Advertisement
“ಯಾರು ತಾಯಿ ನೀನು? ನನಗಾಗಿ ಕಾಯುತ್ತಿದ್ದೆಯೇನು? ನನ್ನ ಹೆಸರನ್ನೂ ಹೇಳುತ್ತಿರುವೆಯಲ್ಲ ನಾನು ಯಾರೆಂದು ನಿನಗೆ ಅದು ಹೇಗೆ ತಿಳಿಯಿತು?’ ಎಂದೆ.
Related Articles
Advertisement
“ಅರೆ! ನಾನು ಅಯೋಧ್ಯೆಯಲ್ಲಿ ಹುಟ್ಟುವ ಮೊದಲೇ ಮತಂಗ ಮುನಿಗಳಿಂದ ನಿನಗೆ ಶ್ರೀರಾಮತಾರಕ ಮಂತ್ರದ ಉಪದೇಶವಾಗಿತ್ತು!’ ಎನ್ನಿಸಿತು.
ಶಬರಿ ಮುಂದುವರೆಸಿದಳು: “ನಾನಾಗ “ಬಂದದ್ದು ನನ್ನ ದೇವನೇ ಎಂದು ತಿಳಿಯುವ ಬಗೆ ಎಂತು? ಯಾವ ರೂಪದಲ್ಲಿ ಬರುತ್ತಾನೆ ಅವನು? ನನ್ನಪ್ಪ ಶಬರನ ರೂಪದಲ್ಲಿ ದರ್ಶನಕೊಡಬಲ್ಲನೇ ಆ ದೇವ?’ ಎಂಬ ನನ್ನ ಪ್ರಶ್ನೆಯನ್ನು ಗುರುಗಳ ಮುಂದಿಟ್ಟೆ. “ಜಟಾವಲ್ಕಲಧಾರಿಯಾಗಿ, ಬಿಲ್ಲು-ಬಾಣವನ್ನು ಹಿಡಿದು, ನೀನಿಚ್ಚಿಸಿದಂತೆಯೇ ಕಾಣಿಸಿಕೊಳ್ಳುತ್ತಾನೆ ನಿನ್ನ ದೇವ. ಇಲ್ಲಿನ ನನ್ನ ಕರ್ತವ್ಯ ಮುಗಿಯಿತು. ನಾನಿನ್ನು ಬ್ರಹ್ಮಲೋಕವನ್ನು ಸೇರಿಕೊಳ್ಳುತ್ತೇನೆ’ ಎಂದ ಗುರುಗಳು ಹೊರಟೇಹೋದರು’ ಎಂದಳು ಶಬರಿ.
ನನಗೆ ಮತ್ತಷ್ಟು ಆಶ್ಚರ್ಯವಾಗಿತ್ತು. ನಾನು ಯಾವ ವಸ್ತ್ರ, ವೇಷ-ಭೂಷಣಗಳಿಂದ ಇಲ್ಲಿಗೆ ಬರುವೆನೆಂಬುದೂ ಮತಂಗ ಮುನಿಗಳಿಗೆ ತಿಳಿದಿತ್ತು ಎಂದಾಯಿತು! ಹಾಗಾಗಿ ನನ್ನ ವನವಾಸ, ಜಾನಕಿಯ ಅಪಹರಣ, ನನ್ನ ಈ ಜಾನಕಿಯ ಹುಡುಕಾಟ ಎಲ್ಲವೂ ಪೂರ್ವನಿಯೋಜಿತವೆಂದು ಮನದಟ್ಟಾಯಿತು.
ಶಬರಿ ಮುಂದುವರೆಸಿದಳು, “ಅಂದಿನಿಂದ ನಾನು ಮತಂಗ ಮಹರ್ಷಿಗಳ ಆಶ್ರಮದಲ್ಲಿಯೇ ಉಳಿದುಬಿಟ್ಟೆ. ಪ್ರತಿದಿನವೂ “ನೀನು ಇಂದೇ ಬರುತ್ತೀಯ’ ಎಂದು ಗ್ರಹಿಸಿ ಆಶ್ರಮವನ್ನು ಸ್ವಚ್ಚಗೊಳಿಸುತ್ತಿದ್ದೆ. ಶುದ್ಧ ಜಲವನ್ನು ಸಂಗ್ರಹಿಸಿ ತರುತ್ತಿದ್ದೆ. ಮಾಗಿದ ಹಣ್ಣುಗಳನ್ನು ಸಂಗ್ರಹಿಸಿ ಇಡುತ್ತಿದ್ದೆ. ಇಂದಷ್ಟೇ ಬಿರಿದ ಹೂಗಳನ್ನು ಕೊಯ್ದು ತಂದು, ಕಟ್ಟಿ, ಮಾಲೆ ಮಾಡಿಟ್ಟು ನಿನ್ನ ಬರುವಿಕೆಗಾಗಿ ಕಾದು ನಿಲ್ಲುತ್ತಿದ್ದೆ. ಗುರುಗಳ ಮಾತಿನಲ್ಲಿ ಎಳ್ಳಿನಿತೂ ಅನುಮಾನವಿರಲಿಲ್ಲ. ಗಿರಿಗಳನ್ನು ಹತ್ತಿ, ದೂರದವರೆಗೆ ದೃಷ್ಟಿ ಹಾಯಿಸುತ್ತಿದ್ದೆ. ನನ್ನ ಭಕ್ತಿಯಲ್ಲಿ ಕಡಿಮೆಯಾಯಿತೋ? ನಾನಿನ್ನೂ ಭಕ್ತಿಯಲ್ಲಿ ಪಕ್ವಗೊಳ್ಳಬೇಕೇನೋ? ಅದಕ್ಕೇ ರಾಮ ಇನ್ನೂ ಬರಲಿಲ್ಲ’ ಎನ್ನಿಸುತ್ತಿತ್ತು. ನನ್ನ ಮೈ ಶುದ್ಧವಾಗಿಲ್ಲವೇನೋ ಎಂಬ ಭಾವ ಬಂದಾಗ ತೊರೆಯಲ್ಲಿ ಇಳಿದು, ಮಿಂದು, ಶುದ್ಧಳಾಗಿ, ತಾರಕ ಮಂತ್ರವನ್ನು ಜಪಿಸುತ್ತಾ… ನಿನ್ನ ನಿರೀಕ್ಷೆ ಮಾಡುತ್ತಿದ್ದೆ. ದಿನವೂ ಇದೇ ರೀತಿ ಕಳೆಯುತ್ತಿತ್ತು. ಅದೆಷ್ಟು ವರ್ಷಗಳು ಇದೇ ರೀತಿ ಕಳೆದು ಹೋದವೋ? ಲೆಕ್ಕವಿಟ್ಟವರಾರು? ನಾನು ಈಗ ಹಣ್ಣುಹಣ್ಣು ಮುದುಕಿ! ಕೊನೆಗೂ ನಿನ್ನ ದರ್ಶನವಾಯಿತಲ್ಲ ಅಷ್ಟು ಸಾಕು ಧನ್ಯಳಾದೆ’
“ಗುರುವಿನ ಮಾತಿನಲ್ಲಿ ನಂಬಿಕೆಯಿರಿಸಿ, ದೀರ್ಘಕಾಲದವರೆಗಿನ ನಿನ್ನ ಈ ಕಾಯುವಿಕೆ ಯಾವ ಉಗ್ರತಪಸ್ಸಿಗೆ ಕಡಿಮೆ?
ನಿನ್ನ ನಿಸ್ವಾರ್ಥ ಭಕ್ತಿಗೆ ನಾನೇನು ಕೊಡಬಲ್ಲೇ ತಾಯಿ?
ನಿನಗೇನು ಬೇಕು?’ ಎಂದೆ.
“ನಿನ್ನ ಹೊರತಾಗಿ ಈ ಶಬರಿಗೆ ಬೇರೆ
ಯಾವ ನಿರೀಕ್ಷೆಯೂ ಇಲ್ಲ ರಾಮಾ. ಮನಸ್ಸಷ್ಟೇ ಅಲ್ಲ… ರೋಮ ರೋಮಗಳು ರಾಮ…
ರಾಮ… ಎನ್ನುತ್ತಿವೆ. ನಿನ್ನ ದರ್ಶನಕ್ಕಾಗಿ ಕಾದಿದ್ದೆ… ಅದೂ ಇಂದು ನೆರವೇರಿತು. ಅಂದು ನನ್ನ ಗುರುಗಳು ಬ್ರಹ್ಮಲೋಕಕ್ಕೆ ಹೋಗುತ್ತೇನೆಂದು ಹೊರಟುಹೋಗಿದ್ದರು. ನನ್ನನ್ನೂ ಅಲ್ಲಿಗೇ ಕಳಿಸಿಬಿಡುವೆಯಾ?’ ಎಂದಳು ಶಬರಿ.
“ಶಬರಿ, ಯಾವ ಅಪೇಕ್ಷೆಯೂ ಇಲ್ಲದೆ, ಇಷ್ಟೊಂದು ವರ್ಷಗಳ ಕಾಲ ಕೇವಲ ನನ್ನ ಬರುವಿಕೆಗಾಗಿ ಕಾದೆಯಲ್ಲ. ನೀನು ಧನ್ಯೆ… ನಿನ್ನನ್ನು ಕಂಡು ನಾನೂ ಧನ್ಯನಾದೆ ತಾಯಿ. ನಿನ್ನಿಚ್ಚೆ ಸಫಲವಾಗಲಿ’ ಎಂದೆ.
“ಕೈ ಮುಗಿದು ನನಗೆ ಮೂರು ಪ್ರದಕ್ಷಿಣೆ ಬಂದ ಶಬರಿ, ನನ್ನ ಪಾದಗಳಲ್ಲಿ ಕುಸಿದೇ ಬಿಟ್ಟಳು ಆಕೆಯ ಆತ್ಮ ಬ್ರಹ್ಮಲೋಕದತ್ತ ಪಯಣ ಬೆಳಸಿತ್ತು. ಶಬರಿಯಂತಹ ಅಪರೂಪದ ಭಕ್ತೆಯ ದರ್ಶನದಿಂದ ಮನಸ್ಸು ತುಂಬಿಹೋಯಿತು. ಈ ಮೂಲಕ ನನ್ನ ವನವಾಸಕ್ಕೆ ಮತ್ತೂಂದು ಸಾರ್ಥಕ್ಯ ಬಂದೊದಗಿತು!’
-ಸುರೇಖಾ ಭೀಮಗುಳಿ