ಮೈಸೂರು: ನಾವು ಮಹಾತ್ಮ ಗಾಂಧಿ ಹೇಳುವ ರಾಮನ ಮೇಲೆ ನಂಬಿಕೆ ಇಟ್ಟಿದ್ದೇವೆ. ರಘುಪತಿ ರಾಘವ ರಾಜಾರಾಮ್, ಪತೀತ ಪಾವನ ಸೀತಾರಾಮ್ ಎಂದು ಹೇಳಿದ್ದಾರೆ. ನಾವು ಪೂಜಿಸುವ ರಾಮನ ಜತೆಗೆ ಸೀತೆ, ಲಕ್ಷ್ಮಣ, ಹನುಮಂತ ಇರುತ್ತಾರೆ. ಅದಕ್ಕೆ ನಾವು ಸೀತಾರಾಮ ಅಂತ ಕರೆಯುತ್ತೇವೆ. ಬಿಜೆಪಿಯವರು ರಾಮನ ಹೆಸರಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಆದ್ದರಿಂದಲೇ ಸೀತೆ, ಲಕ್ಷ್ಮಣ, ಹನುಮಂತನನ್ನು ಬೇರ್ಪಡಿಸಿದ್ದಾರೆ. ರಾಮನನ್ನು ಮಾತ್ರ ಉಳಿಸಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಗ್ರಾಮದಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಕೆಲಸ ಮಾಡಿಲ್ಲ. ಎರಡು ಕೋಟಿ ಉದ್ಯೋಗ ಕೊಡಿಲಿಲ್ಲ. ಮೋದಿಯವರು ನುಡಿದಂತೆ ನಡೆಯಲು ಸಾಧ್ಯವಾಗಿಲ್ಲ. ಅದಕ್ಕೆ ರಾಮನನ್ನು ಮುಂದಿಟ್ಟುಕೊಂಡು ಬಂದಿದ್ದಾರೆ. ಪೆಟ್ರೋಲ್, ಡೀಸೆಲ್, ಗೊಬ್ಬರದ ಬೆಲೆ ಬಗ್ಗೆ ಮಾತನಾಡಲ್ಲ. ಈಗ ರಾಮ ರಾಮ ಅಂತಿದ್ದಾರೆ. ಜನ ಬುದ್ದಿವಂತರು, ಎಲ್ಲವೂ ಅರ್ಥ ಆಗುತ್ತದೆ ಎಂದರು.
ಮತ್ತೆ ಜೈ ಶ್ರೀರಾಮ್ ಘೋಷಣೆ: ಬಿಜೆಪಿಯವರು ಜನರನ್ನು ಮರಳು ಮಾಡುತ್ತಿದ್ದಾರೆ. ಹಿಂದುತ್ವದ ಹೆಸರಲ್ಲಿ ಅಧಿಕಾರ ಹಿಡಿದು ಕುಳಿತಿದ್ದಾರೆ. ರಾಮಮಂದಿರ ಉದ್ಘಾಟನೆ ಮಾಡಿದ್ದಾರೆ, ವೃತ ಮಾಡುತ್ತಾರಂತೆ. ನಾವು ರಾಮನ ಪೂಜೆ ಮಾಡುವುದಿಲ್ಲವೇ? ರಾಮನ ಭಜನೆ ಮಾಡಲ್ವ? ಧನುರ್ಮಾಸದಲ್ಲಿ ನಾನೂ ಬೆಳಗ್ಗೆ ಎದ್ದು ದೇವಸ್ಥಾನಕ್ಕೆ ಹೋಗಿ ರಾಮನ ಭಜನೆ ಹಾಡುತ್ತಿದ್ದೆ. ಮೊನ್ನೆ ಬೆಂಗಳೂರಿನಲ್ಲಿ ರಾಮಮಂದಿರ ಉದ್ಘಾಟನೆ ಮಾಡಿದೆ. ಜೈ ಶ್ರೀರಾಮ್ ಅಂತ ಘೋಷಣೆ ಕೂಗಿಸಿದೆ. ನನ್ನ ಹೆಸರು ಸಿದ್ದರಾಮಯ್ಯ. ನನ್ನ ಹೆಸರಲ್ಲೇ ರಾಮ ಇದ್ದಾನೆ. ನಮ್ಮಪ್ಪನ ಹೆಸರು ಸಿದ್ದರಾಮೇಗೌಡ. ತಮ್ಮಂದಿರ ಹೆಸರು ರಾಮೇಗೌಡ ಸಿದ್ದೇಗೌಡ, ಸಿದ್ದರಾಮೇಗೌಡ. ನಾವ್ಯಾರೂ ಹಿಂದೂಗಳು ಅಲ್ಲವೇ? ಬಿಜೆಪಿಯವರು ಭಾವನೆಗಳ ಮೇಲೆ ಮತ ಕೇಳುತ್ತಾರೆ. ಅವರನ್ನು ನೀವು ನಂಬಬೇಡಿ ಎಂದರು.
ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದ ವೇಳೆ ನುಡಿದಂತೆ ನಡೆದಿದ್ದೇವೆ. ಬಿಜೆಪಿಯವರು ನುಡಿದಂತೆ ನಡೆದಿದ್ದಾರಾ? ಬಿಜೆಪಿಯವರು ಕೊಟ್ಟ ಮಾತಿನಂತೆ ನಡೆದುಕೊಳ್ಳಲ್ಲ. ಕಾಂಗ್ರೆಸ್ ನವರು ಕೊಟ್ಟ ಮಾತಿನಂತೆ ನಡೆಯುತ್ತೇವೆ ಎಂದರು.
ರಾಜ್ಯದ 213ತಾಲ್ಲೂಕುಗಳಲ್ಲಿ ಬರವಿದೆ. ಜನ ಕಷ್ಟಕ್ಕೆ ಸಿಲುಕಬಾರದು ಎಂದು ಎಚ್ಚರಿಕೆಯಿಂದ ನಡೆದುಕೊಂಡಿದ್ದೇವೆ. ಕೇಂದ್ರ ಸರ್ಕಾರ ಬರ ಅಧ್ಯಯನ ನಡೆಸಿಕೊಂಡು ಹೋದರೂ ಇದುವರೆಗೂ ಒಂದು ರೂಪಾಯಿ ಪರಿಹಾರ ಕೊಟ್ಟಿಲ್ಲ. ಸ್ವತಃ ನಾನೆ ಪ್ರಧಾನಿ ಮೋದಿ, ಅಮಿತ್ ಶಾ ಭೇಟಿ ಮನವಿ ಮಾಡಿದೆ. ಡಿಸೆಂಬರ್ 23ಕ್ಕೆ ಸಭೆ ನಡೆಸುತ್ತೇವೆ ಎಂದಿದ್ದರು. ಈಗ ಜನವರಿ 23 ಬಂದರೂ ಸಭೆ ನಡೆಸಿಲ್ಲ. ಬಿಜೆಪಿಯವರಿಗೆ ನಿಜವಾಗಿಯೂ ರೈತರ ಬಗ್ಗೆ ಕಾಳಜಿ ಇದೆಯಾ ಎಂದು ಪ್ರಶ್ನಿಸಿದರು.
ಪ್ರತಾಪ್ ಸಿಂಹ ಮಾತನಾಡಿದ್ದೆ ಮಾತಾಡಿದ್ದು. ಅದು ತಂದೆ ಇದು ತಂದೆ ಎನ್ನುತ್ತಾನೆ. ಏನಪ್ಪಾ ಮಾಡುತ್ತಿದ್ದಿಯಾ ಪ್ರತಾಪ್ ಸಿಂಹ ನೀನು. ನಾಚಿಕೆ, ಮಾನ ಮರ್ಯಾದೆ ಇದೆಯಾ ಪ್ರತಾಪ್ ಸಿಂಹ ನಿನಗೆ ಎಂದು ಭಾಷಣದಲ್ಲಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ಮಾಡಿದರು.