ಬೆಂಗಳೂರು: ದೇಶದ ಜನರು ನರೇಂದ್ರ ಮೋದಿಯವರಿಗೆ ಎರಡನೇ ಅವಧಿಗೆ ಅವಕಾಶ ಕೊಟ್ಟಿದ್ದಾರೆ. ಮೊದಲನೇ ಅವಧಿಯಲ್ಲಿ ಅವರ ಆಡಳಿತ ಸಂಪೂರ್ಣ ವೈಫಲ್ಯ ಕಂಡಿತ್ತು. ಮೊದಲ ಐದು ವರ್ಷ ಜನತೆಗೆ ನೀಡಿದ್ದ ಪ್ರಮುಖ ಭರವಸೆಗಳನ್ನು ಈಡೇರಿಸಿರಲಿಲ್ಲ. ಸುಳ್ಳುಗಳನ್ನೇ ಹೇಳಿದ್ದರು. ಈಗ ಎರಡನೇ ಅವಧಿಯಲ್ಲಿ ಅವರ ಸುಳ್ಳುಗಳೇ ಮುಂದುವರೆದಿವೆ. ಇದೇ ಅವರ ದೊಡ್ಡ ಸಾಧನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ದೇಶದ ಜನತೆಗೆ ಒಂದು ಪತ್ರ ಬರೆದಿದ್ದಾರೆ. 370 ನೇ ವಿಧಿ ರದ್ದು, ಅಯೋಧ್ಯೆ ವಿಷಯದಲ್ಲಿ ಜಯ ಸಿಕ್ಕಿದೆ ಎನ್ನುವುದು, ತ್ರಿವಳಿ ತಲಾಖ್ ರದ್ದು ದೇಶದ ರೈತರಿಗೆ ವರ್ಷಕ್ಕೆ ಆರು ಸಾವಿರ ರೂ. ಕೊಟ್ಟಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ರಾಮ ಮಂದಿರ ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟಿದೆ. ಅದರಲ್ಲಿ ಇವರದೇನು ಸಾಧನೆ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಕೇಂದ್ರ ಸರ್ಕಾರ ನಿರುದ್ಯೋಗದ ಬಗ್ಗೆ ಮಾತನಾಡುವುದಿಲ್ಲ. ಆರ್ಥಿಕ ಹಿಂಜರಿತದ ಬಗ್ಗೆ ಮಾತಾಡುವುದಿಲ್ಲ. ದೇಶದ ಜಿಡಿಪಿ ಕುಸಿತದ ಬಗ್ಗೆ ಚರ್ಚೆ ಮಾಡುವುದಿಲ್ಲ. ದೇಶದ ಜಿಡಿಪಿ ಕಳೆದ 11 ವರ್ಷದಲ್ಲಿಯೇ ಅತಿ ಕೆಳಮಟ್ಟಕ್ಕೆ ಇಳಿದಿದೆ. ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾ ದೇಶಗಳ ಜಿಡಿಪಿ ನಮಗಿಂತ ಹೆಚ್ಚಿದೆ. ಕಳೆದ ವರ್ಷ 3.1% ಕ್ಕೆ ಇಳಿದಿದೆ. ಈ ವರ್ಷ ಜಿಡಿಪಿ ನಕಾರಾತ್ಮಕ ಅಭಿವೃದ್ದಿಯಾಗುತ್ತದೆ. ಐವತ್ತು ವರ್ಷದಲ್ಲಿಯೇ ಅತಿ ಹೆಚ್ಚು ನಿರುದ್ಯೋಗ ಹೆಚ್ಚಾಗಿದೆ. ಕಳೆದ ಆರು ವರ್ಷದಲ್ಲಿ ಕೇಂದ್ರ ಸರ್ಕಾರ ಎಷ್ಟು ಜನರಿಗೆ ಉದ್ಯೋಗ ಕೊಟ್ಟಿದೆ, ಕೃಷಿ ಕ್ಷೇತ್ರದಲ್ಲಿ ಏನಾಗಿದೆ. ಕೈಗಾರಿಕೆಯಲ್ಲಿ ಎಷ್ಟು ಬಂಡವಾಳ ಹೂಡಿಕೆಯಾಗಿದೆ ಎಲ್ಲವನ್ನು ಅಂಕಿ ಸಮೇತ ಬಹಿರಂಗ ಪಡೆಸಬೇಕು. ಒಬ್ಬ ವ್ಯಕ್ತಿ ಭಾವನಾತ್ಮಕ ವಿಷಯ ಮುಂದಿಟ್ಟು ಬೆಂಕಿ ಹಚ್ಚಿ ನಾಯಕತ್ವ ಅಳೆಯುವುದಲ್ಲಾ ಎಂದು ಆರೋಪಿಸಿದರು.
ಮೋದಿಯವರು ಪತ್ರ ಬರೆಯುವ ಬದಲು ಮಾಧ್ಯಮದವರ ಮುಂದೆ ಮಾತನಾಡಬಹುದಿತ್ತು. ಮಾಧ್ಯಮಗಳನ್ನು ಅಸ್ಪೃಶ್ಯ ರನ್ನಾಗಿ ಮಾಡಿದ್ದಾರೆ. ಮಾಧ್ಯಮದವರು ಪ್ರಶ್ನೆ ಕೇಳುತ್ತಾರೆ ಎಂದು ದೂರ ಇಟ್ಟಿದ್ದಾರೆ ಎಂದು ಆರೋಪಿಸಿದರು.
ದೇಶ ಆರ್ಥಿಕವಾಗಿ ದಿವಾಳಿ ಆಗುತ್ತಿದೆ. ಯುವಕರು ಭವಿಷ್ಯ ರೂಪಿಸಿಕೊಳ್ಳಲಾಗದೆ ಬೀದಿ ಪಾಲಾಗುತ್ತಿದ್ದಾರೆ. ಕೃಷಿಕರು ಕೇಂದ್ರದ ನೀತಿಗಳಿಂದ ಖುಷಿಯಾಗಿಲ್ಲ. ಎಲ್ಲಾ ಬೆಳೆಗಳಿಗೆ ಬೆಂಬಲ ಬೆಲೆ ನೀಡಿಲ್ಲ. ಬಂಡವಾಳ ಶಾಹಿಗಳಿಗೆ ಅನುಕೂಲ ಮಾಡಿಕೊಡಲು ಎಪಿಎಂಸಿ ಕಾಯ್ದೆ ತಿದ್ದುಪಡಿ ತಂದಿದ್ದಾರೆ. ರೈತರು ವಿರೋಧ ಮಾಡಿದರೂ ತಿದ್ದುಪಡಿ ಮಾಡಿದ್ದಾರೆ. ಈ ಕಾಯ್ದೆ ತಿದ್ದುಪಡಿ ಮಾಡಲು ಕೇಂದ್ರಕ್ಕೆ ಅಧಿಕಾರ ಎಲ್ಲಿದೆ. ಕೃಷಿ ಮಾರುಕಟ್ಟೆ ರಾಜ್ಯ ಪಟ್ಟಿಯಲ್ಲಿ ಬರುತ್ತದೆ. ಕೇಂದ್ರ ಏಕೆ ಹಸ್ತಕ್ಷೇಪ ಮಾಡುತ್ತಿದೆ. ಇದು ಸಂವಿಧಾನ ಹಾಗೂ ಒಕ್ಕೂಟ ವ್ಯವಸ್ಥೆ ವಿರೋಧಿಯಾಗಿದೆ. ಕಾರ್ಮಿಕರ ಕಾನೂನಿಗೆ ತಿದ್ದುಪಡಿ ತಂದು ಅವರ ಹಕ್ಕು ಕಿತ್ತುಕೊಳ್ಳುತ್ತಿದ್ದಾರೆ. ಕಾರ್ಮಿಕ ಕಾಯ್ದೆ ತಿದ್ದುಪಡಿ ಮಾಡಲು ರಾಜ್ಯಗಳ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದರು.
ಕೋವಿಡ್ ಪರಿಹಾರಕ್ಕೆ 20 ಲಕ್ಷ ಕೋಟಿ ನೀಡಿದ್ದೇವೆ ಎನ್ನುವುದು ದೊಡ್ಡ ಜೋಕ್. ಕೇಂದ್ರ ಸರ್ಕಾರ ಜಿಡಿಪಿಯ ಶೇ 1 ರಷ್ಟು ಮಾತ್ರ ಪರಿಹಾರ ಘೋಷಣೆ ಮಾಡಿದ್ದು, ಇವರು ಜನರ ಅಕೌಂಟ್ ಗಳಿಗೆ ದುಡ್ಡು ಹಾಕುವುದನ್ನು ಬಿಟ್ಟು ಲೆಕ್ಕ ತೋರಿಸಿದರೆ ಆರ್ಥಿಕತೆ ಹೇಗೆ ಅಭಿವೃದ್ಧಿ ಆಗಲು ಸಾಧ್ಯ. ಕೋವಿಡ್ ನಿರೀಕ್ಷಿತ ತಪಾಸಣೆ ಮಾಡದೇ ಕೇಸ್ ಕಡಿಮೆ ಇದೆ ಅಂತ ಬಿರುದು ಪಡೆದುಕೊಳ್ಳುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿದೆ ಎಂದರು.
ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರುವ ಅನುದಾನ ಬಂದಿಲ್ಲ. ಜಿಎಸ್ ಟಿ ಪಾಲು ನೀಡುತ್ತಿಲ್ಲ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯಕ್ಕೆ ಬರುವ ಅನುದಾನವನ್ನೇ ನೀಡಲು ನಿರಾಕರಿಸುತ್ತಾರೆ. ಪ್ರವಾಹಕ್ಕೆ ಪರಿಹಾರ ನೀಡಲಿಲ್ಲ. ರಾಜ್ಯದ ಎಂಪಿ ಗಳು, ಮುಖ್ಯಮಂತ್ರಿಗಳು ಪ್ರಶ್ನೆ ಮಾಡುತ್ತಿಲ್ಲ. ಒಂದು ವರ್ಷದಲ್ಲಿ ಕೇಂದ್ರ ಸರ್ಕಾರ ದೇಶವನ್ನು ದಿವಾಳಿ ಹಂತಕ್ಕೆ ತಂದು ನಿಲ್ಲಿಸಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು.
ರಾಜ್ಯ ಬಿಜೆಪಿಯ ಹೊಸ ಬೆಳವಣಿಗೆಯ ಬಗ್ಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಜೊತೆಗೆ ಮಹೇಶ್ ಕುಮಠಳ್ಳಿ ಬಿಟ್ರೆ ಬೇರೆ ಯಾರೂ ಇಲ್ಲ. ಉಳಿದವರು ಹಣಕ್ಕಾಗಿ ಹೋಗಿದ್ದಾರೆ. ಈ ಸರ್ಕಾರ ಬಿಜೆಪಿಯವರ ಕಚ್ಚಾಟದಿಂದಲೇ ಬಿದ್ದು ಹೋದರೆ ನಮ್ಮದೇನು ತಕರಾರು ಇಲ್ಲಾ. ಇಂಥ ಕೆಟ್ಟ ಸರ್ಕಾರವನ್ನು ಇತಿಹಾಸದಲ್ಲಿ ನೋಡಿಲ್ಲ. ಇಲ್ಲಿ ಸೂಪರ್ ಸಿಎಂ ಬೇರೆ ಇದ್ದಾರೆ. ಅತ್ಯಂತ ಭ್ರಷ್ಟ ಸರ್ಕಾರ. ರಾಜ್ಯದ ದೃಷ್ಟಿಯಿಂದ ಈ ಸರ್ಕಾರ ಹೋಗಬೇಕು ಎಂದ ಅವರು ಉಮೇಶ್ ಕತ್ತಿ ನನ್ನ ಸ್ನೇಹಿತ. ಅವನು ಜನತಾ ಪರಿವಾರದಲ್ಲಿ ಇದ್ದ. ಅವನು ನನ್ನ ಭೇಟಿ ಮಾಡುವ ಬಗ್ಗೆ ಗೊತ್ತಿಲ್ಲ. ನಾನು ಬಿಜೆಪಿಯ ಗೊಂದಲದಲ್ಲಿ ತಲೆ ಹಾಕುವುದಿಲ್ಲ ಎಂದರು.