ರಕ್ಷಿತ್ ಶೆಟ್ಟಿ ನಟನೆಯ “777 ಚಾರ್ಲಿ’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಜೂನ್ 10ರಂದು ತೆರೆಕಾಣಲಿದೆ. ಈಗಾಗಲೇ ಚಿತ್ರದ ಕನ್ನಡ ವರ್ಶನ್ ಟಿವಿ ರೈಟ್ಸ್ ದೊಡ್ಡ ಮೊತ್ತಕ್ಕೆ ಮಾರಾಟವಾಗುವ ಮೂಲಕ ಚಿತ್ರತಂಡ ಸುದ್ದಿಯಲ್ಲಿದೆ. ಇದರ ಬೆನ್ನಿಗೆ ಚಿತ್ರತಂಡದಿಂದ ಮತ್ತೂಂದು ಸುದ್ದಿ ಬಂದಿದೆ. ಅದು ತೆಲುಗು ಬಿಡುಗಡೆ ಕುರಿತು.
“777 ಚಾರ್ಲಿ’ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಕನ್ನಡದ ಜೊತೆಗೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಬಿಡುಗಡೆಯಾಗುತ್ತಿದೆ. ತೆಲುಗಿನಲ್ಲಿ ಈ ಚಿತ್ರವನ್ನು ಯಾರು ಬಿಡುಗಡೆ ಮಾಡುತ್ತಾರೆ ಎಂಬ ಕುತೂಹಲಕ್ಕೆ ತೆರೆಬಿದ್ದಿದೆ.
ತೆಲುಗಿನ ಖ್ಯಾತ ನಟ ರಾಣಾ ದಗ್ಗುಬಾಟಿ “777 ಚಾರ್ಲಿ’ ಚಿತ್ರವನ್ನು ತೆಲುಗಿನಲ್ಲಿ ಬಿಡುಗಡೆ ಮಾಡುವ ಮೂಲಕ ರಕ್ಷಿತ್ ಶೆಟ್ಟಿ ಕನಸಿಗೆ ಸಾಥ್ ನೀಡುತ್ತಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ರಾಣಾ, “ಇತ್ತೀಚೆಗೆ 777 ಚಾರ್ಲಿ ಚಿತ್ರವನ್ನು ನೋಡಿದೆ. ಸಿನಿಮಾ ಅದ್ಭು ತವಾಗಿ ಮೂಡಿಬಂದಿದೆ’ ಎಂದಿದ್ದಾರೆ. ಈ ಮೂಲಕ “ಚಾರ್ಲಿ’ ತೆಲುಗಿನಲ್ಲೂ ಸೌಂಡ್ ಮಾಡಲಿದೆ.
ಇನ್ನು, “777 ಚಾರ್ಲಿ’ ಚಿತ್ರದ ಐದು ಭಾಷೆಗಳಲ್ಲಿಯೂ ಪ್ರಸಿದ್ಧ ಹಿನ್ನೆಲೆ ಗಾಯಕರು ಹಾಡಿಗೆ ತಮ್ಮ ಧ್ವನಿ ನೀಡಿದ್ದಾರೆ. ಕನ್ನಡದಲ್ಲಿ ವಿಜಯ್ ಪ್ರಕಾಶ್ ಈ ಹಾಡಿಗೆ ಧ್ವನಿಯಾದರೆ, ಮಲಯಾಳಂನಲ್ಲಿ ಜೆಸ್ಸಿ ಗಿಫ್ಟ್, ತಮಿಳಿನಲ್ಲಿ ಗಾನ ಬಾಲಚಂದರ್, ತೆಲುಗಿನಲ್ಲಿ ರಾಮ್ ಮಿರಿಯಾಲ ಮತ್ತು ಹಿಂದಿಯಲ್ಲಿ ಸ್ವರೂಪ್ ಖಾನ್ ಕ್ರಮವಾಗಿ ಆಯಾಯ ಭಾಷೆಗಳ ಅವತರಣಿಕೆಗಳನ್ನು ಹಾಡಿದ್ದಾರೆ.
ಇದನ್ನೂ ಓದಿ:ಐಪಿಎಲ್ ಫಸ್ಟ್ ಮ್ಯಾಚ್-2014: ಓಪನಿಂಗ್ ಮತ್ತು ಫೈನಲ್… ಎರಡನ್ನೂ ಗೆದ್ದ ಕೆಕೆಆರ್
ಯುವ ನಿರ್ದೇಶಕ ಕಿರಣ್ ರಾಜ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ “777 ಚಾರ್ಲಿ’ ಚಿತ್ರದಲ್ಲಿ ರಕ್ಷಿತ್ ಶೆಟ್ಟಿಯ ಜೊತೆಗೆ ಲ್ಯಾಬ್ರಡಾರ್ ನಾಯಿ ಒಂದು ಪೂರ್ಣ ಪ್ರಮಾಣದ ಪಾತ್ರದಲ್ಲಿ ತೆರೆಮೇಲೆ ಕಾಣಿಸಿಕೊಂಡಿದೆ. ಸಂಗೀತಾ ಶೃಂಗೇರಿ
ಚಿತ್ರದಲ್ಲಿ ನಾಯಕಿಯಾಗಿದ್ದು, ಉಳಿದಂತೆ ರಾಜ್ ಬಿ. ಶೆಟ್ಟಿ, ಡ್ಯಾನಿಶ್ ಸೇಠ್, ಬಾಬಿ ಸಿಂಹ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರದ ಹಾಡುಗಳಿಗೆ ನೋಬಿನ್ ಪೌಲ್ ಸಂಗೀತ ಸಂಯೋಜಿಸಿದ್ದಾರೆ. “ಪರಂವಾ ಸ್ಟುಡಿಯೋಸ್’ ಬ್ಯಾನರ್ ಅಡಿಯಲ್ಲಿ “777 ಚಾರ್ಲಿ’ ಚಿತ್ರಕ್ಕೆ ಜಿ. ಎಸ್ ಗುಪ್ತಾ ಮತ್ತು ರಕ್ಷಿತ್ ಶೆಟ್ಟಿ ಜಂಟಿಯಾಗಿ ಬಂಡವಾಳ ಹೂಡಿ ನಿರ್ಮಿಸುತ್ತಿದ್ದಾರೆ.