Advertisement

ಡೇರಾ ಒಳಗೆ ತಾಜ್‌ಮಹಲ್‌, ಡಿಸ್ನಿ ಲ್ಯಾಂಡ್‌, ಐಫೆಲ್‌ ಟವರ್

04:01 PM Sep 06, 2017 | udayavani editorial |

ಸಿರ್ಸಾ : ಅತ್ಯಾಚಾರ ಅಪರಾಧಿಯಾಗಿ ಜೈಲು ಪಾಲಾಗಿರುವ ಡೇರಾ ಸಚ್ಚಾ ಸೌಧಾ ಮುಖ್ಯಸ್ಥ ಗುರ್ಮಿತ್‌ ರಾಮ್‌ ರಹೀಮ್‌ ಸಿಂಗ್‌ ತನ್ನ ವೈಭವೋಪೇತ ಜೀವನಕ್ಕೆ ಎಷ್ಟು ಹೆಸರುವಾಸಿಯಾಗಿದ್ದ ಎನ್ನುವುದಕ್ಕೆ 700 ಎಕರೆ ವಿಸ್ತೀರ್ಣದ ಆತನ ಡೇರಾ ಸಂಕೀರ್ಣದೊಳಗೆ ಆತನ ತಾಜ್‌ ಮಹಲ್‌, ಐಫೆಲ್‌ ಟವರ್‌, ಡಿಸ್ನಿ ಲ್ಯಾಂಡ್‌ಗಳನ್ನೇ ನಿರ್ಮಿಸಿರುವುದೇ ಸಾಕ್ಷಿಯಾಗಿದೆ. 

Advertisement

ಗುರ್ಮಿತ್‌ ಸಿಂಗ್‌ ತನ್ನ ಡೇರಾ ಸಂಕೀರ್ಣದೊಳಗೆ ತನ್ನದೇ ಸಂಸ್ಥಾನವನ್ನು ನಿರ್ಮಿಸಿಕೊಂಡಿದ್ದ; ಅಲ್ಲಿ ತನ್ನದೇ ಕಾನೂನು, ತನ್ನದೇ ಕರೆನ್ಸಿಗಳನ್ನು ಚಾಲ್ತಿಗೆ ತಂದಿದ್ದ; ಜಗತ್ತಿನ ಏಳು ಮಹಾ ಅದ್ಭುತಗಳನ್ನು ತನ್ನ ಡೇರಾ ಸಂಕೀರ್ಣದೊಳಗೆ ನಿರ್ಮಿಸಲು ಯತ್ನಿಸಿದ್ದ. 

ಮೊಘಲರ ಆಸ್ಥಾನವನ್ನು ನಾಚಿಸುವ ರೀತಿಯಲ್ಲಿ ಗುರ್ಮಿತ್‌ ತನ್ನ ವೈಭವದ ಆಸ್ಥಾನವನ್ನು ನಿರ್ಮಿಸಿಕೊಂಡಿದ್ದ. ಸುಂದರವಾದ ಐಷಾರಾಮಿ ಅರಮನೆಗಳನ್ನು ನಿರ್ಮಿಸುವ ಹುಚ್ಚು ಆತನಿಗಿತ್ತು. ಆತನ ಡೇರಾ ಸಂಕೀರ್ಣದೊಳಗೆ ಬೃಹತ್‌ ಗಾತ್ರದ ಹಡಗಿನ ಪ್ರತಿಕೃತಿಯೊಂದು ಕೂಡ ಎಲ್ಲರ ಆಕರ್ಷಣೆ ಪಾತ್ರವಾಗಿತ್ತು.

ಗುರ್ಮಿತ್‌ ಸಿಂಗ್‌ನ ಡೇರಾ ಸಂಕೀರ್ಣದ ಪ್ರಧಾನ ಪ್ರವೇಶ ದ್ವಾರವು ಹಲವಾರು ಗಿನ್ನೆಸ್‌ ವಿಶ್ವ ದಾಖಲೆಗಳನ್ನು ಕಾಣಿಸುವ ದೊಡ್ಡ ಗೋಡೆಯೊಂದನ್ನು ಹೊಂದಿದೆ. ಇದು ಡೇರಾ ಸಂಕೀರ್ಣಕ್ಕೆ ಭೇಟಿಕೊಡುವವರನ್ನು ಅದ್ದೂರಿಯಾಗಿ ಸ್ವಾಗತಿಸುವಂತಿತ್ತು. 

ಡೇರಾ ಸಂಕೀರ್ಣದೊಳಗೆ ಫಿಲ್ಮ್ ಸಿಟಿ ಕೂಡ ಇದೆ. ಆದರೆ ಅದು ಪೂರ್ಣಗೊಂಡಿಲ್ಲ. ಗುರ್ಮಿತ್‌ ತನ್ನ ಚಿತ್ರಗಳನ್ನು ಇಲ್ಲೇ ಶೂಟ್‌ ಮಾಡಿರುವುದು ಗಮನಾರ್ಹವಾಗಿದೆ. ಈ ಫಿಲ್ಮ್ ಸಿಟಿಯ ಗೇಟ್‌ಗಳಿಗೆ ವಿದ್ಯುತ್‌ ಪ್ರವಹಿಸುವ ತಂತಿಗಳನ್ನು ಜೋಡಿಸಲಾಗಿದೆ. ಅನುಮತಿ ಇಲ್ಲದೆ ಯಾರಾದರೂ ಫಿಲ್ಮ್ ಸಿಟಿ ಪ್ರವೇಶಿಸಿದರೆ ಅವರು ವಿದ್ಯುದಾಘಾತಕ್ಕೆ ಗುರಿಯಾಗುವಂತಿತ್ತು.

Advertisement

ಡೇರಾ ಮುಖಸ್ಥನ ಸಿರ್ಸಾ ಡೇರಾ ಸಂಕೀರ್ಣದ ಶೋಧ ಕಾರ್ಯ ಈಗಲೂ ಮುಂದುವರಿದಿದೆ. ಇಷ್ಟೇ ಅಲ್ಲದೆ ಇನ್ನೂ  ಹಲವಾರು ಸೋಜಿಗದ, ಚೋದ್ಯದ ಸಂಗತಿಗಳು ಹೊರ ಬೀಳುವ ಸೂಚನೆ ಇದೆ ಎಂದು ಪೊಲೀಸು ಹೇಳುತ್ತಾರೆ. 

Advertisement

Udayavani is now on Telegram. Click here to join our channel and stay updated with the latest news.

Next