Advertisement

Ram Mandir; ಒಂದೇ ರಾತ್ರಿಯಲ್ಲಿ ಸಿದ್ಧವಾಯ್ತು ರಾಮಲಲ್ಲಾ ಗುಡಿ!

10:30 PM Jan 07, 2024 | Team Udayavani |

 ಅರವಿಂದ ದೇಶಪಾಂಡೆ ಬೆಳಗಾವಿ ಜಿಲ್ಲೆ

Advertisement

ಮೂಲತಃ ಬೆಳಗಾವಿ ಜಿಲ್ಲೆಯ ಅಥಣಿಯವರಾದ ಅರವಿಂದ ಬಾಪುರಾವ್‌ ದೇಶಪಾಂಡೆ ಚಿಕ್ಕವಯಸ್ಸಿನಲ್ಲೇ ಆರ್‌ಎಸ್‌ಎಸ್‌ ಕಡೆ ಒಲವು ತೋರಿದವರು. 20 ವರ್ಷಗಳ ಕಾಲ ಆರ್‌ಎಸ್‌ಎಸ್‌ ಪ್ರಾಂತ ಕಾರ್ಯವಾಹರಾಗಿ ಸೇವೆ ಸಲ್ಲಿಸಿದ ಅವರು 8 ವರ್ಷಗಳ ಕಾಲ ಸರಸಂಘ ಸಂಚಾಲಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಅಲ್ಲದೇ ಉತ್ತರ ಕರ್ನಾಟಕ ಪ್ರಾಂತ ಕಾರ್ಯ ಕಾರಿಣಿ ಸದಸ್ಯರಾಗಿ ಸಕ್ರಿಯವಾಗಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲೂ ಗಣನೀಯ ಸೇವೆ ಸಲ್ಲಿಸುತ್ತಿದ್ದಾರೆ.

ಬೆಳಗಾವಿಯಿಂದ ಹೋಗಿದ್ದ ನಮ್ಮ 67 ಜನರ ತಂಡ 1992ರ ಡಿಸೆಂಬರ್‌ 6ರಂದು ಬೆಳಿಗ್ಗೆ ಸರಯೂ ನದಿಯಿಂದ ರಾಮ ಜನ್ಮಭೂಮಿ ಸ್ಥಳಕ್ಕೆ ಉಸುಕು (ಮರಳು) ತಂದು ಹಾಕುವ ಕಾರ್ಯವಹಿಸಿಕೊಂಡೆವು. ಅತ್ಯಂತ ಶ್ರದ್ಧೆ ಮತ್ತು ಭಕ್ತಿಯಿಂದ ಆ ಕೆಲಸವನ್ನು ಮಾಡುತ್ತಿದ್ದೆವು. ಆಗ ಎಲ್ಲಿಂದ ಜನ ಸಮೂಹ ಬಂತೋ ಗೊತ್ತಿಲ್ಲ. ಒಮ್ಮಿಂದೊಮ್ಮೆಗೆ ಸಾವಿರಾರು ಮಂದಿ ಪ್ರವಾಹದಂತೆ ನುಗ್ಗಿಬಂದರು. ನೋಡು ನೋಡುವಷ್ಟರಲ್ಲಿ ರಾಮಜನ್ಮಭೂಮಿಯ ಚಿತ್ರಣವೇ ಬದಲಾಯಿತು. ಆಗ ಎಲ್ಲ ಕಡೆ ಮೊಳಗಿದ್ದು ಒಂದೇ ಘೋಷಣೆ… ಅದು “ಜೈ ಶ್ರೀರಾಮ್‌, ಜೈ ಶ್ರೀ ರಾಮ್‌’. ನಾವು ನಿಂತ ಜಾಗದಿಂದ ಕದಲದಂಥ ಸ್ಥಿತಿ ಇತ್ತು. ಆದರೆ ನಾವು ನಮ್ಮ ಸಂಕಲ್ಪ ಬಿಡಲಿಲ್ಲ. ಸರಯೂ ನದಿಯಿಂದ ಉಸುಕು ತರುತ್ತಲೇ ಇದ್ದೆವು. ರಾತ್ರಿ ಹಗಲೆನ್ನದೆ ನಿರಂತರ ಕರಸೇವೆ ನಡೆಯಿತು. ಮಧ್ಯರಾತ್ರಿಯೇ 2 ಅಡಿಗಳಷ್ಟು ಗೋಡೆ ಕಟ್ಟಲಾಯಿತು. ಮರುದಿನ ಬೆಳಿಗ್ಗೆ ರಾಮಲಲ್ಲಾ ಮಂದಿರ ಸಿದ್ಧಗೊಂಡಿತು!
ಈ ಕ್ಷಣಗಳನ್ನು ನಾವು ಜೀವನ ಪರ್ಯಂತ ಮರೆಯುವಂತಿಲ್ಲ.

ಬೆಳಗಾವಿಯಿಂದ ಬಂದಿದ್ದ ನಮ್ಮ ತಂಡದ ಸದಸ್ಯರಿಗೆ ಸರಯೂ ನದಿಯ ದಡದಲ್ಲಿರುವ ರಾಮಜನ್ಮಭೂಮಿಯಲ್ಲಿ ಡಿ.6ಕ್ಕೆ ಮುನ್ನ ಹತ್ತು ದಿನಗಳ ಕಾಲ ಕರಸೇವೆ ಸಲ್ಲಿಸುವ ಹೊಣೆ ಹೊರಿಸಿದ್ದರು. ಇಟ್ಟಿಗೆ, ಮಣ್ಣು ಹೊತ್ತು ತಂದು ಜೋಡಿಸುವ ಕೆಲಸ ನಡೆದಿತ್ತು. ನಮ್ಮ ತಂಡಕ್ಕೆ ಪ್ರತಿದಿನ ಒಂದೊಂದು ಕೆಲಸ ವಹಿಸಲಾಗಿತ್ತು.

ಅಯೋಧ್ಯೆಯಲ್ಲಿ ಇದ್ದಷ್ಟು ದಿನಗಳ ಕಾಲ ಪ್ರತಿನಿತ್ಯ ಪೇಜಾವರಮಠದ ಶ್ರೀಗಳು, ಎಲ್‌. ಕೆ.ಆಡ್ವಾಣಿ, ಉಮಾಭಾರತಿ, ಅಶೋಕ ಸಿಂಘಾಲ್‌, ಹೊ.ವೆ.ಶೇಷಾದ್ರಿ ಸೇರಿದಂತೆ ದೇಶದ ಮಹಾನ್‌ ನಾಯಕರ ದರ್ಶನ, ಸಾಂಗತ್ಯ, ಅವರ ಜತೆ ಬೆರೆಯುವ ಸದಾವಕಾಶ ಲಭಿಸಿತ್ತು. ದಿನವೂ ಪಂಡಿತೋತ್ತಮರ ಸಂದೇಶ, ನಾಯಕರ ಭಾಷಣ ಕೇಳುವ ಅವಕಾಶ ನಮ್ಮದಾಗಿತ್ತು.

Advertisement

ಅಯೋಧ್ಯೆಯ ಆ ದಿನಗಳನ್ನು ಮರೆಯಲು ಸಾಧ್ಯವಿಲ್ಲ. ಆಗ ಅಯೋಧ್ಯೆಯಲ್ಲೋ ವಿಪರೀತ ಚಳಿ. ನಮ್ಮಲ್ಲಿಯ ಚಳಿಗೂ ಅಲ್ಲಿನ ಚಳಿಗೂ ಅಜಗಜಾಂತರ ವ್ಯತ್ಯಾಸ. ಒಂದು ಕ್ಷಣ ಇದನ್ನು ತಡೆದುಕೊಳ್ಳಲು ಆಗುವುದೇ ಎನಿಸಿದ್ದು ಉಂಟು. ರಾಮಜನ್ಮಭೂಮಿಗೆ ಬಂದ ಎಲ್ಲ ಕರಸೇವಕರಿಗೂ ಸುತ್ತಲಿನ ಪ್ರದೇಶಗಳಲ್ಲಿ ಉಳಿದುಕೊಳ್ಳಲು ಟೆಂಟ್‌ ಹಾಕಿಕೊಟ್ಟಿದ್ದರು. ಒಂದೊಂದು ಟೆಂಟ್‌ದಲ್ಲಿ ನೂರಾರು ಜನ. ಒಬ್ಬರಿಗೊಬ್ಬರೂ ಪರಿಚಯವೇ ಇಲ್ಲ. ಚಳಿಗೆ ಮೈಯೊಡ್ಡಿಕೊಂಡಿದ್ದ ನಮಗೆಲ್ಲರಿಗೆ ಆಗ ಕಾಣಿಸಿದ್ದು ಒಂದೇ, ಅದು ಕರಸೇವೆ. ಮನಸ್ಸಿನಲ್ಲಿ ಗಟ್ಟಿ ನಿರ್ಧಾರ ಮಾಡಿದ್ದರಿಂದ ಚಳಿ, ಉಳಿದುಕೊಳ್ಳುವ ಸಮಸ್ಯೆ ಯಾವುದೂ ಅಷ್ಟಾಗಿ ಕಾಡಲೇ ಇಲ್ಲ. ಬೆಳಿಗ್ಗೆ ಚಹಾ ಒಂದೆರಡು ಬ್ರೆಡ್‌. ನಂತರ ಮಧ್ಯಾಹ್ನ-ರಾತ್ರಿ ಅನ್ನಸಾರು ಕೊಡುತ್ತಿದ್ದರು.

ನಮ್ಮ ಮನಸ್ಸು ಪೂರ್ತಿ ಕರಸೇವೆಯಲ್ಲೇ ಮುಳುಗಿತ್ತು. ಬೆಳಗಾವಿಯಿಂದ ಹೊರಟಂದಿನಿಂದ ನಮ್ಮ ತಂಡಕ್ಕೆ ಏನೋ ಒಂದು ರೀತಿಯ ಹೆಮ್ಮೆ, ಆತಂಕ ಎರಡೂ ಕಂಡಿತ್ತು. ಆದರೆ ಮನಸ್ಸು ಗಟ್ಟಿಯಾಗಿತ್ತು. ಜೀವನದಲ್ಲಿ ಮತ್ತೆ ಇಂತಹ ಅವಕಾಶ ಬರುವುದಿಲ್ಲ ಎಂದು ಎಲ್ಲರೂ ಅಂದುಕೊಂಡಿದ್ದೆವು.

ಬೆಳಗಾವಿಯಿಂದ ಉತ್ತರ ಪ್ರದೇಶಕ್ಕೆ ಹೋಗುವುದು ಸುಲಭದ ಕೆಲಸವಾಗಿರಲಿಲ್ಲ. ಆದರೆ, ಅದೃಷ್ಟಕ್ಕೆ ನಮಗೆ ಎಲ್ಲಿಯೂ ಸಮಸ್ಯೆಯಾಗಿಲ್ಲ. ಕರಸೇವೆಗೆ ಹೋಗುವ ಎಲ್ಲ ಮಾರ್ಗದಲ್ಲಿ ಜನರ ಸಹಕಾರ ಸಿಕ್ಕಿತು. ಒಂದು ಹಂತದಲ್ಲಿ ರೈಲ್ವೆ ಹಾಗೂ ಪೊಲೀಸರ ಸಹಕಾರವೂ ದೊರೆಯಿತು. ಕರಸೇವೆಗೆ ಬಂದಿದ್ದವರಿಗೆ ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಪಾಸ್‌ ಇದ್ದರೆ ಸಾಕು, ಎಲ್ಲಿಯೂ ಅಡೆತಡೆ ಇರಲಿಲ್ಲ.

ಕರಸೇವೆ ಮಾಡಿದ ನಂತರ ಜನರು ನಮ್ಮನ್ನು ರಾಮಮಂದಿರ ನಿರ್ಮಾಣ ಯಾವಾಗ ಎಂದು ಒಂದೇ ಸಮನೆ ಕೇಳುತ್ತಿದ್ದರು. ನಾವೂ ಸಹ ಬಹಳ ಕಾತುರದಿಂದ ಕಾಯುತ್ತಲೇ ಇದ್ದೆವು. ಮೂರು ದಶಕಗಳ ನಂತರ ಈಗ ಜನರ ಪ್ರಶ್ನೆಗೆ ಉತ್ತರ ಮತ್ತು ನಮ್ಮ ಕರಸೇವೆಗೆ ಒಳ್ಳೆಯ ಫಲ ಸಿಕ್ಕಿದೆ. ಅಯೋಧ್ಯೆಯ ಚಿತ್ರಣವೇ ಬದಲಾಗಿದೆ. ಸ್ವತಃ ಶ್ರೀರಾಮನೇ ಅಲ್ಲಿಗೆ ಬಂದಿದ್ದಾನೆ ಎಂದು ಭಾಸವಾಗುತ್ತಿದೆ. ಇಂತಹ ಪಾವನ ಕ್ಷೇತ್ರಕ್ಕೆ ಹೋಗಿ ಬಂದಿದ್ದೇ ಒಂದು ದೊಡ್ಡ ಅನುಭವ. ಸಾರ್ಥಕ ಕ್ಷಣ.

ರಾಮಜನ್ಮಭೂಮಿಗೆ ಬಂದ ಎಲ್ಲ ಕರಸೇವಕರಿಗೂ ಸುತ್ತಲಿನ ಪ್ರದೇಶಗಳಲ್ಲಿ ಉಳಿದುಕೊಳ್ಳಲು ಟೆಂಟ್‌ ಹಾಕಿಕೊಟ್ಟಿದ್ದರು. ಒಂದೊಂದು ಟೆಂಟ್‌ದಲ್ಲಿ ನೂರಾರು ಜನ. ಒಬ್ಬರಿಗೊಬ್ಬರೂ ಪರಿಚಯವೇ ಇಲ್ಲ.ಒಬ್ಬರ ಭಾಷೆ ಮತ್ತೂಬ್ಬರಿಗೆ ಅರಿವಿಲ್ಲ. ಆದರೆ, ನಮಗೆ ಅದಾವುದೂ ಸಮಸ್ಯೆ ಅನ್ನಿಸಲೇ ಇಲ್ಲ. ಚಳಿಗೆ ಮೈಯೊಡ್ಡಿಕೊಂಡಿದ್ದ ನಮಗೆಲ್ಲರಿಗೆ ಆಗ ಕಾಣಿಸಿದ್ದು ಒಂದೇ, ಅದು ಕರಸೇವೆ!

ನಿರೂಪಣೆ: ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next