Advertisement

ರಕ್ಷಿತ್‌ ಶೆಟ್ಟಿ ತೆನಾಲಿ ಅವತಾರ

11:18 AM Sep 15, 2018 | |

ನಿರ್ದೇಶಕ ಹೇಮಂತ್‌ ರಾವ್‌ “ಕವಲು ದಾರಿ’ ಮುಗಿಸಿದ್ದಾರೆ. ಅಷ್ಟೇ ಅಲ್ಲ, ಎಲ್ಲವೂ ಅಂದುಕೊಂಡಂತೆ ನಡೆದರೆ, ಅಕ್ಟೋಬರ್‌ನಲ್ಲಿ ಚಿತ್ರ ಬಿಡುಗಡೆ ಮಾಡುವ ಯೋಚನೆಯೂ ಅವರಿಗಿದೆ. ಈಗ ಹೊಸ ಸುದ್ದಿಯೆಂದರೆ, ಅವರು ಮತ್ತೊಂದು ಹೊಸ ಸಿನಿಮಾ ತಯಾರಿಗೆ ಅಣಿಯಾಗುತ್ತಿದ್ದಾರೆ. ಅದೂ ರಕ್ಷಿತ್‌ ಶೆಟ್ಟಿ ಜೊತೆ. ಹೌದು, ಹೇಮಂತ್‌ ರಾವ್‌ ಮತ್ತು ರಕ್ಷಿತ್‌ ಶೆಟ್ಟಿ ಕಾಂಬಿನೇಷನ್‌ನಲ್ಲಿ ಹೊಸ ಚಿತ್ರ ಶುರುವಾಗಲಿದೆ.

Advertisement

ಇವರಿಬ್ಬರೇ ಅಲ್ಲ, ಇವರೊಂದಿಗೆ ಎಂದಿನಂತೆ ಪುಷ್ಕರ್‌ ಮಲ್ಲಿಕಾರ್ಜುನ್‌ ಕೂಡ ಇದ್ದಾರೆ. ಹೇಮಂತ್‌ ರಾವ್‌ ತಮ್ಮ ಮುಖಪುಟದಲ್ಲಿ ಫೋಟೋ ಶೂಟ್‌ ಮಾಡಿಸಿದ ರಕ್ಷಿತ್‌ ಶೆಟ್ಟಿ ಅವರ ಫೋಟೋವೊಂದನ್ನು ಹಾಕಿ, “ತೆನಾಲಿ’ ಚಿತ್ರ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಆ ಕುರಿತು “ಉದಯವಾಣಿ’ಗೆ ನಿರ್ದೇಶಕ ಹೇಮಂತ್‌ ರಾವ್‌ ಹೇಳಿದ್ದಿಷ್ಟು. “ನಾನು ಮತ್ತು ರಕ್ಷಿತ್‌ ಶೆಟ್ಟಿ ಭೇಟಿಯಾದಾಗೆಲ್ಲ ಸಿನಿಮಾ ಬಗ್ಗೆಯೇ ಹೆಚ್ಚು ಚರ್ಚೆ ಮಾಡುತ್ತೇವೆ.

ಹಾಗೆ ಮಾತಾಡುವಾಗ, ನನ್ನಲ್ಲಿದ್ದ ಒಂದು ಐಡಿಯಾ ಹೇಳಿದ್ದೆ. ನೀವೇನಾದರೂ ಮಾಡುವುದಾದರೆ, ಅದು ಸಖತ್‌ ಆಗಿರುತ್ತೆ ಅಂತ ಮಾತಾಡಿದ್ದೆ. ಆ ಕಥೆಯ ಒಂದು ಸಣ್ಣ ಎಳೆ ಕೇಳಿದ ರಕ್ಷಿತ್‌ ಶೆಟ್ಟಿ ಕೂಡ ಸಖತ್‌ ಎಕ್ಸೆ„ಟ್‌ ಆಗಿದ್ದರು. ಮಾಡೋಣ ಅಂತಾನೂ ಹೇಳಿಬಿಟ್ಟರು. ಅದಕ್ಕೆ ನಾವಿಟ್ಟ ಹೆಸರು “ತೆನಾಲಿ’. ಈಗಾಗಲೇ ನಮ್ಮ ಬ್ಯಾನರ್‌ನಲ್ಲಿ ಆ ಶೀರ್ಷಿಕೆ ನೋಂದಣಿಯಾಗಿದೆ. ನನಗೆ ಚಿಕ್ಕಂದಿನಿಂದಲೂ ತೆನಾಲಿ ರಾಮಕೃಷ್ಣನ ಕಥೆಗಳು ಇಷ್ಟ.

ಅಡ್ವೆಂಚರ್‌ ಸಹ ಇಷ್ಟ. ಅಂತಹ ಅಂಶಗಳೊಂದಿಗೆ ಕಥೆ ಮಾಡಬೇಕು ಅಂದುಕೊಂಡಿದ್ದೆ. ಅಂತಹ ಅಂಶಗಳೆಲ್ಲವೂ ಈ “ತೆನಾಲಿ’ಯಲ್ಲಿರಲಿವೆ. ಇದ್ದಕ್ಕಿದ್ದಂತೆಯೇ ನಾನು ರಕ್ಷಿತ್‌ ಶೆಟ್ಟಿ ಅವರಿಗೆ ಫೋನ್‌ ಮಾಡಿ, ಒಂದು ಫೋಟೋಶೂಟ್‌ ಮಾಡಿಸೋಣ ಅಂದೆ. ಅದಕ್ಕೆ ಅವರು ಓಕೆ ಅಂದ್ರು. ಫೋಟೋ ಶೂಟ್‌ ಆಗೋಯ್ತು. “ತೆನಾಲಿ’ ಕುರಿತು ಹೇಳುವುದಾದರೆ, ಅದು 1947 ರ ಕಾಲಘಟ್ಟದ ಕಥೆ.

ಒಂದು ರಿಯಲಿಸ್ಟಿಕ್‌ ಕಥೆ ಇಟ್ಟುಕೊಂಡು ಸಿನಿಮಾ ಅಂಶಗಳೊಂದಿಗೆ ಚಿತ್ರ ಮಾಡುವ ಯೋಚನೆ ಇದೆ. ಆದರೆ, “ತೆನಾಲಿ’ ಯಾವಾಗ ಶುರುವಾಗಲಿದೆ ಎಂಬುದು ನಮಗೇ ಗೊತ್ತಿಲ್ಲ. ಯಾಕೆಂದರೆ, ನನ್ನ ನಿರ್ದೇಶನದ “ಕವಲು ದಾರಿ’ ಬಿಡುಗಡೆಯಾಗಬೇಕು. ರಕ್ಷಿತ್‌ ಶೆಟ್ಟಿ ಅತ್ತ ಕೈಯಲ್ಲಿರುವ ಚಿತ್ರ ಮುಗಿಸಬೇಕು. ಸದ್ಯಕ್ಕೆ ಅವರು “777 ಚಾರ್ಲಿ’ ಮತ್ತು “ಅವನೇ ಶ್ರೀಮನ್ನಾರಾಯಣ’ ಚಿತ್ರ ಮಾಡುತ್ತಿದ್ದಾರೆ.

Advertisement

ಎಲ್ಲವೂ ಕೂಡಿ ಬಂದರೆ ಮುಂದಿನ ವರ್ಷ “ತೆನಾಲಿ’ ಸೆಟ್ಟೇರಲಿದೆ. ಇಲ್ಲವೆಂದರೆ, ಅದರ ಮುಂದಿನ ವರ್ಷ ಆಗಲಿದೆ. ಇಬ್ಬರೂ ಮಾತಾಡಿಕೊಂಡಿದ್ದೇವೆ. ಇಬ್ಬರು ಕಾಯವುದು ಬೇಡ. ಎಲ್ಲವೂ ವರ್ಕೌಟ್‌ ಆಗಿಬಿಟ್ಟರೆ ಮಾಡೋಣ ಅಂತ ತೀರ್ಮಾನಿಸಿದ್ದೇವೆ’ ಎಂಬುದು ಹೇಮಂತ್‌ ರಾವ್‌ ಹೇಳಿಕೆ. “ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರವನ್ನು ರಕ್ಷಿತ್‌ ಶೆಟ್ಟಿ, ನಾನು ಮತ್ತು ಪುಷ್ಕರ್‌ ಮಲ್ಲಿಕಾರ್ಜುನ್‌ ಸೇರಿ ಮಾಡಿದ್ದೆವು. “ತೆನಾಲಿ’ಗೂ ಅದೇ ಕಾಂಬಿನೇಷನ್‌ ಇರಲಿದೆ. ನಮ್ಮ ಮೂವರ ಬ್ಯಾನರ್‌ನಲ್ಲಿ “ಹಂಬಲ್‌ ಪೊಲಿಟಿಷಿಯನ್‌ ನೋಗರಾಜ್‌’ ಆಗಿದೆ.

“ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಮುಗಿದಿದೆ. ಈಗ “ಭೀಮಸೇನ’ ನಡೆಯುತ್ತಿದೆ. ಹಾಗೆಯೇ “ತೆನಾಲಿ’ಯೂ ಶುರುವಾಗಲಿದೆ. ಇನ್ನು, ಚಿತ್ರದಲ್ಲಿ ನನ್ನ ತಂತ್ರಜ್ಞರೇ ಕೆಲಸ ಮಾಡಲಿದ್ದಾರೆ. ಚರಣ್‌ರಾಜ್‌ ಸಂಗೀತ ಮಾಡಿದರೆ, ಅದ್ವೆ„ತ ಕ್ಯಾಮೆರಾ ಹಿಡಿಯಲಿದ್ದಾರೆ ಎಂದಷ್ಟೇ ಹೇಳುವ ಹೇಮಂತ್‌ರಾವ್‌, “ಕವಲು ದಾರಿ’ ಚಿತ್ರದ ಟೀಸರ್‌ ಈಗಾಗಲೇ ಸದ್ದು ಮಾಡಿದೆ. ಬೇರೆ ಭಾಷೆಯ ಮಂದಿ ಕೂಡ ಮೆಚ್ಚುಗೆ ಸೂಚಿಸಿದ್ದಾರೆ. ಅದೂ ಸಹ ಬೇರೆ ಭಾಷೆಗೆ ರಿಮೇಕ್‌ ಆದರೆ ಅಚ್ಚರಿ ಇಲ್ಲ’ ಎಂಬುದು ಹೇಮಂತ್‌ ಮಾತು.

Advertisement

Udayavani is now on Telegram. Click here to join our channel and stay updated with the latest news.

Next