Advertisement

ರಾಮಕೃಷ್ಣ ಮಿಷನ್‌: ಅತ್ತಾವರದಲ್ಲಿ ಸ್ವಚ್ಛ  ಮಂಗಳೂರು ಅಭಿಯಾನ

04:44 PM Feb 19, 2018 | Team Udayavani |

ಮಹಾನಗರ : ಶ್ರೀ ರಾಮಕೃಷ್ಣ ಮಿಷನ್‌ ನೇತೃತ್ವದ ಸ್ವಚ್ಛ  ಮಂಗಳೂರು ಅಭಿಯಾನದ 16ನೇ ಶ್ರಮದಾನ ಅತ್ತಾವರದಲ್ಲಿ ಜರಗಿತು.

Advertisement

ಕೆಎಂಸಿಯ ಸೀನಿಯರ್‌ ಮ್ಯಾನೇಜರ್‌ ರವಿರಾಜ್‌, ಅನಿರುದ್ಧ ನಾಯಕ್‌ 16ನೇ ಶ್ರಮದಾನಕ್ಕೆ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು. ವಿಧಾನ ಪರಿಷತ್‌ ಸದಸ್ಯ ಕ್ಯಾ| ಗಣೇಶ್‌ ಕಾರ್ಣಿಕ್‌ ಸ್ವಾಗತಿಸಿದರು. ಗ್ರೇಸಿ ಲೋಬೋ, ಇಮ್ತಿಯಾಜ್‌ ಅಹ್ಮದ್‌, ನಝೀರ್‌ ಅಹ್ಮದ್‌ ಮೊದಲಾದವರು ಉಪಸ್ಥಿತರಿದ್ದರು.

ಸ್ವಯಂ ಸೇವಕರು ಅತ್ತಾವರ ಕಟ್ಟೆಯ ಸುತ್ತಮುತ್ತಲಿನ ರಸ್ತೆಗಳಲ್ಲಿ ಬಿದ್ದಿದ್ದ ಕಸತ್ಯಾಜ್ಯ ಹೆಕ್ಕಿ ಸ್ವಚ್ಛಗೊಳಿಸುತ್ತಿದ್ದರೆ ಕೆಎಂಸಿ ಆಸ್ಪತ್ರೆಯ ಸಿಬಂದಿ ಡಾ| ಸಿಂಧು ಸುರೇಂದ್ರ ಜತೆಗೂಡಿ ಅತ್ತಾವರ ಕಟ್ಟೆಯಿಂದ ಕೆಎಂಸಿ ಸಾಗುವ ಮುಖ್ಯ ರಸ್ತೆಯನ್ನು ಸ್ವಚ್ಛಗೊಳಿಸಿದರು. ಎಸ್‌ಎಂ ಕುಶೆ ವಿದ್ಯಾರ್ಥಿಗಳು ಅಧ್ಯಾಪಕ ಪ್ರತಿಮ ಕುಮಾರ್‌ ಮಾರ್ಗದರ್ಶನದಲ್ಲಿ ಎಸ್‌ಎಂ ಕುಶೆ ಶಾಲೆಯತ್ತ ಸಾಗುವ ಮಾರ್ಗ ಹಾಗೂ ಬಸ್‌ ತಂಗುದಾಣವನ್ನು ಸ್ವಚ್ಛಗೊಳಿಸಿದರು. ಅನಿಲ್‌ ಕುಮಾರ್‌ ಅತ್ತಾವರ ಹಾಗೂ ಸ್ಥಳೀಯ ನಾಗರಿಕರು ರೈಲು ನಿಲ್ದಾಣದತ್ತ ಸಾಗುವ ಮಾರ್ಗವನ್ನು ಹಾಗೂ ಅಕ್ಕಪಕ್ಕದ ಜಾಗಗಳಲ್ಲಿ ಸ್ವಚ್ಛತೆ ನಡೆಸಿದರು. ಸಾಮಾಜಿಕ ಕಾರ್ಯಕರ್ತ ಸೌರಜ್‌ ಮಂಗಳೂರು ನೇತೃತ್ವದಲ್ಲಿ ಅನಧಿಕೃತ ಬ್ಯಾನರ್‌, ಪೋಸ್ಟರ್‌ಗಳನ್ನು ತೆರವುಗೊಳಿಸುವ ಕಾರ್ಯ ನಡೆಯಿತು.

ಅಧ್ಯಾಪಕಿ ಪ್ರಜ್ಞಾಶ್ರೀ ಮತ್ತು ಎಸ್‌ಎಂ ಕುಶೆ ಶಾಲಾ ವಿದ್ಯಾರ್ಥಿಗಳು ವೈದ್ಯನಾಥ ನಗರದ ಮನೆಮನೆಗಳಿಗೆ ತೆರಳಿ ಸ್ವಚ್ಛತೆಯ ಕುರಿತ ಮಾಹಿತಿಯುಳ್ಳ ಕರಪತ್ರಗಳನ್ನು ವಿತರಿಸಿ ಸಾರ್ವಜನಿಕರು ತಮ್ಮ ಮನೆ ಹಾಗೂ ಪರಿಸರವನ್ನು ಸ್ವಚ್ಛವಾಗಿರಿಸಿಕೊಳ್ಳುವಂತೆ ಮನವಿ ಮಾಡಿದರು.

ಮನೆಗಳಿಗೆ ತೆರಳಿ ಜಾಗೃತಿ
ನಗರದ ಹಲವೆಡೆ ಜನರು ಇನ್ನೂ ತ್ಯಾಜ್ಯವನ್ನು ರಸ್ತೆಯ ಬದಿ ಹಾಕುತ್ತಿರುವುದರಿಂದ ನಗರದ ಸೌಂದರ್ಯಕ್ಕೆ ಧಕ್ಕೆ ಬರುತ್ತಿದೆ. ಅದನ್ನು ಪರಿಹರಿಸಬೇಕೆಂಬ ನಿಟ್ಟಿನಲ್ಲಿ ಸ್ವಚ್ಛ ಮಂಗಳೂರು ಸ್ವಯಂ ಸೇವಕರು ಅನೇಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಅದೇ ರೀತಿ ಅತ್ತಾವರ ಸೆಂಟರ್‌ ಎದುರಿನ ಕಾಲುದಾರಿಯಲ್ಲಿ ಕೆಲವರು ತ್ಯಾಜ್ಯ ಹಾಕುವ ಪರಿಣಾಮ ಜನರು ಪುಟ್‌ ಪಾಥ್‌ನ್ನು ಬಳಸುತ್ತಿಲ್ಲ. ಇಂದು ಅಶೋಕ ಸುಬ್ಬಯ್ಯ, ದೀಪಕ ಮೇಲಂಟ ಹಾಗೂ ಸ್ವಚ್ಛ ಮಂಗಳೂರು ಕಾರ್ಯಕರ್ತರು ಅಲ್ಲಿ ಹಲವು ದಿನಗಳಿಂದ ಸಂಗ್ರಹವಾಗಿದ್ದ ತ್ಯಾಜ್ಯ ತೆಗೆದು ಕಾಲುದಾರಿ ಕಣ್ಣಿಗೆ
ಕಾಣುವಂತೆ ಮಾಡಿದರು.

Advertisement

ಇನ್ನೊಂದು ಭಾಗದಲ್ಲಿ ಆಗಾಗ ಎತ್ತರ ಪ್ರದೇಶದ ಮಣ್ಣು ಜರಿದು ಯಾವಾಗಲೂ ಪುಟ್‌ಪಾತ್‌ ಮೇಲೆ ಬೀಳುತ್ತಿದ್ದು,
ಕಾಲುದಾರಿ ನಿಷ್ಪ್ರಯೋಜಕವಾಗುತ್ತಿತ್ತು. ಪುನಃ ಮಣ್ಣು ಜರಿದು ಬೀಳದಂತೆ ಅದಕ್ಕೆ ಗಟ್ಟಿಯಾಗಿ ಕಲ್ಲಿನ ತಡೆಗೋಡೆ
ಕಟ್ಟಿ, ಮಣ್ಣುಕಲ್ಲುಗಳನ್ನು ತೆಗೆದು ಪಾದಚಾರಿಗಳಿಗೆ ಅನುಕೂಲ ಮಾಡಿಕೊಡಲಾಯಿತು.

ಅಲ್ಲದೇ ಆ ಸ್ಥಳವನ್ನು ಅಂದಗಾಣಿಸಲಿಕ್ಕಾಗಿ ಒಂದಿಷ್ಟು ಹೂಕುಂಡಗಳನ್ನಿಡಲಾಗಿದೆ. ಇವತ್ತಿನಿಂದ ತ್ಯಾಜ್ಯ ಬೀಳುವುದು
ನಿಲ್ಲುವವರೆಗೂ ಪ್ರತಿದಿನ ಅಲ್ಲಿನ ಜನರ ಮನೆಗಳಿಗೆ ತೆರಳಿ ಜಾಗೃತಿ ಮಾಡುವ ಅಭಿಯಾನ ಜಾರಿಯಲ್ಲಿರುತ್ತದೆ. ಇಂತಹ ಮಾದರಿಗಳನ್ನು ಹಲವೆಡೆ ಮಾಡಿ ಯಶಸ್ವಿಯಾದ ಹಿನ್ನೆಲೆಯಲ್ಲಿ ಈ ಕ್ರಮ ಅನುಸರಿಸಲಾಯಿತು. ಮುಂದಿನ ವಾರ ಅಲ್ಲಿ ಕುಳಿತುಕೊಳ್ಳಲು ಸರಳ ಬೆಂಚುಗಳನ್ನು ಅಳವಡಿಸಲು ನಿರ್ಧರಿಸಲಾಯಿತು.

ಲಕ್ಷ್ಮಣ ಕುಂದರ್‌, ಅಫ್ಜಲ್‌, ಸತೀಶ್‌ ಭಟ್‌, ಹಾಗೂ ಕೆಎಂಸಿ ಆಸ್ಪತ್ರೆಯ ಸುಮಾರು ಎಪ್ಪತ್ತು ಸಿಬಂದಿ ಸೇರಿದಂತೆ ಅನೇಕರು ಸ್ವಚ್ಛತಾ ಕಾರ್ಯದಲ್ಲಿ ಕೈಜೋಡಿಸಿದರು. ಸ್ವಚ್ಛತಾ ಕಾರ್ಯದ ಬಳಿಕ ಕಾರ್ಯಕರ್ತರಿಗೆ ಚಕ್ರಪಾಣಿ ದೇವಸ್ಥಾನದಲ್ಲಿ ಚಹಾತಿಂಡಿ ವ್ಯವಸ್ಥೆ ಮಾಡಲಾಗಿತ್ತು. ಅಕ್ಷಿತ್‌ ಅತ್ತಾವರ ಅಭಿಯಾನವನ್ನು ಸಂಯೋಜಿಸಿದರು. ಈ ಅಭಿಯಾನಕ್ಕೆ ಎಂ ಆರ್‌ಪಿಎಲ್‌ ಹಾಗೂ ನಿಟ್ಟೆ ಸಂಸ್ಥೆಗಳು ಪ್ರಾಯೋಜಕತ್ವ ನೀಡಿ ಸಹಕರಿಸುತ್ತಿವೆ.

ಸ್ವಚ್ಛ ಗ್ರಾಮ ಅಭಿಯಾನ 
ಜಿಲ್ಲೆಯ ಸುಮಾರು 100 ಗ್ರಾಮಗಳಲ್ಲಿ ರಾಮಕೃಷ್ಣ ಮಿಷನ್‌ನಿಂದ ಸ್ವಚ್ಛತಾ ಅಭಿಯಾನ ನಡೆಯುತ್ತಿದೆ. ಪುತ್ತೂರು,
ಮಂಜನಾಡಿ, ಕಾಯರ್ತಡ್ಕ, ಅತಿಕಾರಿಬೆಟ್ಟು ಸೋಮೇಶ್ವರ, ಮೇರ್ಲಪದವು, ಕಿನ್ಯಾ, ಉಳ್ಳಾಲ, ಮಲ್ಲೂರು, ಉಳಾಯಿಬೆಟ್ಟು, ಬಜಪೆ, ಮೆನ್ನಬೆಟ್ಟು, ವಾಲ್ಪಾಡಿ ಸೇರಿದಂತೆ ಹಲವೆಡೆ ಸ್ವಚ್ಛ  ಗ್ರಾಮ ಅಭಿಯಾನ ಜರಗಿತು. ಸ್ವಚ್ಛ ಭಾರತ ಮಿಷನ್‌ ಜಿಲ್ಲಾ ಸಂಯೋಜಕಿ ಮಂಜುಳಾ, ನವೀನ್‌ ಕೊಣಾಜೆ ಹಾಗೂ ಮಹೇಶ್‌ ಕೊಲ್ಯ ಸ್ವಚ್ಛ  ಗ್ರಾಮ ಅಭಿಯಾನವನ್ನು ಸಂಯೋಜಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next