Advertisement

ದೊಡ್ಡಗೌಡರ ಭದ್ರಕೋಟೆ ವಶಕ್ಕಾಗಿ ಕೈ-ಕಮಲ ಪ್ರಯತ್ನ

01:08 AM May 02, 2023 | Team Udayavani |

ರಾಮನಗರ: ರಾಜ್ಯಕ್ಕೆ ಮೂರು ಮುಖ್ಯಮಂತ್ರಿಗಳನ್ನು ನೀಡಿರುವ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಕುಟುಂಬದ ಕರ್ಮಭೂಮಿಯ ಅಧಿ ಪತ್ಯಕ್ಕಾಗಿ ಕೈ ಮತ್ತು ಕಮಲ ಸೆಣಸಾಟಕ್ಕಿಳಿದಿವೆ. ಇವರಿಬ್ಬರ ಹಣಾಹಣಿಯ ಮಧ್ಯೆ ಗೌಡರ ಕುಟುಂಬದ ಮೂರನೇ ತಲೆಮಾರನ್ನು ಅಖಾಡಕ್ಕಿಳಿಸುವ ಮೂಲಕ ತನ್ನ ಭದ್ರಕೋಟೆಯನ್ನು ಉಳಿಸಿಕೊಳ್ಳಲು ಜೆಡಿಎಸ್‌ ಸಜ್ಜಾಗಿದೆ.

Advertisement

2008ರ ಕ್ಷೇತ್ರ ಪುನರ್‌ವಿಂಗಡಣೆಯ ಬಳಿಕ ರಾಮನಗರ ಪಟ್ಟಣ, ಕೈಲಾಂಚ ಹೋಬಳಿ ಮತ್ತು ಕನಕಪುರ ತಾಲೂಕಿನ ಹಾರೋಹಳ್ಳಿ ಮತ್ತು ಮರಳವಾಡಿ ಹೋಬಳಿಗಳನ್ನು ಒಳಗೊಂಡಂತೆ ರಚನೆ ಯಾಗಿರುವ ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ 1,06, 512 ಪುರುಷರು, 1,09,530 ಮಹಿಳೆಯರು, 19 ಮಂದಿ ಇತರರು ಸಹಿತ 2,16,061 ಮಂದಿ ಒಟ್ಟು ಮತದಾರರನ್ನು ಹೊಂದಿದೆ.

ಭದ್ರಕೋಟೆ ಉಳಿಸಿಕೊಳ್ಳಲು ನಿಖೀಲ್‌ ಕಸರತ್ತು: 1994ರಲ್ಲಿ ಎಚ್‌.ಡಿ.ದೇವೇಗೌಡರು ಇಲ್ಲಿಂದ ಗೆದ್ದು ಮುಖ್ಯಮಂತ್ರಿ, ಬಳಿಕ ಪ್ರಧಾನಮಂತ್ರಿ ಹುದ್ದೆಯನ್ನು ಅಲಂಕರಿಸಿದರು. ಗೌಡರ ರಾಜೀನಾಮೆ ಹಿನ್ನೆಲೆಯಲ್ಲಿ ನಡೆದ ಉಪಚುನಾವಣೆಯಲ್ಲಿ ಜನತಾದಳದ ಅಭ್ಯರ್ಥಿ ನಟ ಅಂಬರೀಶ್‌ ಸೋತಿದ್ದರು. ಬಳಿಕ 2004ರಲ್ಲಿ ಕುಮಾರಸ್ವಾಮಿ ಈ ಕ್ಷೇತ್ರದಿಂದ ಗೆದ್ದು ಕುಟುಂಬದ ಭದ್ರಕೋಟೆ ಉಳಿಸಿಕೊಳ್ಳುವಲ್ಲಿ ಸಫಲಗೊಂಡರು. 2018ರಲ್ಲಿ ರಾಮನಗರ- ಚನ್ನ ಪಟ್ಟಣ ಎರಡೂ ಕಡೆ ಸ್ಪರ್ಧೆ ಮಾಡಿದ್ದ ಕುಮಾರ ಸ್ವಾಮಿ ರಾಮನಗರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ತಮ್ಮ ಪತ್ನಿಯನ್ನು ಗೆಲ್ಲಿಸಿಕೊಳ್ಳುವಲ್ಲಿ ಸಫಲ ಗೊಂಡಿದ್ದರು. ಇದೀಗ ಅನಿತಾ ಕುಮಾರಸ್ವಾಮಿ ತಮ್ಮ ಪುತ್ರನ ರಾಜಕೀಯ ಭವಿಷ್ಯಕ್ಕಾಗಿ ಕ್ಷೇತ್ರವನ್ನು ತ್ಯಾಗ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ವಿಧಾ ನಸಭಾ ಚುನಾವಣೆಗೆ ಸ್ಪರ್ಧೆಮಾಡಿರುವ ನಿಖೀಲ್‌ಕುಮಾರ ಸ್ವಾಮಿ ಕಳೆದ ಬಾರಿ ಸಾರಾಸಗಟಾಗಿ ಪಕ್ಷದ ಕೈಜಾರಿದ್ದ ಅಲ್ಪಸಂಖ್ಯಾಕ ಮತಗಳನ್ನು ತಮ್ಮತ್ತ ಸೆಳೆಯಲು ಕಸರತ್ತು ನಡೆಸುತ್ತಿದ್ದಾರೆ.

ಇಕ್ಬಾಲ್‌ಗೆ ಸಿಕ್ಕೀತೆ ಗೆಲುವು: 2013ರ ಚುನಾವಣೆಯಲ್ಲಿ ಮಾಜಿ ಸಿಎಂ ಎಚ್‌. ಡಿ.ಕುಮಾರಸ್ವಾಮಿಗೆ ಪ್ರಬಲ ಪೈಪೋಟಿ ನೀಡಿದ್ದ ಜಿ.ಪಂ. ಮಾಜಿ ಅಧ್ಯಕ್ಷ ಇಕ್ಬಾಲ್‌ ಹುಸೇನ್‌ ಮತ ಏಣಿಕೆಯ ವೇಳೆ ಕೆಲ ಸುತ್ತುಗಳಲ್ಲಿ ಮುನ್ನಡೆಯನ್ನು ಕಾಯ್ದುಕೊಂಡು ಅಚ್ಚರಿ ಮೂಡಿಸಿದ್ದರು. ಆದರೆ ಕೊನೆಗೆ ಕುಮಾರಸ್ವಾಮಿ ಗೆಲುವಿನ ನಗೆ ಬೀರಿದರು. ಈ ಬಾರಿ ಕುಮಾರಸ್ವಾಮಿ ಮತ್ತು ಅನಿತಾ ಕುಮಾರಸ್ವಾಮಿ ಅವರ ವಿರುದ್ಧ ಆಡಳಿತ ಅಲೆ ಮೂಡುವಂತೆ ನೋಡಿಕೊಂಡು ಈ ಬಾರಿ ಗೆಲುವಿನದಡ ಸೇರಲು ಪ್ರಯತ್ನಿಸುತ್ತಿದ್ದಾರೆ.

ನೆಲೆ ಕಂಡೀತೆ ಕಮಲ?: ಗೌಡರ ಕೋಟೆಯಲ್ಲಿ ಕಮಲ ಅರಳಿಸುವ ತವಕ ದೊಂದಿಗೆ ಬಿಜೆಪಿ ಯುವ ಅಭ್ಯರ್ಥಿ ಗೌತಮ್‌ಗೌಡ ಅವರನ್ನು ಕಣಕ್ಕಿಳಿಸಿದೆ. ಮಾಜಿ ಎಂಎಲ್‌ಸಿ ಮರಿಲಿಂಗೇಗೌಡರ ಪುತ್ರನಾಗಿರುವ ಗೌತಮ್‌ಗೌಡ ಕಳೆದ ವರ್ಷ ಬಿಜೆಪಿಗೆ ಬಂದು ಕೆಎಸ್‌ಐಸಿ ಅಧ್ಯಕ್ಷಗಾದಿಯನ್ನು ಪಡೆದುಕೊಂಡು ಇದೀಗ ಜೆಡಿಎಸ್‌ ಕೋಟೆಯಲ್ಲಿ ರಾಜಕೀಯ ಭವಿಷ್ಯ ಹರಸುತ್ತಿದ್ದಾರೆ.

Advertisement

-ಸು.ನಾ.ನಂದಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next