ರಾಮದುರ್ಗ: ಅಂಬೇಡ್ಕರ್ ವಸತಿ ಯೋಜನೆಯಡಿ ಮಂಜೂರಾದ ಮನೆಗಳಿಗೆ ವಿದ್ಯುತ್ ಮತ್ತು ರಸ್ತೆ ನಿರ್ಮಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ತಾಲೂಕಿನ ಮಾಗನೂರ ಗ್ರಾಮದ ದಲಿತ ಕುಟುಂಬಗಳ ಜನರು ತಹಶೀಲ್ದಾರ್, ತಾ.ಪಂ ಇಒ ಹಾಗೂ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ತಾಲೂಕಿನ ಹಳೇತೊರಗಲ್ಲ ಗ್ರಾಮ ಪಂಚಾಯತ ವ್ಯಾಪ್ತಿಯ ಮಾಗನೂರ ಗ್ರಾಮದಲ್ಲಿ 2006-07 ನೇ ಸಾಲಿನಲ್ಲಿ ಅಂಬೇಡ್ಕರ್ ವಸತಿ ಯೋಜನೆಯಲ್ಲಿ ಮಂಜೂರಾದ ಮನೆಗಳಿಗೆ 12 ವರ್ಷವಾದರೂ ಇಲ್ಲಿಯವರೆಗೂ ವಿದ್ಯುತ್ ಹಾಗೂ ರಸ್ತೆ ಇಲ್ಲಾ. ಇದರಿಂದ ಇಲ್ಲಿನ ದಲಿತ ಕುಟುಂಬಗಳು ಕತ್ತಲಲ್ಲಿ ಜೀವನ ನಡೆಸುತ್ತಿದ್ದಾರೆ. ಸುಮಾರು 20 ಗುಂಪು ಮನೆಗಳಿದ್ದು, ಸುಮಾರು 70-80 ಜನರು ವಾಸ ಮಾಡುತ್ತಿದ್ದಾರೆ. ಇದರಿಂದ ಇಲ್ಲಿಯ ಜನಕ್ಕೆ ತುಂಬಾ ತೊಂದರೆಯಾಗುತ್ತಿದೆ. ಮನೆಗಳು ಮಾಗನೂರ ಗ್ರಾಮದಿಂದ
500 ಮೀ. ದೂರವಿದ್ದು, ಇಲ್ಲಿಗೆ ನಡೆದುಕೊಂಡು ಬರಲು ರಸ್ತೆ ಇಲ್ಲ. ಇಲ್ಲಿನ ದಲಿತ ಕುಟುಂಬಗಳ ಬಗ್ಗೆ ಅನೇಕ ಸಲ ಗ್ರಾಮ ಪಂಚಾಯತಿಗೆ ತಿಳಿಸಿದರೂ ನಮ್ಮ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ ಎಂದು ದೂರಿದ್ದಾರೆ.
ಇಲ್ಲಿನ ದಲಿತ ಕುಟುಂಬಗಳಿಗೆ ಒಂದು ತಿಂಗಳ ಒಳಗಾಗಿ ನಿರಂತರ ಜ್ಯೋತಿ ವಿದ್ಯುತ್ ಮತ್ತು ರಸ್ತೆ ವ್ಯವಸ್ಥೆ ಕಲ್ಪಿಸಿಕೊಡಬೇಕು. ಒಂದು ವೇಳೆ ಸ್ಪಂದಿಸದಿದ್ದರೆ ಬೇಡಿಕೆ ಈಡೇರುವವರೆಗೂ ಅಹೋರಾತ್ರಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಮನವಿ ಮೂಲಕ ಎಚ್ಚರಿಕೆ ನೀಡಿದ್ದಾರೆ. ಮನವಿ ಸಂದರ್ಭದಲ್ಲಿ ಡಿ.ಎಸ್.ಎಸ್ ತಾಲೂಕಾಧ್ಯಕ್ಷ ಬಸವರಾಜ ಮಾದರ, ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ ಮಾದರ, ಸವದತ್ತಿ ತಾಲೂಕಾಧ್ಯಕ್ಷ ಯಲ್ಲಪ್ಪ ಮಾದರ, ಹನಮಂತ ಮಾದರ, ಕರಿಯಪ್ಪ ಮಾದರ, ಸಿದ್ದಪ್ಪ ಮಾದರ, ಮಾರುತಿ ಮಾದರ, ಶಿವಪ್ಪ ಮಾದರ ಉಪಸ್ಥಿತರಿದ್ದರು.