ಬೀದರ: ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗೆ ಆಗ್ರಹಿಸಿ ಸೆ.28ರಂದು ಚಿತ್ರದುರ್ಗದಲ್ಲಿ ಲಿಂಗಾಯತ ಮಹಾರ್ಯಾಲಿ ಆಯೋಜಿಸಲಾಗಿದೆ ಎಂದು ದಾವಣಗೆರೆ ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಹೇಳಿದರು.
ನಗರದ ಶರಣ ಉದ್ಯಾನದಲ್ಲಿ ಲಿಂಗಾಯತ ಮಹಾರ್ಯಾಲಿಯ ಕುರಿತು ನಡೆದ ಲಿಂಗಾಯತ ಧರ್ಮ ಸಮನ್ವಯ ಸಮಿತಿ ಸಭೆಯಲ್ಲಿ ಅವರು ಈ ಕುರಿತು ಮಾಹಿತಿ ನೀಡಿದರು. ಬೀದರನಲ್ಲಿ ಪ್ರಥಮ ಬಾರಿಗೆ ಲಿಂಗಾಯತ ರ್ಯಾಲಿ ಆಯೋಜಿಸಿ ನಾಡಿನ ತುಂಬಾ ಸಂಚಲನಗೊಳಿಸಿ ಐತಿಹಾಸಿಕ ಸಮಾರಂಭ ಮಾಡಿದ ಕೀರ್ತಿ ಬೀದರ ಬಸವಭಕ್ತರಿಗೆ ಸಲ್ಲುತ್ತದೆ. “ಬೀದರ ಚಲೋ’ ಸಮಾವೇಶ ಎಲ್ಲರಿಗೂ ಸ್ಫೂರ್ತಿ ನೀಡಿದೆ. ಈಗ ಎಲ್ಲಾ ಕಡೆ ಜನಸಾಗರ
ಹರಿದು ಬರುತ್ತಿದ್ದು, ಇದಕ್ಕೆ ಬೆಳಗಾವಿ ಮತ್ತು ಲಾತೂರ್ ಸಮಾವೇಶಗಳು ಸಾಕ್ಷಿ ಎಂದರು.
ಸೆ.24 ರಂದು “ಕಲಬುರ್ಗಿ ಚಲೋ’ ಸಮಾವೇಶದ ನಂತರ 28ರಂದು “ಚಿತ್ರದುರ್ಗ ಚಲೋ’ ಸಮಾವೇಶಕ್ಕೆ ಜಿಲ್ಲೆಯ ಬಸವಭಕ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಬೇಕೆಂದು ಮನವಿ ಮಾಡಿದರು.
ಪ್ರತಿ ವರ್ಷದಂತೆ ಚಿತ್ರದುರ್ಗ ಮುರುಘಾ ಮಠದಲ್ಲಿ ಸೆ.23ರಿಂದ ಆ.2ರ ವರೆಗೆ ಡಾ| ಶಿವಮೂರ್ತಿ ಮುರುಘಾ ಶರಣರ ನೇತೃತ್ವದಲ್ಲಿ ಶರಣ ಸಂಸ್ಕೃತಿ ಉತ್ಸವ ನಡೆಯಲಿದೆ. ಉತ್ಸವದಲ್ಲಿ ಚುನಾವಣೆ- ಸುಧಾರಣೆ, ಮೇಕ್ ಇನ್ ಇಂಡಿಯಾ, ಮುರುಘಾಶ್ರೀ ಪ್ರಶಸ್ತಿ ಪ್ರಧಾನ, ಉದ್ಯೋಗಮೇಳ, ಕೃಷಿ ಮೇಳ, ಮಹಿಳಾ ಸಮಾವೇಶ, ಬಸವಾದಿ ಶರಣರ ಕುರಿತು ಚಿಂತನಾಗೋಷ್ಠಿ, ಸಹಜ ಶಿವಯೋಗ, ವಚನ ಕಮ್ಮಟ ಪ್ರಶಸ್ತಿ ಪ್ರಧಾನ, ಜಾನಪದ ಕಲಾ ಮೇಳ ಹೀಗೆ ಹತ್ತು ಹಲವು ಕಾರ್ಯಕ್ರಮಗಳೊಂದಿಗೆ ವೈಚಾರಿಕ ಕಾರ್ಯಕ್ರಮ ಜರುಗಲಿದ್ದು, ಬಸವ ಭಕ್ತರು ಭಾಗವಹಿಸಬೇಕೆಂದು ಮನವಿ ಮಾಡಿದರು. ಶಿರಸಂಗಿಯ ಬಸವಮಹಾಂತ ಸ್ವಾಮೀಜಿ, ಚಿತ್ರದುರ್ಗದ ಬಸವಕೇತೇಶ್ವರ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಶರಣಪ್ಪಾ ಮಿಠಾರೆ ಸ್ವಾಗತಿಸಿದರು. ಸುರೇಶ ಚನ್ನಶೆಟ್ಟಿ ನಿರೂಪಿಸಿದರು. ಸಿದ್ಧಾರೂಢ ಭಾಲ್ಕೆ ವಂದಿಸಿದರು. ಲಿಂಗಾಯತ ಸಮನ್ವಯ ಸಮಿತಿಯ ರಾಜೇಂದ್ರಕುಮಾರ ಗಂದಗೆ, ಬಸವರಾಜ ಧನ್ನೂರ್, ಶ್ರೀಕಾಂತ ಸ್ವಾಮಿ, ಆನಂದ ದೇವಪ್ಪ, ದೀಪಕ ವಾಲಿ, ಅನಿಲಕುಮಾರ ಪನ್ನಾಳೆ, ಚನ್ನಬಸವ ಹಂಗರಗಿ, ಗುರುಶಾಂತಪ್ಪ ನಿಂಗದಳ್ಳಿ, ಬಸವರಾಜ ಭತಮುರಗೆ, ಸಂಗಪ್ಪ ಹಿಪ್ಪಳಗಾವೆ, ಸುರೇಶ ಸ್ವಾಮಿ, ರಾಜಕುಮಾರ ಪಸಾರೆ, ಪ್ರಕಾಶ ಸಾವಳಗಿ, ಅಶೋಕ ದಿಡಗೆ ಇನ್ನಿತರರು ಇದ್ದರು.