ರಾಮನಗರ: ದಕ್ಷಿಣ ಭಾರತದ ಮಟ್ಟಿಗೆ ಬಿಜೆಪಿಗೆ ಹೆಬ್ಬಾಗಿಲು ಆಗಿರುವ ರಾಜ್ಯದಲ್ಲಿ ಮತ್ತೆ ಅಧಿಕಾರದ ಗದ್ದುಗೆ ಅಲಂಕರಿಸಲೇಬೇಕೆಂಬ ಹಠಕ್ಕೆ ಬಿದ್ದಿರುವ ಕೇಸರಿ ಪಕ್ಷ, ರಾಮನಗರದ ರಾಮದೇವರ ಬೆಟ್ಟದಲ್ಲಿ ರಾಮಮಂದಿರ ನಿರ್ಮಾಣ ಮಾಡುವುದಾಗಿ ಬಜೆಟ್‌ನಲ್ಲಿ ಘೋಷಿಸಿದ್ದು, ಮುಂಬರುವ ಚುನಾವಣೆ ಸೇರಿದಂತೆ ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ರಾಜಕೀಯ ವಾಕ್ಸಮರಕ್ಕೆ ಅಣಿಯಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ವಿಧಾನಸಭೆ ಚುನಾವಣೆಗೆ ದಿನಗಣನೆ ಇರುವಾಗಲೇ ರಾಮನಾಮ ಜಪಿಸುವ ಮೂಲಕ ಜಿಲ್ಲೆಯಲ್ಲೇ ತಮ್ಮದೇಯಾದ ಹಿಡಿತ ಹೊಂದಿರುವ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತವರು ಜಿಲ್ಲೆಯಲ್ಲಿ ಬಿಜೆಪಿ ಹೊಸ ದಾಳ ಉರುಳಿಸಿದೆ.
ಅಸ್ತಿತ್ವಕ್ಕಾಗಿ ಬಿಜೆಪಿ ಹರಸಾಹಸ: ರಾಮ ಜಪದ ಮೂಲಕ ಚುನಾವಣೆಯಲ್ಲಿ ಹಿಂದುತ್ವದ ಮೂಲಕ ಹಿಡಿತ ಸಾಧಿಸುವ ಯೋಚನೆಯನ್ನ ಬಜೆಟ್‌ನಲ್ಲಿ ಬಿಜೆಪಿ ಬಿಟ್ಟುಕೊಟ್ಟಿಲ್ಲ. ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಪ್ರಭಾವಿಗಳ ಕೇಂದ್ರ ಸ್ಥಾನವೆಂದೇ ಹೇಳಲಾಗುವ ರಾಮನಗರ ಜಿಲ್ಲೆಯಲ್ಲಿ ಬಿಜೆಪಿ ತನ್ನ ಅಸ್ತಿತ್ವ ಉಳಿಸಿಕೊಳ್ಳುವ ಸಲುವಾಗಿ ಯೋಜನೆಗಳ ಮಹಾಪೂರವನ್ನೇ ಹರಿಸಬಹುದು, ಆ ಮೂಲಕ ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ಗೆ ಟಾಂಗ್ ನೀಡಿ ಬಿಜೆಪಿ ಅಭ್ಯರ್ಥಿ ಮತ್ತು ನಾಯಕರ ಬೆನ್ನಿಗೆ ನಿಲ್ಲುವ ನಿರೀಕ್ಷೆ ಹೊಂದಲಾಗಿತ್ತು. ಆದರೆ, ಅದೆಲ್ಲವು ಹುಸಿಯಾಗುವ ಮೂಲಕ ಜಿಲ್ಲೆಗೆ ನಿರಾಸೆ ಮೂಡಿಸಿದೆ.
ಬಿಜೆಪಿ ಕಾರ್ಯಕರ್ತರಿಗೆ ಬೇಸರ: ಜಿಲ್ಲೆಯಲ್ಲಿ ಬಿಜೆಪಿ ಕಟ್ಟಿಯೇ ತೀರುತ್ತೇವೆ ಎಂದು ಸವಾಲುಗಳ ಮೇಲೆ ಸವಾಲು ಹಾಕುತ್ತಿದ್ದ ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥ್ ನಾರಾಯಣ್ ಹಾಗೂ ಜಿಲ್ಲೆಯ ಪ್ರಭಾವಿ ಬಿಜೆಪಿ ನಾಯಕರಾದ ಸಿ.ಪಿ.ಯೋಗೇಶ್ವರ್ ಅವರ ನಿರೀಕ್ಷೆಯಂತೆ ಜಿಲ್ಲೆಗೆ ಯೋಜನೆಗಳ ಮಹಾಪೂರ ಹರಿಸಿ ಎದುರಾಳಿ ಪಕ್ಷದ ಹೈಕಮಾಂಡ್ ಎಂದೇ ಬಿಂಬಿತವಾಗಿರುವ ಎಚ್‌ಡಿಕೆ ಮತ್ತು ಡಿಕೆ ಬ್ರದರ್ನ್ನು ಕಟ್ಟಿ ಹಾಕುವ ಯಾವುದೇ ಪ್ರಯತ್ನ ನಡೆಸಿಲ್ಲ ಎಂಬುದು ಕಾರ್ಯಕರ್ತರಿಗೆ ಬೇಸರಕ್ಕೆ ಕಾರಣ ಎನ್ನಲಾಗಿದೆ. ರಾಮನಗರದ ಐತಿಹಾಸಿಕ ಪ್ರಸಿದ್ಧ ರಾಮದೇವರ ಬೆಟ್ಟದಲ್ಲಿ ರಾಮಮಂದಿರ ನಿರ್ಮಾಣ ಮಾಡುವ ಮೂಲಕ ದಕ್ಷಿಣ ಅಯೋಧ್ಯೆ ನಿರ್ಮಾಣವಾಗಿಸುವ ಕನಸು ಬಿಜೆಪಿಗರದ್ದಾಗಿದೆ.
ರಾಮದೇವರ ಬೆಟ್ಟಕ್ಕೆ ಐತಿಹಾಸಿಕ ಹಿನ್ನೆಲೆಯಿದ್ದು, ಸ್ವಯಂ ಶ್ರೀರಾಮಚಂದ್ರ ಅಣತಿಯಂತೆ ವಿಶ್ವಕರ್ಮರು ಕೋದಂಡ ರಾಮನ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ ಎನ್ನುವ ಐತಿಹ್ಯವಿದೆ. ಚುನಾವಣೆ ಹೊಸ್ತಿಲಲ್ಲಿ ರಾಜ್ಯ ಸರ್ಕಾರ ರಾಮನ ಜಪ ಮಾಡುತ್ತಿದೆ ಎನ್ನುವ ಆರೋಪಗಳ ನಡುವೆ ರಾಮ ಮಂದಿರ ನಿರ್ಮಾಣ ಘೋಷಣೆ ಮೂಲಕ ಸರ್ಕಾರ ತನ್ನ ಹೇಳಿಕೆಗೆ ಅಧಿಕೃತ ಮುದ್ರೆ ಒತ್ತಿದೆ. ಆದರೆ, ಇದಕ್ಕೆ ಎಷ್ಟು ಅನುದಾನ ಮೀಸಲಿಡಲಾಗಿದೆ ಎಂಬುದು ಬಜೆಟ್ ತಿಳಿಸದಿದ್ದು, ರಾಮಮಂದಿರ ನಿರ್ಮಾಣಕ್ಕೆ ಅನುದಾನದ ಮಹಾಪೂರವೇ ಹರಿಯಲಿದೆ ಎನ್ನವ ನಂಬಿಕೆ ಸ್ಥಳೀಯರದ್ದು .
ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಇರುವಾಗ ಮಂಡನೆ ಮಾಡಿದ ಬಜೆಟ್ ಇದಾಗಿದ್ದು, ಇದಕ್ಕೆ ಯಾವುದೇ ರೀತಿಯ ಮಹತ್ವ ಇಲ್ಲ. ಮೇ ತಿಂಗಳಿನಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಏಪ್ರಿಲ್, ಮೇ ತಿಂಗಳನಲ್ಲಿ ಸಂಬಳ ಕೊಡಲು ಬಜೆಟ್ ಮಂಡನೆ ಮಾಡಿದ್ದಾರೆ. ರಾಮಮಂದಿರ ಘೋಷಣೆ ಮಾಡಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬರಲ್ಲ, ನನ್ನದೇ ಸರ್ಕಾರ, ನಾನೇ ರಾಮಮಂದಿರವನ್ನು ಪೂರ್ಣಗೊಳಿಸುತ್ತೇನೆ.
– ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ
ರಾಮಮಂದಿರ ನಿರ್ಮಾಣ ಬಿಜೆಪಿ ಆದ್ಯತೆಯಾಗಿದ್ದು, ಚುನಾವಣೆ ಇದೆ ಎನ್ನುವ ಕಾರಣಕ್ಕಲ್ಲ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರ ಸದಾ ಕೆಲಸ ಮಾಡುತ್ತಿದ್ದು, ಚುನಾವಣೆ ಬಣ್ಣ ಕಟ್ಟುವುದು ಬೇಡ. ರಾಮಮಂದಿರ ನಿರ್ಮಾಣ ಐತಿಹಾಸಿಕ ನಿರ್ಮಾಣದ ನಿರ್ಧಾರ ಸ್ವಾಗತಾರ್ಹವಾಗಿದೆ.
– ಹುಲುವಾಡಿ ದೇವರಾಜ್, ಬಿಜೆಪಿ ಜಿಲ್ಲಾಧ್ಯಕ್ಷ
-ಎಂಎಚ್.ಪ್ರಕಾಶ್, ರಾಮನಗರ