ಹುಬ್ಬಳ್ಳಿ: ಲಿಂಗಾಯತ ಸ್ವತಂತ್ರ ಧರ್ಮ ಹಕ್ಕೊತ್ತಾಯಕ್ಕಾಗಿ ಹುಬ್ಬಳ್ಳಿಯಲ್ಲಿ ಭಾನುವಾರ ಬೃಹತ್ ರ‍್ಯಾಲಿ ನಡೆಸಲಾಗಿದೆ. ಹೋರಾಟದ ಸೆಮಿಫೈನಲ್ ಎಂದೇ ಈ ರ‍್ಯಾಲಿಯನ್ನು ಬಿಂಬಿಸಲಾಗಿದ್ದು, ರಾಜ್ಯ, ಹೊರರಾಜ್ಯಗಳಿಂದ ಲಕ್ಷಾಂತರ ಜನ ಭಾಗಿಯಾಗಿದ್ದು, ಅಂದಾಜು 100-150 ವಿವಿಧ ಮಠಾಧೀಶರು ಭಾಗಿಯಾಗಿದ್ದಾರೆ.
ನಮ್ಮದು 900 ವರ್ಷಗಳ ಹೋರಾಟ
ಸಭೆಯಲ್ಲಿ ಪ್ರಧಾನ ಭಾಷಣ ಮಾಡಿದ ಸಚಿವ ಎಂ.ಬಿ.ಪಾಟೀಲ್ ‘ನಮ್ಮದು 900 ವರ್ಷಗಳಿಂದಲೂ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಸಂವಿಧಾನ ರಚನೆಯಾಗುವ ಮುನ್ನವೇ ಪ್ರತ್ಯೇಕ ಧರ್ಮಕ್ಕಾಗಿ ಬೇಡಿಕೆ ಇತ್ತು’ ಎಂದರು.
‘1871 ರಲ್ಲಿ ನಾವು ಲಿಂಗಾಯತರಾಗಿದ್ದೆವು, ಹಿಂದೂಗಳ ಭಾಗವಾಗಿರಲಿಲ್ಲ, ಆನಂತರ ಮೈಸೂರಿನ ದಿವಾನರು ನಮ್ಮನ್ನು ಶೂದ್ರರ ಪಟ್ಟಿಯಲ್ಲಿ ಸೇರಿಸಿದರು’ ಎಂದು ಇತಿಹಾಸದ ಬಗ್ಗೆ ಹೇಳಿದರು.
ವಿರಶೈವ ಮಹಾಸಭಾ ದ ವಿರುದ್ಧ ಕಿಡಿ ಕಾರಿ ‘ನೀವು ಬಸವಣ್ಣನಿಗಿಂತ ರೇಣುಕಾಚಾರ್ಯರು ದೊಡ್ಡವರು ಎನ್ನುತ್ತೀರಿ. ಒಪ್ಪುತ್ತೇವೆ, ರೇಣುಕಾಚಾರ್ಯರ ತಂದೆ ತಾಯಿ ಯಾರು ? ಈ ಪ್ರಶ್ನೆ ಕೇಳಿದರೆ ಕಲ್ಲಿನಿಂದ ಉದ್ಭವ ಆಗಿದ್ದಾರೆ ಎನ್ನುತ್ತೀರ. ಇದನ್ನು ನಾವು, ನಮ್ಮ ಮಠಾಧೀಶರು ಒಪ್ಪುತ್ತೇವೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರು ನಂಬುವುದಿಲ್ಲ. ನಿಮ್ಮನ್ನು ನಾನ್‌ಸೆನ್ಸ್,ಗೆಟ್‌ಔಟ್ ಎನ್ನುತ್ತಾರೆ’ ಎಂದು ಕಿಡಿ ಕಾರಿದರು.
‘ವೀರಶೈವ ಮಹಾಸಭಾದವರು ಕುರ್ಚಿಗಾಗಿ ಲಾಭಿ ಮಾಡುತ್ತಿದ್ದಾರೆ.ಲಿಂಗಾಯತದ 99 ಉಪಜಾತಿಗಳಲ್ಲಿ ವೀರಶೈವವೂ ಒಂದು. ಕೆಲವರು ಬಸವಣ್ಣನ ತತ್ವಗಳನ್ನು ಬಿಟ್ಟು ವೈದಿಕ ಧರ್ಮ ಆಚರಿಸುತ್ತಿದ್ದಾರೆ ಎಂದು ಕಿಡಿ ಕಾರಿದರು.
‘ನಾವು ಹಿಂದೂ ಧರ್ಮದ ವಿರೋಧಿಗಳಲ್ಲ. ನಮಗೆ ಪ್ರತ್ಯೇಕ ಧರ್ಮದ ಮಾನ್ಯತೆ ಸಿಕ್ಕರೆ ಯಾರಿಗೂ ತೊಂದರೆಯಾಗುವುದಿಲ್ಲ.ಐತಿಹಾಸಿಕ ದಾಖಲೆಗಳು ಲಿಂಗಾಯತರ ಪರವಾಗಿದೆ. 900 ವರ್ಷಗಳಿಂದ ನಮ್ಮನ್ನು ಶೋಷಣೆ ಮಾಡಲಾಗಿದೆ. ನಮಗೀಗ ಬುದ್ದಿ ಬಂದಿದೆ. ನಾವಿನ್ನು ಸುಮ್ಮನೆ ಕೂರುವುದಿಲ್ಲ’ ಎಂದು ಗುಡುಗಿದರು.
ಕೆಲವರು ಲಿಂಗಾಯತರಿಗೆ ದ್ರೋಹ ಬಗೆಯುತ್ತಿದ್ದಾರೆ ಎಂದು ಜಗದೀಶ್ ಶೆಟ್ಟರ್ ,ಪ್ರಭಾಕರ್ ಕೋರೆ ಸಹಿತ ಹಲವರ ವಿರುದ್ಧ ಕಿಡಿ ಕಾರಿದರು.
ಲಿಂಗಾಯತ ಸ್ವತಂತ್ರ ಧರ್ಮವಾಗಬೇಕೆಂದು ಒತ್ತಾಯಿಸಿ ಬೀದರ, ಬೆಳಗಾವಿ, ಕಲಬುರಗಿ ಹಾಗೂ
ಮಹಾರಾಷ್ಟ್ರದ ಲಾತೂರಿನಲ್ಲಿ ಯಶಸ್ವಿ ರ‍್ಯಾಲಿಗಳನ್ನು ಕೈಗೊಂಡಿದ್ದು, ಇದೀಗ ಹುಬ್ಬಳ್ಳಿಯಲ್ಲಿ ಐದನೇ ಬೃಹತ್ ರ‍್ಯಾಲಿ ಇದಾಗಿದೆ.