Advertisement

ಏಳಕ್ಕೂ ಹೆಚ್ಚು ರಾಜ್ಯಗಳಲ್ಲಿ “ರಕ್ಷಿತ್‌ ಚಾರ್ಲಿ’ಸುತ್ತಾಟ…

10:05 AM Mar 06, 2020 | Lakshmi GovindaRaj |

ರಕ್ಷಿತ್‌ ಶೆಟ್ಟಿ ಸದ್ಯ “777 ಚಾರ್ಲಿ’ ಚಿತ್ರೀಕರಣದಲ್ಲಿ ಬಿಝಿ. ಹೊಸ ಬಗೆಯ ಕಥೆ ಹೊಂದಿರುವ ಈ ಚಿತ್ರದ ಚಿತ್ರೀಕರಣ ಬೇರೆ ಬೇರೆ ಲೊಕೇಶನ್‌ಗಳಲ್ಲಿ ನಡೆಯುತ್ತಲೇ ಇದೆ. ಸದ್ಯ ರಾಜಸ್ತಾನದಲ್ಲಿ ಚಿತ್ರೀಕರಣ ನಡೆಯುತ್ತಿದೆ. ಈಗಾಗಲೇ “ಚಾರ್ಲಿ’ 102′ ದಿನಗಳ ಚಿತ್ರೀಕರಣ ಪೂರೈಸಿದೆ. ಹಾಗಂತ ಚಿತ್ರೀಕರಣ ಮುಗಿದಿದೆ ಎಂದಲ್ಲ. ಇನ್ನೂ 30 ದಿನಗಳ ಚಿತ್ರೀಕರಣ ಬಾಕಿ ಇದೆ. ಇವೆಲ್ಲವನ್ನು ಲೆಕ್ಕ ಹಾಕಿದರೆ “ಚಾರ್ಲಿ’ಗೆ 140ಕ್ಕೂ ಹೆಚ್ಚು ದಿನಗಳ ಚಿತ್ರೀಕರಣ ಮಾಡಿದಂತಾಗುತ್ತದೆ.

Advertisement

ಈ ಹಿಂದೆ ರಕ್ಷಿತ್‌ ಶೆಟ್ಟಿಯವರ “ಅವನೇ ಶ್ರೀಮನ್ನಾರಾಯಣ’ ಚಿತ್ರ 200ಕ್ಕೂ ಹೆಚ್ಚು ದಿನಗಳ ಕಾಲ ಚಿತ್ರೀಕರಣವಾಗಿತ್ತು. “777 ಚಾರ್ಲಿ’ ಒಂದು ಜರ್ನಿ ಸಬ್ಜೆಕ್ಟ್. ಹಾಗಾಗಿ, ಬೇರೆ ಬೇರೆ ರಾಜ್ಯಗಳನ್ನು ಸುತ್ತಾಡಿಕೊಂಡೇ ಬರಬೇಕಾದ ಅನಿವಾರ್ಯತೆ ಕತೆಯಲ್ಲಿರುವ ಕಾರಣ ಚಿತ್ರೀಕರಣ ದಿನಗಳ ಕೂಡಾ ಹೆಚ್ಚಾಗುತ್ತಿವೆ ಎನ್ನುವುದು ರಕ್ಷಿತ್‌ ಶೆಟ್ಟಿ ಮಾತು. ಗೋವಾ, ಗುಜರಾತ್‌, ರಾಜಸ್ತಾನ್‌, ಪಂಜಾಬ್‌, ಹಿಮಾಚಲ ಪ್ರದೇಶ, ಕಾಶ್ಮೀರಗಳಲ್ಲಿ “777 ಚಾರ್ಲಿ’ ಚಿತ್ರೀಕರಣ ನಡೆಯಲಿದೆ.

ಇದು ಮನುಷ್ಯ ಮತ್ತು ಶ್ವಾನವೊಂದರ ನಡುವಿನ ಬಾಂಧವ್ಯದ ಕಥೆಯ ಜೊತೆಗೆ ಹಲವು ಅಂಶಗಳನ್ನು ಹೊಂದಿರುವುದರಿಂದ ಬೇರೆ ಬೇರೆ ರಾಜ್ಯಗಳನ್ನು ಸುತ್ತಾಡಬೇಕಿದೆ. ಕಿರಣ್‌ ರಾಜ್‌ ಈ ಚಿತ್ರದ ನಿರ್ದೇಶಕರು. ಎಲ್ಲಾ ಓಕೆ, ಚಿತ್ರ ಬಿಡುಗಡೆ ಯಾವಾಗ ಎಂದು ನೀವು ಕೇಳಬಹುದು. ಆಗಸ್ಟ್‌ ವೇಳೆಗೆ ಸಿನಿಮಾ ಸಿದ್ಧವಾಗಲಿದ್ದು, ಆ ನಂತರದ ಒಂದೆರಡು ತಿಂಗಳಲ್ಲಿ ಬಿಡುಗಡೆಯಾಗಲಿದೆ. ಇತ್ತೀಚೆಗಷ್ಟೇ ರಕ್ಷಿತ್‌ ಕೊಡೈಕೆನಾಲ್‌ನ ಸುಂದರ ಪರಿಸರದಲ್ಲಿ ತಮ್ಮ ಹೊಸ ಚಿತ್ರ “ಪುಣ್ಯಕೋಟಿ’ಯ ಕಥೆ ಬರೆಯಲು ಹೋಗಿದ್ದರು.

ಈ ಬಗ್ಗೆ ಮಾತನಾಡುವ ರಕ್ಷಿತ್‌, “10 ದಿನಗಳ ಕಾಲ ಕೊಡೈಕೆನಾಲ್‌ನಲ್ಲಿ “ಪುಣ್ಯ ಕೋಟಿ’ಗಾಗಿ ಕಥೆ ಬರೆದೆ. ಇನ್ನು ಸಾಕಷ್ಟು ಕೆಲಸವಿದೆ. ಈಗ ರಾಜಸ್ತಾನದಲ್ಲಿ ಚಿತ್ರೀಕರಣ ನಡೆಯುತ್ತಿದೆ. ಬಿಡುವಿನ ವೇಳೆಯಲ್ಲಿ ಇಲ್ಲಿ ಬರೆಯುತ್ತಿದ್ದೇನೆ’ ಎನ್ನುತ್ತಾರೆ. “ಚಾರ್ಲಿ’ ನಂತರ ರಕ್ಷಿತ್‌ ಯಾವ ಸಿನಿಮಾದಲ್ಲಿ ನಟಿಸಲಿದ್ದಾರೆಂಬ ಪ್ರಶ್ನೆಗೆ ಉತ್ತರ “ರಿಚ್ಚಿ’. ಹೌದು, ಇದು ರಕ್ಷಿತ್‌ ಅಭಿನಯದ ಮುಂದಿನ ಸಿನಿಮಾ. ಈ ಚಿತ್ರವನ್ನು ರಾಹುಲ್‌ ಎನ್ನುವವರು ನಿರ್ದೇಶಿಸಲಿದ್ದಾರೆ. ಈ ಹಿಂದೆ ರಕ್ಷಿತ್‌ ಅವರ ಹಲವು ಚಿತ್ರಗಳಲ್ಲಿ ಸಹಾಯಕರಾಗಿದ್ದ ರಾಹುಲ್‌ “ರಿಚ್ಚಿ’ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next