Advertisement

ರಾಮಕುಂಜ: ಪೊಲೀಸರ ಸೂಚನೆ ಲೆಕ್ಕಿಸದೆ ಬ್ಯಾರಿಕೇಡ್‌ಗೆ ಢಿಕ್ಕಿ ಹೊಡೆದು ಪಿಕಪ್‌ ಪರಾರಿ

12:02 AM Apr 30, 2023 | Team Udayavani |

ಕಡಬ : ರಾಮಕುಂಜ ಬಳಿ ಮುಖ್ಯರಸ್ತೆಯಲ್ಲಿರುವ ಆತೂರು ಪೊಲೀಸ್‌ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರ ಸೂಚನೆಯನ್ನು ಲೆಕ್ಕಿಸದೆ ಪಿಕಪ್‌ ವಾಹನವೊಂದು ಬ್ಯಾರಿಕೇಡ್‌ಗೆ ಢಿಕ್ಕಿ ಹೊಡೆದು ಪರಾರಿಯಾದ ಘಟನೆ ಶನಿವಾರ ಮಧ್ಯಾಹ್ನ ಸಂಭವಿಸಿದೆ.

Advertisement

ಪರಾರಿಯಾದ ವಾಹನದಲ್ಲಿ ದನದ ಮಾಂಸ ಸಾಗಿಸಲಾಗುತ್ತಿತ್ತು ಎಂದು ಸಂಶಯಿಸಲಾಗಿದ್ದು, ವಾಹನ ಬಂದ ರಭಸಕ್ಕೆ ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್‌ ಸಿಬಂದಿ ಗಾಬರಿಗೊಂಡು ಪಕ್ಕಕ್ಕೆ ಹಾರಿ ಅಪಾಯದಿಂದ ತಪ್ಪಿಸಿಕೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಪರಾರಿಯಾದ ವಾಹನವನ್ನು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಬೆನ್ನಟ್ಟಿದಾಗ ಚಾಲಕ ವಾಹನವನ್ನು ಗೋಳಿತ್ತಡಿ ಸಮೀಪದ ಶಾರದಾ ನಗರದಲ್ಲಿ ಬಿಟ್ಟು ಪರಾರಿಯಾಗಿದ್ದಾನೆ. ವಾಹನದಲ್ಲಿದ್ದ ದನದ ಮಾಂಸವನ್ನು ದಾರಿಮಧ್ಯೆ ಬೇರೆಡೆಗೆ ಸಾಗಿಸಲಾಗಿದೆ ಎಂಬ ಆರೋಪ ವ್ಯಕ್ತವಾಗಿದೆ. ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ವಾಹನವನ್ನು ವಶಪಡಿಸಿಕೊಂಡು ಆರೋಪಿ ಚಾಲಕ ಕೊçಲ ಜನತಾ ಕಾಲನಿ ನಿವಾಸಿ ಬಶೀರ್‌ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರ ವಶದಲ್ಲಿರುವ ವಾಹನ ದಿನನಿತ್ಯ ಗೋಮಾಂಸ ಹಾಗೂ ಅಕ್ರಮ ಗೋಸಾಗಾಟ ನಡೆಸುತ್ತಿರುವ ವಾಹನ ಎನ್ನಲಾಗಿದೆ. ಕೊçಲ ಪರಿಸರದಲ್ಲಿ ನಿರಂತರ ಅಕ್ರಮ ಗೋ ವಧೆ ನಡೆಯುತ್ತಿದ್ದು, ಅಲ್ಲಿಂದಲೇ ವಾಹನಗಳಲ್ಲಿ ಇತರೆಡೆಗೆ ಮಾಂಸ ಸಾಗಾಟವಾಗುತ್ತಿದೆ ಎಂದು ಹೇಳಲಾಗಿದೆ. ವಿಶೇಷವೆಂದರೆ ದಿನಾ ಬೆಳ್ಳಂಬೆಳಗ್ಗೆ ವಾಹನಗಳಲ್ಲಿ ಚೆಕ್‌ ಪೋಸ್ಟ್‌ ಮೂಲಕವೇ ಹಾದು ಗೋ ಮಾಂಸ ಸಾಗಿಸಲಾಗುತ್ತಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎನ್ನುವುದು ಸ್ಥಳೀಯರ ಆರೋಪ.

ಪೊಲೀಸರಿಗಿಲ್ಲ ರಕ್ಷಣೆ
ಆತೂರಿನ ಈ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ಹಾಗೂ ಗೃಹರಕ್ಷಕ ಸಿಬಂದಿ ಜೀವ ಭಯದಿಂದಲೇ ಕರ್ತವ್ಯ ನಿರ್ವಹಿಸಬೇಕಾಗಿದೆ. ಈ ಹಿಂದೆ ಇಲ್ಲಿ ವಾಹನ ತಪಾಸಣೆ ವೇಳೆ ಅಪಘಾತದಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟ ಸಂದರ್ಭದಲ್ಲಿ ಅವಕಾಶಕ್ಕಾಗಿ ಕಾಯುತ್ತಿದ್ದ ಕೆಲವು ಅಕ್ರಮ ದಂಧೆಕೋರ ಕಿಡಿಗೇಡಿಗಳು ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿ ಚೆಕ್‌ ಪೋಸ್ಟ್‌ನ ಶೆಡ್ಡನ್ನು ಧ್ವಂಸ ಮಾಡಿದ್ದರು. ಆ ಸಂದರ್ಭದಲ್ಲಿ ಪೊಲೀಸರು ಲಾಟಿ ಚಾರ್ಜ್‌ ಮಾಡಿ ಕಿಡಿಗೇಡಿಗಳನ್ನು ಚದುರಿಸಿದ್ದರು. ಅಕ್ರಮ ದಂಧೆಕೋರರ ಅಟ್ಟಹಾಸದಿಂದಾಗಿ ಇಲ್ಲಿನ ಸಿಬಂದಿಗಳಿಗೆ ಅಪಾಯವಾದರೆ ಯಾರು ಹೊಣೆ ಎಂದು ಪ್ರಶ್ನಿಸುತ್ತಿರುವ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಸೂಚನೆ ಧಿಕ್ಕರಿಸಿ ಪರಾರಿಯಾಗಿರುವ ವಾಹನ ಚಾಲಕನನ್ನು ಶೀಘ್ರ ಪತ್ತೆಹಚ್ಚಿ ಕ್ರಮ ಜರಗಿಸದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next