Advertisement

RamaNagar: ಗುರುವಿನಂತೆ ಶಿಷ್ಯನಿಗೂ ಮುಖ್ಯಮಂತ್ರಿ ಹುದ್ದೆ ಕೈಜಾರಿತಾ?

05:43 PM May 19, 2023 | Team Udayavani |

ರಾಮನಗರ: ಮುಖ್ಯಮಂತ್ರಿ ಹುದ್ದೆಯ ಮಹತ್ವಾಕಾಂಕ್ಷೆಯೊಂದಿಗೆ ರಾಜಕಾರಣದಲ್ಲಿ ಒಂದೊಂದೇ ಮೆಟ್ಟಿಲು ಹತ್ತಿದ್ದ ಕನಕಪುರದ ಬಂಡೆ ಡಿ.ಕೆ.ಶಿವಕುಮಾರ್‌ ಗೆ ಕೊನೇಕ್ಷಣದಲ್ಲಿ ನಿರಾಸೆ ಕವಿದಿದೆ. ಹೈಕಮಾಂಡ್‌ ಕೊನೆ ಕ್ಷಣದಲ್ಲಿ ಸಿದ್ದರಾಮಯ್ಯ ಸಿಎಂ ಆಗಲು ಹಸಿರು ನಿಶಾನೆ ತೋರಿದ್ದು, ಇದರೊಂದಿಗೆ ಸಿಎಂ ಕನಸಿನೊಂದಿಗೆ 40 ವರ್ಷದಿಂದ ಸಾಕಷ್ಟು ಪರಿಶ್ರಮ ವಹಿಸಿದ್ದ ಡಿ.ಕೆ. ಶಿವಕುಮಾರ್‌ ಕನಸು ಕರಗಿದೆ.

Advertisement

ಕೈಜಾರಿತು:1985ರಲ್ಲಿ ಸಾತನೂರು ಕ್ಷೇತ್ರದಿಂದ ಅಂದಿನ ಪ್ರಭಾವಿ ಒಕ್ಕಲಿಗ ನಾಯಕ ಎಚ್‌.ಡಿ. ದೇವೇಗೌಡರ ವಿರುದ್ಧ ಸ್ಪರ್ಧೆ ಮಾಡುವ ಮೂಲಕ ರಾಜಕೀಯ ಪ್ರವೇಶಿಸಿದ ಡಿ.ಕೆ.ಶಿವಕುಮಾರ್‌ ಅಂದಿನಿಂದ ಇಂದಿನವರೆಗೆ ರಾಜಕಾರ ಣದಲ್ಲಿ ಸವಾಲು ಗಳನ್ನು ಎದುರಿಸುತ್ತಲೇ ಬಂದವರು. 8 ಬಾರಿ ಶಾಸಕರಾಗಿ, ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷವನ್ನ ಅಧಿಕಾರಕ್ಕೆ ತಂದರಾದರೂ ಸಿಎಂ ಗಾದಿಗೆ ತೀವ್ರ ಕಸರತ್ತು ನಡೆಸಿದರೂ ಅವಕಾಶ ಕೈ ಜಾರಿದೆ.

ಅಸಮಾಧಾನ: ಡಿ.ಕೆ.ಶಿವಕುಮಾರ್‌ ಕಾಂಗ್ರೆಸ್‌ನಿಂದ ಮುಖ್ಯಮಂತ್ರಿಯಾಗುತ್ತಾರೆ ಎಂಬ ಭರವಸೆ ಮೇರೆಗೆ ಒಕ್ಕಲಿಗ ಸಮುದಾಯ ಈ ಬಾರಿಯ ಚುನಾವಣೆಯಲ್ಲಿ ಡಿ.ಕೆ.ಶಿವಕುಮಾರ್‌ರನ್ನು ಬೆಂಬಲಿಸಿತ್ತು. ಪ್ರತಿ ಚುನಾವಣೆಯಲ್ಲಿ ಶೇ.18ಕ್ಕೆ ಕಡಿಮೆ ಇಲ್ಲದಷ್ಟು ಮತ ಪಡೆಯುತ್ತಿದ್ದ ಜೆಡಿಎಸ್‌ ಈ ಬಾರಿಯ ಚುನಾವಣೆಯಲ್ಲಿ ಶೇ.13ಕ್ಕೆ ಕುಸಿದಿದೆ. ಒಕ್ಕಲಿಗ ಮತ ಹೆಚ್ಚಿರುವ ಕ್ಷೇತ್ರದಲ್ಲಿ ಡಿ.ಕೆ. ಶಿವಕುಮಾರ್‌ ನಾನು ಮುಂದಿನ ಸಿಎಂ ಎಂದು ಪ್ರಚಾರ ಮಾಡಿದ್ದರು. ಇದೀಗ ಸಿಎಂ ಹುದ್ದೆ ಡಿ.ಕೆ.
ಶಿವಕುಮಾರ್‌ ಕೈಜಾರಿರುವುದು ಒಕ್ಕಲಿಗ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ.

ಗುರುವಿನಂತೆ ಶಿಷ್ಯನಿಗೂ ಮುಖ್ಯಮಂತ್ರಿ ಹುದ್ದೆ ಕೈಜಾರಿತಾ?
31 ವರ್ಷಗಳ ಹಿಂದೆ ಗುರುವಿಗೆ ಸಿಎಂ ಗಾದಿ ಕೈಜಾರಿದ ರೀತಿಯಲ್ಲೇ ಇದೀಗ ಅವರ ಶಿಷ್ಯನಿಗೂ ಸಿಎಂ ಗಾದಿ ಕೈಜಾರಿತಾ?. ಇಂತಹದ್ದೊಂದು ಪ್ರಶ್ನೆ ಇದೀಗ ರಾಜಕೀಯ ಪಾಳಯದಲ್ಲಿ ಶುರುವಾಗಿದೆ. 1992ರಲ್ಲಿ ಎಸ್‌.ಎಂ.ಕೃಷ್ಣ ಅವರಿಗೆ ಸಿಎಂ ಗಾದಿ ದೊರೆಯಲಿದೆ ಎಂದು ನಂಬಲಾಗಿತ್ತು.

ಸಿಎಂ ಆಗುತ್ತೇನೆ ಎಂಬ ವಿಶ್ವಾಸದಲ್ಲಿ ಎಸ್‌.ಎಂ.ಕೃಷ್ಣ ತಮ್ಮ ಮನೆದೇವರು ಮಲೈಮಹದೇಶ್ವರ ಬೆಟ್ಟಕ್ಕೆ ಹೋಗಿ ಪೂಜೆ ಮಾಡಿಸಿ ವಾಪಸ್‌ ಬೆಂಗಳೂರಿಗೆ ಬಂದವರಿಗೆ ಶಾಕ್‌ ಕಾದಿತ್ತು. ಹೈಕಮಾಂಡ್‌ ಕಳುಹಿಸಿದ ಲಕೋಟೆಯಲ್ಲಿ ವೀರಪ್ಪಮೊಯ್ಲಿ ಹೆಸರಿತ್ತು. ಈ ಘಟನೆಯಿಂದ ನಿರಾಶೆಗೊಂಡ ಒಕ್ಕಲಿಗ ಸಮುದಾಯ ಕಾಂಗ್ರೆಸ್‌ನಿಂದ ದೂರವಾದರು ಎನ್ನಲಾಗಿದೆ.

Advertisement

ಅಲ್ಲದೇ, ಒಕ್ಕಲಿಗರಿಗೆ ರಾಜಕೀಯ ಸ್ಥಾನಮಾನ ಸಿಗಬೇಕು ಎಂಬ ಉದ್ದೇಶದಿಂದ ರಾಜ್ಯದಲ್ಲಿ 1993ರಲ್ಲಿ ಆದಿಚುಂಚನಗಿರಿ ಶ್ರೀಗಳಾದ ಬಾಲಗಂಗಾಧರನಾಥ ಸ್ವಾಮೀಜಿ ನೇತೃತ್ವದಲ್ಲಿ ಬೃಹತ್‌ ರ್ಯಾಲಿ ನಡೆಸಲಾಯಿತು. ಬಳಿಕ ಒಕ್ಕಲಿಗ ಸಮುದಾಯ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಬೆಂಬಲಕ್ಕೆ ನಿಂತಿತು. ಈ ಘಟನೆ ಬಳಿಕ ಮತ್ತೆ ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದು ಈ ಚುನಾವಣೆಯಲ್ಲಿ ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ ಎಂಬ ನಿರೀಕ್ಷೆಯಲ್ಲಿ. ಇದೀಗ
ತನ್ನ ರಾಜಕೀಯ ಗುರು ಎಸ್‌.ಎಂ.ಕೃಷ್ಣ ಅವರಿಗೆ ಎದುರಾದ ಪರಿಸ್ಥಿತಿಯನ್ನೇ ಡಿ.ಕೆ.ಶಿವಕುಮಾರ್‌ ಎದುರಿಸುವಂತಾಗಿದೆ.

ಟ್ರಬಲ್‌ ಶೂಟರ್‌ಗೆ, ಅಧಿಕಾರದ ಟ್ರಬಲ್‌
ಕಾಂಗ್ರೆಸ್‌ ಸಂಕಷ್ಟಕ್ಕೆ ಸಿಲುಕಿದ್ದಾಗಲೆಲ್ಲಾ ಪಕ್ಷದ ಪರವಾಗಿ ಕಣಕ್ಕಿಳಿಯುವ ಟ್ರಬಲ್‌ಶೂಟರ್‌ ಡಿ.ಕೆ.ಶಿವಕುಮಾರ್‌ಗೆ ಅಧಿಕಾರ ಸಿಕ್ಕಿದ್ದು ಟ್ರಬಲ್‌ನಲ್ಲೇ ಎಂಬುದು ಗಮನಾರ್ಹ. 1989ರಲ್ಲಿ ಪ್ರಥಮ ಬಾರಿಗೆ ಗೆದ್ದು ಶಾಸಕರಾದ ಇವರು ಬಂಗಾರಪ್ಪ ಸಂಪುಟದಲ್ಲಿ ಸಚಿವರಾಗಿದ್ದರು. ಆದರೆ, 1994ರಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್‌ ನಿರಾಕರಿಸಿದ ಪರಿಣಾಮ ಪಕ್ಷೇತರವಾಗಿ ಸ್ಪರ್ಧಿಸಿ ಗೆದ್ದರು. ಇನ್ನು ಮಾಜಿ ಪ್ರಧಾನಿ ದೇವೇಗೌಡರ ಕೆಂಗಣ್ಣಿಗೆ ಗುರಿಯಾದ ಇವರು 2004ರಲ್ಲಿ ಕಾಂಗ್ರೆಸ್‌-ಜೆಡಿಎಸ್‌ ದೋಸ್ತಿ ಸರ್ಕಾರದಲ್ಲಿ ಸಚಿವ ಸ್ಥಾನ ವಂಚಿತರಾದರು. 2013ರಲ್ಲಿ ಕಾಂಗ್ರೆಸ್‌ ಸ್ಪಷ್ಟಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತಾದರೂ ಸಿದ್ದರಾಮಯ್ಯ ಸಂಪುಟಕ್ಕೆ 7 ತಿಂಗಳ ಕಾಲ ಇವರಿಗೆ ಎಂಟ್ರಿ ಕೊಟ್ಟಿರಲಿಲ್ಲ. ಇನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಅಳೆದು ತೂಗಿ ನೀಡಲಾಯಿತು. ಒಟ್ಟಾರೆ ಟ್ರಬಲ್‌ ಶೂಟರ್‌ಗೆ ಸಾಕಷ್ಟು ಬಾರಿ ಅಧಿಕಾರದ ಟ್ರಬಲ್‌ ಆಗಿರುವುದಂತು ನಿಜ.

● ಸು.ನಾ.ನಂದಕುಮಾರ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next