ರಾಮನಗರ: ಕೃಷಿ ಕುಟುಂಬದ ಹಿನ್ನೆಲೆ ಇರುವ ಮಾಜಿ ಸಚಿವ, ಕಾಂಗ್ರೆಸ್ ಪಕ್ಷದ ಟ್ರಬಲ್ ಶೂಟರ್ ಖ್ಯಾತಿಯ ಡಿ.ಕೆ.ಶಿವಕುಮಾರ್ ಇದೀಗ ರೇಷ್ಮೆ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ರಾಮನಗರ ಸಿಲ್ಕ್ ಸಿಟಿಯಾದರೆ, ಕನಕಪುರ ತಾಲೂಕು ಸಿಲ್ಕ್ ವ್ಯಾಲಿ ಅಂತಲೇ ಗುರುತಿಸಿಕೊಂಡಿದೆ. ಸುಮಾರು 27 ಸಾವಿರ ಎಕರೆ ಭೂಮಿಯಲ್ಲಿ ಹಿಪ್ಪುನೇರಳೆ ಬೆಳೆಯಲಾಗುತ್ತಿದೆ. ವಿಶೇಷವಾಗಿ ಸಂತೆ ಕೋಡಿಹಳ್ಳಿ ಮತ್ತು ದೊಡ್ಡಾಲಹಳ್ಳಿಯಲ್ಲಿ ಹಿಪ್ಪುನೇರಳೆ ತೋಟಗಳಿವೆ.
ರೇಷ್ಮೆ ಕೃಷಿ ಕ್ಷೇತ್ರದಲ್ಲಿ ಅಧುನಿಕತೆಯನ್ನು ಅಳವಡಿಸಿಕೊಂಡು ಅಲ್ಪ ಶ್ರಮದಲ್ಲಿ ಹೆಚ್ಚು ರೇಷ್ಮೆ ಗೂಡು ಇಳುವರಿ ಪಡೆಯುವ ಮೂಲಕ ರೇಷ್ಮೆ ಕೃಷಿಯನ್ನು ಇನ್ನಷ್ಟು ಬೆಳಸುವುದು ಡಿ.ಕೆ.ಶಿವಕುಮಾರ್ ಅವರ ಉದ್ದೇಶ. ಕ್ಷೇತ್ರ ಪ್ರವಾಸ ಸಂದರ್ಭದಲ್ಲಿ ತಾಲೂಕಿನ ಸಮಗ್ರ ಅಭಿವೃದ್ಧಿಯ ಚಿಂತನೆಯ ಜೊತೆಗೆ ರೈತರು ಜೀವನ ಮಟ್ಟ ಸುಧಾರಿಸುವ ಉದ್ದೇಶದಲ್ಲಿ ಅನೇಕ ಮಾಹಿತಿಗಳನ್ನು ಸಂಗ್ರಹಿಸುವುದನ್ನು ರೂಢಿಸಿಕೊಂಡಿದ್ದಾರೆ. ಹೀಗೆ ಸಂಗ್ರಹಿಸಿದ ಮಾಹಿತಿಯನ್ನಾಧರಿಸಿ ಮಾಜಿ ಸಚಿವರು ರೈತರನ್ನು ರೇಷ್ಮೆ ಕೃಷಿಯಲ್ಲಿ ಇನ್ನಷ್ಟು ತೊಡಗಿಸಲು ಉದ್ದೇಶಿಸಿದ್ದಾರೆ. ಇದಕ್ಕೆ ಅನುಕೂಲವಾಗುವಂತೆ ಅಧುನಿಕ ಮತ್ತು ವೈಜ್ಞಾನಿಕ ಪದ್ಧತಿಯನ್ನು ಅನುಸರಿಸಿ 50 ಎಕರೆ ಪ್ರದೇಶದಲ್ಲಿ ಹಿಪ್ಪು ನೇರಳೆ ಮಾದರಿ ತೋಟವನ್ನು ಅಭಿವೃದ್ಧಿಪಡಿಸುತ್ತಿದ್ದಾರೆ.
ಮಾದರಿ ಹೇಗೆ?: ಮಾಜಿ ಸಚಿವರು ಹಿಪ್ಪುನೇರಳೆ ಸೊಪ್ಪಿನ ಜಿ4 ಎಂಬ ಹೊಸತಳಿಯನ್ನು ರೇಷ್ಮೆ ಕೃಷಿಗೆ ಬಳಸಿಕೊಂಡಿದ್ದಾರೆ. ಕನಕಪುರ ತಾಲೂಕಿನಲ್ಲಿ ಗುಣ ಮಟ್ಟದ ಚಾಕಿ ತಯಾರಿಸಿ ರೈತರಿಗೆ ನೆರವಾಗುತ್ತಿರುವ ರಾಜ್ಯ ಪ್ರಶಸ್ತಿ ವಿಜೇತ ಕೀರಣಗೆರೆ ಜಗದೀಶ್ ಅವರ ಸಲಹೆ, ಮಾರ್ಗದರ್ಶನ, ತಾಂತ್ರಿಕ ಸಹಕಾರದಲ್ಲಿ ಮಾದರಿ ಹಿಪ್ಪು ನೇರಳೆ ತೋಟವನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ತಲಾ 7/3 ಅಡಿಯಲ್ಲಿ ಪಾತಿ ತೆಗೆದು ಹಿಪ್ಪು ನೇರಳೆ ಸಸಿ ನೆಟ್ಟು, ಹನಿನೀರಾವರಿ ಪದ್ಧತಿಯಲ್ಲಿ ನೀರುಣಿಸುವುದು, ರಾಸಾಯನಿಕ ಗೊಬ್ಬರವನ್ನು ನೀಡುವುದು, ಲಭ್ಯವಿರುವ ವೈಜ್ಞಾನಿಕ ಚಟುವಟಿಕೆಗಳನ್ನು ಅನುಸರಿಸುವ ಮೂಲಕ ಹಿಪ್ಪು ನೇರಳೆ ತೋಟವನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
ರೇಷ್ಮೆ ಹುಳು ಸಾಕಾಣಿಕೆ: ರೇಷ್ಮೆ ಹುಳು ಸಾಕಾಣಿಕೆಯ ಕ್ರಮ ಅತ್ಯಂತ ಸೂಕ್ಷ್ಮವಾದದ್ದು. ಹೀಗಾಗಿ ಈ ವಿಚಾರದಲ್ಲಿ ಡಿಕೆಶಿ ಅವರು ಇನ್ನಷ್ಟು ತಜ್ಞರನ್ನು ಸಂಪರ್ಕಿಸಿ ಹುಳು ಸಾಕಾಣಿಕೆ ಮನೆಯನ್ನು ಸಹ ನಿರ್ಮಿಸುತ್ತಿದ್ದಾರೆ. ಚೀನಾ ರಾಷ್ಠ್ರದಲ್ಲಿ ಅನುಸರಿಸುತ್ತಿರುವಂತೆ ಚಂದ್ರಿಕೆ ಇಲ್ಲದಂತೆ ಹುಳುಗಳು ಸ್ವಯಂ ಗೂಡು ಕಟ್ಟಲು ಅನುವಾಗುವಂತಹ ಮತ್ತು ರೈತರ ಶ್ರಮ ಕಡಿಮೆ ಮಾಡುವ ತಾಂತ್ರಿಕತೆಯನ್ನು ರೈತರಿಗೆ ಕೊಡುವುದು ಡಿಕೆಶಿ ಅವರ ಆದ್ಯತೆ. 50 ಎಕರೆ ಪೈಕಿ ಸದ್ಯ 20 ಎಕರೆ ಪ್ರದೇಶದಲ್ಲಿ ತಲಾ 10 ಎಕರೆಯಂತೆ ವಿಂಗಡಿಸಲಾಗಿದೆ. ಪ್ರತಿ ಬಾರಿಗೆ 2500 ರಿಂದ 3000 ಮೊಟ್ಟೆ ಸಾಕಾಣಿಕೆ ಮಾಡಬಹುದೆಂದು ಎಕರೆ ಭೂಮಿಯಲ್ಲಿ 200 ರಿಂದ 250 ಕೆ.ಜಿ ಗೂಡು ಬೆಳೆಯಲು ಸಹಕಾರಿಯಾಗಲಿದೆ. ಈ ಮಾದರಿಯನ್ನು ಅನುಸರಿಸಿ ರೈತರು ಅಳವಡಿಸಿಕೊಳ್ಳಬಹುದು.
ಬರ ಪೀಡಿತ ಜಿಲ್ಲೆಯಲ್ಲಿ ಸಿಲ್ಕ್ ಮತ್ತು ಮಿಲ್ಕ್ ರೈತರ ಕೈ ಹಿಡಿದಿದೆ. ಕೆಲವು ರೈತರು ರೇಷ್ಮೆ ಕೃಷಿಯನ್ನೇ ಪ್ರಮುಖ ಕಾಯಕವನ್ನಾಗಿಸಿಕೊಂಡಿದ್ದಾರೆ. ಇಂತಹ ಕುಟುಂಬಗಳಿಗೆ ಸಚಿವರು ಮಾದರಿಯಾಗಬಹುದಾಗಿದೆ.
ರೇಷ್ಮೆ ಉಪ ಉತ್ಪನ್ನ
ರೇಷ್ಮೆ ಕೃಷಿಯಲ್ಲಿ ತೊಡಗಿಸಿಕೊಂಡ ಕುಟುಂಬಗಳು ಮತ್ತು ಯುವ ಸಮುದಾಯವನ್ನು ರೇಷ್ಮೆ ಕೃಷಿಯತ್ತ ಸೆಳೆಯುವ ಸಲುವಾಗಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಸಹ ರೇಷ್ಮೆ ಉಪ ಉತ್ಪನ್ನಗಳ ತಯಾರಿಕೆಗೆ ತಂತ್ರಜ್ಞಾನ ಜಾರಿ ಮಾಡುವುದಾಗಿ ತಿಳಿಸಿದ್ದರು. ಮಾಜಿ ಮುಖ್ಯಮಂತ್ರಿಗಳ ಈ ಉದ್ದೇಶವೂ ಜಾರಿಯಾದರೆ, ಜಿಲ್ಲೆಯ ರೈತರು ರೇಷ್ಮೆ ಕೃಷಿಯನ್ನೇ ಪ್ರಮುಖವನ್ನಾಗಿ ತೆಗೆದುಕೊಂಡು ಜೀವನ ಸಾರ್ಥಕತೆಗೆ ದಾರಿ ಮಾಡಕೊಳ್ಳಲು ಅನಕೂಲವಾಗಲಿದೆ.
ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು ರೇಷ್ಮೆ ಕೃಷಿಯ ಆಧುನಿಕ ಮತ್ತು ವೈಜ್ಞಾನಿಕ ಪದ್ಧ ತಿಯನ್ನು ಅನುಸರಿಸಿ 50 ಎಕರೆ ಹಿಪ್ಪುನೇರಳೆ
ತೋಟವನ್ನು ಮಾದರಿಯಾಗಿ ಅಭಿವೃದ್ಧಿಪಡಿಸುತ್ತಿದ್ದಾರೆ. ಹೀಗೆ ಅಭಿವೃದ್ಧಿಯಾಗುವ ತೋಟವನ್ನು ರೈತರು ವೀಕ್ಷಿಸಿ, ಮಾಹಿತಿ ಪಡೆದುಕೊಂಡು ತಾವು ಸಹ ಅದನ್ನು ಅನುಸರಿಸಿ ಜೀವನ ಸಾರ್ಥಕ ಮಾಡಿಕೊಳ್ಳಬೇಕು ಎಂಬುದು ಅವರ ಪ್ರಮುಖ ಉದ್ದೇಶ.
●
ಮಾರಸಪ್ಪ ರವಿ,
ಸಚಿವರ ಪತ್ರಿಕಾ ವಕ್ತಾರ