ರಾಮನಗರ: ಜಿಲ್ಲೆಯಲ್ಲಿರುವ ಕೈಗಾರಿಕೆಗಳ ಸಿಎಸ್ ಆರ್ ನಿಧಿ ಬಳಕೆಗೆ ಇನ್ನೂಮುಂದೆ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯ್ತಿ ವತಿಯಿಂದ ಸೂಕ್ತ ಮಾರ್ಗದರ್ಶನ ಹಾಗೂ ಅಗತ್ಯವಿರುವ ಅಭಿವೃದ್ಧಿ ಕಾಮಗಾರಿಗಳ ಮಾಹಿತಿ ಸಿಗಲಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ತಿಳಿಸಿದರು.
ತಾಲೂಕಿನ ಬಿಡದಿಯ ಟೊಯೋಟಾ ಕಿರ್ಲೋಸ್ಕರ ಆಟೋ ಪಾರ್ಟ್ಸ್ ಸಭಾಂಗಣದಲ್ಲಿ ಜಿಲ್ಲಾ ಕೈಗಾರಿಕಾ ಸಂಘ ಏರ್ಪಡಿಸಿದ್ದ ಸಿಎಸ್‌ಆರ್ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರದಿಂದ ಹಲವಾರು ಜನಪರ ಯೋಜನೆಗಳು ಜಿಲ್ಲೆಯಲ್ಲಿ ಅನುಷ್ಠಾನಗೊಳ್ಳುತ್ತಿವೆ. ಆದರೆ ಕೈಗಾರಿಕೆಗಳು ಸಿಎಸ್‌ಆರ್ ಅನುದಾನದಲ್ಲೂ ಅದೇ ತರಹದ ಯೋಜನೆ ಪುನರಾವರ್ತನೆ ಮಾಡುತ್ತಿರುವುದರಿಂದ ಉಪಯುಕ್ತವಾಗುತ್ತಿಲ್ಲ ಎಂದರು.
ಈ ಪುನರಾವರ್ತನೆ ತಪ್ಪಿಸಲು ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಅಗತ್ಯವಿರುವ ಕಾಮಗಾರಿ ಹಾಗೂ ಮುಂತಾದ ಸೌಕರ್ಯ ವೃದ್ಧಿಗೆ ಮಾಹಿತಿ ನೀಡಲಿದೆ. ಆರೋಗ್ಯ, ಶಿಕ್ಷಣ, ಪಶುಸಂಗೋಪನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ಸರ್ಕಾರದ ಇನ್ನಿತರೆ ಇಲಾಖೆಗಳಿಂದ ಬೇಡಿಕೆ ಪಡೆದು ಕೈಗಾರಿಕೆಗಳಿಗೆ ಜಿಲ್ಲೆಗೆ ಬೇಕಿರುವ ಅಗತ್ಯತೆಯ ಬಗ್ಗೆ ತಿಳಿಸುವ ವ್ಯವಸ್ಥೆ ಜಾರಿಯಾಗಲಿದೆ. ಇದರಿಂದ ಕೈಗಾರಿಕೆಗಳು ಸಹ ತಮ್ಮಲ್ಲೇ ಈ ವಿಚಾರವನ್ನು ವಿನಿಯಮಯ ಮಾಡಿಕೊಂಡು ಕೆಲಸಗಳನ್ನು ಹಂಚಿ ಕೊಳ್ಳಬಹುದು. ಹೀಗಾದಾಗ ಪುನರಾವರ್ತನೆ ತಪ್ಪುತ್ತದೆ ಎಂದು ಸಲಹೆ ನೀಡಿದರು.
ಸಿಎಸ್‌ಆರ್‌ಚಟುವಟಿಕೆ ವಿಸ್ತರಿಸಿ: ಕೈಗಾರಿಕೆಗಳು ಜಿಲ್ಲಾಡಳಿತದ ಜೊತೆ ಸಹಕರಿಸಿ ಜಿಲ್ಲೆಯ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಬೇಕು ಎಂಬ ಮಹತ್ವಾಕಾಂಕ್ಷೆಯ ಜಿಲ್ಲಾಡಳಿತ ಹೊಂದಿದೆ. ಇಷ್ಟು ದಿನ ಕೈಗಾರಿಕೆಗಳು ತಮ್ಮ ಸುತ್ತಮುತ್ತಲ 5-10 ಕಿಮೀ ವ್ಯಾಪ್ತಿಯಲ್ಲಿ ಸಿಎಸ್‌ಆರ್‌ಚಟುವಟಿಕೆಗಳನ್ನು ಮಾಡಿ ಕೊಂಡು ಬಂದಿವೆ. ಇನ್ನೂ ಮುಂದೆ ಜಿಲ್ಲಾದ್ಯಂತ ತಮ್ಮ ಚಟುವಟಿಕೆ ವಿಸ್ತಿರಿಸಿಕೊಳ್ಳಬೇಕು. ಇದಕ್ಕೆ ಬೇಕಾದ ಸಹ ಕಾರವನ್ನು ಜಿಲ್ಲಾಡಳಿತ ನೀಡಲಿದೆ ಎಂದು ತಿಳಿಸಿದರು.
ಕಾಮಗಾರಿಗಳ ಸರ್ವೆ: ಸಿಎಸ್‌ಆರ್ ನಿಧಿಯಿಂದ ಇಲ್ಲಿಯವರೆಗೆ ನಡೆದಿರುವ ಎಲ್ಲಾ ಕಾಮಗಾರಿಗಳ ಸರ್ವೆ ನಡೆಯುವ ಅವಶ್ಯ ಕತೆಯನ್ನು ಪ್ರತಿಪಾದಿಸಿದ ಜಿಲ್ಲಾಧಿಕಾರಿಗಳು ಇವುಗಳ ಉಪಯುಕ್ತತೆಯ ಬಗ್ಗೆ ಮಾಹಿತಿ ಕ್ರೂಢೀಕರಣವಾದರೆ ಕೈಗಾರಿಕೆಗಳು ತನ್ನ ಅನುದಾನವನ್ನು ಹೇಗೆ ವಿನಿಯೋಗಿಸಬಹುದು ಬ ಬಗ್ಗೆ ನಿರ್ಧರಿಸಲು ಅನುಕೂಲವಾಗುತ್ತದೆ ಎಂದರು. ಸಭೆಯಲ್ಲಿ ಬಾಷ್ ಇಂಡಿಯಾ ಫೌಂಡೇಶನ್, ಟಯೋಟಾ ಕಿರ್ಲೋಸ್ಕರ್ ಮೋಟರ್, ಟಯೋಟಾ ಕಿರ್ಲೋಸ್ಕರ್ ಅಟೋ ಪಾರ್ಟ್ಸ್, ಟಯೋಡಾ ಗೋಸೈ ಸೌತ್ ಇಂಡಿಯಾ, ಹಿಂದೂಸ್ತಾನ ಕೋಕೋ ಕೋಲಾ, ಇಲಿಯೋಟ್, ಇಬರಾ ಟಬೊìಮೆನರಿ, ಗೇಲ್ ಇಂಡಿಯಾ ಲಿಮಿಟೆಡ್ ಸಂಸ್ಥೆಗಳು ಸಿಎಸ್‌ಆರ್ ಅನುದಾನದಡಿ ಕೈಗೊಂಡಿರುವ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.
ಸಭೆಯಲ್ಲಿ ಬಿಡದಿ ಕೈಗಾರಿಕಾ ಸಂಘದ ಕಾರ್ಯದರ್ಶಿ ನರಸಿಂಹ ಭಟ್, ಬಾಷ್ ಇಂಡಿಯಾ ಫೌಂಡೇಶನ್ ಸಂಸ್ಥೆಯ ಕಾಮತ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಎಲ್.ನಾಗರಾಜು, ಉಪನಿರ್ದೇಶಕ ಶಿವಲಿಂಗಯ್ಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಿರಂಜನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಸಿ.ವಿ. ರಾಮನ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಶ್ರೀನಿವಾಸ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.