ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಿ.ಕೆ.ಸುರೇಶ್ ಪರವಾಗಿ ಮಾಜಿ ಸಚಿವ ರಾಮಲಿಂಗಾರೆಡ್ಡಿ ಸೋಮವಾರ ಆನೇಕಲ್ ವಿಧಾನಸಭೆ ಕ್ಷೇತ್ರದ ಹಲವೆಡೆ ಪ್ರಚಾರ ನಡೆಸಿದರು.
ಡಿ.ಕೆ.ಸುರೇಶ್ ಹಾಗೂ ಸ್ಥಳೀಯ ಶಾಸಕ ಶಿವಣ್ಣ ಅವರ ಜತೆಗೂಡಿ ರೋಡ್ ಶೋ ನಡೆಸಿದ ಅವರು, ಈ ಕ್ಷೇತ್ರದ ಸಂಸದರಾಗಿ ಸುರೇಶ್, ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಸುರೇಶ್ ಸಂಸದರಾದ ನಂತರ, ಬೆಂಗಳೂರು ಗ್ರಾಮಾಂತರ ಕ್ಷೇತ್ರ ಅಭಿವೃದ್ಧಿಯತ್ತ ಮುಖ ಮಾಡಿದೆ.
ರಸ್ತೆಗಳ ಅಭಿವೃದ್ಧಿ, ಶುದ್ಧ ಕುಡಿಯುವ ನೀರಿನ ಘಟಕ, ಸಮುದಾಯ ಭವನ ಸೇರಿ ಮೂಲ ಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.
ಬೆಳಗ್ಗೆ ಬನ್ನೇರುಘಟ್ಟ, ಬೇಗೆಹಳ್ಳಿ, ಹರಪನಹಳ್ಳಿ ಸರ್ಕಲ್, ಜಿಗಣಿ, ಹಾರಗದ್ದೆ, ಹೆನ್ನಾಗರ ಸುತ್ತಮುತ್ತಲಿನ ಪ್ರದೇಶದಲ್ಲಿ ರೋಡ್ ಶೋ ನಡೆಯಿತು. ಮಧ್ಯಾಹ್ನ ಶಿಕಾರಿ ಪಾಳ್ಯ, ದೊಡ್ಡತೋಗೂರು, ಕೋನಪ್ಪನ ಅಗ್ರಹಾರ ಪ್ರದೇಶ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಿ ಮತಯಾಚಿಸಿದರು.
ಹೊಣೆಗಾರಿಕೆ: ರೆಡ್ಡಿ ಸಮುದಾಯದ ಪ್ರಭಾವ ಇರುವ ಬೆಂಗಳೂರು ಗ್ರಾಮಾಂತರ ಭಾಗದ ಆನೇಕಲ್ ಹಾಗೂ ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ ಕ್ಷೇತ್ರದ ಕೆ.ಆರ್.ಪುರ, ಬೆಂಗಳೂರು ದಕ್ಷಿಣ ಕ್ಷೇತ್ರದ ಜಯನಗರ, ಬಿಟಿಎಂ ಲೇ ಔಟ್, ಬೊಮ್ಮನಹಳ್ಳಿ ವಿಧಾನಸಭೆ ಕ್ಷೇತ್ರಗಳಲ್ಲಿ ರಾಮಲಿಂಗಾರೆಡ್ಡಿ ಅವರಿಗೆ ಚುನಾವಣಾ ಪ್ರಚಾರದ ಹೊಣೆ ನೀಡಲಾಗಿದೆ ಎಂದು ಹೇಳಲಾಗಿದೆ.