Advertisement

ಏಕಾಏಕಿ ಶಾಲೆ ಸ್ಥಳಾಂತರ ತಂದ ಫ‌ಜೀತಿ

12:43 PM Jun 05, 2019 | Naveen |

ಈರನಗೌಡ ಪಾಟೀಲ
ರಾಮದುರ್ಗ
: ಏಕಾಏಕಿ ಪಟ್ಟಣದಲ್ಲಿದ್ದ ಆದರ್ಶ ವಿದ್ಯಾಲಯ ಸ್ಥಳಾಂತರ ಮಾಡಿದ್ದರಿಂದ ಕೆಲ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಮೂಲ ಸೌಲಭ್ಯ ಕೊರತೆಯ ನೆಪವೊಡ್ಡಿ ಕೆಲ ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿರುವುದರಿಂದ ಮಕ್ಕಳು ಶಿಕ್ಷಣ ವಂಚಿತರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಪಟ್ಟಣದ ವಿದ್ಯಾಚೇತನ ಶಾಲಾ ಆವರಣದಲ್ಲಿ ಕಳೆದ 9 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಆದರ್ಶ ವಿದ್ಯಾಲಯವನ್ನು ಈಗ ಏಕಾಏಕಿ ಪಾಲಕರ ಗಮನಕ್ಕೆ ತರದೆ ರಾಮದುರ್ಗದಿಂದ ಸುಮಾರು 22 ಕಿ.ಮೀ. ದೂರದ ಕಟಕೋಳದಲ್ಲಿರುವ ನೂತನ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ.

ಆದರ್ಶ ವಿದ್ಯಾಲಯದಲ್ಲಿ ಒಟ್ಟು 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಶಾಲೆಯನ್ನು ಸ್ಥಳಾಂತರಿಸಿದ್ದರಿಂದ ರಾಮದುರ್ಗ ಪಟ್ಟಣ ಸೇರಿದಂತೆ ಸುರೇಬಾನ, ಕಲಹಾಳ ಹಾಗೂ ಇತರ ಗ್ರಾಮಗಳಿಂದ ಬರುವ 150ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಆದರ್ಶ ವಿದ್ಯಾಲಯದಲ್ಲಿ ಪ್ರವೇಶ ಪಡೆದ ಮಕ್ಕಳು ದೂರದ ಕಟಕೋಳಕ್ಕೆ ಹೋಗಲು ಅನಾನುಕೂಲತೆಗಳೆ ಹೆಚ್ಚಿರುವುದರಿಂದ ಒಂದು ವಾರದಿಂದ ತರಗತಿಗಳಿಗೆ ಹಾಜರಾಗಿಲ್ಲ. ಅಲ್ಲದೇ ಕೆಲ ವಿದ್ಯಾರ್ಥಿಗಳಿಗೆ ಬಸ್‌ನ ಸೌಕರ್ಯ ಮತ್ತು ಬಸ್‌ಪಾಸ್‌ ಇಲ್ಲದ ಕಾರಣ ಸ್ಥಳಾಂತರಗೊಂಡ ಶಾಲೆಗೆ ಹೋಗಲು ಆಗುತ್ತಿಲ್ಲ.

ಪಾಲಕರ ಧರಣಿ: ರಾಮದುರ್ಗದಿಂದ ಕಟಕೋಳಕ್ಕೆ ಆದರ್ಶ ವಿದ್ಯಾಲಯ ಸ್ಥಳಾಂತರ ಮಾಡಿರುವುದನ್ನು ವಿರೋಧಿಸಿ ಇತ್ತಿಚೆಗೆ ವಿದ್ಯಾರ್ಥಿಗಳ ಪಾಲಕರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಧರಣಿ ನಡೆಸಿದ್ದರು. ಅಲ್ಲದೇ ಶಾಸಕ ಮಹಾದೇವಪ್ಪ ಯಾದವಾಡ ಅವರನ್ನು ಭೇಟಿ ಮಾಡಿ ಅಳಲು ತೋಡಿಕೊಂಡಿದ್ದರು.

ಆಗ ಪಾಲಕರ ಮನವಿಗೆ ಸ್ಪಂದಿಸಿದ್ದ ಶಾಸಕ ಮಹಾದೇವಪ್ಪ ಯಾದವಾಡ, ಸ್ಥಳಾಂತರಗೊಂಡಿರುವ ಕಟಕೋಳದ ನೂತನ ಕಟ್ಟಡದಲ್ಲಿಯೇ ಮಕ್ಕಳು ಅಧ್ಯಯನಕ್ಕೆ ಮುಂದಾಗಬೇಕು. ಅಲ್ಲಿನ ನೀರಿನ ಕೊರತೆ, ರಸ್ತೆ ಸುಧಾರಣೆ, ಬಸ್‌ ಸೌಕರ್ಯ, ಬಸ್‌ ಪಾಸ್‌, ಶೌಚಾಲಯ ನಿರ್ಮಾಣವನ್ನು ಒಂದೆರಡು ದಿನಗಳಲ್ಲಿ ದೊರಕಿಸಿಕೊಡುವುದಾಗಿ ಭರವಸೆ ನೀಡಿದ್ದರು.

Advertisement

ಇನ್ನು ಶಾಲೆಯವರೆಗೂ ಬಸ್‌ ವ್ಯವಸ್ಥೆ ಕಲ್ಪಿಸಿಕೊಡುತ್ತೇವೆ. ಆದರೆ ಶಾಲಾ ವಿದ್ಯಾರ್ಥಿಗಳಿಗೆ ಒಂದು ತಿಂಗಳ ನಂತರ ಬಸ್‌ ಪಾಸ್‌ ಕೊಡುವುದಾಗಿ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದ ಮಕ್ಕಳು ಒಂದು ತಿಂಗಳ ತನಕ ಬಸ್‌ಪಾಸ್‌ ಇಲ್ಲದೇ ಶಾಲೆಗೆ ತೆರಳಲು ಅಸಾಧ್ಯ. ಇದರಿಂದ ವಿದ್ಯಾಭ್ಯಾಸದಿಂದ ವಂಚಿತರಾಗುತ್ತಾರೆಂಬುದು ಪಾಲಕರ ಆತಂಕ.

ಮೊದಲೇ ಮೂಲ ಸೌಕರ್ಯ ಕೊರತೆಯಿರುವ ಶಾಲೆಗೆ ತಮ್ಮ ಮಕ್ಕಳನ್ನು ಕಳಿಸಲು ಪಾಲಕರು ಹಿಂದೇಟು ಹಾಕುತ್ತಿದ್ದಾರೆ. ಮಕ್ಕಳು ವಿಷಯಗಳ ಅಧ್ಯಯನದಿಂದ ವಂಚಿತರಾಗದಂತೆ ಎಚ್ಚರಿಕೆ ವಹಿಸಬೇಕಾದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಶಾಲೆಯ ಮುಖ್ಯೋಪಾಧ್ಯಾಯರು ಮೂಲ ಸೌಕರ್ಯ ಕಲ್ಪಿಸುವುದಾಗಿ ಹೇಳುತ್ತಿದ್ದಾರೆ ಹೊರತು ಮಕ್ಕಳ ಅಧ್ಯಯನಕ್ಕೆ ತೊಂದರೆಯಾಗುವ ಕುರಿತು ಗಮನ ಹರಿಸುತ್ತಿಲ್ಲ. ಮೇಲಧಿಕಾರಿಗಳಾದರೂ ಇತ್ತ ಗಮನ ಹರಿಸಿ ಮಕ್ಕಳ ಅಧ್ಯಯನಕ್ಕಾಗುತ್ತಿರುವ ತೊಂದರೆ ನಿವಾರಿಸಬೇಕು ಎಂಬುವುದು ಶಿಕ್ಷಣ ಪ್ರೇವಿಗಳ ಒತ್ತಾಯವಾಗಿದೆ.

ಸೇತು ಬಂಧು ಹಾಗೂ ಶಾಲಾ ಪ್ರಾರಂಭೋತ್ಸವಕ್ಕೆ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಆದರೆ ಶಾಲೆಗೆ ನೀರಿನ ಪೂರೈಕೆ ಕೆಲಸ ನಡೆಯುತ್ತಿದೆ. ತಾತ್ಕಾಲಿಕ ರಸ್ತೆ ಮಾಡಲಾಗಿದೆ. ಬಸ್‌ ಸೌಕರ್ಯ ಕಲ್ಪಿಸುವಂತೆ ಸಾರಿಗೆ ಘಟಕದ ಅಧಿಕಾರಿಗಳಿಗೆ ತಿಳಿಸಲಾಗಿದೆ.
ಐ.ಎಸ್‌. ಸುಲಾಖೆ,
ಶಾಲಾ ಮುಖ್ಯೋಪಾಧ್ಯಾಯರು

ಮಕ್ಕಳನ್ನು ದೂರದ ಶಾಲೆಗೆ ಕಳಿಸುವುದು ಕಷ್ಟದ ಕೆಲಸ. ಪಾಲಕರ ಗಮನಕ್ಕೆ ತರದೆ ಶಾಲೆ ಸ್ಥಳಾಂತರ ಮಾಡಿದ್ದು ಸರಿಯಲ್ಲ. ಇನ್ನೊಂದು ವರ್ಷ ಶಾಲೆಯನ್ನು ರಾಮದುರ್ಗದಲ್ಲಿಯೇ ನಡೆಸಿದ್ದರೆ ಚನ್ನಾಗಿರುತ್ತಿತ್ತು. ಮೂಲ ಸೌಕರ್ಯ ಕಲ್ಪಿಸುವುದಾಗಿ ಕಳೆದ ವರ್ಷದಿಂದ ಹೇಳಿಕೊಂಡು ಬಂದಿದ್ದಾರೆ. ಯಾವುದೇ ಪ್ರಗತಿಯಾಗಿಲ್ಲ. ಎಲ್ಲ ಮೂಲ ಸೌಲಭ್ಯ ಪೂರೈಕೆಯ ನಂತರ ಶಾಲೆಯನ್ನು ಸ್ಥಳಾಂತರ ಮಾಡಬೇಕಿತ್ತು.
ಸಹದೇವ ಪವಾರ, ಪಾಲಕರು

Advertisement

Udayavani is now on Telegram. Click here to join our channel and stay updated with the latest news.

Next