Advertisement

ಡಿಕೆಶಿ ಬಂಧನ: ಜಿಲ್ಲಾದ್ಯಂತ ಪ್ರತಿಭಟನೆ

04:14 PM Sep 05, 2019 | Naveen |

ರಾಮನಗರ: ಕನಕಪುರ ವಿಧಾನಸಭಾ ಕ್ಷೇತ್ರದ ಶಾಸಕ ಡಿ.ಕೆ.ಶಿವಕುಮಾರ್‌ ಅವರನ್ನು ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಬಂಧಿಸಿರುವುದು ರಾಜಕೀಯ ಪ್ರೇರಿತ ಎಂದು ಆರೋಪಿಸಿ ಯುವ ಕಾಂಗ್ರೆಸ್‌ ಕಾರ್ಯಕರ್ತರು, ಜೆಡಿಎಸ್‌ ಕಾರ್ಯಕರ್ತರು, ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಡಿಕೆಶಿ ಅಭಿಮಾನಿಗಳು ಜಿಲ್ಲಾದ್ಯಂತ ಬುಧವಾರ ಪ್ರತಿಭಟನೆ ನಡೆಸಿದರು.

Advertisement

ಜಿಲ್ಲೆಯ ನಾಲ್ಕೂ ತಾಲೂಕು ಕೇಂದ್ರಗಳು, ಹೋಬಳಿ ಕೇಂದ್ರಗಳಲ್ಲಿ ಪ್ರತಿಭಟನೆಗಳು ನಡೆದಿವೆ. ಕನಕಪುರ ತಾಲೂಕಿನಲ್ಲಿ ತೀವ್ರ ಸ್ವರೂಪ ಪಡೆದುಕೊಂಡ ಪ್ರತಿಭಟನೆಯ ವೇಳೆ ಸಾತನೂರಿನಲ್ಲಿ ಎರಡು ಬೈಕ್‌ಗಳಿಗೆ ಬೆಂಕಿ ಹಚ್ಚಲಾಗಿದೆ.

ಕೇಶ ಮುಂಡನ ಮಾಡಿಸಿ ಧರಣಿ: ಡಿಕೆಶಿ ಅವರ ಸ್ವಗ್ರಾಮ ದೊಡ್ಡಾಲಹಳ್ಳಿಯಲ್ಲಿ ಅವರ ಕಟ್ಟಾಭಿಮಾನಿಗಳು ಸಾರ್ವಜನಿಕವಾಗಿ ಕೇಶ ಮುಂಡನ ಮಾಡಿಸಿ ಕೊಂಡು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಲ್ಕೂ ತಾಲೂಕು ಕೇಂದ್ರಗಳಲಿ ಬುಧವಾರ ಬೆಳ್ಳಂಬೆಳಿಗೆ ಪ್ರಮುಖ ರಸ್ತೆಗಳಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಿದ್ದರಿಂದ ವಾಹನ ಸಂಚಾರದಲ್ಲಿ ವ್ಯತ್ಯಯವುಂಟಾಗಿತ್ತು.

ಕನಕಪುರ ಬಂದ್‌: ರಾಮನಗರ, ಚನ್ನಪಟ್ಟಣ ಮತ್ತು ಕನಕಪುರ ನಗರಗಳಲ್ಲಿ ಕೆಲವರು ಗುಂಪುಕಟ್ಟಿ ಕೊಂಡು ಬಲವಂತವಾಗಿ ಅಂಗಡಿಗಳನ್ನು ಮುಚ್ಚಿಸಿರುವ ಪ್ರಕರಣಗಳಿವೆ. ಪ್ರತಿಭಟನಾಕಾರರ ಬಲವಂತಕ್ಕೆ ಅಂಗಡಿ ಮಾಲೀಕರು, ಹೋಟೆಲ್ ಮಾಲೀಕರು ವ್ಯಾಪಾರ ಸ್ಥಗಿತಗೊಳಿಸಿದ್ದರು. ಕನಕಪುರದಲ್ಲಿ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ಕೆಲಕಾಲ ಹರಾಜು ಸ್ಥಗಿತಗೊಂಡಿತ್ತು. ಜಿಲ್ಲಾ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮುಖಂಡರು ಗುರುವಾರ ರಾಮ ನಗರ ಜಿಲ್ಲಾ ಬಂದ್‌ಗೆ ಕರೆ ನೀಡಿದ ಹಿನ್ನಲೆಯಲ್ಲಿ ಮಧ್ಯಾಹ್ನದ ನಂತರ ವ್ಯಾಪಾರವಹಿವಾಟು ಸಹಜ ಸ್ಥಿತಿಗೆ ಮರಳಿದೆ.

ರಸ್ತೆಗಿಳಿಯದ ಕೆ.ಎಸ್‌.ಆರ್‌.ಟಿ.ಸಿ ಬಸ್‌ಗಳು: ಮಂಗಳವಾರ ಸಂಜೆ ಡಿಕೆಶಿ ಅವರ ಬಂಧನದ ವಿಚಾರ ಪ್ರಸಾರವಾಗುತ್ತಿದ್ದಂತೆ ಆಕ್ರೋಶ ಭುಗಿಲೆದ್ದಿತ್ತು. ಕನಕಪುರದಲ್ಲಿ ಕೆ.ಎಸ್‌.ಆರ್‌.ಟಿ.ಸಿ ಬಸ್‌ಗಳಿಗೆ ಕಲ್ಲು ತೂರಾಟ ಮತ್ತು ಒಂದು ಬಸ್ಸಿಗೆ ಬೆಂಕಿ ಹಚ್ಚಿದ್ದ ಕಾರಣ ಬುಧವಾರ ಮಧ್ಯಾಹ್ನದವರೆಗೆ ಜಿಲ್ಲೆಯ ಯಾವ ಡಿಪೋದಿಂದಲೂ ಕೆ.ಎಸ್‌.ಆರ್‌.ಟಿ.ಸಿ ಬಸ್‌ಗಳು ರಸ್ತೆಗೆ ಇಳಿಯಲಿಲ್ಲ. ರಾಮನಗರದ ಐಜೂರು ವೃತ್ತ ಬಿಡದಿ ಮತ್ತು ಚನಪಟ್ಟಣಗಳಲ್ಲಿ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಪ್ರತಿಭಟನೆ ಮತ್ತು ಬೆಂಗಳೂರು- ಕನಕಪುರ ರಸ್ತೆಯಲ್ಲಿಯೂ ಪ್ರತಿಭಟನೆ ತೀವ್ರವಾಗಿದ್ದರಿಂದ ಬೆಂಗಳೂರಿನಿಂದ ಆಗಮಿಸುತ್ತಿದ್ದ ವಾಹನಗಳನ್ನು ವಾಪಸ್ಸು ಕಳುಹಿಸಿಲಾಗಿದೆ. ಇತ್ತ ಚನ್ನಪಟ್ಟಣದ ಹೊರವಲಯದಲ್ಲಿ ಮೈಸೂರಿನಿಂದ ಬರುತ್ತಿದ್ದ ವಾಹನಗಳನ್ನು ವಾಪಸ್ಸು ಕಳುಹಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next