Advertisement

ಜೀತ ಪದ್ಧತಿಗೆ ಆರ್ಥಿಕ ದುಃಸ್ಥಿತಿ ಕಾರಣ

04:00 PM Jun 27, 2019 | Team Udayavani |

ರಾಮನಗರ: ಜೀತ ಪದ್ಧತಿ ಜೀವಂತ ಇರುವುದಕ್ಕೆ ಕುಟುಂಬಗಳ ಆರ್ಥಿಕ ದುಃಸ್ಥಿತಿ ಕಾರಣವಾಗಿದೆ ಎಂದು ಜಿಲ್ಲಾ ಪಂಚಾಯ್ತಿ ಸಿಇಒ ಮುಲ್ಲೈ ಮುಹಿಲನ್‌ ಅಭಿಪ್ರಾಯಪಟ್ಟರು.

Advertisement

ಇಲ್ಲಿನ ಜಾನಪದ ಲೋಕದಲ್ಲಿ ಇಂಟರ್‌ನ್ಯಾಷನಲ್ ಜಸ್ಟೀಸ್‌ ಮಿಷನ್‌ವತಿಯಿಂದ ಮಾಧ್ಯಮ ಪ್ರತಿನಿಧಿಗಳಿಗಾಗಿ ಜೀತ ಕಾರ್ಮಿಕ ಪದ್ಧತಿ ಮತ್ತು ಮಾನವ ಕಳ್ಳಸಾಗಾಣಿಕೆ ಕುರಿತು ಏರ್ಪಡಿಸಿದ್ದ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿದ ಅವರು ಮಾತನಾಡಿ, ಮಾಡಿಕೊಂಡಿರುವ ಸಾಲ ತೀರಿಸಲು ಬಡ ಕುಟುಂಬಗಳು ಒತ್ತೆಯಾಳುಗಳಾಗಿ ದುಡಿಯುತ್ತಿದ್ದಾರೆ. ಮೀಟರ್‌ ಬಡ್ಡಿ, ಅಗತ್ಯಕ್ಕಿಂತ ಹೆಚ್ಚು ಸಾಲ ಪಡೆಯುವುದು ನಂತರ ಸಾಲ ತೀರಿಸಲಾಗದೆ ಸಾಲ ಕೊಟ್ಟವರು ಹೇಳಿದಂತೆ ದುಡಿಯುತ್ತಿದ್ದಾರೆ ಎಂದರು.

ಬಡ್ಡಿಯ ಜಾಲಕ್ಕೆ ಸಿಲುಕದಿರಿ: ಅಸಂಘಟಿತ ಕಾರ್ಮಿಕರು ಎಚ್ಚೆತ್ತುಕೊಳ್ಳಬೇಕು. ಬಡ್ಡಿಯ ಜಾಲಕ್ಕೆ ಸಿಲುಕಬಾರದು. ಸ್ವ-ಸಹಾಯ ಗುಂಪುಗಳನ್ನು ರಚಿಸಿಕೊಂಡು ಆರ್ಥಿಕವಾಗಿ ಸ್ವಾವಲಂಭಿಗಳಾಗಬೇಕು. ವ್ಯವಸ್ಥಿತವಾಗಿ ಗುಂಪುಗಳನ್ನು ನಿರ್ವಹಿಸ ಜೀವನ ಸುಗಮಗೊಳಿಸಿಕೊಳ್ಳಬೇಕು. ರಾಮನಗರ ಜಿಲ್ಲೆಯಲ್ಲಿ ಜೀತ ಪದ್ಧತಿ ಜೀವಂತ ಇರುವ ಬಗ್ಗೆ ತಮಗೆ ಆಶ್ಚರ್ಯವಾಗಿದೆ. ಒಂದೊಂದೆ ಪ್ರಕರಣ ಬೆಳಕಿಗೆ ಬರುತ್ತಿದೆ. ಸಂತ್ರಸ್ಥರ ಮಾತುಗಳು ಜೀತ ಪದ್ಧತಿ ಜೀವಂತ ಇದೆ ಎಂಬ ನಂಬಿಕೆ ಬಂದಿದೆ ಎಂದು ಹೇಳಿದರು.

ಯೋಜನೆ ಉಪಯೋಗಿಸಿಕೊಳ್ಳಿ: ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಶಂಕರಪ್ಪ ಮಾತನಾಡಿ, ಸರ್ಕಾರದ ವಿವಿಧ ಕಾರ್ಯ ಕ್ರಮಗಳಿಂದ ಜೀತ ಪದ್ಧತಿ ಸಾಕಷ್ಟು ನಿಯಂತ್ರಣಕ್ಕೆ ಬಂದಿದೆ. ಸರ್ಕಾರವು ಅಸಂಘಟಿತ ಕಾರ್ಮಿಕರಿಗಾಗಿ ಉದ್ಯೋಗ ಖಾತ್ರಿ ಯೋಜನೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ. ಜನರು ಇದನ್ನು ಉಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಸಂತ್ರಸ್ತೆ ಪಾಪಮ್ಮ ತೋಡಿಕೊಂಡ ನೋವು: ಜೀತ ಪದ್ಧತಿಯಿಂದ ಮುಕ್ತಿ ಪಡೆದ ಪಾಪಮ್ಮ ಎಂಬುವರು ತಾವು ಕನಕಪುರ ತಾಲೂಕು ಹಾರೋಹಳ್ಳಿಯ ಇಟ್ಟಿಗೆ ಕಾರ್ಖಾನೆಯಲ್ಲಿ ಜೀತದಾಳಾಗಿ ತಾವು ಪಟ್ಟ ನೋವನ್ನು ಮಾಧ್ಯಮ ಪ್ರತಿನಿಧಿಗಳೊಂದಿಗೆ ಹಂಚಿಕೊಂಡರು.

Advertisement

ಅಣ್ಣ ಮದುವೆ ಸಾಲ ತೀರಿಸಲು ಇಟ್ಟಿಗೆ ಕಾರ್ಖಾನೆ ಸೇರಿದ್ದು, ತಾವು ಸಹ ಅಲ್ಲಿ ಕಾರ್ಮಿಕಳಾಗಿ ಹೋದೆ. ನಮ್ಮ ಸಂಬಂಧಿಕರೇ ಆರು ಕುಟಂಬಗಳು ಇಟ್ಟಿಗೆ ಫ್ಯಾಕ್ಟರಿಯಲ್ಲು ದುಡಿದಿದ್ದಾಗಿ ಹೇಳಿಕೊಂಡರು. ವಾರಕ್ಕೆ ಖರ್ಚಿಗೆ 500 ರೂ. ನೀಡುತ್ತಿದ್ದರು. ಸರಿಯಾದ ಕೂಲಿ ನೀಡದೇ, ಹೊರಗೆ ಹೋಗಲು ಬಿಡದೇ ಶೋಷಣೆ ಅನುಭವಿಸಿದ್ದಾಗಿ ತಿಳಿಸಿದರು.

ತಮಗೆ ಕಾರ್ಖಾನೆಯಲ್ಲಿ ದುಡಿಯುತ್ತಿದ್ದವರ ಜೊತೆಗೆ ಕೊಟ್ಟು ಮದುವೆ ಮಾಡಲಾಗಿದೆ. ಹೊರಗೆ ಹೋಗಲು ಸಹ ಬಿಡಲಿಲ್ಲ. ಮದುವೆ ಆದ ಖರ್ಚನ್ನು ಸಹ ಸಾಲಕ್ಕೆ ಬರೆದುಕೊಂಡಿದ್ದಾರೆ. ಬೆಳಗ್ಗೆಯಿಂದ ರಾತ್ರಿವರೆಗೂ ದುಡಿದರು ಮಾಲೀಕನಿಗೆ ಸಮಾಧಾನ ವಿರಲಿಲ್ಲ. ಆರೋಗ್ಯ ಸಮಸ್ಯೆ ಇದೆ ಎಂದರೂ ಆಸ್ಪತ್ರೆಗೆ ತೋರಿಸಲು ಹೊರಗೆ ಬಿಡುತ್ತಿರಲಿಲ್ಲ. ಹೀಗಾಗಿ ತಮಗೆ 6ನೇ ತಿಂಗಳಲ್ಲೇ ಗರ್ಭಪಾತವಾಯಿತು ಎಂದು ಕಣ್ಣೀರಿಟ್ಟರು.

ಐಜೆಎಂನ ಸಹಾಯಕ ನಿರ್ದೇಶಕಿ ಪ್ರತಿಮಾ, ಜೀತ ಪದ್ಧತಿಯ ಸ್ವರೂಪ ಮತ್ತು ಕಾನೂನುಗಳ ಕುರಿತು ಮಾಹಿತಿ ನೀಡಿದರು. ಐಜೆಎಂನ ಇಗ್ನೇಷಿಯಸ್‌ ಜೋಸೆಫ್, ಗಾಯತ್ರಿ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next