ಕನ್ನಡ ಚಿತ್ರರಂಗದಲ್ಲಿ ಸಿನಿಮಾಗಳ ಮೇಕಿಂಗ್‌ನಲ್ಲಿ ಆಗಾಗ್ಗೆ ಒಂದಷ್ಟು ಪ್ರಯೋಗಗಳು ಆಗುತ್ತಲೇ ಇರುತ್ತವೆ. ಈಗ ಇಲ್ಲೊಂದು ಚಿತ್ರತಂಡ ಸಿಂಗಲ್ ಶಾಟ್‌ನಲ್ಲಿ ಇಡೀ ಸಿನಿಮಾವನ್ನು ಚಿತ್ರೀಕರಿಸಿ, ಅದನ್ನು ತೆರೆಮೇಲೆ ತರಲು ಹೊರಟಿದೆ. ಅಂದಹಾಗೆ, ಆ ಚಿತ್ರದ ಹೆಸರು “ಕೆಂಗುಲಾಬಿ’.
ಯುವ ನಿರ್ದೇಶಕ ರಾಬಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ “ರಕ್ತ ಗುಲಾಬಿ’ ಚಿತ್ರದಲ್ಲಿ ವಿಕ್ರಮಾದಿತ್ಯ, ಶಿವಾನಿ, ಮಾಣಿಕ್ಯ, ಜಿ.ಎನ್ ಭರತ್, ರಾಮು, ವಿನೋದ್ ಕುಮಾರ್, ಸಿದ್ದರಾಮ, ಪ್ರವೀಣ್ ಬಾಲಗೌಡರ್, ಪ್ರವೀಣ್ ಕುಮಾರ್ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸಕಲೇಶಪುರ ತಾಲೂಕಿನ ಅರೇಹಳ್ಳಿ, ಬೆಳ್ಳಾವರ ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.
ಇದನ್ನೂ ಓದಿ:ಎರಡನೇ ಹಂತದ ಚಿತ್ರೀಕರಣಕ್ಕೆ ಅಣಿಯಾದ ಚಿ. ಸೌ ಕನ್ಯಾಕುಮಾರಿ
ಸಾಮಾಜಿಕ ವ್ಯವಸ್ಥೆಯಿಂದ ಮನನೊಂದ ಯುವಕನೊಬ್ಬ ತನಗಾದ ಅನ್ಯಾಯದ ವಿರುದ್ದ ಸೇಡು ತೀರಿಸಿಕೊಳ್ಳುವುದರ ಸುತ್ತ ಚಿತ್ರದ ಈ ಚಿತ್ರದ ಕಥೆ ನಡೆಯುತ್ತದೆ. ಮಿಷಿನ್ ಕಾಡ್ ಫಿಲಂಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನು ಲೋಹಿತ್ ಕುಲಕರ್ಣಿ ನಿರ್ಮಿಸಿದ್ದಾರೆ. ಚಿತ್ರದ ನಾಲ್ಕು ಹಾಡುಗಳಿಗೆ ಪ್ರಜೋತ್ ಡೇಸಾ ಸಂಗೀತವಿದೆ. ಚಿತ್ರಕ್ಕೆ ರಾವಣನ್ ಛಾಯಾಗ್ರಹಣ, ವಿಜಯ ಕುಮಾರ್ ಸಂಕಲನವಿದೆ.
ಇನ್ನು ಸಿಂಗಲ್ ಶಾಟ್‌ನಲ್ಲಿ ಚಿತ್ರೀಕರಣ ಗೊಂಡಿರುವ “ರಕ್ತ ಗುಲಾಬಿ’ ಚಿತ್ರ ಇಂಡಿಯಾ ಬುಕ್ ಆಫ್ ರೆಕಾರ್ಡ್ ಹಾಗೂ ಏಷ್ಯಾಬುಕ್ ಆಫ್ ರೆಕಾರ್ಡ್‌ನಲ್ಲೂ ಇಂಥ ದ್ದೊಂದು ಪ್ರಯೋಗ ಮಾಡಿರುವ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎನ್ನುತ್ತದೆ ಚಿತ್ರತಂಡ. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿರುವ ಚಿತ್ರತಂಡ, ಮಾರ್ಚ್ ವೇಳೆಗೆ “ರಕ್ತ ಗುಲಾಬಿ’ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ.