ರಕ್ಷಿತ್ ಶೆಟ್ಟಿ ಕಳೆದ ವರ್ಷ ಸೋಶಿಯಲ್ ಮೀಡಿಯಾಗಳಿಗೆ ಗುಡ್ ಬೈ ಹೇಳಿದ್ದು ನಿಮಗೆ ನೆನಪಿರಬಹುದು. ತಮ್ಮ ಮತ್ತು ರಶ್ಮಿಕಾ ಮಂದಣ್ಣ ನಡುವಿನ ವಿಚಾರಗಳೇ ಸೋಶಿಯಲ್ ಮೀಡಿಯಾಗಳಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದರಿಂದ, ಬೇಸತ್ತ ರಕ್ಷಿತ್ ಶೆಟ್ಟಿ ಅವರು ಫೇಸ್‌ಬುಕ್, ಟ್ವಿಟ್ಟರ್ ಸೇರಿದಂತೆ ತಮ್ಮ ಎಲ್ಲಾ ಸೋಶಿಯಲ್ ಮೀಡಿಯಾ ಅಕೌಂಟ್ಸ್ ಅನ್ನು ಡೀ-ಆ್ಯಕ್ಟಿವೇಟ್ ಮಾಡಿ, ಸೋಶಿಯಲ್ ಮೀಡಿಯಾಗಳಿಗೆ ಬೆನ್ನು ಹಾಕಿದ್ದರು.
ಯಾವುದೇ ಮಾಹಿತಿ ಇರಲಿ, ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಜೊತೆ ನೇರ ಸಂಪರ್ಕದಲ್ಲಿರುತ್ತಿದ್ದ ರಕ್ಷಿತ್‌ಶೆಟ್ಟಿ, ಇದ್ದಕ್ಕಿದ್ದಂತೆಯೇ ಅವರು ಅದರಿಂದ ಹೊರಬಂದಿದ್ದು, ಅವರ ಅಪಾರ ಅಭಿಮಾನಿಗಳಿಗಂತೂ ಸಾಕಷ್ಟು ಬೇಸರವಾಗಿತ್ತು. ಅದೆಲ್ಲವನ್ನೂ ಗಮನಿಸಿದ ರಕ್ಷಿತ್‌ಶೆಟ್ಟಿ ಈಗ ಸೋಶಿಯಲ್ ಮೀಡಿಯಾಗಳಲ್ಲಿ ಪುನಃ ಸಕ್ರಿಯರಾಗುತ್ತಿದ್ದಾರೆ. ಅದೇ ಈ ಹೊತ್ತಿನ ವಿಶೇಷ.
ಹೌದು, ಸುಮಾರು ಒಂದೂವರೆ ವರ್ಷಗಳಿಂದ ಸಿನಿಮಾಗಳಲ್ಲೂ ಕಾಣಿಸಿಕೊಂಡಿಲ್ಲ. ಅತ್ತ ಸೋಶಿಯಲ್ ಮೀಡಿಯಾಗಳಲ್ಲೂ ಸುದ್ದಿಯಾಗದೆ ತಮ್ಮ ಅಭಿಮಾನಿಗಳ ಕೈಗೆ ಸಿಗದ ರಕ್ಷಿತ್ ಶೆಟ್ಟಿ, ಈಗ ಮತ್ತೆ ಸೋಶಿಯಲ್ ಮೀಡಿಯಾಗಳ ಮೂಲಕ ತಮ್ಮ ಅಭಿಮಾನಿಗಳ ಮುಂದೆ ಬರುವ ಸುಳಿವನ್ನು ನೀಡಿದ್ದಾರೆ. ಅಂದಹಾಗೆ, ಇದೇ ಜೂನ್ 6ಕ್ಕೆ ರಕ್ಷಿತ್ ಶೆಟ್ಟಿ ಅವರ ಹುಟ್ಟುಹಬ್ಬ.
ಅಂದು ರಕ್ಷಿತ್ ಶೆಟ್ಟಿ ಮತ್ತೆ ಸೋಶಿಯಲ್ ಮೀಡಿಯಾಗಳಲ್ಲಿ ದರ್ಶನ ಕೊಡಲಿದ್ದಾರೆ. ಬಹುದಿನಗಳಿಂದ ಕೇಳಿ ಬರುತ್ತಿರುವ ತಮ್ಮ ಅಭಿಮಾನಿಗಳ ಬೇಡಿಕೆಯಂತೆ, ರಕ್ಷಿತ್ ಶೆಟ್ಟಿ ಪುನಃ ಸೋಶಿಯಲ್ ಮೀಡಿಯಾಗಳಿಗೆ ಹಿಂದಿರುಗುತ್ತಿದ್ದು, ರಕ್ಷಿತ್ ಶೆಟ್ಟಿ ಅವರ ಡಿಜಿಟಲ್ ಟೀಮ್ ಸೋಶಿಯಲ್ ಮೀಡಿಯಾಗಳ ಉಸ್ತುವಾರಿ ನೋಡಿಕೊಳ್ಳಲಿದೆ ಎಂಬುದು ಹೊಸ ಸುದ್ದಿ.
ರಕ್ಷಿತ್ ಶೆಟ್ಟಿ ತಮ್ಮ ಸೋಶಿಯಲ್ ಮೀಡಿಯಾ ಫ್ಲಾಟ್‌ಫಾರ್ಮ್ ಮೂಲಕವೇ ಅಭಿಮಾನಿಗಳ ಜೊತೆ ಸಂವಹನ ನಡೆಸಲಿದ್ದು, ತಮ್ಮ ಸಿನಿಮಾ ವಿಚಾರಗಳು, ಅನಿಸಿಕೆ-ಅಭಿಪ್ರಾಯಗಳನ್ನು ಅಲ್ಲಿ ಹಂಚಿಕೊಳ್ಳಲಿದ್ದಾರೆ. ಸದ್ಯ ರಕ್ಷಿತ್‌ಶೆಟ್ಟಿ ಅಭಿನಯದ “ಅವನೇ ಶ್ರೀಮನ್ನಾರಾಯಣ’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಮತ್ತೊಂದೆಡೆ ಚಿತ್ರತಂಡ ಕೂಡ ನಿಧಾನವಾಗಿ ಚಿತ್ರದ ಪ್ರಮೋಶನ್ ಕೆಲಸಗಳಿಗೆ ಚಾಲನೆ ನೀಡಿದೆ.
ಜೂನ್ 6 ರಂದು ಅವರ ಬರ್ತ್‌ಡೇ. ಆ ಹಿನ್ನೆಲೆಯಲ್ಲಿ ಅವರ ಚಿತ್ರದ ಟೀಸರ್ ಲಾಂಚ್ ಆಗಲಿದೆ. ಈಗಾಗಲೇ ಬಿಡುಗಡೆಯಾಗಿದ್ದ ಮೊದಲ ಟೀಸರ್ ಹಿಟ್ ಆಗಿತ್ತು. ಇನ್ನೊಂದು ಟೀಸರ್ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ ರಕ್ಷಿತ್‌ಶೆಟ್ಟಿ.