Advertisement

ಸಿಪಿವೈಗೆ ತಪ್ಪಿದ ಸಚಿವ ಸ್ಥಾನ: ಬೇಸರ

05:10 PM Aug 22, 2019 | Team Udayavani |

ರಾಮನಗರ: ಬಿ.ಎಸ್‌.ಯಡಿಯೂರಪ್ಪ ಅವರ ಸಚಿವ ಸಂಪುಟದಲ್ಲಿ ಚನ್ನಪಟ್ಟಣದ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್‌ ಅವರಿಗೆ ಸ್ಥಾನ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಅವರ ಬೆಂಬಲಿಗರಿಗೆ ದೊಡ್ಡ ನಿರಾಸೆಯಾಗಿದೆ. ಬಿಜೆಪಿ ಕಾರ್ಯಕರ್ತರು ಹಾಗೂ ಸಿಪಿವೈ ಕಟ್ಟಾ ಬೆಂಬಲಿಗರ್ಯಾರು ಬಹಿರಂಗವಾಗಿ ತಮ್ಮ ಅಸಮಾಧಾನವನ್ನು ಹೊರಹಾಕುತ್ತಿಲ್ಲ.

Advertisement

ಜೆಡಿಎಸ್‌- ಕಾಂಗ್ರೆಸ್‌ ಮೈತ್ರಿ ಸರ್ಕಾರವನ್ನು ಕೆಡವಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಶ್ರಮಿಸಿದವರಲ್ಲಿ ಪೈಕಿ ಸಿ.ಪಿ.ಯೋಗೇಶ್ವರ್‌ ಸಹ ಒಬ್ಬರು ಎಂಬುದು ಬಹಿರಂಗ ಸತ್ಯ. ಮೇಲಾಗಿ ಮಂತ್ರಿಯಾಗುವ ಆಸೆಯಿಂದಲೇ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯಾಗಲು ಸಿಪಿವೈ ನಿರಾಕರಿಸಿದ್ದರು. ದೆಹಲಿ ರಾಜಕೀಯ ತಮಗಿಷ್ಟವಿಲ್ಲ ಎಂದಿದ್ದು, ಇದೇ ಕಾರಣದಿಂದಲೇ.

ಪ್ರಭಾವಿ ಒಕ್ಕಲಿಗ ನಾಯಕ ಸಿಪಿವೈ: ಮೈಸೂರು ಭಾಗದಲ್ಲಿ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರ ಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್‌ ಅವರ ಪ್ರಾಬಲ್ಯದ ನಡುವೆ ಸಿ.ಪಿ.ಯೋಗೇಶ್ವರ್‌ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳಿಗೆ ರಾಜಕೀಯ ತಿರುಗೇಟು ನೀಡಿದ್ದಾರೆ. ಮೈಸೂರು ಭಾಗದಲ್ಲಿ ಒಕ್ಕಲಿಗರದ್ದೇ ಪ್ರಾಬಲ್ಯ. ಇದೀ ಸಿಪಿವೈ ಒಕ್ಕಲಿಗರ ಪ್ರಭಾವಿ ನಾಯಕರಾಗಿ ಎತ್ತರಕ್ಕೆ ಜಿಗಿದಿದ್ದಾರೆ ಎಂದು ಅವರ ಅಭಿಮಾನಿಗಳು ಹೇಳಿದ್ದಾರೆ.

ಮೇಲಾಗಿ ರಾಮನಗರ ಜಿಲ್ಲೆಯಲ್ಲಿ ಸಿಪಿವೈ ಪ್ರಬಲ ನಾಯಕರಾಗಿ ಬೇರು ಬಿಟ್ಟಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್‌ ಅವರಿಗೆ ಪೈಪೋಟಿ ನೀಡಬಲ್ಲ ನಾಯಕತ್ವ ಸಿಪಿವೈ ಅವರಿಗಿದೆ. ಲೋಕಸಭಾ ಚುನಾವಣೆಯ ವೇಳೆಯೂ ಡಿ.ಕೆ.ಸುರೇಶ್‌ ವಿರುದ್ಧ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಅಶ್ವತ್ಥನಾರಾಯಣ ಅವರ ಗೆಲುವಿಗೆ ಸಾಕಷ್ಟು ಶ್ರಮಿಸಿದ್ದರು. ಇಂತಹ ನಾಯಕನನ್ನು ಬಿಜೆಪಿ ಕಡೆಗಣಿಸಿದೆ ಎಂದು ಕಮಲ ಪಾಳಯ ಬೇಸರ ವ್ಯಕ್ತಪಡಿಸಿದೆ.

ಸಂಘಟನೆಗಾಗಿ ಸಚಿವ ಸ್ಥಾನ ಕೊಡಬಹುದಿತ್ತು: ರಾಮನಗರ ಜಿಲ್ಲೆಯಲ್ಲಿ ಬಿಜೆಪಿ ಅಂತರ್‌ಗಾಮಿಯಾಗಿ ಪ್ರವಹಿಸುತ್ತಿದೆ. ಇದನ್ನು ಮತಗಳನ್ನಾಗಿ ಪರಿವರ್ತಸಿವ ಶಕ್ತಿ ಸಿ.ಪಿ.ಯೋಗೇಶ್ವರ್‌ ಅವರಿಗಿದೆ. ಸಚಿವ ಸ್ಥಾನ ಕೊಟ್ಟು 6 ತಿಂಗಳಲ್ಲಿ ವಿಧಾನ ಪರಿಷತ್‌ ಸ್ಥಾನ ಅಥವಾ ಯಾವುದಾದರು ಇದೀಗ ತೆರವಾಗಿರುವ ಯಾವುದಾದರು ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಕೊಟ್ಟು ವಿಧಾನಸಭೆ ಪ್ರವೇಶಿಸುವಂತೆ ಮಾಡಬಹುದಿತ್ತು.

Advertisement

ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್‌ – ಕಾಂಗ್ರೆಸ್‌ ಪಕ್ಷಗಳಿಗೆ ಪರ್ಯಾಯವಾಗಿ ಬಿಜೆಪಿ ಪಕ್ಷ ಸಂಘಟಿಸುವ ಉದ್ದೇಶದಿಂದ ಸಿ.ಪಿ.ಯೋಗೇಶ್ವರ್‌ಗೆ ಅಧಿಕಾರ ನೀಡುವ ಬುದ್ಧಿವಂತಿಗೆಯನ್ನು ಪಕ್ಷದ ವರಿಷ್ಠರು ಪ್ರದರ್ಶಿಸಬೇಕಾಗಿತ್ತು ಎಂದು ಸಿಪಿವೈ ಬೆಂಬಲಿಗರು ಪ್ರತಿಕ್ರಿಯಿಸಿದ್ದಾರೆ.

ಬದ್ಧವೈರಿಗಳ ತಂತ್ರಗಾರಿಕೆ:ಬಿಜೆಪಿ ಸೇರಿ ಪ್ರಬಲ ನಾಯಕರಾಗುತ್ತಿರುವ ಸಿಪಿವೈರನ್ನು ಮಣಿಸಲು ಬದ್ಧವೈರಿಗಳಾದ ಡಿ.ಕೆ.ಶಿವಕುಮಾರ್‌ ಮತ್ತು ಎಚ್.ಡಿ.ಕುಮಾರಸ್ವಾಮಿ ಒಂದಾಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬದ್ಧವೈರಿಗಳ ತಂತ್ರಗಾರಿಕೆಯಿಂದಾಗಿ ಎಚ್.ಡಿ.ಕುಮಾರಸ್ವಾಮಿ ಚನ್ನಪಟ್ಟಣದಿಂದಲೂ ಸ್ಪರ್ಧಿಸಿ, ಸಿಪಿವೈ ಸೋಲುವಂತೆ ಮಾಡಿದ್ದರು. ಅಲ್ಲದೆ, ರಾಮನಗರ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿ ಟಿಕೇಟ್ ಗಿಟ್ಟಿಸಿದ ಎಲ್.ಚಂದ್ರಶೇಖರ್‌ರನ್ನು ಚುನಾವಣೆಗೆ ಇನ್ನೆರೆಡು ದಿನ ಇದ್ದಂತೆ ಚುನಾವಣಾ ಕಣದಿಂದ ಹಿಂದೆ ಸರಿಯುವಂತೆ ಮಾಡಿ ಸಿಪಿವೈಗೆ ಮುಖಭಂಗ ಮಾಡಿದ್ದರು. ಇವೆಲ್ಲ ಬೆಳವಣಿಗೆಯಿಂದ ಕುದಿಯುತ್ತಿದ್ದ ಸಿಪಿವೈ ಮೈತ್ರಿ ಸರ್ಕಾರ ಉರುಳಿಸಿ ಸೇಡು ತೀರಿಸಿಕೊಂಡಿದ್ದಾರೆ. ಆದರೆ, ಅವರಿಗೆ ಸಚಿವ ಸ್ಥಾನ ದೊರೆತಿಲ್ಲ ಎಂದು ಬಿಜೆಪಿ ಕಾರ್ಯಕರ್ತರು ನೋವು ತೋಡಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next