Advertisement

ಅಪೌಷ್ಟಿಕತೆ ಪತ್ತೆಗೆ ಅಭಿಯಾನ

07:32 PM Jun 22, 2019 | Naveen |

ರಾಮನಗರ: ಜುಲೈ 5ರಿಂದ 7ರವರೆಗೂ ಜಿಲ್ಲಾದ್ಯಂತ ಮಕ್ಕಳಲ್ಲಿ ಅಪೌಷ್ಟಿಕತೆ ಪತ್ತೆ ಹಚ್ಚಲು ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಪಂ ಸಿಇಒ ಮುಲ್ಲೈ ಮುಹಿಲನ್‌ ತಿಳಿಸಿದರು.

Advertisement

ಜಿಲ್ಲಾ ಪಂಚಾಯ್ತಿ ಭವನದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ನವಜಾತ ಶಿಶುವಿನಿಂದ 6 ವರ್ಷದ ಮಕ್ಕಳ ಅಪೌಷ್ಟಿಕತೆ ಪತ್ತೆ ಹಚ್ಚಲಾಗುವುದು. ಮಕ್ಕಳ ಮಾಹಿತಿಯನ್ನು ಸ್ನೇಹ ಮೊಬೈಲ್ ಆ್ಯಪ್‌ನಲ್ಲಿ ದಾಖಲಿಸಿಕೊಳ್ಳಲಾಗುವುದು ಎಂದರು.

ಅಭಿಯಾನ ಏಕೆ?: ರಾಷ್ಟ್ರೀಯ ಕುಟುಂಬ ಆರೋಗ್ಯ ಸರ್ವೆ (ಎನ್‌ಎಫ್ಎಚ್ಎಸ್‌) ಅವರು ಜಿಲ್ಲೆಯಲ್ಲಿ ಸ್ಯಾಂಪಲ್ ಸರ್ವೆ ಮಾಡಿ ಶೇ.22ರಷ್ಟು ಅಪೌಷ್ಟಿಕ ಮಕ್ಕಳಿದ್ದಾರೆ ಎಂದು ಅಂದಾಜಿಸಿದ್ದಾರೆ. ಜಿಲ್ಲೆಯಲ್ಲಿ ಸರ್ಕಾರಿ ಇಲಾಖೆಗಳು ಸಂಗ್ರಹವಾಗಿರುವ ಮಾಹಿತಿ ಪ್ರಕಾರ ಕೇವಲ ಶೇ.1ರಷ್ಟು ಮಾತ್ರ ಅಪೌಷ್ಟಿಕ ಮಕ್ಕಳಿದ್ದಾರೆ ಎಂಬ ದಾಖಲೆಯಿದೆ. ಎನ್‌ಎಫ್ಎಚ್ಎಸ್‌ ನೀಡಿರುವ ವರದಿಗೂ, ಜಿಲ್ಲೆಯಲ್ಲಿರುವ ವರದಿಗೂ ಅಜಗಜಾಂತರ ವ್ಯತ್ಯಾಸ ಇರುವುದರಿಂದ ಆಂದೋಲನದ ರೀತಿಯಲ್ಲಿ ಮಕ್ಕಳ ಮಾಹಿತಿ ಸಂಗ್ರಹಕ್ಕೆ ಮುಂದಾಗಿದ್ದೇವೆ ಎಂದರು.

5 ವಿಧಾನದಲ್ಲಿ ಮಾಹಿತಿ ಸಂಗ್ರಹ: ಮಕ್ಕಳಲ್ಲಿ ಅಪೌಷ್ಟಿಕತೆಯನ್ನು ಅಳೆಯಲು ಕೆಲವೊಂದು ಮಾನದಂಡಗಳಿವೆ. ಲಿಂಗ, ವಯಸ್ಸು, ವಯಸ್ಸಿಗೆ ತಕ್ಕ ಎತ್ತರ (ಸ್ಟಂಟಿಂಗ್‌), ಎತ್ತರಕ್ಕ ತಕ್ಕ ತೂಕ (ವೇಸ್ಟಿಂಗ್‌), ತೋಳಿನ ಸುತ್ತಳತೆಯನ್ನು ತೆಗೆದುಕೊಳ್ಳುತ್ತಾರೆ. ಹೀಗಾಗಿ ಮಕ್ಕಳನ್ನು ಅಂಗನವಾಡಿ ಕೇಂದ್ರಗಳಿಗೆ ಪೋಷಕರು ಮತ್ತು ಪಾಲಕರು ಕರೆ ತರಬೇಕಾಗಿದೆ. ಮುಖ್ಯವಾಗಿ 0-3 ವರ್ಷದ ಮಕ್ಕಳ ತಪಾಸಣೆಯನ್ನು ಶೇ.100 ಯಶಸ್ವಿ ಮಾಡಬೇಕಾಗಿದೆ. ಯಾವ ಮಗುವು ತಪಾಸಣೆಯಿಂದ ಹೊರಗುಳಿಯಬಾರದು ಎಂದು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ತಿಳಿಸಲಾಗಿದೆ ಎಂದರು.

ಅಭಿಯಾನಕ್ಕಾಗಿ ಜಿಲ್ಲೆಯ 1543 ಅಂಗನವಾಡಿ ಕಾರ್ಯಕರ್ತೆಯರು, 802 ಆಶಾ ಕಾರ್ಯಕರ್ತೆಯರು, 208 ಎ.ಎನ್‌.ಎಂಗಳು ಹಾಗೂ 65 ವೈದ್ಯಾಧಿಕಾರಿಗಳನ್ನು ನಿಯೋಜಿಸಲಾಗುತ್ತಿದೆ. ಇವರೆಲ್ಲರಿಗೂ ಈಗಾಗಲೇ ಸೂಕ್ತ ತರಬೇತಿಯನ್ನು ನೀಡಲಾಗಿದೆ ಎಂದು ವಿವರಿಸಿದರು.

Advertisement

ನೋಡೆಲ್ ಅಧಿಕಾರಿಗಳ ನೇಮಕ: ಜಿಲ್ಲೆಯ ವೈದ್ಯಾಧಿಕಾರಿಗಳು, ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ತಾಲೂಕು ಆರೋಗ್ಯಾಧಿಕಾ ರಿಗಳು ತಮ್ಮ ವ್ಯಾಪ್ತಿಯಲ್ಲಿ ಅಭಿಯಾನದ ಮೇಲ್ವಿಚಾರಣೆ ನಡೆಸಲಿದ್ದಾರೆ. ಆರೋಗ್ಯ ಇಲಾಖೆ ವತಿಯಿಂದ ಪ್ರತಿ ತಾಲೂಕಿಗೂ ಒಬ್ಬರಂತೆ ನೋಡೆಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಜಿಲ್ಲಾ ಹಂತದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಯ ಉಪನಿರ್ದೇಶಕರು, ಡಿಎಚ್ಒ ಮತ್ತು ಆರ್‌ಸಿಎಚ್ ಅಧಿಕಾರಿಗಳು ಮೇಲುಸ್ತುವಾರಿ ನಡೆಸುವರು ಎಂದು ಮಾಹಿತಿ ನೀಡಿದರು.

ಅಂಗನವಾಡಿ, ಆಶಾ ಕಾರ್ಯಕರ್ತರು ಮಕ್ಕಳ ಮಾಹಿತಿಯನ್ನು ಅಂಗನವಾಡಿ ಕೇಂದ್ರಗಳಲ್ಲಿ ಸಂಗ್ರಹಿಸಲಿದ್ದಾರೆ. ಪೋಷಕರು ಮತ್ತು ಪಾಲಕರು ತಮ್ಮ ಮಕ್ಕಳನ್ನು ನಿಗದಿತ ದಿನಾಂಕಗಳಂದು 0-6 ವಯೋ ಮಾನದ ಮಕ್ಕಳನ್ನು ಕರೆತಂದು, ಎಲ್ಲಾ ಮಾಹಿತಿಯನ್ನು ಕೊಟ್ಟು ಸಹಕರಿಸಬೇಕು ಎಂದು ಮನವಿ ಮಾಡಿದರು.

ಸ್ನೇಹ ಆ್ಯಪ್‌ ಬಿಡುಗಡೆ: ಸುದ್ದಿಗೋಷ್ಠಿಯ ನಂತರ ಅಪೌrಕತೆ ಅಭಿಯಾನಕ್ಕೆ ಎಂದು ಸಿದ್ಧವಾಗಿರುವ ಸ್ನೇಹ ಮೊಬೈಲ್ ಆ್ಯಪ್‌ನ್ನು ಸಿಇಒ ಮುಲ್ಲೈ ಮುಹಿಲನ್‌ ಬಿಡುಗಡೆ ಮಾಡಿದರು. ಆ್ಯಪ್‌ ಸಿದ್ಧಪಡಿಸಿರುವ ಸಿ-ಸ್ಟೆಪ್‌ ಕಂಪನಿಯ ಪ್ರತಿನಿಧಿಗಳು ಆ್ಯಪ್‌ ಬಳಸುವುದು ಹೇಗೆ ಎಂಬ ವಿಚಾರದಲ್ಲಿ ಸಭೆಯಲ್ಲಿ ನೆರೆದಿದ್ದ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ನೀಡಿದರು. ಈ ವೇಳೆ ಡಿಎಚ್ಒ ಡಾ.ಅಮರ್‌ನಾಥ್‌, ಆರ್‌.ಸಿ.ಎಚ್ ಅಧಿಕಾರಿ ಡಾ.ಲಕ್ಷ್ಮೀಪತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next