ ಸಮಸ್ಯೆ ಬಗ್ಗೆ ಮಾಹಿತಿ ಸಂಗ್ರಹಿಸಿ ಎಂದು ಸೂಚಿಸಿದರು. ಕಾಮಗಾರಿಗೆ ಯಾವ ಅಡೆತಡೆಯು ಆಗದಂತೆ ಎಚ್ಚರವಹಿಸಿ ಎಂದು ಅಧಿಕಾರಿ ವರ್ಗಕ್ಕೆ ಸೂಚನೆ ನೀಡಿದರು.

6 ಎಂಎಲ್ಡಿ ನೀರು ಅವಶ್ಯ: ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಮುಖ್ಯ ಎಂಜಿನೀಯರ್‌ ಚಂದ್ರಶೇಖರ್‌ ಮಾತನಾಡಿ, ಬಿಡದಿ ಪಟ್ಟಣಕ್ಕೆ ಸದ್ಯದ ಜನಸಂಖ್ಯೆ ಆಧಾರದಲ್ಲಿ 6 ಎಂಎಲ್ಡಿ ನೀರು ಅವಶ್ಯಕವಿದೆ. ಮುಂದಿನ ದಿನಗಳಲ್ಲಿ 8.5 ಎಂಎಲ್ಡಿ ಪ್ರಮಾಣದಷ್ಟು ನೀರು ಅಗತ್ಯವಿದೆ. ಇದನ್ನು ಗಮನದಲ್ಲಿರಿಸಿಕೊಂಡು ಯೋಜನೆಯನ್ನು ರೂಪಿಸಲಾಗಿದೆ ಎಂದು ಹೇಳಿದರು.

ಜಲ ಸಂಗ್ರಹಗಾರ ನಿರ್ಮಿಸಲು ನಿರ್ಣಯ: ಕೇತಗಾನಹಳ್ಳಿ ಸಮೀಪ 40 ಲಕ್ಷ ಲೀಟರ್‌ ಸಾಮರ್ಥ್ಯದ ನೆಲಮಟ್ಟದ ಜಲ ಸಂಗ್ರಹಗಾರ ನಿರ್ಮಾಣಕ್ಕೆ 200 ಅಡಿ ಸ್ಥಳದ ಅಗತ್ಯವಿದೆ ಎಂದು ಅಧಿಕಾರಿಗಳು ಸಭೆಯ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಪುರಸಭೆ ಸದಸ್ಯ ವೈ.ರಮೇಶ್‌, ಕೇತಗಾನಹಳ್ಳಿ ಸರ್ವೆ ನಂಬರ್‌ 21ರಲ್ಲಿರುವ 2.16 ಗುಂಟೆ ಸರ್ಕಾರಿ ಬಿ ಖರಾಬು ಭೂಮಿಯಿದ್ದು, ಅಲ್ಲಿ ಟ್ಯಾಂಕ್‌ ನಿರ್ಮಿಸುವಂತೆ ಸಲಹೆ ನೀಡಿದರು. ಸದರಿ ಜಲ ಸಂಗ್ರಹಗಾರವನ್ನು ನಗರೋತ್ಥಾನ ಯೋಜನೆಯಡಿಯಲ್ಲಿ ನಿರ್ಮಿಸಲು ಸಭೆ ನಿರ್ಣಯ ಕೈಗೊಂಡಿತು.

Advertisement

ಒಳಚರಂಡಿ ಯೋಜನೆಗೆ 94 ಕೋಟಿ ರೂ.: ಬಿಡದಿ ಪಟ್ಟಣದಲ್ಲಿ 94 ಕೋಟಿ ರೂ. ವೆಚ್ಚದ ಒಳಚರಂಡಿ (ಯುಜಿಡಿ) ಕಾಮಗಾರಿ ವಿಚಾರದಲ್ಲಿಯೂ ಚರ್ಚೆ ನಡೆಯಿತು. ಯೋಜನೆಯ ಸಮೀಕ್ಷಾ ವರದಿಯಲ್ಲಿನ ಅಂಶಗಳ ಬಗ್ಗೆ ಜಲಮಂಡಳಿ ಮುಖ್ಯ ಎಂಜಿನೀಯರ್‌ ಚಂದ್ರಶೇಖರ್‌ ಸಭೆಯ ಗಮನ ಸೆಳೆದರು.

ಸಭೆಯಲ್ಲಿ ರಾಮನಗರ ತಾಪಂ ಅಧ್ಯಕ್ಷ ನಟರಾಜ್‌ ಗಾಣಕಲ್, ಪುರಸಭೆಯ ನಿಕಟ ಪೂರ್ವ ಅಧ್ಯಕ್ಷೆ ವೆಂಕಟೇಶಮ್ಮ, ನಿಕಟಪೂರ್ವ ಉಪಾಧ್ಯಕ್ಷೆ ಲಕ್ಷ್ಮೀದೇವಿ, ಬನ್ನಿಕುಪ್ಪೆ (ಬಿ) ಗ್ರಾಮ ಪಂಚಾಯ್ತಿ ಅಧ್ಯಕ್ಷೆ ನೇತ್ರಾವತಿ, ತಹಶೀಲ್ದಾರ್‌ ನರಸಿಂಹಮೂರ್ತಿ, ನಗರಾಭಿವೃದ್ಧಿ ಕೋಶದ ಅಧಿಕಾರಿ ಪ್ರಭು, ಪುರಸಭೆ ಮುಖ್ಯಾಧಿಕಾರಿ ಚೇತನ್‌ ಎಸ್‌.ಕೊಳವಿ, ಪುರಸಭೆ ಸದಸ್ಯರಾದ ಪುಟ್ಟಮಾದಯ್ಯ, ವೈಶಾಲಿ ಚನ್ನಪ್ಪ, ಮಹೀಪತಿ, ಲೋಕೇಶ್‌, ರಾಕೇಶ್‌, ದೇವರಾಜು, ಕುಮಾರ್‌, ಶಿವಕುಮಾರ್‌, ಮಂಜುನಾಥ್‌, ಸರಸ್ವತಿ, ಮಂಗಳಮ್ಮ, ಉಷಾ, ಜಲಜಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next