“ಅಣ್ಣ ಹೂ ಅನ್ಲಿ. ನನ್ನ ಹೆಂಡತೀನ ನಿಲ್ಲಿಸಿ ಗೆಲ್ಲಿಸ್ತೀನಿ …’ ಹೆಮ್ಮೆಯಿಂದ ಹೇಳಿಕೊಳ್ಳುತ್ತಾನೆ ಕಲ್ಲೇಶ. ಅವನ ಮಾತು ಕೇಳಿ ಅಣ್ಣನೂ ಹೂಂ ಎನ್ನುತ್ತಾರೆ. ಈ ಕಡೆ ರಾಮಕ್ಕನನ್ನು ಗ್ರಾಮ ಪಂಚಾಯ್ತಿ ಚುನಾವಣೆಗೆ ನಿಲ್ಲಿಸಲಾಗುತ್ತದೆ. ರಾಮಕ್ಕ ಚುನಾವಣೆಯಲ್ಲೂ ಗೆದ್ದು, ಗ್ರಾಮ ಪಂಚಾಯ್ತಿ ಅಧ್ಯಕ್ಷಳಾಗಿ ಬಿಡುತ್ತಾಳೆ. ಎಲ್ಲಾ ಸರಿ, ರಾಮಕ್ಕನಿಗೆ ಓದು, ಬರೆಯುವುದಕ್ಕಾದರೂ ಬರಬೇಕಲ್ಲ. ಗದ್ದೆ, ಮನೆ ನೋಡಿಕೊಂಡಿರುವ ಹಳ್ಳಿ ಹೆಣ್ಣು ಆಕೆ.
ಇದ್ದಕ್ಕಿದ್ದಂತೆ ಗ್ರಾಮ ಪಂಚಾಯ್ತಿಯ ಜವಾಬ್ದಾರಿ ಬಂದುಬಿಟ್ಟರೆ? ಆಕೆಯಾದರೂ ಏನು ಮಾಡಬೇಕು ಹೇಳಿ? ಆದರೆ, ಆಕೆಯ ಗಂಡನಿಗೆ, ಆ ಕ್ಷೇತ್ರದ ಶಾಸಕನಿಗೂ ಅದೇ ಬೇಕು. ಎಲ್ಲಿಯವರೆಗೂ ರಾಮಕ್ಕ, ಓದು ಬರಹ ಗೊತ್ತಿಲ್ಲದೆ, ಹೆಬ್ಬೆಟ್ಟ್ ರಾಮಕ್ಕ ಆಗಿರುತ್ತಾಳ್ಳೋ, ಅಲ್ಲಿಯವರೆಗೂ ಅವರಿಗೆ ಅನುಕೂಲ. ಆಕೆಯಿಂದ ಹೆಬ್ಬೆಟ್ಟು ಒತ್ತಿಸಿಕೊಂಡು ಚೆನ್ನಾಗಿ ದುಡ್ಡು ಮಾಡಬಹುದು. ಬೇಕಾದ್ದಾಗಿ ಇರಬಹುದು. ಇದು ರಾಮಕ್ಕಳಿಗೆ ಗೊತ್ತಿಲ್ಲ ಎಂದರ್ಥವಲ್ಲ.
ಗೊತ್ತು. ಆದರೆ, ಏನೂ ಮಾಡದಂತಹ ಪರಿಸ್ಥಿತಿ ಅವಳದು. ಹೀಗಿರುವಾಗಲೇ ಒಂದು ದಿನ ರಾಮಕ್ಕ ತಿರುಗಿ ಬೀಳುತ್ತಾಳೆ. ತನ್ನ ಗಂಡನ, ಶಾಸಕನ ವಿರುದ್ಧವೇ ರಣಕಹಳೆ ಊದುತ್ತಾಳೆ. ಅದು ಹೇಗೆ ಎಂಬ ಕುತೂಹಲವಿದ್ದರೆ ಚಿತ್ರ ನೋಡಬೇಕು. ಗ್ರಾಮೀಣ ಚಿತ್ರಗಳಿಗೆ ಹೆಸರಾಗಿರುವ ಹಿರಿಯ ನಿರ್ದೇಶಕ ಎನ್.ಆರ್. ನಂಜುಂಡೇಗೌಡ ಬಹಳ ದಿನಗಳ ನಂತರ “ಹೆಬ್ಬೆಟ್ಟ್ ರಾಮಕ್ಕ’ ಚಿತ್ರದ ಮೂಲಕ ವಾಪಸ್ಸಾಗಿದ್ದಾರೆ.
ಈ ಬಾರಿ ಅವರು ಮಹಿಳಾ ಸಬಲೀಕರಣದ ಕುರಿತಾಗಿ ಚಿತ್ರ ಮಾಡಿದ್ದಾರೆ. ಅನಕ್ಷರತೆ, ಹಳ್ಳಿ ರಾಜಕೀಯ, ಭ್ರಷ್ಟಾಚಾರ ಇವೆಲ್ಲವುಗಳ ಬಗ್ಗೆಯೂ ಬೆಳಕು ಚೆಲ್ಲಿದ್ದಾರೆ. ಚಿತ್ರದಲ್ಲಿ ವಿಶೇಷವೆನ್ನುವಂತಹ ಕಥೆ ಇಲ್ಲ. ಇವತ್ತಿನ ರಾಜಕೀಯ ಪರಿಸ್ಥಿತಿ ಮತ್ತು ಎಲ್ಲಾ ಕಡೆ ಕಾಣುವಂತಹ ಪಾತ್ರಗಳ ಮೂಲಕ ಚಿತ್ರವನ್ನು ನಿರ್ದೇಶಕರು ನಿರೂಪಿಸುತ್ತಾ ಹೋಗುತ್ತಾರೆ. ಮಹಿಳಾ ರಾಜಕಾರಣಿಗಳು ಗಂಡಂದಿರು ಹೇಗೆ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಾರೆ ಎಂಬುದನ್ನು ಹಾಸ್ಯಮಯವಾಗಿ ತೋರಿಸುತ್ತಾರೆ.
ಪ್ರೇಕ್ಷಕರಿಗೆ ಗೊತ್ತಿಲ್ಲದ್ದೇನೂ ಇಲ್ಲ, ಹಾಗೆಯೇ ಅನಿರೀಕ್ಷಿತವಾದದ್ದೂ ಚಿತ್ರದಲ್ಲಿ ಏನೂ ಇಲ್ಲ. ಚಿತ್ರವನ್ನು ಇನ್ನಷ್ಟು ಟ್ರಿಮ್ ಮಾಡುವ ಸಾಧ್ಯತೆ ಇತ್ತು. ಆದರೂ ಚಿತ್ರವು ಸರಳ ನಿರೂಪಣೆ ಮತ್ತು ಅಭಿನಯದಿಂದ ನೋಡಿಸಿಕೊಂಡು ಹೋಗುತ್ತದೆ. ಚಿತ್ರ ಪ್ರಮುಖವಾಗಿ ರಾಮಕ್ಕ, ಆಕೆಯ ಪತಿ ಕಲ್ಲೇಶ ಮತ್ತು ಆ ಕ್ಷೇತ್ರದ ಶಾಸಕ, ಹೀಗೆ ಮೂರು ಪಾತ್ರಗಳತ್ತ ಹೆಚ್ಚಾಗಿ ಸುತ್ತುತ್ತದೆ. ಮೂರೂ ಪಾತ್ರಗಳಿಗೆ ಸೂಕ್ತವಾದ ಕಲಾವಿದರನ್ನು ಆಯ್ಕೆ ಮಾಡಿರುವುದರಿಂದ ನಿರ್ದೇಶಕರು ಅರ್ಧ ಗೆದ್ದಿದ್ದಾರೆ.
ಮೊದಲು ಅನಕ್ಷರಸ್ಥೆಯಾಗಿ, ನಂತರ ಇಡೀ ವ್ಯವಸ್ಥೆಯ ವಿರುದ್ಧ ತಿರುಗಿಬೀಳುವ ಹೆಣ್ಣಾಗಿ, ತಾರಾ ಬಹಳ ಸಲೀಸಾಗಿ ತಮ್ಮ ಪಾತ್ರವನ್ನು ನಿರ್ವಹಿಸಿದ್ದಾರೆ. ಇಲ್ಲಿ ಹೆಬ್ಬೆಟ್ಟ್ ರಾಮಕ್ಕನ ಪಾತ್ರ ಮಾಡಿರುವ ತಾರಾ ಅಷ್ಟೇ ಅಲ್ಲ, ದೇವರಾಜ್ ಮತ್ತು ಹನುಮಂತೇಗೌಡ ಸಹ ಒಳ್ಳೆಯ ಅಭಿನಯ ನೀಡಿದ್ದಾರೆ. ರಾಮಕ್ಕ ಉಲ್ಟಾ ಹೊಡೆದಾಗ, ಆಗುವ ನೋವು, ಹತಾಶೆಯನ್ನು ದೇವರಾಜ್ ಬಹಳ ಚೆನ್ನಾಗಿ ಹಿಡಿದಿಟ್ಟಿದ್ದಾರೆ.
ಇದಲ್ಲದೆ ಇನ್ನೊಂದಿಷ್ಟು ಹೊಸ ಮುಖಗಳಿವೆ. ಎಲ್ಲರೂ ತಮ್ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಚಿತ್ರದ ಹೈಲೈಟ್ ಎಂದರೆ ಗ್ರಾಮೀಣ ಭಾಷೆ. ಪ್ರೊ. ಸಿದ್ಧರಾಮಯ್ಯನವರು ಬಹಳ ಚೆನ್ನಾಗಿ ಭಾಷೆಯನ್ನು ಕಟ್ಟಿಕೊಟ್ಟಿದ್ದಾರೆ. ಗಾದೆ ಮಾತು ಸ್ವಲ್ಪ ಜಾಸ್ತಿ ಆಯಿತು ಎಂದನಿಸಬಹುದು. ಆದರೂ ಚಿತ್ರದ ಸಂಭಾಷಣೆ ಮತ್ತು ಹಾಡುಗಳನ್ನು ಅವರು ಚೆನ್ನಾಗಿ ನಿಭಾಯಿಸಿದ್ದಾರೆ.
ಚಿತ್ರ: ಹೆಬ್ಬೆಟ್ ರಾಮಕ್ಕ
ನಿರ್ಮಾಣ: ಎಸ್.ಎ. ಪುಟ್ಟರಾಜು, ಕವಿತಾ ರಾಜ್
ನಿರ್ದೇಶನ: ಎನ್.ಆರ್. ನಂಜುಂಡೇಗೌಡ
ತಾರಾಗಣ: ದೇವರಾಜ್, ತಾರಾ, ಹನುಮಂತೇಗೌಡ ಮುಂತಾದವರು
* ಚೇತನ್ ನಾಡಿಗೇರ್