Advertisement

ಘೋಷಿಸಿದ ಯೋಜನೆ ಅನುಷ್ಠಾನಗೊಳಿಸಿ

01:25 PM Mar 02, 2022 | Team Udayavani |

ರಾಮನಗರ: ಪ್ರತಿ ವರ್ಷ ರಾಜ್ಯ ಬಜೆಟ್‌ ಮಂಡನೆಗೆ ಮುನ್ನ ಜಿಲ್ಲೆಯ ಜನತೆಯಲ್ಲಿ ಅಸಮಾಧಾನದ ಜೊತೆಗೆ ಸಣ್ಣದೊಂದು ಆಶಯವಿದೆ. ಜೀವನದ ಮಟ್ಟ ಸುಧಾರಿಸುವ ಒಂದು ಮಹತ್ತರ ಯೋಜನೆ, ಇಡೀ ನಾಡು ಕಣ್ಣು ಹೊರಳಿಸಿ ರಾಮನಗರ ಜಿಲ್ಲೆಯನ್ನು ಗುರುತಿಸುವ, ಆರ್ಥಿಕತೆಯನ್ನು ಉತ್ತೇಜಿಸುವಯೋಜನೆ ಜಾರಿಯಾಗಬಹುದೇ? ಎಂಬ ಆಶಯ.  ಆದರೆ, ಈ ಬಾರಿ ಜಿಲ್ಲೆಯ ನಾಗರಿಕರದ್ದು ಒಕ್ಕೊರಲಿನ ಒತ್ತಾಯ ಹಳೆ ಯೋಜನೆಗಳನ್ನುಶೀಘ್ರ ಪೂರ್ಣಗೊಳಿಸಿ ಎಂಬುದು.

Advertisement

ರಾಜ್ಯ ರಾಜಧಾನಿ ಸಿಲಿಕಾನ್‌ ಸಿಟಿಯ ಮಗ್ಗಲಲ್ಲೆ ಇದ್ದರೂ, ಮೂಲ ಸೌಕರ್ಯಗಳಿಂದ ಈ ಜಿಲ್ಲೆ ವಂಚಿತವಾಗಿದೆ. ಸಿಲ್ಕ್, ಮಿಲ್ಕ್, ಮಾವು ಬೆಳೆಗೆಪ್ರಸಿದ್ಧಿ ಇದ್ದರೂ ಈ ಕ್ಷೇತ್ರಗಳ ಅಭಿವೃದ್ಧಿಗೆ ಯಾವಸರ್ಕಾರವೂ ಪ್ರಾಮಾಣಿಕ ಪ್ರಯತ್ನಗಳನ್ನು ಪಟ್ಟಿಲ್ಲ ಎಂಬಆರೋಪವಿದೆ. ಎಚ್‌.ಡಿ.ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್‌, ಸಿ.ಪಿ.ಯೋಗೇಶ್ವರ್‌ ಅವರಂತಹ ರಾಜಕೀಯಘಟಾನುಘಟಿಗಳು ಇದ್ದರೂ ರಾಮನಗರ ಜಿಲ್ಲೆ ನಿರೀಕ್ಷಿತ ರೀತಿಯಲ್ಲಿ ಅಭಿವೃದ್ಧಿಯಾಗಿಲ್ಲ ಎಂಬ ಕೊರಗು ಪ್ರತಿ ವರ್ಷ ಬಜೆಟ್‌ ಮಂಡನೆಯ ವೇಳೆ ಕಾಡುತ್ತಿದೆ.

ಸುಸಜ್ಜಿತ ಬಸ್‌ ನಿಲ್ದಾಣಕ್ಕೆ ಒತ್ತಾಯ: ಜಿಲ್ಲಾ ಕೇಂದ್ರರಾಮನಗರದಲ್ಲಿ ಈಗಲೂ ಮೈಸೂರು ಕಡೆಗೆ ಪ್ರಯಾಣಿಸಲು ಬಸ್‌ ನಿಲ್ದಾಣವಿಲ್ಲ. ಹೆದ್ದಾರಿ ರಸ್ತೆ ಬದಿಯಲ್ಲೇ ಬಿಸಿಲು, ಮಳೆ, ಧೂಳು, ಗಾಳಿಯಲ್ಲಿ ನಿಂತು ಬಸ್‌ಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಐಜೂರು ವೃತ್ತದ ಬಳಿಯಲ್ಲೇ ಸುಸಜ್ಜಿತ, ಆಧುನಿಕ ಸವಲತ್ತುಗಳಿಂದ ಕೂಡಿದ ಬಸ್‌ ನಿಲ್ದಾಣ ನಿರ್ಮಿಸುವಂತೆ ಜಿಲ್ಲಾ ಕೇಂದ್ರದ ನಾಗರಿಕರು ಒತ್ತಾಯಿಸಿದ್ದಾರೆ. ಜಿಲ್ಲೆಯ ನಗರ, ಪಟ್ಟಣಗಳಲ್ಲಿ ರಸ್ತೆಗಳು ಹದಗೆಟ್ಟಿವೆ. ಈ ರಸ್ತೆಗಳ ದುರಸ್ತಿಅಥವಾ ಮರುನಿರ್ಮಾಣ ಮಾಡುವ ಅಗತ್ಯವಿದೆ.

ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡಿ: ಇಡೀ ಜಿಲ್ಲೆಯಲ್ಲಿ ದಿನನಿತ್ಯ ಉತ್ಪಾದನೆಯಾಗುವ ತ್ಯಾಜ್ಯದ ವಿಲೇವಾರಿಗೆ ವೈಜ್ಞಾನಿಕ ವ್ಯವಸ್ಥೆ ಇಲ್ಲ. ನಗರ ಪ್ರದೇಶಗಳಲ್ಲಿ ಟನ್‌ಗಟ್ಟಲೆ ಉತ್ಪಾದನೆಯಾಗುವ ತ್ಯಾಜ್ಯ ಖಾಸಗಿಯವರ ಭೂಮಿಯಲ್ಲಿ ಹರಡಿಕೊಳ್ಳುತ್ತಿದೆ. ತ್ಯಾಜ್ಯದಿಂದವಿದ್ಯುತ್‌ ಉತ್ಪಾದಿಸುವ ಮತ್ತು ಗೊಬ್ಬರವನ್ನಾಗಿ ಪರಿವರ್ತಿಸುವ ತಂತ್ರಜ್ಞಾನದ ಅಳವಡಿಕೆ ಮಾಡಬೇಕು ಎಂದು ನಾಗರಿಕರು ಒತ್ತಾಯಿಸುತ್ತಿದ್ದಾರೆ.

ಅವಳಿ ನಗರದ ಕನಸು ಏನಾಯ್ತು?: ರಾಮನಗರ ಮತ್ತು ಚನ್ನಪಟ್ಟಣ ನಗರ ಪ್ರದೇಶಗಳನ್ನು ಅವಳಿ ನಗರಗಳನ್ನಾಗಿ ಅಭಿವೃದ್ಧಿಪಡಿಸುವ ಕನಸು ಏನಾಯ್ತು ಎಂದು ಎರಡೂ ನಗರಗಳ ಜನತೆ ಜನಪ್ರತಿನಿಧಿಗಳನ್ನು ಪ್ರಶ್ನಿಸಿದ್ದಾರೆ. ವಿಶೇಷವಾಗಿ ಎಚ್‌.ಡಿ.ಕುಮಾರಸ್ವಾಮಿಯವರು ಎರಡೂ ನಗರಗಳ ಮಧ್ಯೆ ಕೃಷಿ ಉತ್ಪನ್ನಗಳಿಗೆಂದೇಬೃಹತ್‌ ಮಾರುಕಟ್ಟೆ ನಿರ್ಮಿಸುವ ಚಿಂತನೆ ಹೊಂದಿದ್ದರು. ಬಿಜೆಪಿ ಸರ್ಕಾರ ಈ ಕನಸು ಸಾಕಾರಗೊಳಿಸುವುದೇ ಎಂದು ನಾಗರಿಕರು ಆಶಯ ವ್ಯಕ್ತಪಡಿಸಿದ್ದಾರೆ.

Advertisement

ಪ್ರವಾಸೋದ್ಯಮ ಅಭಿವೃದ್ಧಿಗಿದೆ ಅವಕಾಶ: ಸಿಲಿಕಾನ್‌ಸಿಟಿ ಮಗ್ಗಲಲ್ಲೇ ಇರುವ ಸಿಲ್ಕ್ -ಮಿಲ್ಕ್ ಜಿಲ್ಲೆಯಲ್ಲಿಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿವೆ. ಪ್ರವಾಸೋದ್ಯಮ ಸಚಿವರಾಗಿದ್ದ ಸಿ.ಟಿ.ರವಿ, ಸಿ.ಪಿ.ಯೋಗೇಶ್ವರ್‌, ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಟೆಂಪಲ್‌ ಸರ್ಕಿಟ್‌, ಕೆಂಪೇಗೌಡ ಸರ್ಕಿಟ್‌ ಹೀಗೆಸರ್ಕಿಟ್‌ಗಳನ್ನು ರಚಿಸಿ, ಮೂಲ ಸೌಕರ್ಯಗಳನ್ನು ವೃದ್ಧಿಸುವ ಕನಸನ್ನು ಬಿತ್ತಿ ಮರೆತು ಬಿಟ್ಟಿದ್ದಾರೆ. ಮುಖ್ಯಮಂತ್ರಿಗಳು ಈ ಕನಸಿಗೆ ನೀರರೆದು ಸಾಕಾರಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಜಾಗತಿಕ ಮಟ್ಟಕ್ಕೆ ರೇಷ್ಮೆ ಕೃಷಿ, ಉದ್ಯಮದ ಆಶಯ: ಏಷ್ಯಾ ಖಂಡದಲ್ಲೇ ರೇಷ್ಮೆ ಗೂಡು ಹೆಚ್ಚು ವಹಿವಾಟು ಆಗುವ ಹೆಗ್ಗಳಿಕೆ ರಾಮನಗರ ಮಾರುಕಟ್ಟೆಗಿದೆ. ಸದರಿಮಾರುಕಟ್ಟೆಯನ್ನು ಜಾಗತಿಕ ಮಟ್ಟದ ಮಾರುಕಟ್ಟೆಯನ್ನಾಗಿ ಪರಿವರ್ತಿಸಲು ಎಚ್‌.ಡಿ.ಕುಮಾರಸ್ವಾಮಿ ಮತ್ತುಡಾ.ಸಿ.ಎನ್‌.ಅಶ್ವತ್ಥನಾರಾಯಣ ಚಿಂತಿಸಿದ ಫ‌ಲವಾಗಿಚನ್ನಪಟ್ಟಣದ ಪೊಲೀಸ್‌ ತರಬೇತಿ ಶಾಲೆಯ ಬಳಿ ವಿಶಾಲವಾದ ಮಾರುಕಟ್ಟೆ ನಿರ್ಮಿಸಲು ಕಳೆದ ಬಜೆಟ್‌ನಲ್ಲಿ ಹಣ ಮೀಸಲಾಗಿದೆ. ಮಾರುಕಟ್ಟೆಯನ್ನು ಶೀಘ್ರ ನಿರ್ಮಿಸಬೇಕಿದೆ. ರೀಲರ್‌ಗಳು ತಮ್ಮ ಉದ್ಯಮ ವಿಸ್ತರಿಸಲು ಅನುಕೂಲವಾಗುವಂತೆ ಸಿಲ್ಕ್ ರೀಲಿಂಗ್‌ ಪಾರ್ಕ್‌ ಸ್ಥಾಪಿ ಸಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.

ಸಂಸ್ಕರಣಾ ಘಟಕ ಸ್ಥಾಪಿಸಿ: ಮಾವು ಸಂಸ್ಕರಣ ಘಟಕ, ಎಳನೀರು ಸಂಸ್ಕರಣಾ ಘಟಕಗಳು ಸ್ಥಾಪನೆಯಾಗಬೇಕಾಗಿದೆ. ಆಹಾರ ಸಂಸ್ಕರಣಾ ಘಟಕಗಳ ಮಾದರಿಯಲ್ಲಿಈ ಘಟಕಗಳಿಗೆ ಬೇಕಾದ ಪ್ಯಾಕೆಜಿಂಗ್‌ ಇತ್ಯಾದಿ ನೆರವು ಘೋಷಿಸಿ ಎಂದು ರೈತರು ಒತ್ತಾಯಿಸಿದ್ದಾರೆ.

ಜನರ ಅನುಕೂಲಕ್ಕೆ ಯೋಜನೆ ರೂಪಿಸಿ: ರಾಮನಗರದಲ್ಲಿ ರಾಜೀವ್‌ ಗಾಂಧಿ ಆರೋಗ್ಯ ವಿವಿ ನಿರ್ಮಾಣ, ಮಾಗಡಿಯಲ್ಲಿ ಎಂಜಿನೀಯರಿಂಗ್‌ ಕಾಲೇಜು,ಗಾರ್ಮೆಂಟ್ಸ್‌ ಕೈಗಾರಿಕೆಯನ್ನು ಉತ್ತೇಜಿಸಲು ಪಾರ್ಕ್‌ಸ್ಥಾಪನೆ, ಹೈನುಗಾರಿಕೆಗೆ ಅನುಕೂಲವಾಗುವ ಯೋಜನೆಗಳು, ಚನ್ನಪಟ್ಟಣದಲ್ಲಿ ಬೊಂಬೆ ತಯಾರಿಕೆಗೆ ಪೂರಕಯೋಜನೆಗಳು, ಕೆಎಸ್‌ಐಸಿ ಸ್ಪನ್‌ ಸಿಲ್ಕ್ ಮಿಲ್‌ ವಿಸ್ತರಣೆ, ಬಿಡದಿ, ಕನಕಪುರದವರೆಗೆ ಮೆಟ್ರೋ ರೈಲು ವಿಸ್ತರಣೆ, ಜಿಲ್ಲಾ ಕೇಂದ್ರ ರಾಮನಗರಕ್ಕೂ ಹವಾ ನಿಯಂತ್ರಿತ ಬಸ್‌ಗಳ ಸೇವೆ ವಿಸ್ತರಿಸುವ ಯೋಜನೆ ರೂಪಿಸಬೇಕು ಎಂಬುದು ನಾಗರಿಕರ ಆಗ್ರಹವಾಗಿದೆ.

ಘೋಷಿಸಿದ ಯೋಜನೆ ಈಡೇರಿಲ್ಲ: ಈ ಹಿಂದೆ ಆಡಳಿತ ನಡೆಸಿದ ಜೆಡಿಎಸ್‌-ಬಿಜೆಪಿ ಮೈತ್ರಿ, ಕಾಂಗ್ರೆಸ್‌ – ಜೆಡಿಎಸ್‌ ಮೈತ್ರಿ ಸರ್ಕಾರ, ಕಾಂಗ್ರೆಸ್‌ ಸರ್ಕಾರಗಳು ಮಂಡಿಸಿದ ಬಜೆಟ್‌ನಲ್ಲಿ ಘೋಷಣೆಯಾದ ಅನೇಕ ಯೋಜನೆಗಳು ಇನ್ನೂ ಜಾರಿಯಾಗಿಲ್ಲ. ಕಣ್ವ ಬಳಿಮಕ್ಕಳ ಉದ್ಯಾನ, ದೊಡ್ಡಮಣ್ಣುಗುಡ್ಡೆ ಅರಣ್ಯ ಪ್ರದೇಶದಲ್ಲಿ ಅರಣ್ಯ ಸಂಶೋಧನಾ ಕೇಂದ್ರ, ಚನ್ನಪಟ್ಟಣದಲ್ಲಿಮಲ್ಟಿಪ್ಲೆಕ್ಸ್‌, ಇಸ್ರೇಲ್‌ ಮಾದರಿ ಕೃಷಿ ತಂತ್ರಜ್ಞಾನ, ರೇಷ್ಮೆಗೂಡಿನ ಉಪ ಉತ್ಪನ್ನಗಳಿಗೆ ಉತ್ತೇಜನ, ಕನಕಪುರದಲ್ಲಿವೈದ್ಯಕೀಯ ಕಾಲೇಜು, ರಾಮನಗರದ ಫಿಲ್ಮ್ ಸಿಟಿಯಲ್ಲಿ ಛಾಯಾಚಿತ್ರ, ಸಂಕಲನ, ಸೌಂಡ್‌ ರೆಕಾರ್ಡಿಂಗ್‌ ಮಾಡುವ ಸಂಸ್ಥೆ, ಅನಿಮೇಷನ ಸ್ಟುಡಿಯೋಗಳು, ಕಂಪ್ಯೂಟರ್‌ ಗ್ರಾಫಿಕ್‌ ಸ್ಟುಡಿಯೋಗಳ ಸ್ಥಾಪಿಸುವ ಯೋಜನೆ, ರಾಮನಗರದಲ್ಲಿ ರಣಹದ್ದು ಬ್ರೀಡಿಂಗ್‌ ಸೆಂಟರ್‌ ಸ್ಥಾಪನೆ, ವಿದ್ಯುತ್‌ ವಾಹನಗಳಿಗೆ ಎನರ್ಜಿಸ್ಟೋರೇಜ್‌ ತಯಾರಿಕಾ ಕ್ಲಸ್ಟರ್‌ ಸ್ಥಾಪನೆಗೆ ಹಿಂದಿನಬಜೆಟ್‌ಗಳಲ್ಲಿ ಅನುಮೋದನೆ ಸಿಕ್ಕಿದ್ದರೂ ಈ ಯೋಜನೆಗಳು ಕಾರ್ಯಗತವಾಗಿಲ್ಲ. ಘೋಷಿಸಿ ಎಲ್ಲ ಯೋಜನೆಶೀಘ್ರ ಆರಂಭಿಸಬೇಕು ಎಂದು ಜನರು ಆಗ್ರಹಿಸಿದ್ದಾರೆ.

ಕಾಗದಕ್ಕೆ ಸೀಮಿತವಾದ ಸ್ಮಾರ್ಟ್‌ ಸಿಟಿ ಪ್ರಾಧಿಕಾರ :

ಜಾಗತಿಕ ಕೈಗಾರಿಕಾ ನಕ್ಷೆಯಲ್ಲಿ ಗುರುತಿಸಿಕೊಂಡಿರುವ ಬಿಡದಿ ಪಟ್ಟಣವನ್ನು ಸರ್ವ ರೀತಿಯಲ್ಲೂಸುಸಜ್ಜಿತವಾಗಿ ಬೆಳೆಯಲು ಸರ್ಕಾರಮುಂದಾಗಬೇಕು. ಗ್ರೇಟರ್‌ ಬೆಂಗಳೂರುಬಿಡದಿ ಸ್ಮಾರ್ಟ್‌ ಸಿಟಿ ಪ್ರಾಧಿಕಾರ ಕೇವಲಕಾಗದಕ್ಕೆ ಸೀಮಿತವಾಗಿದೆ. ಈ ಪ್ರಾಧಿಕಾರಕ್ಕೆಜೀವ ತುಂಬಬೇಕು ಎಂದು ಬಿಡದಿ ನಾಗರೀಕರು ಒತ್ತಾಯಿಸಿದ್ದಾರೆ.

ನೀರಾವರಿ ಯೋಜನೆ ಕಾರ್ಯಗತಗೊಳಿಸಿ :  ಮೇಕೆದಾಟಿನಲ್ಲಿ ಜಲಾಶಯ ನಿರ್ಮಾಣ ಕಾಮಗಾರಿಯನ್ನು ಶ್ರೀಘ ಆರಂಭಿಸಬೇಕು.ಶ್ರೀರಂಗ ಯೋಜನೆ, ನೆಟ್ಟಕಲ್‌ ಯೋಜನೆ, ಸತ್ತೆಗಾಲ ಯೋಜನೆ, ಜಲ ಜೀವನ್‌ ಮಿಷನ್‌ಗಳಅಡಿಯಲ್ಲಿನ ಯೋಜನೆಗಳನ್ನು ಶೀಘ್ರಪೂರ್ಣಗೊಳಿಸಬೇಕು. ಬೈರಮಂಗಲ ಕೆರೆ ನೀರು ಶುದ್ಧೀಕರಿಸುವ ಯೋಜನೆ ಕಾರ್ಯಗತಗೊಳಿಸ ಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಸಬ್‌ ಅರ್ಬನ್‌ ರೈಲು ವಿಸ್ತರಣೆಗೆ ಕ್ರಮ ವಹಿಸಿ :

ಬೆಂಗಳೂರು ನಗರ ವ್ಯಾಪ್ತಿ ಮತ್ತು ಸುತ್ತಮುತ್ತಲ ಪ್ರದೇಶಗಳಿಗೆ ಸಬ್‌ಅರ್ಬನ್‌ ರೈಲು (ಬೆಂಗಳೂರು ಕಮ್ಯೂಟರ್‌ ರೈಲ್‌) ಯೋಜನೆಯಿಂದ ರಾಮನಗರವನ್ನು ಕೈಬಿಡಲಾಗಿದೆ. 2007ರಲ್ಲಿ ಬೆಂಗಳೂರು ಮೆಟ್ರೋ ಪಾಲಿಟನ್‌ ಸಿಟಿ ಗಡಿಯಿಂದ ರಾಮನಗರದವರೆಗೆ ಸಬ್‌ ಅರ್ಬನ್‌ ರೈಲು ವ್ಯವಸ್ಥೆಗೆ ಯೋಜನೆಯಲ್ಲಿ ಹೆಸರಿತ್ತು. 2010ರಲ್ಲಿ ಪರಿಷ್ಕೃತ ಪಟ್ಟಿಯಲ್ಲಿಯೂ ರಾಮನಗರದವರೆಗೆ ಸಬ್‌ ಅರ್ಬನ್‌ ರೈಲು ಅಗತ್ಯದ ಬಗ್ಗೆ ಪ್ರಸ್ತಾವನೆ ಇತ್ತು. ಆದರೆ, ತದ ನಂತರ ರೈಲ್‌ ಇಂಡಿಯಾ ಟೆಕ್ನಿಕಲ್‌ ಅಂಡ ಇಕನಾಮಿಕ್‌ ಸರ್ವಿಸ್‌ ಲಿಮಿಟೆಡ್‌ ಸಂಸ್ಥೆ (ರೈಟ್ಸ್‌) ರಾಮನಗರವನ್ನು ಕೈಬಿಟ್ಟಿದೆ. ರಾಜ್ಯ ಸರ್ಕಾರ ತಕ್ಷಣ ರಾಮನಗರದವರೆಗೆ ಸಬ್‌ ಅರ್ಬನ್‌ ರೈಲು ವಿಸ್ತರಿಸಲು ಕ್ರಮವಹಿಸಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.

ಬಿ.ವಿ.ಸೂರ್ಯ ಪ್ರಕಾಶ್‌

Advertisement

Udayavani is now on Telegram. Click here to join our channel and stay updated with the latest news.

Next