ಹಾವೇರಿ: ರೈತ-ಕಾರ್ಮಿಕ ವಿರೋಧಿ ಕೃಷಿ ಸಂಬಂಧಿತ ಕಾಯ್ದೆಗಳು ಹಾಗೂ ಕಾರ್ಮಿಕ ಸಂಹಿತೆಗಳ ವಿರುದ್ಧ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಗುರುವಾರ ನಗರದಲ್ಲಿ ಪ್ರಚಾರ ಜಾಥಾ ನಡೆಸಲಾಯಿತು.
ನಗರದ ಮುರುಘರಾಜೇಂದ್ರ ಮಠದಿಂದ ಆರಂಭಗೊಂಡ ಪ್ರಚಾರ ಜಾಥಾ ಸಿದ್ದಪ್ಪ ವೃತ್ತದ ಮಾರ್ಗವಾಗಿ ಮೈಲಾರ ಮಹಾದೇವಪ್ಪ ವೃತ್ತದಲ್ಲಿ ಸಮಾವೇಶಗೊಂಡಿತು.
ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯಾಧ್ಯಕ್ಷ ಕಾಮ್ರೇಡ್ ನಿತ್ಯಾನಂದ ಸ್ವಾಮಿ ಮಾಲಾರ್ಪಣೆ ಮಾಡಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಮಿಕ ಹಾಗೂ ರೈತ ವಿರೋಧಿ ನೀತಿಗಳನ್ನು ರೂಪಿಸುತ್ತಿದ್ದು, ಜನತೆಯ ಹಕ್ಕುಗಳನ್ನು ಹತ್ತಿಕ್ಕುವ ಕಾರ್ಯದಲ್ಲಿ ನಿರತವಾಗಿವೆ. ಕೇಂದ್ರ ಸರ್ಕಾರ ರೈತ ವಿರೋಧಿ ಕಾಯ್ದೆಗಳು ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ನೂಕುವ ಕಾಯ್ದೆಗಳಾಗಿವೆ. ನೂತನ ಕೃಷಿ ಕಾಯ್ದೆಗಳು ಕಾರ್ಪೊರೇಟ್ ವಲಯಕ್ಕೆ ಅನುಕೂಲವಾಗುವ ರೀತಿಯಲ್ಲಿದ್ದು, ಇವುಗಳನ್ನು ಜಾರಿಗೊಳಿಸಿದರೆ ದೇಶದ ಅನ್ನದಾತರ ಬದುಕು ಬೀದಿಗೆ ಬರಲಿದೆ. ಈ ಹಿನ್ನೆಲೆ ಸರ್ಕಾರ ಕೂಡಲೇ ರೈತ ಹಾಗೂ ಕಾರ್ಮಿಕ ವಿರೋಧಿ ನೀತಿಗಳನ್ನು ಹಿಂಪಡೆಯುವ ಮೂಲಕ ದೇಶದ ಅನ್ನದಾತಹ ಹಿತ ಕಾಪಾಡಬೇಕು ಎಂದರು.
ಇದನ್ನೂ ಓದಿ :ದಾಖಲೆ ಮೆಣಸಿನಕಾಯಿ ಚೀಲ ಆವಕ
ಈ ಸಂದರ್ಭದಲ್ಲಿ ಸಿಐಟಿಯು ರಾಜ್ಯ ಉಪಾಧ್ಯಕ್ಷ ಕಾಮ್ರೇಡ್ ಆರ್. ಎಸ್.ಬಸವರಾಜ, ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ, ಕರ್ನಾಟಕ ಪ್ರಾಂತ ರೈತ ಸಂಘ ಮುಖಂಡರಾದ ಮಲ್ಲಿಕಾರ್ಜುನ ಕೊಟಗಿ, ಸಿಐಟಿಯು ಜಿಲ್ಲಾ ಸಂಚಾಲಕ ವಿನಾಯಕ ಕುರಬರ, ಎಸ್‌ಎಫ್‌ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಭೋವಿ, ಗ್ರಾಮ ಪಂಚಾಯತಿ ನೌಕರರ ಸಂಘಟನೆ ಜಿಲ್ಲಾಧ್ಯಕ್ಷ ಅಂದಾನೆಪ್ಪ ಹೆಬಸೂರು, ಜಿ.ಎ.ಹಿರೇಮಠ, ಚಂಸು ಪಾಟೀಲ್, ಉಡಚ್ಚಪ್ಪ ಮಾಳಗಿ, ಜ್ಯೋತಿ ಕದರಲಮಂಡಲಗಿ, ಗೌರಮ್ಮ ನಾಯ್ಕರ, ದೊಡ್ಡಪ್ಪ, ಸೇರಿದಂತೆ ಇತರರು ಇದ್ದರು.