ಹೊಸದಿಲ್ಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಭೂಮಿ ಪೂಜೆ ಕಾರ್ಯಕ್ರಮ ನೆರವೇರಿದ್ದಕ್ಕೆ ಶ್ರೀರಾಮ ಹಾಗೂ ಸೀತಾ ಪಾತ್ರಧಾರಿಗಳಾದ ಅರುಣ್ ಗೋವಿಲ್ ಹಾಗೂ ದೀಪಿಕಾ ಚಿಖ್ಲಿಯಾ ಸಂಭ್ರಮ ವ್ಯಕ್ತಪಡಿಸಿದ್ದಾರೆ.
ರಾಮಾಯಣ ಸರಣಿಯ ‘ರಾಮನಂದ ಸಾಗರ್’ನಲ್ಲಿ ಶ್ರೀರಾಮನ ಪಾತ್ರಧಾರಿಯಾಗಿದ್ದ ಅರುಣ್ ಗೋವಿಲ್ (62) ಟ್ವೀಟ್ನಲ್ಲಿ ಪ್ರತಿಕ್ರಿಯಿಸಿದ್ದು, ‘ಕೋಟ್ಯಂತರ ಹಿಂದೂಗಳ ಬಹು ವರ್ಷಗಳ ಕನಸು ನನಸಾಗಿದೆ.
ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಈ ದಿನ ಇತಿಹಾಸದಲ್ಲೇ ಸುವರ್ಣಾಕ್ಷರಗಳಲ್ಲಿ ಬರೆದಿಡುವ ದಿನವಾಗಿದೆ. ಜೈ ಶ್ರೀರಾಮ್’ ಎಂದು ಬರೆದುಕೊಂಡಿದ್ದಾರೆ.
ಸೀತಾ ಮಾತೆಯ ಪಾತ್ರ ನಿರ್ವಹಿಸಿದ್ದ ದೀಪಿಕಾ ಚಿಖ್ಲಿಯಾ, ಇನ್ಸ್ಟಾಗ್ರಾಮನಲ್ಲಿ ಭೂಮಿ ಪೂಜೆಯ ವೀಡಿಯೋ ಹಂಚಿಕೊಂಡಿದ್ದು, 500 ವರ್ಷಗಳ ಹೋರಾಟ ಬಳಿಕ ಅಯೋಧ್ಯೆಯಲ್ಲಿ ಮತ್ತೆ ರಾಮ ಮಂದಿರ ನಿರ್ಮಾಣವಾಗುತ್ತಿದೆ.
ಇದು ಭಾರತೀಯರ ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದ್ದಾರೆ. ನಟ ಅನುಪಮ್ ಖೇರ್, ಇನ್ಸ್ಟಾಗ್ರಾಮನಲ್ಲಿ ಭಕ್ತಿಗೀತೆ ಹಾಡನ್ನು ಪೋಸ್ಟ್ ಮಾಡಿದ್ದು, ‘ರಾಮ ಮಂದಿರ ಪೂಜಾ ಕಾರ್ಯಕ್ರಮ ಪ್ರಯುಕ್ತ ಎಲ್ಲರಿಗೂ ಶುಭ ಕೋರುತ್ತೇನೆ. ಜೈ ಶ್ರೀರಾಮ್’ ಎಂದು ಬರೆದುಕೊಂಡಿದ್ದಾರೆ.