ರಾಮನಗರ: ಬೆಂಗಳೂರಿನಿಂದ ಬಿಡದಿ ಹೋಬಳಿ ಮೂಲಕ ಹರಿಯುವ ವೃಷಭಾವತಿ ಕೊಳಕು ನೀರನ್ನು ಶುದ್ಧೀಕರಿಸಲು ಬೆಂಗಳೂರು ದೊಡ್ಡಬೆಲೆಯಲ್ಲಿ ನಿತ್ಯ 70 ಎಂ.ಎಲ್.ಡಿ. ನೀರು ಶುದ್ಧೀಕರಣ ಘಟಕ ಸ್ಥಾಪನೆ ಯಾಗಿದೆ. ಇದರ ಪ್ರಮಾಣವನ್ನು 200 ಎಂ.ಎಲ್. ಡಿ.ಗೆ ಏರಿಸಲು ನಾನು ಮತ್ತು ಸಂಸದ ಡಿ.ಕೆ.ಸುರೇಶ್ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿರುವುದಾಗಿ ಮಾಗಡಿ ಕ್ಷೇತ್ರದ ಶಾಸಕ ಎ.ಮಂಜುನಾಥ್ ತಿಳಿಸಿದರು.
ತಾಲೂಕಿನ ಬಿಡದಿ ಹೋಬಳಿಯ ರಾಮನ ಹಳ್ಳಿಯಲ್ಲಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಿಂದ ಬಿಡದಿ ಮೂಲಕ ಹರಿಯುವ ಮಾಲಿನ್ಯ ನೀರನ್ನು ದೊಡ್ಡಬೆಲೆಯಲ್ಲಿ 106 ಕೋಟಿ ರೂ. ವೆಚ್ಚ ದಲ್ಲಿ ಸ್ಥಾಪಿಸಿರುವ ಘಟಕದಲ್ಲಿ ನೀರು ಶುದ್ಧೀಕರಣ ವಾಗಲಿದೆ. ಶುದ್ಧೀಕರಿಸಿದ ನೀರನ್ನು ಕೃಷಿ ಮತ್ತಿತರ ಚಟುವಟಿಕೆಗಳಿಗೆ ಬಳಸುವುದು, ಅಂತರ್ಜಲ ವೃದ್ಧಿಸಲು ಬಳಸಿಕೊಳ್ಳಲಾಗುವುದು. ಪೈಪ್ ಮೂಲಕ ಕೆರೆಗೆ ನೀರು ತುಂಬಿಸುವ ಯೋಜನೆ ಜಾರಿ ಯಾಗಲಿದೆ.
ತಾಲೂಕಿನ ಬಿಡದಿ, ಕಸಬಾ ಹೋಬಳಿಗಳ ಕೆರೆ ತುಂಬಿಸಲು ದಿನ ನಿತ್ಯ ಕನಿಷ್ಠ 200 ಎಂ.ಎಲ್.ಡಿ. ನೀರು ಅಗತ್ಯವಿದೆ. ಹೀಗಾಗಿ ದೊಡ್ಡ ಬೆಲೆಯಲ್ಲಿರುವ ವ್ಯವಸ್ಥೆಯನ್ನು ಉನ್ನತೀಕರಿಸಲು ಮನವಿ ಮಾಡಲಾಗಿದೆ. ಹೆಚ್ಚುವರಿ ಘಟಕ ನಿರ್ಮಾಣಕ್ಕೆ ಬೇಕಾಗುವ ಸ್ಥಳ ದೊಡ್ಡಬೆಲೆಯಲ್ಲಿ 3-4 ಎಕರೆ ಭೂಮಿ ಇದೆ. ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತರಲಾಗಿದೆ ಎಂದರು.
ಕಾಲುವೆಗಳ ದುರಸ್ಥಿಗೆ 106 ಕೋಟಿ: ಮಂಚನ ಬೆಲೆ ಜಲಾಶಯದ ಎಡ ಮತ್ತು ಬಲ ಕಾಲುವೆ ದುರಸ್ಥಿ ಮತ್ತು ಅಧುನೀಕರಣಕ್ಕೆ ಮೈತ್ರಿ ಸರ್ಕಾರದಲ್ಲಿ ಸಿಎಂ ಆಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರು 106 ಕೋಟಿ ರೂ. ಮಂಜೂರು ಮಾಡಿದ್ದರು. ಈ ಅನುದಾನ ಈಗ ಬಿಡುಗಡೆಯಾಗಿದೆ. ಕಾಮಗಾರಿ ಟೆಂಡರ್ ಹಂತದಲ್ಲಿದೆ. ಎಡ ದಂಡೆಯ ಕಾಲುವೆ 24 ಕಿಮೀ ಉದ್ದ ಮತ್ತು ಬಲ ದಂಡೆಯ ಕಾಲುವೆ 10 ಕಿಮೀ ಉದ್ದ ದುರಸ್ಥಿಯಾಗಲಿದೆ. ಅಲ್ಲದೆ ಕಾಲುವೆಗಳಿಗೆ ಹೊಂದಿಕೊಂಡಂತೆ ಇರುವ ರಸ್ತೆಗಳು ಸಹ ಸುಧಾರಣೆಯಾಗಲಿದೆ. 11 ತಿಂಗಳ ಕಾಲಾವಧಿಯಲ್ಲಿ ಕಾಮಗಾರಿ ಮುಗಿಯುವ ಉದ್ದೇಶವಿದೆ.
ಕಾಮಗಾರಿಗೆ ಆಯಾ ಭಾಗದ ರೈತರು ಸಹಕಾರ ನೀಡಬೇಕು ಎಂದರು. ಕಾಮಗಾರಿ ಮುಗಿದ ನಂತರ ಕಾಲುವೆಗಳಲ್ಲಿ ನೀರು ಹರಿಯಲಿದ್ದು, ರೈತರಿಗೆ ಉಪಯೋಗವಾಗಲಿದೆ ಎಂದು ಮಾಹಿತಿ ನೀಡಿದರು. ಬಿಡದಿ ಹೋಬಳಿಯ ವೃಷಭಾವತಿ ಪುರದಲ್ಲಿ ಯಾವೊಂದು ಮನೆಗೂ ವಿದ್ಯುತ್ ಸಂಪರ್ಕವಿಲ್ಲ ಎಂದು ಸುದ್ದಿಗಾರರು ಗಮನ ಸೆಳೆದಾಗ ಪ್ರತಿಕ್ರಿಯಿಸಿದ ಶಾಸಕರು ಇದೀಗ ಎಲ್ಲಾ ಸಮಸ್ಯೆಗಳು ನೀಗಿಸಲಾಗಿದೆ. ಸಂಪರ್ಕ ಬೇಕಾದ ಮನೆಯವರು ತಲಾ 3 ಸಾವಿರ ರೂ ಶುಲ್ಕ ಪಾವತಿಸಿ ಸಂಪರ್ಕ ಪಡೆದುಕೊಳ್ಳಬಹುದು ಎಂದರು.
1.30 ಕೋಟಿ ರೂ. ವೆಚ್ಚದ ಕಾಮಗಾರಿಗೆ ಚಾಲನೆ: ರಾಮನಹಳ್ಳಿಯಿಂದ ಮುದುವಾಡಿ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯ 1ಕೋಟಿ 30 ಲಕ್ಷ ರೂ ವೆಚ್ಚದ ರಸ್ತೆ ದುರಸ್ಥಿ ಮತ್ತು ಡಾಂಬರೀಕರಣ ಕಾಮಗಾರಿಗೆ ಮತ್ತು ರಾಮನಹಳ್ಳಿಯ ಸರ್ಕಾರಿ ಶಾಲೆ ಬಳಿಯ ರಸ್ತೆಯಿಂದ ಸ್ಮಶಾನದ ರಸ್ತೆಗೆ 60 ಲಕ್ಷ ರೂ ವೆಚ್ಚದ ಡಾಂಬರೀಕರಣ ಕಾಮಗಾರಿಗೆ ಶಾಸಕರು ಚಾಲನೆ ನೀಡಿದರು.
ಮೈತ್ರಿ ಸರ್ಕಾರದಲ್ಲಿ ಸಿಎಂ ಕುಮಾರಸ್ವಾಮಿ ಅವರು ಈ ಭಾಗದ ಅಗತ್ಯ ಕಾಮಗಾರಿಗಳನ್ನು ಕೈಗೊಳ್ಳಲು 6 ಕೋಟಿ ರೂ. ಬಿಡುಗಡೆ ಮಾಡಿದ್ದರು. ಈ ಪೈಕಿ 1 ಕೋಟಿ 90 ಲಕ್ಷ ರೂ ರಾಮನಹಳ್ಳಿಯಲ್ಲಿ ಬಳಸಿ ಕೊಳ್ಳಲಾಗಿದೆ. ಗ್ರಾಮದ ದೇವಾಲಯಗಳ ನಿರ್ಮಾಣ, ಅಭಿವೃದ್ದಿಗೆ ಸಹಕರಿಸುವುದಾಗಿ ತಿಳಿಸಿದರು. ಈ ವೇಳೆ ಗ್ರಾಪಂ ಮಾಜಿ ಅಧ್ಯಕ್ಷ ರಾಮನಹಳ್ಳಿ ರಮೇಶ್, ಧನಂಜಯ, ಹಾಲಿ ಸದಸ್ಯರಾದ ರಾಜೇಶ್, ಸುರೇಶ್, ಮರಿ ತಿಮ್ಮಯ್ಯ, ಸ್ಥಳೀಯ ಮುಖಂಡರಾದ ಶಿವರಾಮಯ್ಯ, ಶಿವಲಿಂಗಯ್ಯ ಹಾಜರಿದ್ದರು.