ರಾಮನನ್ನು ವಿಷ್ಣುವಿನ ಅವತಾರವಾಗಿ ಪೂಜಿಸಲಾಗುತ್ತದೆ. ಶ್ರೀ ರಾಮನವಮಿ ಯುಗಾದಿಯ ಎಂಟು ದಿನಗಳ ಅನಂತರ ಚೈತ್ರ ಮಾಸದ ಶುಕ್ಲ ಪಕ್ಷದಲ್ಲಿ ಆಚರಿಸಲಾಗುತ್ತದೆ.
ಹಿಂದೂ ಪವಿತ್ರ ಮಹಾಕಾವ್ಯವಾದ ರಾಮಾಯಣ ಸೇರಿದಂತೆ ರಾಮನ ಕಥೆಗಳನ್ನು ಓದಿ ಅನುಸರಿಸಲಾಗಿದೆ. ರಾಮನವಮಿಯಂದು ದಕ್ಷಿಣ ಭಾರತದ ಮನೆಗಳಲ್ಲಿ, ಮುಖ್ಯವಾಗಿ ಕರ್ನಾಟಕದಲ್ಲಿ, ಪಾನಕ ಹಾಗೂ ಕೋಸಂಬರಿಗಳನ್ನು ಬಂದವರಿಗೆ ನೀಡಿ ಆಚರಿಸಲಾಗುತ್ತದೆ. ರಾಮ ಮಂದಿರಗಳಲ್ಲಿ ವಿಶೇಷ ಪೂಜೆಗಳನ್ನು ಸಲ್ಲಿಸಲಾಗುತ್ತದೆ.
ರಾಮನವಮಿ ಹಬ್ಬ ಅತ್ಯಂತ ಸರಳ ಹಾಗೂ ಸುಲಭವಾಗಿದ್ದು, ಈ ಹಬ್ಬವನ್ನು ದೇಶದಾದ್ಯಂತ ಬಹಳಷ್ಟು ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಗುತ್ತದೆ. ಪ್ರಮುಖವಾಗಿ ಉತ್ತರ ಭಾರತದಲ್ಲಂತೂ ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ.
ಶ್ರೀರಾಮ ಜನಿಸಿದ ಸ್ಥಳ ಅಯೋಧ್ಯೆಯಲ್ಲಿ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ. ಹಬ್ಬದ ದಿನದಂದು ರಾಮನ ಭಜನೆ, ಕೀರ್ತನೆ ಹಾಗೂ ಮೆರವಣಿಗಳನ್ನು ನಡೆಸಲಾಗುತ್ತದೆ. ರಾಮನವಮಿಯಂದು ಸೂರ್ಯ ದೇವನ ಪ್ರಾರ್ಥನೆಯೊಂದಿಗೆ ಹಬ್ಬ ಆರಂಭವಾಗುತ್ತದೆ. ಏಕೆಂದರೆ, ಶ್ರೀರಾಮನು ಸೂರ್ಯವಂಶಸ್ಥನಾಗಿದ್ದು, ಶಕ್ತಿಯ ಪ್ರತೀಕವಾಗಿರುವ ಸೂರ್ಯ ದೇವರ ಆರಾಧನೆ ಮೂಲಕ ರಾಮನವಮಿ ಆರಂಭವಾಗುತ್ತದೆ.
ದೇಶಾದ್ಯಂತ ಸಂಭ್ರಮ ಸಡಗರದಿಂದ ರಾಮನವಮಿಯನ್ನು ಆಚರಿಸುತ್ತಾರೆ ಈ ಹಬ್ಬದಲ್ಲಿ ಮತ್ತೊಂದು ವಿಶೇಷ ಎಂದರೆ ಶ್ರೀರಾಮ ದೇವರು, ಸೀತಾಮಾತೆ, ಲಕ್ಷ್ಮಣ, ಹನುಮಂತ ದೇವರುಗಳ ಪ್ರತಿಮೆಗಳನ್ನು ರಥದಲ್ಲಿ ಸಿಂಗರಿಸಿ ಪ್ರತಿಷ್ಟಾಪಿಸುತ್ತಾರೆ. ನಂತರ ಬೀದಿಯ ಉದ್ದಕ್ಕೂ ಮೆರವಣಿಗೆಯಲ್ಲಿ ರಥವನ್ನು ಎಳೆದುಕೊಂಡು ಹೋಗುತ್ತಾರೆ. ರಾಮನ ಭಜನೆ, ಹಾಡುಗಳಿಂದ ರಾಮನ ಧ್ಯಾನ ಮಾಡುತ್ತಾರೆ.
ಮತ್ತೊಂದು ವಿಶೇಷವೆಂದರೆ, ರಾಮನಾಮ ಬರೆಯುವುದು. ರಾಮನಾಮ ಜಪಿಸಿದರೆ ರಾಮ ನಮ್ಮನ್ನು ಸಂರಕ್ಷಿಸುತ್ತಾನೆಂಬ ನಂಬಿಕೆ ಇದೆ. ಇನ್ನೂ ಹಲವಾರು ವಿಶೇಷ ಆಚರಣೆಗಳು ವಿವಿದೇಡೆಯಲ್ಲಿ ಕಾಣಬಹುದು ಒಟ್ಟಾರೆಯಾಗಿ ರಾಮನವಮಿ ಒಂದು ಸಡಗರ ಸಂಭ್ರಮದ ಹಬ್ಬ ಎಂದು ಹೇಳಬಹುದು
ಯು.ಎಚ್. ಎಂ. ಗಾಯತ್ರಿ, ಬಳ್ಳಾರಿ